ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ಧರ್ಮಸ್ಥಳ– ಉಜಿರೆ ಸಜ್ಜು: ಹೊಸ ಯೋಜನೆ ಘೋಷಣೆಯ ನಿರೀಕ್ಷೆ

ಭಾನುವಾರ, ಜೂನ್ 16, 2019
22 °C

ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ಧರ್ಮಸ್ಥಳ– ಉಜಿರೆ ಸಜ್ಜು: ಹೊಸ ಯೋಜನೆ ಘೋಷಣೆಯ ನಿರೀಕ್ಷೆ

Published:
Updated:
ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ಧರ್ಮಸ್ಥಳ– ಉಜಿರೆ ಸಜ್ಜು: ಹೊಸ ಯೋಜನೆ ಘೋಷಣೆಯ ನಿರೀಕ್ಷೆ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಭೇಟಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಸಜ್ಜುಗೊಂಡಿದೆ. ಉಜಿರೆಯಲ್ಲಿ ಭಾನುವಾರ ನಡೆಯುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ (ಎಸ್‌ಕೆಡಿಆರ್‌ಡಿಪಿ) ಬೃಹತ್‌ ಸಮಾವೇಶದಲ್ಲಿ ಸ್ವಸಹಾಯ ಸಂಘಗಳ ಬಲವರ್ಧನೆಗೆ ಪ್ರಧಾನಿ ಹೊಸ ಯೋಜನೆ ಘೋಷಿಸುವ ನಿರೀಕ್ಷೆ ಗರಿಗೆದರಿದೆ.

ಪ್ರಧಾನಿ ಭಾನುವಾರ ಬೆಳಿಗ್ಗೆ ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆಯುವ ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳುವರು. ಎಸ್‌ಕೆಡಿಆರ್‌ಡಿಪಿ ಸ್ವಸಹಾಯ ಗುಂಪುಗಳಲ್ಲಿ ನಗದುರಹಿತ ವಹಿವಾಟಿಗೆ ಚಾಲನೆ ನೀಡುವರು. ಜನಧನ ಖಾತೆ ತೆರಿದಿರುವ ಸ್ವಸಹಾಯ ಗುಂಪುಗಳ 12 ಲಕ್ಷ ಸದಸ್ಯರಿಗೆ ರೂಪೇ ಕಾರ್ಡ್‌ ವಿತರಿಸುವರು.

ನಗದುರಹಿತ ವಹಿವಾಟು, ಗ್ರಾಮಗಳಲ್ಲಿ ಬ್ಯಾಂಕಿಂಗ್‌ ವಹಿವಾಟು ‍ಪ್ರತಿನಿಧಿಗಳ ನಿಯೋಜನೆ, ಎಸ್‌ಕೆಡಿಆರ್‌ಡಿಪಿ ಮೂಲಕ 40 ಲಕ್ಷ ಜನಧನ ಖಾತೆಗಳನ್ನು ತೆರೆಯುವುದು ಸೇರಿದಂತೆ ಹಲವು ಒಪ್ಪಂದಗಳಿಗೆ ಎಸ್‌ಕೆಡಿಆರ್‌ಡಿಪಿ ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಪ್ರತಿನಿಧಿಗಳು ಈ ಸಮಾವೇಶದಲ್ಲಿ ಸಹಿ ಹಾಕಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರ ಪಟ್ಟಾಧಿಕಾರದ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಭೂಮಿ ಸಂರಕ್ಷಣಾ ಯೋಜನೆಗೆ ಪ್ರಧಾನಿ ಇದೇ ವೇದಿಕೆಯಲ್ಲಿ ಚಾಲನೆ ನೀಡುವರು.

ಎಸ್‌ಕೆಡಿಆರ್‌ಡಿಪಿಯ 60 ಸಾವಿರ ಸದಸ್ಯರು ಸೇರಿದಂತೆ ಒಂದು ಲಕ್ಷಕ್ಕೂ ಅಧಿಕ ಮಂದಿ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಸ್ವಸಹಾಯ ಸಂಘಗಳ ಬಲವರ್ಧನೆ ಮತ್ತು ಕಿರು ಹಣಕಾಸು ಸಂಸ್ಥೆಗಳಿಗೆ ಪ್ರಧಾನಿ ಹೊಸ ಯೋಜನೆಗಳನ್ನು ಈ ಸಮಾವೇಶದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ.

ಪ್ರಧಾನಿಯನ್ನು ಸ್ವಾಗತಿಸಲು ಕೇಂದ್ರ ಸರ್ಕಾರದ ಉದ್ದಿಮೆಗಳು, ವಿವಿಧ ಬ್ಯಾಂಕ್‌ಗಳು, ರಾಜಕೀಯ ಪಕ್ಷದ ಮುಖಂಡರು ಧರ್ಮಸ್ಥಳದಿಂದ ಉಜಿರೆಯವರೆಗೆ ನೂರಾರು ಸಂಖ್ಯೆಯ ಫ್ಲೆಕ್ಸ್‌ಗಳನ್ನು ಹಾಕಿದ್ದಾರೆ. ಈ ಮಾರ್ಗದಲ್ಲಿ ರಸ್ತೆಯ ಇಕ್ಕೆಲದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್‌ ಹಾಗೂ ಘನ ತ್ಯಾಜ್ಯವನ್ನು ಸಂಪೂರ್ಣವಾಗಿ ಶನಿವಾರ ತೆರವು ಮಾಡಲಾಗಿದೆ.

ಪೊಲೀಸ್‌ ಸರ್ಪಗಾವಲು: ಮೋದಿಯವರ ಭೇಟಿಯ ಕಾರಣಕ್ಕೆ ಧರ್ಮಸ್ಥಳ ಮತ್ತು ಉಜಿರೆಯಲ್ಲಿ ಪೊಲೀಸ್‌ ಸರ್ಪಗಾವಲು ಹಾಕಲಾಗಿದೆ. ಧರ್ಮಸ್ಥಳ ದೇವಸ್ಥಾನ, ಹೆಲಿಪ್ಯಾಡ್‌, ಉಜಿರೆಯ ಕ್ರೀಡಾಂಗಣ ಸಂಪೂರ್ಣವಾಗಿ ಪೊಲೀಸರ ವಶದಲ್ಲಿದೆ. 3 ಸಾವಿರಕ್ಕೂ ಹೆಚ್ಚು ಪೊಲೀಸರು ಮತ್ತು ವಿಶೇಷ ಭದ್ರತಾ ದಳದ 160 ಮಂದಿ ಇಡೀ ಪ್ರದೇಶದ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಎಲ್ಲ ಆಯಕಟ್ಟಿನ ಪ್ರದೇಶಗಳಲ್ಲಿ ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗಿದೆ.

**

ಬೀದರ್‌–ಕಲಬುರ್ಗಿ ರೈಲು ಮಾರ್ಗ ಉದ್ಘಾಟನೆ ಇಂದು

ಬೀದರ್: ಗಡಿಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಬೀದರ್‌–ಕಲಬುರ್ಗಿ ಮಧ್ಯದ 110 ಕಿ.ಮೀ. ಉದ್ದದ ನೂತನ ರೈಲು ಮಾರ್ಗದ ಉದ್ಘಾಟನೆ ಕಾರ್ಯಕ್ರಮ ಅ.29 ರಂದು ನಡೆಯಲಿದೆ.

₹ 1,542 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ರೈಲು ಮಾರ್ಗವನ್ನು ಸಂಜೆ 6 ಗಂಟೆಗೆ  ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸುವರು. ಹೊಸ ರೈಲು ಸಂಚಾರಕ್ಕೂ ಚಾಲನೆ ನೀಡುವರು. ನಂತರ ನಗರದ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳುವರು. ರೈಲ್ವೆ ಸಚಿವ ಪಿಯುಷ್‌ ಗೋಯಲ್‌ , ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕಾರ್ಯಕ್ರಮದಲ್ಲಿ ಭಾಗವಹಿಸುವರು.

**

ಹೊಸ ಹೆಲಿಪ್ಯಾಡ್‌ ನಿರ್ಮಾಣ

ಪ್ರಧಾನಿ ಭೇಟಿ ಸಂದರ್ಭದಲ್ಲಿನ ಬಳಕೆಗಾಗಿ ಧರ್ಮಸ್ಥಳದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ₹ 15 ಲಕ್ಷ ವೆಚ್ಚದಲ್ಲಿ ಎರಡು ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗಿದೆ. ಧರ್ಮಸ್ಥಳದ ಬಸದಿಯ ಸಮೀಪದ ಗುಡ್ಡದಲ್ಲಿ ಹಿಂದೆ ಒಂದು ಕಾಂಕ್ರೀಟ್‌ ಹೆಲಿಪ್ಯಾಡ್‌ ನಿರ್ಮಿಸಲಾಗಿತ್ತು. ಅದೇ ಸ್ಥಳದಲ್ಲಿ ಈಗ ಎರಡು ಡಾಂಬರು ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗಿದೆ. ಪ್ರಧಾನಿ ಹಾಗೂ ಭದ್ರತಾ ಸಿಬ್ಬಂದಿಯನ್ನು ಹೊತ್ತ ಮೂರು ಹೆಲಿಕಾಪ್ಟರ್‌ಗಳು ಭಾನುವಾರ ಬೆಳಿಗ್ಗೆ ಈ ಹೆಲಿಪ್ಯಾಡ್‌ಗಳಲ್ಲಿ ಬಂದಿಳಿಯಲಿವೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry