ಭಾನುವಾರ, ಸೆಪ್ಟೆಂಬರ್ 22, 2019
23 °C

ಕೃಷಿ ಸಾಧಕ ಕಲ್ಲಯ್ಯ ಹಿರೇಮಠ

Published:
Updated:
ಕೃಷಿ ಸಾಧಕ ಕಲ್ಲಯ್ಯ ಹಿರೇಮಠ

ಬಸವಕಲ್ಯಾಣ:  ತಾಲ್ಲೂಕಿನ ಮಂಠಾಳದ ಕಲ್ಲಯ್ಯ ಹಿರೇಮಠ ಪ್ರಗತಿಪರ ಕೃಷಿಕರು. ಪ್ರಸಕ್ತ ಸಾಲಿನಲ್ಲಿ 20 ಅಡಿ ಎತ್ತರದ ಕಬ್ಬು ಮತ್ತು 7 ಅಡಿ ಎತ್ತರದ ತೊಗರಿ ಬೆಳೆದು ವಿಶೇಷ ಸಾಧನೆ ಮಾಡಿದ್ದಾರೆ. ಗ್ರಾಮದ ಜಮೀನಿನಲ್ಲಿ ಕಟ್ಟಡಗಳಿಗೆ ಉಪಯೋಗಿಸುವ ಕೆಂಪು ಜಂಟಿಬಿಟ್ಟಿಗೆ ಕಲ್ಲುಗಳು ದೊರೆಯುತ್ತವೆ. ಇಂಥ ಜಮೀನಿನಲ್ಲಿನ ಮರಳು ಮಿಶ್ರಿತ ಮಣ್ಣಿನಲ್ಲಿ ಉತ್ತಮ ಬೆಳೆ ಬೆಳೆದಿದ್ದಾರೆ. ಪಿತ್ರಾರ್ಜಿತವಾಗಿ ಬಂದಿದ್ದ ಅಲ್ಪ ಜಮೀನಿನಲ್ಲಿ ಕೃಷಿ ಆರಂಭಿಸಿ ಈಗ 35 ಎಕರೆಗೆ ವಿಸ್ತರಿಸುವ ಮೂಲಕ ಕೃಷಿ ಸಹ ಲಾಭದಾಯಕ ಎಂದು ತೋರಿಸಿಕೊಟ್ಟಿದ್ದಾರೆ.

ಕಬ್ಬು, ತೊಗರಿ, ಶುಂಠಿ ಬೆಳೆ ಜತೆಗೆ ಮಾವು, ಹುಣಸೆ ಗಿಡಗಳನ್ನೂ ಬೆಳೆದು ಇತರ ರೈತರಿಗೆ ಮಾದರಿಯಾಗಿದ್ದಾರೆ. ಸಾಂಪ್ರದಾಯಿಕ ಕೃಷಿಯ ಜತೆಗೆ ಆಧುನಿಕ ಪದ್ಧತಿ ಹಾಗೂ ಹನಿ ನೀರಾವರಿ ಅಳವಡಿಸಿದ್ದಾರೆ.

‘30 ವರ್ಷಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಮೊದಲು ಒಂದೇ ಬಾವಿಯಿತ್ತು. 15 ಎಕರೆ ಹೊಲವಿತ್ತು. ಈಗ ಹೊಲ ದುಪ್ಪಟ್ಟಾಗಿದೆ. ನಾಲ್ಕು ತೆರೆದ ಬಾವಿಗಳನ್ನು ಕೊರೆಸಲಾಗಿದೆ. ಕೃಷಿಯಿಂದ ದೊರೆತ ಲಾಭವನ್ನು ಕೃಷಿಗಾಗಿ ವಿನಿಯೋಗಿಸಿರುವೇ. ಮಕ್ಕಳು ಸಹ ಕೈಜೋಡಿಸಿದ್ದಾರೆ’ ಎನ್ನುತ್ತಾರೆ ಕಲ್ಲಯ್ಯ.

‘ಏಳು ಎಕರೆಯಷ್ಟು ಕಬ್ಬು ಇದೆ. ಪ್ರತಿಯೊಂದು ದಂಟಿನ ಮಧ್ಯೆ 3 ಅಡಿ ಅಂತರವಿಟ್ಟು ಕಬ್ಬು ನಾಟಿ ಮಾಡಲಾಗಿದೆ. ಸಾಲುಗಳ ಮಧ್ಯದ ಅಂತರ 2 ಅಡಿಗಿಂತ ಹೆಚ್ಚಾಗಿದೆ. ಗೋಮೂತ್ರ ಮತ್ತು ತಿಪ್ಪೆ ಗೊಬ್ಬರ ಹಾಕಲಾಗಿದೆ. ಕಳೆದ ವರ್ಷ ಎಕರೆಗೆ 75 ಟನ್ ಇಳುವರಿ ಬಂದು. ಒಟ್ಟು ₹ 11 ಲಕ್ಷ ಲಾಭ ಬಂದಿತ್ತು’ ಎಂದರು.

‘ತೊಗರಿಯನ್ನು ನಾಟಿ ಪದ್ಧತಿಯಲ್ಲಿ ಬೆಳೆಯಲಾಗಿದೆ. 60ಗುಂಟೆಯಲ್ಲಿ ಒಟ್ಟು 1,800 ಬೀಜಗಳನ್ನು ನಾಟಿ ಮಾಡಲಾಗಿದೆ. ಇದಕ್ಕೆ ಬಾವಿ ನೀರು ಸಹ ಹರಿಸಿದ್ದರಿಂದ 7 ಅಡಿ ಎತ್ತರಕ್ಕೆ ಬೆಳೆದಿದೆ. ಎಕರೆಗೆ 20 ಕ್ವಿಂಟಲ್ ನಷ್ಟು ಇಳುವರಿ ಬರಬಹುದು ಎಂದು ಅಂದಾಜು ಮಾಡಲಾಗಿದೆ’ ಎನ್ನುತ್ತಾರೆ ಕಲ್ಲಯ್ಯ ಅವರ ಪುತ್ರರಾದ ಪಂಚಾಕ್ಷರಯ್ಯ ಮತ್ತು ಜಗನ್ನಾಥ.

‘ಕಲ್ಲಯ್ಯ ಹಿರೇಮಠ ಕೃಷಿ ಸಾಧನೆಯನ್ನು ಮೆಚ್ಚಿ ಬೀದರ್ ನಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಮಟ್ಟದ ಕೃಷಿ ಕಾರ್ಯಾಗಾರದಲ್ಲಿ ಸನ್ಮಾನಿಸಲಾಗಿದೆ’ ಎಂದು ಪರಿಷತ್‌ನ ಹೋಬಳಿ ಘಟಕದ ಅಧ್ಯಕ್ಷ ಶಂಕರ ಪಾಟೀಲ ಹೇಳಿದರು. ಮಾಹಿತಿಗೆ ಕಲ್ಲಯ್ಯ ಅವರ ಮೊ: 94803 58225 ಸಂಪರ್ಕಿಸಬಹುದು.

 

Post Comments (+)