ಬೆಳೆ ಸಮೀಕ್ಷೆ ಬಗ್ಗೆ ಆತಂಕ ಬೇಡ

ಶನಿವಾರ, ಮೇ 25, 2019
22 °C

ಬೆಳೆ ಸಮೀಕ್ಷೆ ಬಗ್ಗೆ ಆತಂಕ ಬೇಡ

Published:
Updated:

ಹಾವೇರಿ: ‘ಬೆಳೆ ಸಮೀಕ್ಷೆ’ ಹಾಗೂ ‘ಬೆಳೆ ನಷ್ಟ ಸಮೀಕ್ಷೆ’ ಎಂದು ಎರಡು ವಿಧಾನಗಳಲ್ಲಿ ಬೆಳೆ ಹಾನಿಯ ಪರಿಶೀಲನೆ ನಡೆಯುತ್ತಿರುವ ಕಾರಣ ರೈತರು ಆತಂಕ ಪಡಬೇಕಾಗಿಲ್ಲ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶಾಂತಾ ಹುಲ್ಮನಿ ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಭರವಸೆ ನೀಡಿದರು.

‘ಎಲ್ಲ ತಾಲ್ಲೂಕುಗಳಲ್ಲಿ ‘ಬೆಳೆ ಸಮೀಕ್ಷೆ’ ನಡೆಯುತ್ತಿದ್ದು, ‘ಬೆಳೆ ನಷ್ಟ ಸಮೀಕ್ಷೆ’ಯನ್ನು ಮೊದಲ ಹಂತವಾಗಿ ಹಾವೇರಿ, ಬ್ಯಾಡಗಿ ಹಾಗೂ ಸವಣೂರಿನಲ್ಲಿ ಕೈಗೊಳ್ಳಲಾಗಿದೆ’ ಎಂದರು.

‘ರೈತರು ನಾಶಪಡಿಸಿದ ಬೆಳೆ ಮಾಹಿತಿಯನ್ನೂ ಮೊಬೈಲ್ ಆ್ಯಪ್‌ ನಲ್ಲಿ ಸೇರ್ಪಡೆ ಮಾಡಲು ಅವಕಾಶ ಇದೆ. ರೈತರು ಯಾವುದೇ ಆತಂಕಕ್ಕೆ ಒಳಗಾಗಬಾರದು. ಬೆಳೆ ಪರಿಹಾರ ಪಡೆಯಲು ತೊಂದರೆಯಾಗುವುದಿಲ್ಲ. ಜಿಲ್ಲೆಯಲ್ಲಿ ನಡೆಯುತ್ತಿರುವ ಸರ್ವೆ ಕಾರ್ಯವು ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ’ ಎಂದರು.

ಇದಕ್ಕೂ ಮೊದಲು ಸಮೀಕ್ಷೆ ಕುರಿತು ಮಾತನಾಡಿದ ಸದಸ್ಯ ಏಕನಾಥ ಬಾನುವಳ್ಳಿ, ‘ಪ್ರಸಕ್ತ ಮುಂಗಾರಿನಲ್ಲಿ ಈರುಳ್ಳಿ, ಬೆಳ್ಳುಳ್ಳಿ ಸರಿಯಾಗಿ ಬೆಳೆದಿಲ್ಲ. ಹೀಗಾಗಿ ಅದನ್ನು ನಾಶ ಪಡಿಸಿದ ರೈತರು, ಹಿಂಗಾರು ಬಿತ್ತನೆಗೆ ತಯಾರಿ ನಡೆಸಿದ್ದಾರೆ. ಅಧಿಕಾರಿಗಳು ಖಾಲಿ ಜಮೀನುಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ’ ಎಂದರು.

‘ಕೆಲವು ತಾಲ್ಲೂಕುಗಳಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾದರೆ, ಕೆಲವೆಡೆ ಕೀಟ ಬಾಧೆ ಹಾಗೂ ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದರು.

‘ಕೆಲವು ಅಂಗನವಾಡಿಗಳಲ್ಲಿ ಹಾಳಾದ ಆಹಾರಧಾನ್ಯ ಉಪಯೋಗಿಸಲಾಗುತ್ತಿದೆ’ ಎಂದು ಸದಸ್ಯ ಮಾಲತೇಶ ಸೊಪ್ಪಿನ ಪ್ರದರ್ಶಿಸಿದರು.

‘ಸಂಬಂಧಿಸಿದ ಅಂಗನವಾಡಿ ಕಾರ್ಯಕರ್ತೆಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎಂ.ಎನ್‌.ಮಾಳಗೇರ ತಿಳಿಸಿದರು.

‘ಸವಣೂರ ತಾಲ್ಲೂಕಿನಲ್ಲಿ ಕಾಮಗಾರಿಯ ಗುತ್ತಿಗೆ ನೀಡಲು ಕಮಿಷನ್‌ ಕೇಳುತ್ತಿದ್ದಾರೆ’ ಎಂದು ಸದಸ್ಯ ರಮೇಶ ದುಗ್ಗತ್ತಿ ಆರೋಪಿಸಿದರು. ಆದರೆ, ಅಧಿಕಾರಿಗಳು ನಿರಾಕರಿಸಿದರು.

‘ಬೆಂಕಿ ಅವಘಡದ ಸಂತ್ರಸ್ತರಿಗೆ ಸರ್ಕಾರಿಂದ ಬರುವ ಪರಿಹಾರ ಹಣ ತೀರಾ ಕಡಿಮೆಯಾಗಿದೆ’ ಎಂದು ಸದಸ್ಯ ನೀಲಪ್ಪ ಈಟೇರ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಬಸವರಾಜ ಶಿವಣ್ಣನವರ, ‘ಅದು ಕೇಂದ್ರ ಸರ್ಕಾರದ ನಿಯಮದ ಪ್ರಕಾರ ರಾಜ್ಯ ಸರ್ಕಾರ ಬಿಡುಗಡೆ ಮಾಡುತ್ತದೆ’ ಎಂದರು.

‘ಜಿಲ್ಲೆಯ 1,023 ಸರ್ಕಾರಿ ಶಾಲಾ ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು, ಸರ್ಕಾರದ ಸೂಚನೆಯಂತೆ 429 ಶಾಲೆಗಳ ಮೊದಲ ಆದ್ಯತಾ ಪಟ್ಟಿಯನ್ನು ಸಲ್ಲಿಸಲಾಗಿತ್ತು. ಆದರೆ, ಕೇವಲ 132 ಹೊಸ ಕಟ್ಟಡಗಳಿಗೆ ಮಾತ್ರ ಅನುಮೋದನೆ ದೊರೆತಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಮಮತಾ ನಾಯಕ್‌ ಹೇಳಿದರು.

‘ಸರ್ವ ಶಿಕ್ಷಣ ಅಭಿಯಾನದ ಮೂಲಕ ನೀಡುತ್ತಿದ್ದ ಅನುದಾನ ನಿಂತ ಕಾರಣ, ಸರ್ಕಾರಿ ಶಾಲೆಗಳು ಸಂಕಷ್ಟಕ್ಕೆ ಸಿಲುಕಿವೆ’ ಎಂದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಉಪಾಧ್ಯಕ್ಷೆ ಮಮತಾಜಬಿ ತಡಸ, ಜಿಲ್ಲಾ ಪಂಚಾಯ್ತಿ ಸಿಇಒ ಕೆ.ಬಿ.ಅಂಜನಪ್ಪ, ಉಪ ಕಾರ್ಯದರ್ಶಿ ಜಿ.ಗೋವಿಂದಸ್ವಾಮಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry