ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನಾಂದೋಲನ ರೂಪ ಪಡೆದ ಹೋರಾಟ’

Last Updated 30 ಅಕ್ಟೋಬರ್ 2017, 6:44 IST
ಅಕ್ಷರ ಗಾತ್ರ

ಹಾವೇರಿ: ‘ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟವು ಜನಾಂದೋಲನವಾಗಿ ರೂಪುಗೊಳ್ಳುತ್ತಿದೆ. ನಿಮ್ಮ ಅಸ್ಮಿತೆ ಮತ್ತು ಆತ್ಮವನ್ನು ಪ್ರಶ್ನಿಸಿಕೊಳ್ಳಿ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಕಾಲದಲ್ಲಿ ಕೊಚ್ಚಿ ಹೋಗುತ್ತೀರಿ’ ಎಂದು ಬೈಲೂರು ನಿಷ್ಕಲಮಂಟಪದ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು. ಇಲ್ಲಿ ಭಾನುವಾರ ನಡೆದ ಲಿಂಗಾಯತ ಸ್ವತಂತ್ರ ಧರ್ಮ ಚಿಂತನಾ ಸಭೆಯಲ್ಲಿ ಅವರು ಮಾತನಾಡಿದರು.

‘ಇದು ಬದುಕು ಮತ್ತು ಅಸ್ಮಿತೆಯ ಹೋರಾಟ. ಬಸವ ಧರ್ಮಕ್ಕಾಗಿ ತ್ಯಾಗ ಮಾಡುವವರೇ ಲಿಂಗಾಯತರು. ರಾಜ್ಯ ಸರ್ಕಾರವು ಪ್ರತ್ಯೇಕ ಧರ್ಮಕ್ಕೆ ಅನುಮೋದನೆ ನೀಡಿ, ಕಳುಹಿಸಬೇಕು. ಕೇಂದ್ರ ಸರ್ಕಾರವು ಮಾನ್ಯತೆ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

‘ಚಾತುರ್ವರ್ಣ ವ್ಯವಸ್ಥೆ ಭಾರತವನ್ನು ಹಾಳುಗೆಡವುತ್ತಿದ್ದಾಗ ಬಸವಣ್ಣ ಬಂದರು. ‘ಲಿಂಗಾಯತ’ ಧರ್ಮ ಸ್ಥಾಪಿಸಿದರು. ಇದು ಅಯೋಧ್ಯೆ ಅಥವಾ ಕೇದಾರದಲ್ಲಿ ಹುಟ್ಟಿಲ್ಲ. ಮಾದಾರ ಚನ್ನಯ್ಯನ ಮನೆಯಲ್ಲಿ ಹುಟ್ಟಿದೆ. ಇಲ್ಲಿ ಮೇಲು–ಕೀಳಿಲ್ಲ’ ಎಂದ ಅವರು, ‘ಬಸವಣ್ಣ ಗೋವಿನ ಬದಲಾಗಿ ಜನರನ್ನೇ ದೇವರು ಎಂದರು. ಜ್ಞಾನ, ಭಕ್ತಿ, ನಾಮಸ್ಮರಣೆಯ ಬದಲಾಗಿ ಕಾಯಕವನ್ನು ಗೌರವಿಸಿದರು’ ಎಂದರು.

‘ಈ ದೇಶವನ್ನು ಆರ್ಯ, ಹಾರುವ, ಬ್ರಾಹ್ಮಣ ಎಂಬಿತ್ಯಾದಿ ಮೂಲಕ ವೈದಿಕಶಾಹಿ ಆಳಿತು. ಅನಂತರ ‘ಹಿಂದೂ’ ಎಂದರು’ ಎಂದು ವಿವರಿಸಿದರು. ‘ಹುಕ್ಕೇರಿಮಠದ ಬಳಿ ಲಿಂಗಾಯತರ ಬಸವಣ್ಣನವರ ದೇವಸ್ಥಾನ ಎಂದಿದೆ. ಲಿಂಗಾಯತ ಎಂದು ನೆನಪಿಸಲು ಇದೇ ಸಾಕ್ಷಿ’ ಎಂದರು.

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ‘ಬಸವಣ್ಣನವರ ತತ್ವಕ್ಕೆ ಕೆಲವು ವಿರಕ್ತ ಮಠಗಳೇ ಮೋಸ ಮಾಡುತ್ತಿವೆ. ಲಿಂಗಾಯತ ಧರ್ಮ ಉಳಿಸಲು ಸಣ್ಣ ಮಠಗಳೇ ಆಧಾರ’ ಎಂದರು. ‘ಹಾವೇರಿಯಲ್ಲಿ ಹೋರಾಟಕ್ಕೆ ದೊಡ್ಡ ನಾಯಕರ ಆತಂಕ ಇದೆ ಎಂದು ಕೆಲವರು ಹೇಳುತ್ತಾರೆ. ಬಸವಣ್ಣನವರೇ ಹೆದರಲಿಲ್ಲ. ಅವರ ತತ್ವದಲ್ಲಿ ನಂಬಿಕೆ ಇರುವ ನಾವ್ಯಾಕೆ ಹೆದರಬೇಕು?’ ಎಂದರು.

ಸಚಿವ ವಿನಯ ಕುಲಕರ್ಣಿ ಮಾತನಾಡಿ, ‘ನಮಗೆ ರಾಜಕೀಯಕ್ಕಿಂತ ಸ್ವಾಭಿಮಾನ ಮುಖ್ಯ. ಹೋರಾಟಕ್ಕೆ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸಿ.ಎಂ. ಉದಾಸಿ ಹೋರಾಟಕ್ಕೆ ಬಂದರೆ ನಾವು ವೇದಿಕೆ ಬಿಟ್ಟು ಕೊಡುತ್ತೇವೆ’ ಎಂದರು.

‘ನನ್ನ ಹಡೆದವ್ವನ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ. ನನ್ನನ್ನು ಯಾರೂ ಹೋರಾಟಕ್ಕೆ ಕಳುಹಿಸಿಲ್ಲ. ನವೆಂಬರ್ 5ರಂದು ಹುಬ್ಬಳ್ಳಿ ಹಾಗೂ ಡಿ.10ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಯಲಿವೆ’ ಎಂದರು.

ಚಿಕ್ಕೋಡಿ ಬಸವ ಬೆಳವಿಯ ಚರಮೂರ್ತಿ ಚರಂತೇಶ್ವರಮಠ ಶರಣಬಸವ ದೇವರು, ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ಗುಡ್ಡದ ಆನ್ವೇರಿ ಶಿವಯೋಗಿ ಸ್ವಾಮೀಜಿ, ಶಿಗ್ಗಾವಿ ವಿರಕ್ತಮಠದ ಸಂಗನಬಸವ ಸ್ವಾಮೀಜಿ, ಸವಣೂರ ದೊಡ್ಡ ಹುಣಸೆಮಠದ ಚನ್ನಬಸವ ಸ್ವಾಮೀಜಿ, ಹತ್ತಿಮತ್ತೂರ ವಿರಕ್ತಮಠದ ನಿಜಗುಣ ಶಿವಯೋಗಿ ಸ್ವಾಮೀಜಿ, ರಾಣೆಬೆನ್ನೂರ ಗುರುಬಸವ ಸ್ವಾಮೀಜಿ, ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT