7

ಕೈಹಿಡಿಯಿತು ಕೆಸುಗಡ್ಡೆ

Published:
Updated:
ಕೈಹಿಡಿಯಿತು ಕೆಸುಗಡ್ಡೆ

* ಎನ್.ಡಿ.ಹೆಗಡೆ ಆನಂದಪುರಂ

ಶಿವಮೊಗ್ಗ ಜಿಲ್ಲೆಯಲ್ಲಿ ಕಬ್ಬು, ಬಾಳೆ,ಅಡಿಕೆ, ತೆಂಗು, ಕಾಳುಮೆಣಸು, ರಬ್ಬರ್, ಶುಂಠಿ ಇತ್ಯಾದಿ ವಾಣಿಜ್ಯ ಬೆಳೆ ಬೆಳೆಯುವ ರೈತರೇ ಅಧಿಕ. ಆದರೆ ಕೇರಳದಿಂದ ವಲಸೆ ಬಂದ ಹಲವು ಕುಟುಂಬಗಳು ಇಲ್ಲಿನ ಜಮೀನು ಖರೀದಿಸಿ ಕಡಿಮೆ ಮಳೆಯಾಧಾರಿತ ಖುಷ್ಕಿ ಭೂಮಿಯಲ್ಲಿ ಹಲವು ವಿಧದ ಕೃಷಿ ನಡೆಸಿ ಸ್ಥಳೀಯ ರೈತರ ಮೇಲೆ ಗಾಢ ಪ್ರಭಾವ ಬೀರುತ್ತಿದ್ದಾರೆ.

ಸಾಗರ ತಾಲ್ಲೂಕಿನ ಹೆಬ್ಬೋಡಿ ಗ್ರಾಮದ ರೈತ ಧರ್ಮಪ್ಪ ತಮ್ಮ ಖುಷ್ಕಿ ಹೊಲದಲ್ಲಿ ಈ ವರ್ಷ ಹಾಲು ಕೆಸುವಿನ ಕೃಷಿ ಕೈಗೊಂಡಿದ್ದು ಗಿಡ ಹುಲುಸಾಗಿ ಬೆಳೆದು ಕೆಸುವಿನ ಗಡ್ಡೆ ಬಂಪರ್ ಫಸಲು ಬಿಟ್ಟಿದೆ.

ಹಾಲು ಕೆಸುವಿನ ಕೃಷಿಗೆ ಅತಿಯಾದ ನೀರು ಅಗತ್ಯವಿಲ್ಲ. ಮಳೆ ಕೊರತೆಯಲ್ಲೂ ಉತ್ತಮ ಫಸಲು ದೊರೆಯುತ್ತದೆ. ಅಲ್ಲದೇ ಇದಕ್ಕೆ ರೋಗಬಾಧೆ, ಕೀಟಬಾಧೆ ಇಲ್ಲ. ಕೊಳೆ ರೋಗವೂ ಬರದು. ಜಾನುವಾರು ತಿನ್ನುತ್ತದೆ ಎಂಬ ಆತಂಕವಿಲ್ಲ. ಅಷ್ಟೇ ಅಲ್ಲ ಮಂಗಗಳು, ಪಕ್ಷಿಗಳ ಹಾವಳಿಯಿಂದ ಬೆಳೆ ಹಾನಿಯಾಗುವ ಭೀತಿಯೂ ಇಲ್ಲ.

ಕೃಷಿ ಹೇಗೆ?: ಇವರು ಹೆಬ್ಬೋಡಿ ಗ್ರಾಮದ ತಮ್ಮ ಒಂದೂವರೆ ಎಕರೆ ವಿಸ್ತೀರ್ಣದ ಖುಷ್ಕಿ ಹೊಲದಲ್ಲಿ ಈ ಕೃಷಿ ಕೈಗೊಂಡಿದ್ದಾರೆ. ಕೇರಳ ಮೂಲದ ರೈತ ಬಸವನಹೊಂಡದ ಜೇಮ್ಸ್ ಹಲವು ವರ್ಷಗಳಿಂದ ಈ ಕೃಷಿ ನಡೆಸಿ ಲಾಭ ಗಳಿಸುತ್ತಿದ್ದು ಅವರ ಸಲಹೆ ಮಾರ್ಗದರ್ಶನ ಪಡೆದು ಇವರು ಈ ಕೃಷಿ ಕೈಗೊಂಡಿದ್ದಾರೆ.

ಜೂನ್ ಆರಂಭದಲ್ಲಿ ಇಡೀ ಹೊಲವನ್ನು ಟ್ರ್ಯಾಕ್ಟರ್‌ನಿಂದ ಉಳುಮೆ ಮಾಡಿಸಿ ಸಾಲಿನಿಂದ ಸಾಲಿಗೆ ಎರಡು ಅಡಿ ಬರುವಂತೆ ಪಟ್ಟೆ ಸಾಲು ನಿರ್ಮಿಸಿದರು. ಒಂದು ಅರ್ಧ ಅಡಿ ಆಳ, ಅರ್ಧ ಅಡಿ ಸುತ್ತಳತೆಯ ಗುಂಡಿ ನಿರ್ಮಿಸಿ, ಗಿಡದಿಂದ ಗಿಡಕ್ಕೆ ಸರಿ ಸುಮಾರು ಎರಡು ಅಡಿ ಅಂತರದಲ್ಲಿ ಬರುವಂತೆ ಕೆಸುವಿನ ಬೀಜ ನಾಟಿ ಮಾಡಿದ್ದಾರೆ.

ನಾಟಿ ಮಾಡುವಾಗ ಸಗಣಿ ಗೊಬ್ಬರ, ದರಗಲೆ ಹಾಕಿದ್ದರು. 10-12 ದಿನದಲ್ಲಿ ಗಡ್ಡೆ ಚಿಗುರಿ ಎಲೆ ಕಾಣಿಸಿಕೊಳ್ಳುತ್ತಿದ್ದಂತೆ ಸರಾಸರಿ 50 ಗ್ರಾಂ.ನಷ್ಟು ಡಿ.ಎ.ಪಿ. ಗೊಬ್ಬರ ನೀಡಿದ್ದರು. ನಂತರ ಪ್ರತಿ 20 ದಿನಕ್ಕೆ ಒಮ್ಮೆಯಂತೆ ಒಟ್ಟು ಮೂರು ಸಲ ಗೊಬ್ಬರ ನೀಡಿ ಮಣ್ಣು ಏರಿಸಿ ಕೃಷಿ ಮಾಡಿದ್ದಾರೆ. ತಮ್ಮ ವಿಶಾಲವಾದ ಹೊಲದಲ್ಲಿ ಒಂದೂಕಾಲು ಎಕರೆ ವಿಸ್ತೀರ್ಣದಲ್ಲಿ ಮಾತ್ರ ಈ ಕೃಷಿ ನಡೆಸಿದ್ದಾರೆ.

ಇವರು ಕ್ವಿಂಟಾಲ್‌ಗೆ ₹1500ರಂತೆ 12 ಕ್ವಿಂಟಾಲ್ ಕೆಸುವಿನ ಬೀಜ ಖರೀದಿಸಿದ್ದಾರೆ. ಅದರಿಂದ 8000 ಗಿಡಗಳನ್ನು ಬೆಳೆಸಿದ್ದಾರೆ. ಈ ವರ್ಷ ಆಗಸ್ಟ್‌ನಿಂದ ಅಕ್ಟೋಬರ್‌ವರೆಗೂ ಮಲೆನಾಡಿನಲ್ಲಿ ಹದ ಮಳೆ ಬೀಳುತ್ತಿರುವ ಕಾರಣ ಕೆಸುವಿನ ಗಡ್ಡೆಗಳು ಹುಲುಸಾಗಿ ಬೆಳೆದಿದ್ದು ಎಲೆಗಳು ದೊಡ್ಡದಾಗಿ ಹರಡಿಕೊಂಡಿವೆ.

ಲಾಭ ಹೇಗೆ: ಪ್ರತಿ ಗಿಡದಿಂದ ಸರಾಸರಿ ಮೂರು ಕೆ.ಜಿ ಕೆಸುವಿನ ಗಡ್ಡೆ ಬಿಟ್ಟಿದೆ. ಸರಾಸರಿ 240 ಕ್ವಿಂಟಾಲ್ ಕೆಸುವಿನ ಫಸಲು ದೊರೆಯುವ ನಿರೀಕ್ಷೆಯಿದೆ. ಕೆಸುವಿಗೆ ಮಾರುಕಟ್ಟೆಯಲ್ಲಿ ಹಲವು ವರ್ಷಗಳ ದರ ಗಮನಿಸಿದರೆ ಸರಾಸರಿ ಕೆ.ಜಿಗೆ ₹15 ದರ ದೊರೆಯುತ್ತದೆ. ಕಳೆದ ವರ್ಷ ಮಾರ್ಚ್‌ನಲ್ಲಿ ಕೆ.ಜಿಗೆ ₹ 50ರವರೆಗೂ ಅದರ ದರ ತಲುಪಿತ್ತು.

ಮಂಗಳೂರು, ಕೇರಳಗಳಲ್ಲಿ ಒಳ್ಳೆಯ ಮಾರುಕಟ್ಟೆಯಿದೆ. 240 ಕ್ವಿಂಟಾಲ್ ಕೆಸುವಿನ ಫಸಲಿನಿಂದ ಇವರಿಗೆ ₹ 3.60 ಲಕ್ಷ ಆದಾಯ ದೊರೆಯುವ ನಿರೀಕ್ಷೆ ಅವರದಾಗಿದೆ. ಗೊಬ್ಬರ, ಬೀಜ ಖರೀದಿ, ಕೃಷಿ ಕೆಲಸದ ಕೂಲಿ ಎಲ್ಲ ಲೆಕ್ಕ ಹಾಕಿದರೂ ₹ 1.20 ಲಕ್ಷ ಖರ್ಚಾಗಿದೆ. ₹ 2.40 ಲಕ್ಷ ಲಾಭ ದೊರೆಯುತ್ತದೆ ಎಂದು ಲೆಕ್ಕಾಚಾರ ಹಾಕಿ ಹೇಳುತ್ತಾರೆ ಅವರು. ಕೆಸುವಿನ ಕೃಷಿ ಆರಂಭಿಸಿದಾಗ ಸುತ್ತಮುತ್ತಲ ಕೃಷಿಕರು ಇದರಿಂದ ಉತ್ತಮ ಫಸಲು ಸಾಧ್ಯವೇ, ಲಾಭದಾಯಕವೇ ಎಂದು ಗೊಣಗಿದ್ದರು. ಈಗ ಅವರ ಹೊಲದಲ್ಲಿ ಸಮೃದ್ಧವಾಗಿ ಕೆಸುವಿನ ಫಸಲು ಬೆಳೆದಿದ್ದು ನೋಡಿ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಸಂಪರ್ಕಕ್ಕೆ: 99801 83531

ಚಿತ್ರ: ಲೇಖಕರದು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry