ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿಗೆ ಭಂಗ: ಕಠಿಣ ಕ್ರಮದ ಎಚ್ಚರಿಕೆ

Last Updated 3 ನವೆಂಬರ್ 2017, 7:22 IST
ಅಕ್ಷರ ಗಾತ್ರ

ಮಡಿಕೇರಿ: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರುವುದು ಕಂಡುಬಂದಲ್ಲಿ ಅಂತವರ ವಿರುದ್ಧ ಪ್ರಕರಣ ದಾಖಲಿಸಿ, ಬಳ್ಳಾರಿ ಜೈಲಿಗೆ ಕಳುಹಿಸಲು ಜಿಲ್ಲಾಡಳಿತ ಹಿಂಜರಿಯುವುದಿಲ್ಲ ಎಂದು ಜಿಲ್ಲಾಧಿಕಾರಿ ರಿಚರ್ಡ್‌ ವಿನ್ಸೆಂಟ್‌ ಡಿಸೋಜ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಕಾನೂನು ಸುವ್ಯವಸ್ಥೆ ಸಂಬಂಧ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ‘ಜಿಲ್ಲೆಯ ಪ್ರತಿಯೊಬ್ಬ ನಾಗರಿಕರು ಉತ್ತಮ ಬದುಕು ಕಟ್ಟಿಕೊಳ್ಳಬೇಕು. ಶಾಂತಿ ಸುವ್ಯವಸ್ಥೆಗೆ ಕೊಡಗು ಹೆಸರಾಗಿದ್ದು, ಭಯದ ವಾತಾವರಣ ಯಾರಲ್ಲಿಯೂ ಇರಬಾರದು. ಕೊಡಗು ಸಮೃದ್ಧ ಜಿಲ್ಲೆಯಾಗಿದ್ದು, ಅದನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು’ ಎಂದು ಕೋರಿದರು.

‘ಆರ್ಥಿಕ, ಶೈಕ್ಷಣಿಕ, ಕೃಷಿ, ಉತ್ತಮ ಪರಿಸರ, ಪ್ರವಾಸಿ ಹಾಗೂ ಧಾರ್ಮಿಕ ಕೇಂದ್ರಗಳನ್ನು ಒಳಗೊಂಡಿದ್ದು, ಸಮೃದ್ಧಿಯಾಗಿದೆ. ಅದನ್ನು ಕಾಪಾಡಿಕೊಂಡು ಹೋಗುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ’ ಎಂದು ಮನವಿ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಮಾತನಾಡಿ, ‘ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಅಗತ್ಯ ಬಂದೋಬಸ್ತ್ ಮಾಡಿಕೊಳ್ಳಲಾಗುವುದು. ಬೇರೆ ಬೇರೆ ಜಿಲ್ಲೆಗಳಿಂದ ಪೊಲೀಸರನ್ನು ಕರೆಸಲಾಗುವುದು. ಸೇನಾ -ಮಿಲಿಟರಿ ಪೊಲೀಸ್, ಹೋಂ ಗಾರ್ಡ್... ಹೀಗೆ ಎಲ್ಲಾ ಹಂತದ ಪೊಲೀಸರನ್ನು ನಿಯೋಜಿಸಿ ಅಗತ್ಯ ಬಂದೋಬಸ್ತ್ ಮಾಡಿಕೊಳ್ಳಲಾಗುವುದು. ವಿವಿಧ ಕಡೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುವುದು’ ಎಂದು ಅವರು ಹೇಳಿದರು.

ಜಿಲ್ಲೆಯ ಹತ್ತು ಕಡೆ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗುವುದು, ವಿವಿಧ ಕಡೆ ವಾಹನ ತಪಾಸಣೆ ಮಾಡಲಾಗುವುದು, ಕುಟ್ಟ, ಮಾಕುಟ್ಟ, ಪೆರಂಬಾಡಿ, ಕರಿಕೆ, ಸಂಪಾಜೆ, ಕುಶಾಲನಗರ, ಕೊಡ್ಲಿಪೇಟೆ ಹೀಗೆ ಎಲ್ಲಾ ಕಡೆಯು ಚೆಕ್‌ಪೋಸ್ಟ್ ನಿರ್ಮಿಸಲಾಗುವುದು ಎಂದು ಸಭೆಯಲ್ಲಿ ಮಾಹಿತಿ ನೀಡಿದರು.

ಬ್ಯಾನರ್, ಬಂಟಿಂಗ್ಸ್, ಪ್ಲೆಕ್ಸ್ ಅಳವಡಿಸಲು ಅನುಮತಿ ನೀಡಬಾರದು. ಅನುಮತಿ ಬೇಕಿದ್ದಲ್ಲಿ ಸ್ಥಳೀಯ ಸಂಸ್ಥೆಗಳು ಪೊಲೀಸ್ ಇಲಾಖೆಗೆ ಹಿಂಬರಹ ಬರೆದು ಕಳುಹಿಸುವಂತೆ ರಾಜೇಂದ್ರ ಪ್ರಸಾದ್ ಅವರು ಹೇಳಿದರು. ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾ ಹಂತದಲ್ಲಿ ಶಾಂತಿ ಸಭೆಯನ್ನು ನಡೆಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ದಸರಾ, ಕಾವೇರಿ ತುಲಾ ಸಂಕ್ರಮಣ ಜಾತ್ರೆ, ಗಣೇಶೋತ್ಸವವನ್ನು ಶಾಂತಿಯುತವಾಗಿ ಆಚರಿಸಲಾಗಿದೆ. ಮುಂದೆಯೂ ಪ್ರತಿ ಸಂದರ್ಭದಲ್ಲಿ ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕಿದೆ ಎಂದು ಅವರು ಹೇಳಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ತಾ.ಪಂ ಇಒಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್, ಉಪ ವಿಭಾಗಾಧಿಕಾರಿ ನಂಜುಂಡೇಗೌಡ, ಜಿ.ಪಂ ಯೋಜನಾ ನಿರ್ದೇಶಕ ಸಿದ್ದಲಿಂಗಮೂರ್ತಿ, ತಹಶೀಲ್ದಾರ್‌ ಕುಸುಮಾ, ಮಹೇಶ್, ಗೋವಿಂದರಾಜು, ಡಿವೈಎಸ್‌ಪಿ ಸುಂದರರಾಜ್, ಪೌರಾಯುಕ್ತೆ ಬಿ.ಶುಭಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಕುಮಾರ್, ತಾ.ಪಂ ಇಒಗಳಾದ ಚಂದ್ರಶೇಖರ್, ಜೀವನ್ ಕುಮಾರ್, ಅಗ್ನಿಶಾಮಕ ಇಲಾಖೆಯ ಚೇತನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT