ಶನಿವಾರ, ಫೆಬ್ರವರಿ 27, 2021
25 °C

ಮೂರು ವರ್ಷಕ್ಕೊಮ್ಮೆ ನೀರಿನ ದರ ಏರಿಕೆ

ಮಂಜುನಾಥ ಹೆಬ್ಬಾರ್‌ Updated:

ಅಕ್ಷರ ಗಾತ್ರ : | |

ಮೂರು ವರ್ಷಕ್ಕೊಮ್ಮೆ ನೀರಿನ ದರ ಏರಿಕೆ

ಬೆಂಗಳೂರು: ಕನಿಷ್ಠ ಮೂರು ವರ್ಷಕ್ಕೊಮ್ಮೆ ಕುಡಿಯುವ ನೀರಿನ ದರ ಏರಿಸುವ ಪ್ರಸ್ತಾವವನ್ನು ನಗರಾಭಿವೃದ್ಧಿ ಇಲಾಖೆಗೆ ಜಲಮಂಡಳಿ ಸಲ್ಲಿಸಿದೆ.

ಜಲಮಂಡಳಿ ಈ ಹಿಂದೆ 2014ರಲ್ಲಿ ನೀರಿನ ದರವನ್ನು ಏರಿಸಿತ್ತು. ಅದಕ್ಕೂ ಮುನ್ನ ಹೆಚ್ಚಿಸಿದ್ದು 2005ರಲ್ಲಿ. 2012–13ರ ಅವಧಿಯಲ್ಲಿ ಮಂಡಳಿ ಮೂರು ಸಲ ದರ ಏರಿಕೆಯ ಪ್ರಸ್ತಾವ ಸಲ್ಲಿಸಿತ್ತು. ಸರ್ಕಾರ ಅಳೆದೂ ತೂಗಿ 2014ರಲ್ಲಿ ಒಪ್ಪಿಗೆ ನೀಡಿತ್ತು. ‘ಈ ರೀತಿ ಆಗೊಮ್ಮೆ ಈಗೊಮ್ಮೆ ದರ ಏರಿಸಿದರೆ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ಕಷ್ಟ. ಆಡಳಿತ ನಿರ್ವಹಣೆಯ ವೆಚ್ಚಗಳನ್ನು ಸರಿದೂಗಿಸುವುದು ತ್ರಾಸದಾಯಕ. ಅದರ ಬದಲು ನಿಯಮಿತವಾಗಿ ದರ ಏರಿಸಲು ಅವಕಾಶ ಕಲ್ಪಿಸಬೇಕು’ ಎಂಬುದು ಮಂಡಳಿಯ ಅಧಿಕಾರಿಗಳ ವಾದ.

‘ಮಂಡಳಿಯ ತಿಂಗಳ ಆದಾಯ ₹95 ಕೋಟಿಯ ಆಸುಪಾಸಿನಲ್ಲಿ ಇದೆ. ನೀರು ಪಂಪ್‌ ಮಾಡಲು ಮಂಡಳಿ ತಿಂಗಳಿಗೆ ₹40 ಕೋಟಿ ವಿದ್ಯುತ್‌ ಶುಲ್ಕ ಭರಿಸುತ್ತಿದೆ. ಸಿಬ್ಬಂದಿ ವೇತನ, ದುರಸ್ತಿ, ಪೈಪ್‌ಗಳ ಬದಲಾವಣೆ ಸೇರಿದಂತೆ ವಿವಿಧ ಕೆಲಸಗಳಿಗೆ ಉಳಿದ ಮೊತ್ತ ಸಾಲುವುದಿಲ್ಲ’ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

‘1997–98ರಲ್ಲಿ ಮಂಡಳಿ ತಿಂಗಳಿಗೆ ₹3 ಕೋಟಿ ವಿದ್ಯುತ್ ಬಿಲ್‌ ಪಾವತಿಸಿತ್ತು. ಈಗ ಅದು 10 ಪಟ್ಟು ಹೆಚ್ಚಾಗಿದೆ. ಪ್ರತಿ ವರ್ಷ ವಿದ್ಯುತ್‌ ದರ ಜಾಸ್ತಿ ಆಗುತ್ತಿದೆ. ಅದಕ್ಕೆ ತಕ್ಕಂತೆ ನೀರಿನ ದರ ಪರಿಷ್ಕರಣೆ ಆಗಬೇಕಿದೆ’ ಎಂದು ಅವರು ಹೇಳುತ್ತಾರೆ.

‘2009ರಲ್ಲಿ ಇಂತಹುದೇ ಪ್ರಸ್ತಾವವನ್ನು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಲಾಗಿತ್ತು. ಅದನ್ನು ರಾಜ್ಯ ಸರ್ಕಾರ ತಿರಸ್ಕರಿಸಿತ್ತು. ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ಈ ಸಂದರ್ಭದಲ್ಲಿ ದರ ಪರಿಷ್ಕರಣೆಗೆ ಒಪ್ಪಿಗೆ ನೀಡುವುದು ಅನುಮಾನ’ ಎಂದು ಮಂಡಳಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

‘ಹೊಸ ಯೋಜನೆಗಳ ಅನುಷ್ಠಾನಕ್ಕಾಗಿ ಜಪಾನ್‌ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ (ಜೈಕಾ) ಹಾಗೂ ವಿವಿಧ ಸಂಸ್ಥೆಗಳಿಂದ ಸಾಲ ಪಡೆಯುತ್ತಿದ್ದೇವೆ. ಈ ಸಂದರ್ಭದಲ್ಲಿ ಅವರು ನೀರಿನ ದರ ನೀತಿಯ ಬಗ್ಗೆ ಮಾಹಿತಿ ಕೇಳುತ್ತಿದ್ದಾರೆ. ನಮ್ಮಲ್ಲಿ ಈವರೆಗೆ ಅಂತಹ ಸಮಗ್ರ ನೀತಿ ಇಲ್ಲ. ಅದಕ್ಕಾಗಿ ಹೊಸದೊಂದು ನೀತಿ ಸಿದ್ಧಪಡಿಸುತ್ತಿದ್ದೇವೆ. ಈ ಸಂಬಂಧ ರಾಜ್ಯ ಸರ್ಕಾರದ ಜತೆಗೆ ಸಮಾಲೋಚನೆ ಸಾಗಿದೆ’ ಎಂದು ಜಲಮಂಡಳಿಯ ಅಧ್ಯಕ್ಷ ತುಷಾರ್‌ ಗಿರಿನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ನೀರಿನ ಸೋರಿಕೆ ತಡೆಗಟ್ಟಲು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳುತ್ತಿದ್ದೇವೆ. ಜನರಿಗೆ ಹೊರೆಯಾಗದ ರೀತಿಯಲ್ಲಿ ಕುಡಿಯುವ ನೀರನ್ನು ಪೂರೈಸಬೇಕಿದೆ. ಜತೆಗೆ ಮಂಡಳಿಗೆ ಆದಾಯ ಕ್ರೋಡೀಕರಣವಾಗಬೇಕು. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿದ್ದೇವೆ’ ಎಂದು ಅವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.