ಗುರುವಾರ , ಮಾರ್ಚ್ 4, 2021
20 °C

ಸರಳವಾಗಿ ಟಿಪ್ಪು ಜಯಂತಿ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರಳವಾಗಿ ಟಿಪ್ಪು ಜಯಂತಿ ಆಚರಣೆ

ಕನಕಪುರ: ಟಿಪ್ಪು ಜಯಂತಿ ಹಿಂದಿನ ಸಾಲಿನಲ್ಲಿ ನಡೆಸಿದ ರೀತಿಯಲ್ಲೇ ಈ ಬಾರಿಯೂ ಆಚರಣೆ ಮಾಡುವುದಾಗಿ ಗ್ರೇಡ್‌ 2 ತಹಶೀಲ್ದಾರ್‌ ಕೆ.ಆನಂದಯ್ಯ ತಿಳಿಸಿದರು.

ನಗರದ ತಾಲ್ಲೂಕು ಕಚೇರಿಯ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಟಿಪ್ಪು ಜಯಂತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮಾಜಕ್ಕಾಗಿ ಶ್ರಮಿಸಿದ ಮಹನೀಯರ ಜಯಂತಿ ಆಚರಣೆ ಮಾಡುವುದರ ಜತೆಗೆ ಅವರ ಆದರ್ಶ ಗುಣಗಳನ್ನು ಜನತೆಗೆ ತಿಳಿಸುವ ಕೆಲಸವಾಗಬೇಕು. ಜನರು ಅದನ್ನು ಪಾಲನೆ ಮಾಡಿದಾಗ ಅವರ ತ್ಯಾಗಕ್ಕೆ ನಿಜವಾದ ಅರ್ಥ ಬರುತ್ತದೆ ಎಂದರು.

ನ. 10ರಂದು ತಾಲ್ಲೂಕು ಕಚೇರಿಯಲ್ಲಿ ಸರಳವಾಗಿ ಆಚರಣೆ ಮಾಡಲಾಗುವುದು. ನಂತರ ನಗರದ ಉರ್ದುಶಾಲೆಯಲ್ಲಿ ಬಹಿರಂಗ ವೇದಿಕೆ ಕಾರ್ಯಕ್ರಮದೊಂದಿಗೆ ಟಿಪ್ಪು ಜಯಂತಿ ನಡೆಯಲಿದ್ದು, ಟಿಪ್ಪು ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಸಭೆಯಲ್ಲಿ ಸೇರಿದ್ದ ಮುಖಂಡರು ಮಾತನಾಡಿ , ಎಲ್ಲಾ ಸಮುದಾಯದ ನಾಯಕರನ್ನು ಗೌರವಿಸುವ ಕೆಲಸವಾಗಬೇಕು. ಅವರ ಬಗ್ಗೆ ಸಮಾಜಕ್ಕೆ ತಿಳಿಸಿ ಕೊಡುವ ಕೆಲಸವಾಗಬೇಕೆಂದು ಹೇಳಿದರು. ಮುಸ್ಲಿಂ ಸಮುದಾಯದ ಮುಖಂಡರು ಮಾತನಾಡಿ, ಕಳೆದ ಬಾರಿ ಟಿಪ್ಪು ಜಯಂತಿ ಆಚರಣೆಯಲ್ಲಿ ಮೆರವಣಿಗೆಗೆ ಅವಕಾಶ ನೀಡಿರಲಿಲ್ಲ. ಈ ಬಾರಿಯಾದರೂ ನೀಡಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ನಗರಸಭೆ ಅಧ್ಯಕ್ಷ ಕೆ.ಎನ್‌.ದಿಲೀಪ್‌ ಮಾತನಾಡಿ, ಸರ್ಕಾರ ಟಿಪ್ಪು ಜಯಂತಿ ಆಚರಣೆಯ ಬಗ್ಗೆ ಯಾವ ನಿರ್ಧಾರ ಕೈಗೊಂಡು ಆಚರಣೆಯ ಬಗ್ಗೆ ಜಿಲ್ಲಾಡಳಿತಕ್ಕೆ ಕೊಟ್ಟಿರುವ ಮಾರ್ಗಸೂಚಿಯಲ್ಲೇ ತಾಲ್ಲೂಕು ಆಡಳಿತ ಆಚರಣೆ ಮಾಡಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ಮತ್ತು ಸಂಸದ ಡಿ.ಕೆ.ಸುರೇಶ್‌ ಅವರೊಂದಿಗೆ ಮಾತನಾಡಿ ಮೆರವಣಿಗೆಯ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.

ಜನಪದ ಕಲಾತಂಡಗಳೊಂದಿಗೆ ಟಿಪ್ಪು ಭಾವಚಿತ್ರವನ್ನು ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಗುವುದು. ಶಾಂತಿ, ಸೌಹಾರ್ದಯುತವಾಗಿ ನಡೆಸುವ ಮೆರವಣಿಗೆಗೆ ಎಲ್ಲ ಸಮುದಾಯ ಕೈ ಜೋಡಿಸಬೇಕೆಂದು ಮುಸ್ಲಿಂ ಮುಖಂಡರು ಮನವಿ ಮಾಡಿದರು. ಹಿಂದುಳಿದ ವರ್ಗ ಇಲಾಖೆಯ ಸಹಾಯಕ ನಿರ್ದೇಶಕ ಸತೀಶ್, ನಗರ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಅನಂತರಾಮ್, ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ ಸಂಸ್ಥೆಯ ಮುಖಂಡರು, ಮುಸ್ಲಿಂ ಸಮುದಾಯದ ಮುಖಂಡರು ಪಾಲ್ಗೊಂಡು ಸಲಹೆ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.