ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ ಮರಳಲು ಜನತಾ ಪರಿವಾರ ನಾಯಕರ ಒಲವು?

Last Updated 4 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌, ಬಿಜೆಪಿಯಲ್ಲಿರುವ ಜನತಾ ಪರಿವಾರದ ನಾಯಕರು ಆ ಪಕ್ಷಗಳಲ್ಲಿ ತಮ್ಮನ್ನು ನಡೆಸಿಕೊಳ್ಳುತ್ತಿರುವ ಬಗ್ಗೆ ಅಸಮಾಧಾನಗೊಂಡಿದ್ದು, ಜೆಡಿಎಸ್‌ಗೆ ಹಿಂತಿರುಗಲು ತುದಿಗಾಲಿನಲ್ಲಿ ನಿಂತಿದ್ದಾರೆ ಎಂದು ಆ ಪಕ್ಷದ ಮೂಲಗಳು ತಿಳಿಸಿವೆ.

ಈ ಹಿಂದೆ ರಾಜಕೀಯ ಬೆಳವಣಿಗೆಗಳಿಂದಾಗಿ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಸಾಕಷ್ಟು ನಾಯಕರು ವಲಸೆ ಹೋಗಿದ್ದರು. ಚುನಾವಣೆಗೆ ಇನ್ನು ಐದು ತಿಂಗಳುಗಳು ಬಾಕಿ ಉಳಿದಿರುವುದರಿಂದ ಜನತಾಪರಿವಾರದ ಮಾಜಿ ನಾಯಕರು ಜೆಡಿಎಸ್‌ ಸೇರಲು ಆಸಕ್ತಿ ತೋರಿಸಿದ್ದಾರೆ.

‘ಉತ್ತರ ಕರ್ನಾಟಕದ ಕೆಲವು ನಾಯಕರು ಈಗಾಗಲೇ ಪಕ್ಷದ ಬಾಗಿಲು ತಟ್ಟುತ್ತಿದ್ದಾರೆ. ಚುನಾವಣೆ ಹತ್ತಿರ ಇರುವುದರಿಂದ ಪಕ್ಷಕ್ಕೆ ಬಂದರೆ ಸರಿಯಾದ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆಯನ್ನೂ ಇಟ್ಟಿದ್ದಾರೆ’ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿರುವ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ‘ಜನತಾ ಪರಿವಾರದ ಸಾಕಷ್ಟು ನಾಯಕರು ನಮ್ಮ ಜತೆ ಸಂಪರ್ಕ ಬೆಳೆಸಿದ್ದಾರೆ. ಜನತಾ ಪಕ್ಷ ಮತ್ತು ಜನತಾದಳ ಕಟ್ಟಿ ಬೆಳೆಸಿರುವ ನಾಯಕರಲ್ಲಿ ಜನತಾ ಪರಿವಾರ ಸಿದ್ಧಾಂತದ ಬಗ್ಗೆ ಈಗಲೂ ನಂಬಿಕೆ ಹೊಂದಿದ್ದಾರೆ. ದೇಶದಲ್ಲಿ ಜೆಡಿಎಸ್‌ ಅನ್ನು ಸದೃಢ ಪ್ರಾದೇಶಿಕ ಪಕ್ಷವನ್ನಾಗಿ ರೂಪಿಸಲು ಅವರೆಲ್ಲ ಆಸಕ್ತಿ ತೋರಿಸಿದ್ದಾರೆ’ ಎಂದು ಅವರು ಹೇಳಿದರು.

ಹಿರಿಯ ನಾಯಕ ಪಿ.ಜಿ.ಆರ್‌.ಸಿಂಧ್ಯ ಅವರು ಪುನಃ ಪಕ್ಷದಲ್ಲಿ ಸಕ್ರಿಯರಾಗಿದ್ದು, ಜನತಾಪರಿವಾರದ ನಾಯಕರನ್ನು ಮರಳಿ ಕರೆ ತರುವುದರ ಬಗ್ಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಹಿಂದೆ ಅವರು ಜನತಾ ಪರಿವಾರ ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದೂ ಮೂಲಗಳು ವಿವರಿಸಿವೆ.

ಜೆಡಿಎಸ್ ಸೇರುವ ಸಂಬಂಧ ಸಿ.ಎಂ.ಇಬ್ರಾಹಿಂ ಅವರು ಈಗಾಗಲೇ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿದ್ದಾರೆ. 1994 ರಲ್ಲಿ ಇಬ್ರಾಹಿಂ ಅವರು ಜನತಾದಳ ಅಧ್ಯಕ್ಷರಾಗಿದ್ದಾಗಲೇ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿತ್ತು. ಜೆಡಿಎಸ್ ಸೇರಿದರೆ ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡುವ ಆಸಕ್ತಿ ಹೊಂದಿದ್ದಾರೆ. ಈ ಹಂತದಲ್ಲಿ ಅಧ್ಯಕ್ಷ ಸ್ಥಾನ ನೀಡುವ ಸಾಹಸಕ್ಕೆ ಮುಂದಾಗುವ ಸ್ಥಿತಿಯಲ್ಲಿ ಕುಮಾರಸ್ವಾಮಿ ಅವರೂ ಇಲ್ಲ. ಕುಮಾರಸ್ವಾಮಿ ಜತೆ ಮಾತುಕತೆ ಬಳಿಕ ಅವರು ಕೇರಳಕ್ಕೆ ತೆರಳಿದ್ದಾರೆ. ಅಲ್ಲಿಂದ ವಾಪಾಸಾದ ಬಳಿಕ ಇನ್ನೊಂದು ಸುತ್ತಿನ ಮಾತುಕತೆ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಯಾವ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳು ಪ್ರಬಲರಾಗಿದ್ದಾರೊ ಅಂಥ ಕ್ಷೇತ್ರಗಳಲ್ಲಿ ಹೊಸಬರಿಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ. ಸಮರ್ಥ ಅಭ್ಯರ್ಥಿಗಳು ಇಲ್ಲದ ಕಡೆಗಳಲ್ಲಿ ಬೇರೆ ಪಕ್ಷಗಳಿಂದ ಬರುವವರನ್ನು ಸೇರಿಸಿಕೊಳ್ಳಲು ಅಡ್ಡಿಯಿಲ್ಲ ಎಂಬ ಆಲೋಚನೆ ಜೆಡಿಎಸ್‌ ನಾಯಕರಿಗಿದೆ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT