ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಥಳೀಯ’ರಾಗಲು ಮನೆ ಕಟ್ಟಿದ ಆರ್‌. ಶಂಕರ್‌

Last Updated 4 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಹಾವೇರಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರ ಪುತ್ರರು ರಾಣೆ
ಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿದ್ದಾರೆ. ಇನ್ನೊಂದೆಡೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಉಪ ಮೇಯರ್ ಆರ್. ಶಂಕರ್ ಕೂಡ ರಾಣೆಬೆನ್ನೂರಿನಲ್ಲಿ ಮನೆ ಕಟ್ಟಿಸಿ, ರಾಜಕೀಯ ಭವಿಷ್ಯ ಕಂಡುಕೊಳ್ಳುವ ತವಕದಲ್ಲಿದ್ದಾರೆ.

‌ಇಲ್ಲಿನ ಬೀರೇಶ್ವರ ನಗರದ ಹಳೇ ಅಂತರಳ್ಳಿ ರಸ್ತೆ ಬಳಿ ಅವರು ಬೃಹತ್ ಮನೆ ನಿರ್ಮಾಣದಲ್ಲಿ ತೊಡಗಿದ್ದಾರೆ. ಇದರಲ್ಲಿ ಕಚೇರಿ ಹಾಗೂ ಸಭಾಂಗಣವೂ ಇರಲಿದೆ ಎಂದು ಶಂಕರ್‌ ಅವರ ಆಪ್ತರು ಹೇಳುತ್ತಾರೆ.

ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಂಕರ್‌, ಕೋಳಿವಾಡ ಅವರಿಗೆ ಪ್ರಬಲ ಸ್ಪರ್ಧೆ ಒಡ್ಡಿದ್ದರು. ಕೋಳಿವಾಡ 53,780 ಮತ ಪಡೆದು ಗೆದ್ದಿದ್ದರು. ಅವರ ಸಮೀಪ ಸ್ಪರ್ಧಿ ಶಂಕರ್‌ 46,992 ಮತ ಪಡೆದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದ್ದರು. ಕೆಜೆಪಿಯ ಜಿ.ಶಿವಣ್ಣ (26,570), ಬಿಜೆಪಿಯ ಅರುಣ್ ಕುಮಾರ್ ಪೂಜಾರ (9,476), ಜೆಡಿಎಸ್‌ನ ಮಂಜುನಾಥಗೌಡ ಶಿವಣ್ಣನವರ (14,146) ನಂತರದ ಸ್ಥಾನದಲ್ಲಿದ್ದರು.

ಯಡಿಯೂರಪ್ಪ ಪುತ್ರ ಬಿ.ವೈ. ರಾಘವೇಂದ್ರ ಈ ಕ್ಷೇತ್ರದಲ್ಲಿ ಸ್ಪರ್ಧಿಸುವ ಮಾತುಗಳು ಕೇಳಿಬಂದಿವೆ. ಪಕ್ಷದ ವಿಸ್ತಾರಕ ಕಾರ್ಯಕ್ರಮದ ಮೂಲಕ ಕ್ಷೇತ್ರ ಪ್ರವಾಸ ಮಾಡಿರುವ ಅವರು, ‘ಮನೆ ಮತ್ತು ಕಚೇರಿ ಹುಡುಕಾಟದಲ್ಲಿದ್ದಾರೆ’ ಎಂದು ಅವರ ಬೆಂಬಲಿಗರು ತಿಳಿಸಿದ್ದಾರೆ.

ಕೋಳಿವಾಡ ಅವರು ವಿಧಾನಸಭಾಧ್ಯಕ್ಷರಾದ ಬಳಿಕ, ಅವರ ಪುತ್ರ ಪ್ರಕಾಶ ಕೋಳಿವಾಡ ಕ್ಷೇತ್ರದ ಸಕ್ರಿಯ ರಾಜಕಾರಣದಲ್ಲಿ ತೊಡಗಿದ್ದಾರೆ. ಹೀಗಾಗಿ ಅವರೇ ಮುಂದಿನ ಅಭ್ಯರ್ಥಿ ಎಂಬ ಮಾತುಗಳೂ ಕೇಳಿಬಂದಿದ್ದವು. ಆದರೆ, ಈಚೆಗೆ ಪತ್ರಿಕಾಗೋಷ್ಠಿ ನಡೆಸಿದ ಕೆ.ಬಿ.ಕೋಳಿವಾಡ, ‘ನಾನೇ ಮುಂದಿನ ಅಭ್ಯರ್ಥಿ’ ಎಂದು ಘೋಷಿಸಿದ್ದಾರೆ.

ಭಾನುವಾರ (ನ.5) ಅವರ ಜನ್ಮದಿನ ಕಾರ್ಯಕ್ರಮ ಇದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ ‘ಸ್ಥಳೀಯರಿಗೇ ಟಿಕೆಟ್‌ ನೀಡಬೇಕು’ ಎಂದು ಬಿಜೆಪಿ ಮತ್ತು ಕಾಂಗ್ರೆಸ್‌ನ ಕೆಲವು ಮುಖಂಡರು ಆಗ್ರಹಿಸಿದ್ದಾರೆ.

‘ನಾನೂ ಸ್ಥಳೀಯನೇ’: ‘ಯಾರೇ ಸ್ಪರ್ಧಿಸಿದರೂ, ಕ್ಷೇತ್ರದ ಜನತೆ ಸ್ಥಳೀಯರ ಕೈಯನ್ನೇ ಹಿಡಿಯುತ್ತಾರೆ’ ಎಂದು ಪ್ರಕಾಶ ಕೋಳಿವಾಡ ಪ್ರತಿಕ್ರಿಯಿಸಿದರೆ, ‘ನಾನೂ ಸ್ಥಳೀಯನೇ’ ಎಂದು ಶಂಕರ್‌ ಹೇಳುತ್ತಾರೆ‌.

‘ರಾಣೆಬೆನ್ನೂರು ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತ. ಕಾಂಗ್ರೆಸ್‌ ಟಿಕೆಟ್ ನೀಡಿದರೆ ಇನ್ನಷ್ಟು ಬಲ ಬರಲಿದೆ. ಹೊರಗಿನವರು ಎಂಬ ಅಪಪ್ರಚಾರದಿಂದಾಗಿ ಕಳೆದ ಸಲ ಸ್ವಲ್ಪ ಹಿನ್ನಡೆಯಾಗಿರಬಹುದು. ಈಗ ನಾನು ಈ ಕ್ಷೇತ್ರದ ಮನೆ ಮಗ’ ಎನ್ನುತ್ತಾರೆ ಶಂಕರ್‌.

‘ರಾಣೆಬೆನ್ನೂರು ಕ್ಷೇತ್ರದಲ್ಲಿ ಕುರುಬ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಅದೇ ಸಮುದಾಯಕ್ಕೆ ಸೇರಿರುವ ಶಂಕರ್‌ ರಾಜಕೀಯ ಭವಿಷ್ಯಕ್ಕಾಗಿ ಬೆಂಗಳೂರಿನಿಂದ ಇಲ್ಲಿಗೆ ವಲಸೆ ಬಂದಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT