ಶನಿವಾರ, ಮಾರ್ಚ್ 6, 2021
24 °C

ಕೆರೆ ನಾಶವಾದರೂ ಶಿಕ್ಷಿಸಲಾಗದ ಭ್ರಷ್ಟ ವ್ಯವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆರೆ ನಾಶವಾದರೂ ಶಿಕ್ಷಿಸಲಾಗದ ಭ್ರಷ್ಟ ವ್ಯವಸ್ಥೆ

ಕೋಲಾರ: ‘ಭೂತಾಯಿಯ ಗರ್ಭವನ್ನು ಲೂಟಿ ಮಾಡಿ ಜೀವನಾಡಿ ಕೆರೆಗಳನ್ನು ನಾಶ ಮಾಡಿದರೂ ಶಿಕ್ಷಿಸಲಾಗದ ಭ್ರಷ್ಟ ವ್ಯವಸ್ಥೆಯು ಮುಂದಿನ ಪೀಳಿಗೆಗೆ ಏನು ಕೊಡಲು ಸಾಧ್ಯ’ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಕಳವಳ ವ್ಯಕ್ತಪಡಿಸಿದರು.

ಕಲೆಕ್ಟಿವ್ ಆ್ಯಕ್ಷನ್ ನೆಟ್‌ವರ್ಕ್‌ (ಕ್ಯಾನ್) ಸ್ವಯಂ ಸೇವಾ ಸಂಸ್ಥೆ, ಮೇರಾ ತೇರಾ ರನ್ ತಂಡ ಹಾಗೂ ತಾಲ್ಲೂಕಿನ ತೊರದೇವಂಡಹಳ್ಳಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಕೋಲಾರಮ್ಮ ಕೆರೆ ಸಂರಕ್ಷಣೆಗಾಗಿ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ನಮ್ಮ ನಡಿಗೆ ಕೆರೆ ಉಳಿಸುವೆಡೆಗೆ’ ಜನಾಂದೋಲನ ಉದ್ಘಾಟಿಸಿ ಮಾತನಾಡಿದರು.

ಮನುಷ್ಯ ಸ್ವಾರ್ಥಕ್ಕಾಗಿ ಭೂಗರ್ಭ ಸೀಳಿ, ಗಂಗೆಯ ಮೇಲೆ ಅತ್ಯಾಚಾರ ಮಾಡುತ್ತಿದ್ದಾನೆ. ನೋಡುವ ನೋಟ, ಆಡುವ ನುಡಿ ಎಲ್ಲವೂ ವಿಷವಾಗಿದೆ. ರೈತರು ಕಷ್ಟ ಜೀವಿಗಳು. ಟೊಮೆಟೊ ಸೇರಿದಂತೆ ತರಕಾರಿ ಬೆಳೆಯಲು ನೆಲವನ್ನು ವಿಷಯುಕ್ತಗೊಳಿಸುತ್ತಿದ್ದಾರೆ. ಅಂತರ್ಜಲ ಕುಸಿದರೂ ಭೂಗರ್ಭಕ್ಕೆ ಕನ್ನ ಕೊರೆಯುತ್ತಾ ಹಾಳಾದ ನಂತರ ಕೆರೆ ರಕ್ಷಿಸಬೇಕೆಂದು ಹೇಳುತ್ತಾ ನೆಲವನ್ನೇ ಮಾರಿಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದರು.

ಹಣ ಮೀಸಲಿಡಬೇಕು: ‘ನಮ್ಮ ನಡಿಗೆ ಜಿಲ್ಲೆಯ ಕೆರೆಯ ಕಡೆಗೆ. ಮುಚ್ಚಿರುವ ರಾಜಕಾಲುವೆ ತೆರವುಗೊಳಿಸಿ ಅಭಿವೃದ್ಧಿಪಡಿಸಬೇಕು. ಕೆರೆಗಳ ಪುನಶ್ಚೇತನಕ್ಕೆ ಮುಂದಿನ ಬಜೆಟ್‌ನಲ್ಲಿ ಸರ್ಕಾರ ಹೆಚ್ಚು ಹಣ ಮೀಸಲಿಡಬೇಕು’ ಎಂದು ಕ್ಯಾನ್ ಸಂಸ್ಥೆಯ ಸದಸ್ಯೆ ಎಂ.ಜಿ.ಪಾಪಮ್ಮ ಒತ್ತಾಯಿಸಿದರು.

ಕೆರೆಯ ಸುತ್ತ ಮಾನವ ಸರಪಳಿ ನಿರ್ಮಿಸಿವುದು ಭೌತಿಕ ಘಟನೆಯಲ್ಲ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಕೆರೆಯ ಮಹತ್ವದ ಅರಿವು ಮೂಡಿಸುವ ಕಾರ್ಯ ನಡೆದಿದೆ. ಕೆರೆಯ ಸಂರಕ್ಷಣೆಗಾಗಿ ಭೌತಿಕವಾಗಿ ಅನೇಕ ಕೆಲಸ ಕಾರ್ಯ ನಡೆಸಬೇಕಿದೆ. ಜಿಲ್ಲೆಯ ಜನ ಹನಿ ಹನಿ ನೀರನ್ನೂ ಎಚ್ಚರಿಕೆಯಿಂದ ಬಳಸಬೇಕು ಎಂದು ಉಪನ್ಯಾಸಕ ಅರಿವು ಶಿವಪ್ಪ ಕಿವಿಮಾತು ಹೇಳಿದರು.

ಮಂತ್ರವಾಗಬೇಕು: ’ಜಿಲ್ಲೆಯಲ್ಲಿ ಕೆರೆಯ ಬಗ್ಗೆ ಮಾತನಾಡುವುದನ್ನೇ ಮರೆತರೆ ಮುಂದೊಂದು ದಿನ ದಕ್ಷಿಣ ಭಾರತದಲ್ಲಿ ಕೋಲಾರ ಜಿಲ್ಲೆಯು ಮರುಭೂಮಿ ಆಗುತ್ತದೆ. ಈ ಬಗ್ಗೆ ಹಿಂದೆಯೇ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ’ ಎಂದು ಕ್ಯಾನ್‌ ಸಂಸ್ಥೆ ಮುಖ್ಯಸ್ಥ ಎಂ.ವಿ.ಎನ್.ರಾವ್ ತಿಳಿಸಿದರು.

ಕೆರೆಯ ಮಹತ್ವ ತಿಳಿಸುವ, ಅರಿವು ಮೂಡಿಸುವ ಸಲುವಾಗಿ ಡಿ.14ರವರೆಗೆ ನಗರದಲ್ಲಿ ನಿತ್ಯವೂ ಚಿತ್ರಕಲೆ, ಭಾಷಣ, ಪ್ರಬಂಧ ಸ್ಪರ್ಧೆ, ಬೈಕ್ ರ‍್ಯಾಲಿ ಹೀಗೆ ಒಂದೊಂದು ಕಾರ್ಯಕ್ರಮ ನಡೆಸಲಾಗುವುದು. ಕೆರೆ ನಮ್ಮ ನಿತ್ಯದ ಮಂತ್ರವಾಗಬೇಕು ಎಂದರು.

ಅಭಿಯಾನದ ಅಂಗವಾಗಿ ನಗರದ ವಿವಿಧ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಕೋಲಾರಮ್ಮ ಕೆರೆಯನ್ನು ಸುತ್ತುವರಿದು ಮಾನವ ಸರಪಳಿ ನಿರ್ಮಿಸಿ ಕೆರೆ ಉಳಿಸುವಂತೆ ಘೋಷಣೆ ಕೂಗಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್, ನಗರಸಭೆ ಮಾಜಿ ಸದಸ್ಯ ತ್ಯಾಗರಾಜ್, ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮುನಿಯಪ್ಪ, ಕ್ಯಾನ್ ಸಂಸ್ಥೆಯ ಪ್ರತಿನಿಧಿಗಳಾದ ಚೌಡಪ್ಪ, ಮಲ್ಲಮ್ಮ, ನಾಗವೇಣಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.