ಶನಿವಾರ, ಮಾರ್ಚ್ 6, 2021
28 °C

ಸಿಂಥೆಟಿಕ್‌ ಟ್ರ್ಯಾಕ್‌ ಕನಸು ನನಸಾಗುವುದೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಥೆಟಿಕ್‌ ಟ್ರ್ಯಾಕ್‌ ಕನಸು ನನಸಾಗುವುದೇ?

ಬಳ್ಳಾರಿ: ‘ಜಿಲ್ಲಾ ಕೇಂದ್ರದಲ್ಲಿರುವ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಸೌಕರ್ಯವಿದ್ದಿದ್ದರೆ ಹಂಪಿ ಉತ್ಸವದ ಪ್ರಯುಕ್ತ ರಾಜ್ಯಮಟ್ಟದ ಅಥ್ಲೆಟಿಕ್ಸ್‌ ಕ್ರೀಡಾಕೂಟವನ್ನು ಆಯೋಜಿಸಲು ಸಾಧ್ಯವಿತ್ತು. ಆದರೆ ನಗರಕ್ಕೆ ಈ ಅವಕಾಶ ಯಾವಾಗ ದೊರಕುತ್ತದೆಯೋ ಹೇಳುವವರೇ ಇಲ್ಲ...

ಇತ್ತೀಚೆಗೆ ಜಿಲ್ಲಾ ಅಥ್ಲೆಟಿಕ್ಸ್‌ ಸಂಸ್ಥೆಯ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಅಂತರ ಜಿಲ್ಲಾ ಅಥ್ಲೆಟಿಕ್ಸ್‌ ಕ್ರೀಡಾಕೂಟಕ್ಕೆ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಂಡ ಕ್ರೀಡಾಪಟುಗಳ ಕೆಲವು ಪೋಷಕರ ಅಭಿಪ್ರಾಯವಿದು.

‘ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಟ್ರಯಲ್ಸ್‌ ನಡೆದರೂ, ನಮ್ಮ ಮಕ್ಕಳು ಮಣ್ಣಿನ ಟ್ರ್ಯಾಕ್‌ನಲ್ಲೇ ಓಡುವಂಥ ದುಸ್ಥಿತಿ ಇಲ್ಲಿನದು. ಮಣ್ಣಿನ ಟ್ರ್ಯಾಕ್‌ನಲ್ಲಿ ಅಭ್ಯಾಸ ನಡೆಸಿದವರು, ಸಿಂಥೆಟಿಕ್‌ ಟ್ರ್ಯಾಕ್‌ನಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಪಾಲ್ಗೊಂಡರೆ ಅದಕ್ಕೆ ಹೊಂದಿಕೊಳ್ಳುವುದು ಕಷ್ಟ. ಈ ಅಂಶವೇ, ಪ್ರತಿಭಾವಂತ ಸ್ಪರ್ಧಿಗಳ ಸೋಲು, ಗೆಲುವನ್ನು ನಿರ್ಧರಿಸುತ್ತದೆ’ ಎಂದು ನಗರದ ಗಾಂಧಿನಗರದ ನಿವಾಸಿ ಮೋಹನ್‌ಕುಮಾರ್‌ ಅಭಿಪ್ರಾಯಪಡುತ್ತಾರೆ. ಅವರು ಓಟದ ಅಭ್ಯಾಸಕ್ಕಾಗಿ ತಮ್ಮ ಮಕ್ಕಳನ್ನು ಕ್ರೀಡಾಂಗಣಕ್ಕೆ ಕರೆದುಕೊಂಡು ಬರುತ್ತಾರೆ.

ನಿರ್ವಹಣೆ ಕೊರತೆ: ’ಮಣ್ಣಿನ ಟ್ರ್ಯಾಕ್‌ನ ನಿರ್ವಹಣೆಯು ಕೂಡ ಕ್ರೀಡಾಪಟು ಸ್ನೇಹಿಯಾಗಿಲ್ಲ. ನಿಯಮಿತವಾಗಿ ನೀರು ಹಾಕಿ ಟ್ರ್ಯಾಕ್‌ ಅನ್ನು ಮೃದುಗೊಳಿಸುವ ನಿಯಮಿತ ಕಾರ್ಯ ನಡೆಯುತ್ತಿಲ್ಲ. ಹೀಗಾಗಿ ನಿತ್ಯವೂ ಇಲ್ಲಿ ವಾಯುವಿಹಾರಕ್ಕೆ ಬರುವವರು ಧೂಳಿನ ನಡುವೆಯೇ ನಡೆಯಬೇಕಾಗುತ್ತದೆ’ ಎಂಬುದು ಹಿರಿಯ ನಾಗರಿಕ ಜಬ್ಬಾರ್‌ ಅವರ ನುಡಿ.

‘ಕ್ರೀಡಾಂಗಣ ನಿರ್ವಹಣೆಗೆಂದೇ ಇಲಾಖೆಯು ವಾರ್ಷಿಕ ಅನುದಾನವನ್ನು ನಿಗದಿ ಮಾಡುತ್ತದೆ. ಆದರೆ ಈ ವರ್ಷ ಕೆಲವು ವಿಶೇಷ ಸಂದರ್ಭಗಳನ್ನು ಹೊರತುಪಡಿಸಿದರೆ ಒಮ್ಮೆಯೂ ಟ್ರ್ಯಾಕ್‌ಗೆ ನೀರು ಹರಿಸಿದ್ದನ್ನೇ ನಾವು ಕಾಣಲಿಲ್ಲ’ ಎಂದು ರಮೇಶ್‌ ಮತ್ತು ಸೃಜನ್‌ ದೂರಿದರು.

ಮಳೆ ಬಂದರೆ ಕೆಸರು: ಮಳೆಗಾಲದಲ್ಲಂತೂ ಟ್ರ್ಯಾಕ್‌ನಲ್ಲಿ ನಡೆಯುವುದು ದುಸ್ತರವಾಗುತ್ತದೆ. ಎಲ್ಲವೂ ಕೆಸರುಮಯವಾಗುವುದರಿಂದ ಓಟ ಮತ್ತು ನಡಿಗೆಯ ಅಭ್ಯಾಸಕ್ಕೆ ಅಡಚಣೆ ಉಂಟಾಗುತ್ತದೆ. ಮಳೆ ನೀರನ್ನು ತೆರವುಗೊಳಿಸುವ ಕಾರ್ಯವೂ ನಡೆಯುವುದಿಲ್ಲ’ ಎಂದು ಕ್ರೀಡಾಪಟುವೊಬ್ಬರು ಬೇಸರ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.