ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಕ್ಸಾಸ್‌ನಲ್ಲಿ ಗುಂಡಿನ ದಾಳಿ: 26 ಸಾವು

Last Updated 6 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಸದರ್‌ಲ್ಯಾಂಡ್‌ ಸ್ಪ್ರಿಂಗ್ಸ್‌: ಟೆಕ್ಸಾಸ್‌ನ ಹೊರವಲಯದ ಚರ್ಚ್‌ನಲ್ಲಿ ಪ್ರಾರ್ಥನೆಗೆ ಸೇರಿದ್ದ ಜನರ ಮೇಲೆ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, 26 ಮಂದಿ ಮೃತಪಟ್ಟಿದ್ದಾರೆ. 20 ಜನ ಗಾಯಗೊಂಡಿದ್ದಾರೆ.

ಅಮೆರಿಕದ ವಾಯುಪಡೆಯ ಮಾಜಿ ಉದ್ಯೋಗಿ ಭಾನುವಾರ ಈ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಂಡತಿ ಮತ್ತು ಮಗುವಿನ ಮೇಲೆ ದೌರ್ಜನ್ಯ ನಡೆಸಿದ ಆರೋಪದ ಮೇಲೆ 2014ರಲ್ಲಿ ಈತನನ್ನು ಸೇವೆಯಿಂದ ವಜಾ ಮಾಡಲಾಗಿತ್ತು.

ಕಪ್ಪು ಬಣ್ಣದ ಸೇನಾ ಸಮವಸ್ತ್ರ ಧರಿಸಿದ್ದ ಬಂದೂಕುಧಾರಿ, ಬ್ಯಾಪ್ಟಿಸ್ಟ್‌ ಚರ್ಚ್‌ನಲ್ಲಿ ಪ್ರಾರ್ಥನೆ ಮುಗಿಯುತ್ತಿದ್ದಂತೆಯೇ ದಾಳಿ ಆರಂಭಿಸಿದ.  ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳೇ ಬಲಿಯಾಗಿದ್ದಾರೆ. ಗರ್ಭಿಣಿ ಸೇರಿದಂತೆ ಒಂದೇ ಕುಟುಂಬದ ಎಂಟು ಜನ ಮೃತರಲ್ಲಿ ಸೇರಿದ್ದಾರೆ.

ದಾಳಿಕೋರ ಸಾಕಷ್ಟು ಮದ್ದುಗುಂಡು ಹೊಂದಿದ್ದ ಎಂದು ತಿಳಿಸಿರುವ ಪೊಲೀಸರು, ಆತನ ಹೆಸರು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.  ಆದರೆ, ಕೆಲವು ಮಾಧ್ಯಮಗಳು ಈತನ ಹೆಸರು ಡೆವಿನ್‌ ಪ್ಯಾಟ್ರಿಕ್‌ ಕೆಲ್ಲೆ (26) ಎಂದು ಹೇಳಿವೆ.

‘ದಾಳಿ ನಡೆಸುವಾಗ ಸುತ್ತ ಇದ್ದ ಜನ ಆತನ ಬಂದೂಕನ್ನು ಹಿಡಿದುಕೊಂಡರು. ಆಗಲೂ ಆತ ಗುಂಡಿನ ದಾಳಿ ಮುಂದುವರಿಸಿದ. ಅಲ್ಲಿಂದ ಓಡಿಹೋದ ಅವನನ್ನು ಜನ ಬೆನ್ನಟ್ಟಿದರು. ಆದರೆ ತನ್ನ ವಾಹನದಲ್ಲಿ ಪಲಾಯನ ಮಾಡಿದ ಬಂದೂಕುಧಾರಿಯ ಮೃತದೇಹ ಅನತಿ ದೂರದಲ್ಲಿ ವಾಹನವೊಂದರಲ್ಲಿ ಪತ್ತೆಯಾಗಿದೆ. ಆತನೇ ಗುಂಡು ಹಾರಿಸಿಕೊಂಡು ಸತ್ತಿದ್ದಾನೋ ಇಲ್ಲವೇ ಜನರೇ ಆತನನ್ನು ಗುಂಡಿಟ್ಟು ಕೊಂದಿದ್ದಾರೋ ಎಂಬುದು ದೃಢಪಟ್ಟಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಈ ದಾಳಿಗೆ ಕೇವಲ ಬಂದೂಕನ್ನು ಶಪಿಸಿದರೆ ಸಾಲದು. ಅಮೆರಿಕ ಕರಾಳ ಕಾಲದ ನಡುವೆ ಬದುಕುತ್ತಿದೆ. ಆದರೂ ಬಂದೂಕು ನಿಯಂತ್ರಣಕ್ಕೆ ಇನ್ನಷ್ಟು ಕ್ರಮ ಕೈಗೊಳ್ಳಬೇಕಿದೆ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರತಿಕ್ರಿಯಿಸಿದ್ದಾರೆ.

ಅಮೆರಿಕದಲ್ಲಿ ಇತ್ತೀಚಿನ ದಾಳಿಗಳು

* 2016ರ ಜೂನ್‌ನಲ್ಲಿ ಒರ್ಲಾಂಡೊದಲ್ಲಿ ನಡೆದ ಗುಂಡಿನ ದಾಳಿಗೆ 49 ಮಂದಿ ಮೃತಪಟ್ಟಿದ್ದರು

* 2015ರ ಡಿಸೆಂಬರ್‌ನಲ್ಲಿ ಸ್ಯಾನ್‌ಬರ್ನಾಂಡಿನೊದಲ್ಲಿ ನಡೆದ ದಾಳಿಯಲ್ಲಿ 14 ಮಂದಿ ಸಾವಿಗೀಡಾಗಿದ್ದರು

* 1991ರಲ್ಲಿ ಟೆಕ್ಸಾಸ್‌ನಲ್ಲಿ ನಡೆದ ದಾಳಿಗೆ 23 ಮಂದಿ ಪ್ರಾಣ ಕಳೆದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT