ಶನಿವಾರ, ಮಾರ್ಚ್ 6, 2021
29 °C

ಇಂದಿನಿಂದ ಬದುಕಿನ ಎರಡನೇ ಹೋರಾಟ: ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂದಿನಿಂದ ಬದುಕಿನ ಎರಡನೇ ಹೋರಾಟ: ಕುಮಾರಸ್ವಾಮಿ

ಹೊಳೆನರಸೀಪುರ: ‘ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ವಿಕಾಸ ಯಾತ್ರೆ ಮೂಲಕ ನನ್ನ ಬದುಕಿನ ಎರಡನೇ ಹೋರಾಟ ಆರಂಭವಾಗಲಿದೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಹುಟ್ಟೂರು ಹರದನಹಳ್ಳಿಯ ಶಿವ ಮತ್ತು ಮಾವಿನಕೆರೆ ರಂಗನಾಥ ಸ್ವಾಮಿಗೆ ಸೋಮವಾರ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು. ‘ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಆರಂಭಿಸಲಾಗುವುದು’ ಎಂದರು.

‘ಸಿದ್ದರಾಮಯ್ಯ ಅವರು ಜೆಡಿಎಸ್ ಹಾಗೂ ನನ್ನ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಎರಡು ಲಕ್ಷ ಮತದಾರರು ಯಾರ ಜೊತೆಗೆ ಇದ್ದಾರೆ ಎಂಬುದನ್ನು ತೋರಿಸಲಿದ್ದಾರೆ’ ಎಂದು ತಿಳಿಸಿದರು.

‘ಕುಟುಂಬದವರ ಸ್ಪರ್ಧೆ ಬಗ್ಗೆ ನಾನು, ರೇವಣ್ಣ, ದೇವೇಗೌಡರು ಹಲವು ಬಾರಿ ಹೇಳಿಕೆ ನೀಡಿದ್ದೇವೆ. ಪ್ರಜ್ವಲ್ ಸೇರಿದಂತೆ ಪಕ್ಷ ಸಂಘಟನೆಗೆ ದುಡಿದ ಎಲ್ಲರಿಗೂ ಸ್ಪರ್ಧೆ ಮಾಡುವ ಆಸೆ ಇರುತ್ತದೆ. ಸೂಕ್ತ ಸಂದರ್ಭದಲ್ಲಿ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಗೊಂದಲಗಳಿಗೆ ಅವಕಾಶ ಕೊಡದಂತೆ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹೇಳಿದರು. ‘ಮುಂದಿನ ಚುನಾವಣೆಯಲ್ಲಿ 113 ಸೀಟು ಗೆಲ್ಲುವುದು ನಮ್ಮ ಗುರಿ. ಸ್ವಂತ ಬಲದಿಂದ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ’ ಎಂದರು.

ರಾಜಕೀಯ ನಿವೃತ್ತಿ ಇಲ್ಲ: ‘ರಾಜಕೀಯದಿಂದ ನಿವೃತ್ತಿ ಆಗಲ್ಲ. ಯಾರಾದ್ರೂ ಹಾಗೆಂದುಕೊಂಡಿದ್ದರೆ ಅದು ಕನಸಿನ ಮಾತು’ ಎಂದು ಸಂಸದ ಎಚ್‌.ಡಿ.ದೇವೇಗೌಡ ಹೇಳಿದರು. ‘ಇರುವವರೆಗೆ ರಾಜಕೀಯದಲ್ಲಿ ಇನ್ನಷ್ಟು ಸೇವೆ ಮಾಡುವ ಹಂಬಲವಿದೆ. ಉತ್ತರ ಕರ್ನಾಟಕಕ್ಕೂ ಹೆಚ್ಚಿನ ಗಮನ ಕೊಡಲಾಗುವುದು. ನ.16ರಂದು ಧಾರವಾಡದಲ್ಲಿ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. 224 ವಿಧಾನಸಭಾ ಕ್ಷೇತ್ರ, 28 ಲೋಕಸಭೆ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ನಿಲ್ಲಿಸಲಾಗುವುದು’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.