ಶನಿವಾರ, ಫೆಬ್ರವರಿ 27, 2021
25 °C

‘ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿ ದುರ್ಬಳಕೆಗೆ ಸಂಚು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿ ದುರ್ಬಳಕೆಗೆ ಸಂಚು’

ಶಿವಮೊಗ್ಗ: ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕಟ್ಟಡ ಕಾರ್ಮಿಕರಿಗೆ ಮೀಸಲಿಟ್ಟ ಕಲ್ಯಾಣ ನಿಧಿ ದುರ್ಬಳಕೆಗೆ ಸಂಚು ರೂಪಿಸಿದ್ದಾರೆ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಆರೋಪಿಸಿದರು.

ಕಟ್ಟಡ ಕಾರ್ಮಿಕ ಮಂಡಳಿಯಲ್ಲಿ ಸುಮಾರು 11.20 ಲಕ್ಷ ನೊಂದಾಯಿತ ಸದಸ್ಯರಿದ್ದಾರೆ. ಅವರಿಗಾಗಿ ಸುಮಾರು ₹ 6 ಸಾವಿರ ಕೋಟಿ ಕಲ್ಯಾಣ ನಿಧಿ ಮೀಸಲಿದೆ. ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಮೀಸಲಿಟ್ಟ ಈ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಹಣ ಲೂಟಿಗೆ ಸಚಿವ ಲಾಡ್ ಹೊಸ ಯೋಜನೆ ರೂಪಿಸಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶೀರ್ವಾದ ಇದೆ. ಹಾಗಾಗಿ, ಸರಿ ಸುಮಾರು 1,800 ಕೋಟಿ ಹಣ ಲೂಟಿ ಮಾಡಲು ಸಿದ್ಧತೆ ನಡೆಸಿದ್ದಾರೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಕೊಡಲಾಗಿದೆ. ಅದಕ್ಕಾಗಿ ಕಲ್ಯಾಣ ನಿಧಿಯಿಂದ ₹ 189 ಕೋಟಿ ಹಾಗೂ ಕಾರ್ಮಿಕ ತರಬೇತಿಗೆ ₹ 42.82 ಕೋಟಿ ವೆಚ್ಚ ಮಾಡಲಾಗಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾ ರದ ಉಜ್ವಲ ಹಾಗೂ ರಾಜ್ಯ ಸರ್ಕಾರದ ಅನಿಲ ಭಾಗ್ಯ ಯೋಜನೆಗೆ ಬಡವರಿಗೆ ಉಚಿತವಾಗಿ ಅನಿಲ ಸಂಪರ್ಕ ಕಲ್ಪಿಸಲಾಗುತ್ತಿದೆ. ಆದರೆ, 6 ಲಕ್ಷ ಅನಿಲ ಸಂಪರ್ಕ ಕಲ್ಪಿಸುವುದಾಗಿ ₹ 244 ಕೋಟಿ ಲೂಟಿ ಮಾಡಲು ಹೊರಟಿದ್ದಾರೆ.

ಇಂದಿರಾ ಕ್ಯಾಂಟೀನ್‌ ಮೂಲಕ ಆಹಾರ ಪೂರೈಸಲು ಶೇ 30ರಷ್ಟು ಹಣ ತೆಗೆದುಕೊಳ್ಳಲು ಹೊರಟಿದ್ದಾರೆ. ಆ ಮೂಲಕ ₹ 1,500 ಕೋಟಿ ಲೂಟಿ ಹೊಡೆಯುವ ಸಂಚು ರೂಪಿಸಲಾಗಿದೆ ಎಂದರು.

ಅವಘಡ ಸಂಭವಿಸಿದಾಗ ಕಾರ್ಮಿಕರ ರಕ್ಷಿಸಲು ಹೆಲಿಕಾಪ್ಟರ್ ಖರೀದಿಸಲು ಸಚಿವರು ಮುಂದಾಗಿದ್ದಾರೆ. ಹೆಲಿಕಾಪ್ಟರ್ ಖರೀದಿಸಿ ಸಚಿವರು ಬಳಸುವ ಸಂಚಿದು. ಜತೆಗೆ 11.20 ಲಕ್ಷ ಸ್ಮಾರ್ಟ್‌ ಫೋನ್ ನೀಡುವ ಯೋಜನೆ ರೂಪಿಸಿದ್ದಾರೆ ಎಂದು ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಡಿ.ಎಸ್. ಅರುಣ್, ಅಶೋಕ್ ಪೈ, ರತ್ನಾಕರ ಶೆಣೈ, ಮಧುಸೂದನ್, ಏಸುದಾಸ್ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.