ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರಿಷ್ಠ ಮುಖಬೆಲೆ ನೋಟು ರದ್ದತಿಗೆ ವರ್ಷ

Last Updated 8 ನವೆಂಬರ್ 2017, 5:36 IST
ಅಕ್ಷರ ಗಾತ್ರ

ವಿಜಯಪುರ: ಕೇಂದ್ರ ಸರ್ಕಾರ ₹ 1000, 500 ಮುಖಬೆಲೆ ನೋಟುಗಳನ್ನು ರದ್ದು ಮಾಡಿ ಒಂದು ವರ್ಷ ಕಳೆದಿದ್ದು, ಜನರ ನಿರೀಕ್ಷೆಗೆ ತಕ್ಕಂತೆ ಸುಧಾರಣೆಯಾಗಲಿಲ್ಲ ಎಂದು ಉದ್ಯಮಿ ಎಂ.ಸತೀಶ್ ಕುಮಾರ್ ಬೇಸರ ವ್ಯಕ್ತಪಡಿಸಿದರು. 2017–18ರ ಹಣಕಾಸು ವರ್ಷದ ಮೊದಲ ಮೂರು ತಿಂಗಳ ಅವಧಿಯಲ್ಲಿ ಅಂದರೆ ಏಪ್ರಿಲ್‌– ಜೂನ್‌ ನಡುವೆ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಶೇ 5.7ಕ್ಕೆ ಇಳಿದಿತ್ತು.

ಇದರ ಹಿಂದಿನ ತ್ರೈಮಾಸಿಕದಲ್ಲಿ ಅದು ಶೇ 6.1 ಇತ್ತು. ಆರು ತಿಂಗಳಿಂದ ನಮ್ಮ ಜಿಡಿಪಿ ದರ ಚೀನಾದ ಜಿಡಿಪಿ ದರಕ್ಕಿಂತ ಕಡಿಮೆ ಇದೆ. ನೋಟು ರದ್ದತಿಗಿಂತ ಹಿಂದೆ ನಮ್ಮ ಜಿಡಿಪಿ ದರ 7ರಲ್ಲಿ ಇತ್ತು ಎಂದಿದ್ದಾರೆ.

ಈಗ ಹಣಕಾಸು ಪ್ರಗತಿ ಮಂದಗತಿಯಲ್ಲಿದೆ. ಕೇಂದ್ರ ಸರ್ಕಾರದ ನೋಟು ರದ್ದತಿ ನಿರ್ಧಾರ ಭವಿಷ್ಯದಲ್ಲಿ ಉತ್ತಮವಾಗಬಹುದು. ಒಂದು ವರ್ಷದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸುಧಾರಣೆಯಾಗಿಲ್ಲ. ರಿಯಲ್ ಎಸ್ಟೇಟ್ ಉದ್ಯಮ ಸ್ಥಗಿತಗೊಂಡಿದೆ. ಜನಸಾಮಾನ್ಯರ ಹಣಕಾಸಿನ ವಹಿವಾಟು ಹೆಚ್ಚಾಗಿ ನಡೆಯುತ್ತಿಲ್ಲ. ಬಡವರು ಆಸ್ಪತ್ರೆ, ಮದುವೆಗಳು, ಮನೆ ನಿರ್ಮಾಣ, ಶೌಚಾಲಯಗಳ ನಿರ್ಮಾಣ ಸೇರಿದಂತೆ ಬಹುತೇಕ ಅಭಿವೃದ್ಧಿ ಪರವಾದ ಕೆಲಸಗಳಿಗೆ ಪರದಾಡುವಂತಾಗಿದೆ ಎಂದರು.

ಭಾರತೀಯ ಮಾನವ ಹಕ್ಕುಗಳ ಜಾಗೃತಿ ವೇದಿಕೆ ಅಧ್ಯಕ್ಷ ಎಸ್.ಮಂಜುನಾಥ್ ಮಾತನಾಡಿ, ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿ ಆಗಿ ಒಂದು ವರ್ಷ ಪೂರ್ಣಗೊಂಡಿದ್ದರೂ ಜನರ ಆರ್ಥಿಕ ಸಂಕಷ್ಟ ಇದುವರೆಗೂ ಸುಧಾರಣೆಯಾಗಿಲ್ಲ. ಬಹುತೇಕ ಬ್ಯಾಂಕುಗಳ ಎ.ಟಿ.ಎಂ ಗಳಲ್ಲಿ ಜನರಿಗೆ ಹಣ ಸಿಗದೆ ಪರದಾಡುವಂತಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಏಕಾಏಕಿಯಾಗಿ ತೆಗೆದುಕೊಂಡ ನಿರ್ಧಾರದಿಂದ ಸಿರಿವಂತರಿಗೇನು ಕಷ್ಟ ಆಗಿಲ್ಲ. ಮಧ್ಯಮ ವರ್ಗದವರು, ಬಡವರಿಗೆ ನೋಟುಗಳ ರದ್ದತಿ ಬಿಸಿ ಹೆಚ್ಚಾಗಿ ತಟ್ಟಿದೆ. ಕೇವಲ ₹ 2000, 500 ಮುಖಬೆಲೆಯ ನೋಟುಗಳನ್ನಷ್ಟೇ ಬಿಡುಗಡೆ ಮಾಡಿದ್ದಾರೆ. ₹200 ಮತ್ತು 50 ರ ನೋಟು ಜನರಿಗೆ ಸಿಕ್ಕಿಲ್ಲ. ಇದರಿಂದ ಚಿಲ್ಲರೆ ಸಮಸ್ಯೆ ಉಂಟಾಗಿದ್ದು ಇಂದಿಗೂ ಸುಧಾರಣೆಯಾಗುತ್ತಿಲ್ಲ ಎಂದರು.

ರೈತ ಮುಖಂಡ ನಾರಾಯಣಸ್ವಾಮಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪು ಹಣ ದೇಶಕ್ಕೆ ವಾಪಸ್‌ ತರುವುದಾಗಿ ಘೋಷಣೆ ಮಾಡಿದ್ದರು. ನಕಲಿ ನೋಟುಗಳ ಹಾವಳಿ ತಪ್ಪಿಸುವುದಾಗಿ ಪ್ರಕಟಿಸಿದ್ದರು. ನೋಟ್ ರದ್ದತಿಗೆ ಮೊದಲು ದೇಶದ ಆರ್ಥಿಕ ಪರಿಸ್ಥಿತಿಯ ಸುಧಾರಣೆಯ ಬಗ್ಗೆ ಕಿಂಚಿತ್ತೂ ಯೋಚನೆ ಮಾಡಿದಂತಿಲ್ಲ. ಇಂದಿಗೂ ಆರ್ಥಿಕ ಸಂಕಷ್ಟದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ದೊಡ್ಡ ವ್ಯವಹಾರಸ್ಥರು, ತಮ್ಮಲ್ಲಿದ್ದ ಕಪ್ಪು ಹಣ ಬ್ಯಾಂಕುಗಳ ವ್ಯವಸ್ಥಾಪಕರ ಮೂಲಕ ಬಿಳಿಯಾಗಿಸಿಕೊಂಡಿದ್ದಾರೆ. ಸಾಮಾನ್ಯರಿಗೆ ತೊಂದರೆಯಾಗಿದೆ ಎಂದರು.

ಮಕ್ಕಳಿಗೆ ಮದುವೆ ಮಾಡಬೇಕೆಂದರೆ, ಆಸ್ಪತ್ರೆಗಳಿಗೆ ಹಣ ಬೇಕೆಂದರೆ, ಮನೆ ನಿರ್ಮಾಣ ಮಾಡಿಕೊಳ್ಳಬೇಕೆಂದರೆ, ಯಾರ ಬಳಿಯಾದರೂ ಸಾಲ ತೆಗೆದುಕೊಳ್ಳಬಹುದಾಗಿತ್ತು. ನೋಟು ರದ್ದತಿ ನಂತರ ಯಾರು ಹಣ ಕೊಡುತ್ತಿಲ್ಲ ಎಂದು ಸ್ಥಳೀಯರಾದ ವೆಂಕಟರಾಮಯ್ಯ, ಸುಬ್ಬಣ್ಣ, ದೇವರಾಜಪ್ಪ ಹೇಳುತ್ತಾರೆ.

ಎಂ.ಮುನಿನಾರಾಯಣ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT