ಶುಕ್ರವಾರ, ಮಾರ್ಚ್ 5, 2021
28 °C

ಮೋದಿ ಮೂರ್ಖ ನಿರ್ಧಾರದಿಂದ ಭಾರತದ ಅರ್ಥ ವ್ಯವಸ್ಥೆ ಸರ್ವನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೋದಿ ಮೂರ್ಖ ನಿರ್ಧಾರದಿಂದ ಭಾರತದ ಅರ್ಥ ವ್ಯವಸ್ಥೆ ಸರ್ವನಾಶ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿವೇಚನಾರಹಿತ ನೋಟು ರದ್ದು ನಿರ್ಧಾರವು ಸದೃಢವಾಗಿದ್ದ ಭಾರತದ ಇಡೀ ಅರ್ಥ ವ್ಯವಸ್ಥೆಯನ್ನೇ ಸರ್ವನಾಶ ಮಾಡಿದೆ ಎಂದು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಟೀಕಿಸಿದ್ದಾರೆ.

ನೋಟು ರದ್ದು ನಿರ್ಧಾರದ ನಂತರ ಪಾತಾಳಕ್ಕೆ ಕುಸಿದಿದ್ದ ದೇಶದ ಆರ್ಥಿಕತೆಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯ ಮೂಲಕ ಮೋದಿ ಮತ್ತೊಂದು ಮರ್ಮಾಘಾತ ನೀಡಿದರು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನೋಟು ರದ್ದು ನಿರ್ಧಾರಕ್ಕೆ ಒಂದು ವರ್ಷ ಸಂದ ಸಂದರ್ಭದಲ್ಲಿ ಬುಧವಾರ ಲಂಡನ್‌ನ ‘ಫೈನಾನ್ಸಿಯಲ್‌ ಟೈಮ್ಸ್‌’ ಪತ್ರಿಕೆಗೆ ಬರೆದ ಲೇಖನದಲ್ಲಿ ಅವರು, ಪ್ರಧಾನಿ ಮೋದಿ ಅವರನ್ನು ಸರ್ವಾಧಿಕಾರಿ ಎಂದು ಟೀಕಿಸಿದ್ದಾರೆ.

ಸಂಪಾದಕೀಯ ಪುಟದ ಪಕ್ಕದ ಪುಟದಲ್ಲಿ ಪ್ರಕಟವಾಗಿರುವ ಅಗ್ರಲೇಖನದಲ್ಲಿ ರಾಹುಲ್‌, ಪ್ರಧಾನಿಯ ಏಕಪಕ್ಷೀಯ ನಿರ್ಧಾರಗಳು ದೇಶದ ಆರ್ಥಿಕತೆಗೆ ಹೇಗೆ ಮಾರಕವಾಗಿ ಪರಿಣಮಿಸಿವೆ ಎನ್ನುವುದನ್ನು ಎಳೆ, ಎಳೆಯಾಗಿ ಬಿಡಿಸಿಟ್ಟಿದ್ದಾರೆ.

ಆತ್ಮವಿಶ್ವಾಸದ ಕತ್ತು ಹಿಸುಕಿದ ನಿರ್ಧಾರ!

ಏಕಪಕ್ಷೀಯ ನೋಟು ರದ್ದು ನಿರ್ಧಾರವು ಏರುಗತಿಯಲ್ಲಿದ್ದ ದೇಶದ ಆರ್ಥಿಕ ಬೆಳವಣಿಗೆಯ ಆತ್ಮವಿಶ್ವಾಸದ ಕತ್ತನ್ನೇ ಹಿಸುಕಿತು. ತರಾತುರಿಯಲ್ಲಿ ಜಾರಿಗೆ ತಂದ ಜಿಎಸ್‌ಟಿಯು ಪ್ರಪಾತಕ್ಕೆ ಕುಸಿದಿದ್ದ ಆರ್ಥಿಕತೆಗೆ ಮತ್ತೊಂದು ಮಾರಕ ಪೆಟ್ಟು ನೀಡಿತು ಎಂದು ರಾಹುಲ್‌ ತಮ್ಮ ಲೇಖನದಲ್ಲಿ ವಿಶ್ಲೇಷಿಸಿದ್ದಾರೆ.

ಭಾರತ ಜಾಗತಿಕವಾಗಿ ಬಲಾಢ್ಯ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಈ ಎರಡು ಯಡವಟ್ಟು ತಿರ್ಮಾನಗಳು (ನೋಟು ರದ್ದು ಮತ್ತು ಜಿಎಸ್‌ಟಿ ಜಾರಿ) ನಿಜಕ್ಕೂ ಎಲ್ಲರ ಅಚ್ಚರಿಗೆ ಕಾರಣವಾಗಿವೆ ಎಂದು ಹೇಳಿದ್ದಾರೆ.

ಟೀಕೆಗೆ ಕಾವ್ಯದ ಸ್ಪರ್ಶ

‘ಏಕ್‌ ಆಂಸು ಭೀ ಹುಕುಮತ್‌ ಕೆ ಲಿಯೆ ಖತ್ರಾ ಹೈ, ತುಮ್ನೆ ದೇಖಾ ನಹಿ ಆಂಖೋ ಕಾ ಸಮುಂದರ್‌ ಹೋನಾ’ (ಒಂದು ಕಣ್ಣೀರ ಹನಿ ಕೂಡ ಸರ್ಕಾರಕ್ಕೆ ಮಾರಕವಾಗಬಹುದು. ಜನರ ಕಣ್ಣಲ್ಲಿ ಮಡುಗಟ್ಟಿರುವ ಕಣ್ಣೀರ ಹನಿಗಳ ಸಾಗರ ನಿನಗೆ ಕಾಣುತ್ತಿಲ್ಲವೇ?) ಎಂದು ಅವರು ಹಿಂದಿಯಲ್ಲಿ ಕಾವ್ಯಾತ್ಮಕವಾಗಿ ಟ್ವೀಟ್‌ ಮಾಡಿದ್ದಾರೆ.

ಕಳೆದ ವರ್ಷ ನೋಟು ರದ್ದಾದ ಬಳಿಕ ಜನರು ಹಣ ಪಡೆಯಲು ಬ್ಯಾಂಕ್‌ ಮುಂದೆ ಮಾರುದ್ದದ ಸಾಲಿನಲ್ಲಿ ಪರದಾಡುತ್ತಿರುವ ಮತ್ತು ಕಣ್ಣೀರು ಸುರಿಸುತ್ತಿರುವ ಬಡ ಜನರ ಚಿತ್ರಗಳನ್ನು ಅವರು ತಮ್ಮ ಟ್ವೀಟ್‌ ಜತೆ ಟ್ಯಾಗ್‌ ಮಾಡಿದ್ದಾರೆ.

ಮೋದಿ, ಟ್ರಂಪ್‌ ಬ್ರೆಕ್ಸಿಟ್‌ ಹೋಲಿಕೆ

ರಾಹುಲ್‌ ತಮ್ಮ ಲೇಖನದಲ್ಲಿ ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಬ್ರೆಕ್ಸಿಟ್‌ ನಿರ್ಧಾರಗಳನ್ನು ಪರಸ್ಪರ ಹೋಲಿಕೆ ಮಾಡಿದ್ದಾರೆ.

ಸಾಮ್ಯತೆಯಿಂದ ಕೂಡಿರುವ ಈ ಮೂರು ನಿರ್ಧಾರಗಳಿಂದಾಗಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡು ಬೀದಿಪಾಲಾದರು. ಮತ್ತೊಂದೆಡೆ ಉನ್ನತ ಹುದ್ದೆಗಳಲ್ಲಿ ಸಿಂಹಪಾಲು ಪಡೆಯುವ ಮೂಲಕ ಚೀನಾ ಜಾಗತಿಕ ಮಟ್ಟದ ಉದ್ಯೋಗ ಕ್ಷೇತ್ರದಲ್ಲಿ ಪ್ರಾಬಲ್ಯ ಮೆರೆಯಿತು ಎಂದು ಅವರು ವಿಶ್ಲೇಷಿಸಿದ್ದಾರೆ.

ಭಾರತದ ವರ್ಚಸ್ಸಿಗೆ ಧಕ್ಕೆ

ನಿರುದ್ಯೋಗ ಮತ್ತು ಆರ್ಥಿಕ ಅವಕಾಶಗಳ ಕೊರತೆಯಿಂದ ಹತಾಶರಾದ ಜನರ ಆಕ್ರೋಶವನ್ನು ಕೋಮುದ್ವೇಷಕ್ಕೆ ತಿರುಗಿಸುವ ಮೂಲಕ ಮೋದಿ ಅವರು ಭಾರತದ ವರ್ಚಸ್ಸಿಗೆ ಧಕ್ಕೆ ತಂದಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದ್ವೇಷಪೂರಿತ ರಾಜಕೀಯ, ಕೋಮುದ್ವೇಷ ವೈಭವೀಕರಿಸಿ ಮೋದಿ ತಮ್ಮ ವೈಫಲ್ಯಗಳನ್ನು ಮರೆ ಮಾಚಬಹುದು. ಜನರ ಆಕ್ರೋಶ, ದ್ವೇಷ ಮೋದಿ ಅವರನ್ನು ಅಧಿಕಾರದ ಗದ್ದುಗೆವರೆಗೆ ಕೊಂಡೊಯ್ದಿರಬಹುದು. ಆದರೆ, ಅದು ಎಂದಿಗೂ ಉದ್ಯೋಗ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

*

ನೋಟು ನಿರ್ಧಾರ ಒಂದು ದೊಡ್ಡ ಪ್ರಮಾದ. ಪ್ರಧಾನಿಯ ಒಂದು ಮೂರ್ಖ ನಿರ್ಧಾರದಿಂದಾಗಿ ಲಕ್ಷಾಂತರ ಭಾರತೀಯರ ಜೀವನ ಸರ್ವನಾಶವಾಗಿದೆ.

–ರಾಹುಲ್‌ ಗಾಂಧಿ,

ಕಾಂಗ್ರೆಸ್‌ ಉಪಾಧ್ಯಕ್ಷ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.