ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಸ್ತ್ರಗಳಿದ್ದರೂ ಬಳಕೆ ಮಾಡುತ್ತಿಲ್ಲ’

ರಾಜ್ಯ ನಾಯಕರಿಗೆ ಪ್ರಕಾಶ್‌ ಜಾವಡೇಕರ್‌, ಗೋಯಲ್‌ ಖಡಕ್‌ ಎಚ್ಚರಿಕೆ
Last Updated 9 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಮಂಗಳೂರು: ‘ಬೈಕ್ ರ‍್ಯಾಲಿ, ಪರಿವರ್ತನಾ ರ‍್ಯಾಲಿ, ಸಚಿವ ಕೆ.ಜೆ. ಜಾರ್ಜ್ ವಿರುದ್ಧದ ಹೋರಾಟ, ಐಟಿ ದಾಳಿಗೆ ಒಳಗಾದ ಸಚಿವರ ವಿರುದ್ಧದ ಹೋರಾಟ ಹೀಗೆ ಒಂದರ ಹಿಂದೊಂದು ವೈಫಲ್ಯಗಳು ಕಾಣುತ್ತಿವೆ. ಕಾಂಗ್ರೆಸ್‌ ವಿರುದ್ಧ ಹೋರಾಡಲು ಅನೇಕ ಅಸ್ತ್ರಗಳಿದ್ದರೂ, ಅವುಗಳನ್ನು ಬಳಕೆ ಮಾಡಿಕೊಳ್ಳುವಲ್ಲಿ ಎಡವುತ್ತಿದ್ದೀರಿ. ಇದನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಪ್ರಕಾಶ್‌ ಜಾವಡೇಕರ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತಾ ಷಾ ಅವರ ಆದೇಶ ಹೊತ್ತು ತಂದಿದ್ದ ಪ್ರಕಾಶ ಜಾವಡೇಕರ್ ಹಾಗೂ ರೈಲ್ವೆ ಸಚಿವ ಪಿಯೂಷ್‌ ಗೋಯಲ್ ಅವರು ಗುರುವಾರ ನಗರದಲ್ಲಿ ನಡೆದ ಕೋರ್‌ ಕಮಿಟಿ ಸಭೆಯಲ್ಲಿ ರಾಜ್ಯ ನಾಯಕರಿಗೆ 5 ಗಂಟೆಗೂ ಹೆಚ್ಚು ಹೊತ್ತು ‘ತರಗತಿ’ ನಡೆಸಿ ಈ ಎಚ್ಚರಿಕೆ ನೀಡಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಡುವಲ್ಲಿ ಬಿಜೆಪಿ ರಾಜ್ಯ ನಾಯಕರು ಪದೇ ಪದೇ ವಿಫಲರಾಗುತ್ತಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ. ವೈಮನಸ್ಸು ಏನೇ ಇದ್ದರೂ ಅದನ್ನು ಬದಿಗಿಡಿ. ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯುವಂತೆ ನೋಡಿಕೊಳ್ಳಿ' ಎಂದು ಸೂಚಿಸಿದರು.

‘ನೋಟು ರದ್ದತಿ ವಿರೋಧಿಸಿ ಕಾಂಗ್ರೆಸ್ಸಿಗರು ಕರಾಳ ದಿನ ಆಚರಿಸಿದ್ದಾರೆ. ಬಿಜೆಪಿ ಕೂಡ ಕಪ್ಪು ಹಣ ವಿರೋಧಿ ದಿನ ಆಚರಿಸಬೇಕಿತ್ತು. ಅದರಲ್ಲಿಯೂ ರಾಜ್ಯ ನಾಯಕರು ಎಡವಿದ್ದಾರೆ. ಇದು ಸಮರ್ಥನೀಯವಲ್ಲ. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಜಾರ್ಜ್‌ ಅವರೇ ಪ್ರಥಮ ಆರೋಪಿ. ಹಾಗಿದ್ದರೂ, ಅವರ ವಿರುದ್ಧ ಪ್ರಬಲ ಹೋರಾಟ ರೂಪಿಸಿಲ್ಲ. ಇದಕ್ಕಿಂತ ದೊಡ್ಡ ಅಸ್ತ್ರ ಬೇಕೆ’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ.

‘ರಾಜ್ಯದಲ್ಲಿ ಕಾಂಗ್ರೆಸ್ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ. ಕಳೆದ ಬಾರಿ ಕಚ್ಚಾಟದಿಂದಾಗಿಯೇ ಪಕ್ಷ ಸೋಲಬೇಕಾಯಿತು. ಈ ಬಾರಿ ಪಕ್ಷಕ್ಕೆ ಒಳ್ಳೆಯ ಅವಕಾಶವಿದೆ. ಅದನ್ನು ಕಳೆದುಕೊಳ್ಳಬಾರದು’ ಎಂದು ಸಲಹೆ ನೀಡಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಪಕ್ಷಕ್ಕೆ ಸಾಕಷ್ಟು ಬೆಂಬಲ ಇದೆ. ಹೈದರಾಬಾದ್ ಕರ್ನಾಟಕ, ಮೈಸೂರು ಕರ್ನಾಟಕದಲ್ಲಿ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು. ಕರಾವಳಿ ಭಾಗದಲ್ಲೂ ಶೇ 90 ರಷ್ಟು ಸ್ಥಾನಗಳನ್ನು ಗೆಲ್ಲುವ ಅವಕಾಶವಿದೆ. ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಕಾರ್ಯಪ್ರವೃತ್ತರಾಗುವಂತೆ ಸೂಚಿಸಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.

ಹುಬ್ಬಳ್ಳಿ ಸಮಾವೇಶ ಯಶಸ್ವಿ ಮಾಡಿ: ಬೆಂಗಳೂರಿನಲ್ಲಿ ನಡೆದ ಪರಿವರ್ತನಾ ರ‍್ಯಾಲಿಯ ಉದ್ಘಾಟನಾ ಸಮಾರಂಭದಲ್ಲಿ ಆದ ಎಡವಟ್ಟು, ಹುಬ್ಬಳ್ಳಿಯಲ್ಲಿ ಡಿಸೆಂಬರ್‌ 21 ರಂದು ನಡೆಯಲಿರುವ ಸಮಾವೇಶದಲ್ಲಿ ಆಗಬಾರದು. ಉತ್ತರ ಕರ್ನಾಟಕದಲ್ಲಿ ಪಕ್ಷದ ನೆಲೆ ಗಟ್ಟಿಯಾಗಿದೆ. ಸಮಾವೇಶದ ಮೂಲಕ ಅದನ್ನು ಇಡೀ ರಾಜ್ಯಕ್ಕೆ ರವಾನಿಸಬೇಕು ಎಂದು ಪ್ರಕಾಶ್‌ ಜಾವಡೇಕರ್‌ ತಾಕೀತು ಮಾಡಿದರು ಎನ್ನಲಾಗಿದೆ.

ಇನ್ನಾದರೂ ಜಾರ್ಜ್‌ ವಿರುದ್ಧದ ಹೋರಾಟ ತೀವ್ರಗೊಳಿಸಬೇಕು. ರಾಜೀನಾಮೆ ಪಡೆಯುವವರೆಗೆ ಹೋರಾಟ ಮುಂದುವರಿಸಬೇಕು. ಬೆಳಗಾವಿ ಅಧಿವೇಶನದಲ್ಲಿ ಇದಕ್ಕೊಂದು ಅಂತಿಮ ರೂಪ ನೀಡಬೇಕು ಎಂದು ಸಲಹೆ ಮಾಡಿದರು ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಮುರಳೀಧರ್‌ ರಾವ್‌, ಕೇಂದ್ರ ಸಚಿವರಾದ ಅನಂತಕುಮಾರ್‌, ಡಿ.ವಿ. ಸದಾನಂದಗೌಡ, ಬಿ.ಎಸ್‌. ಯಡಿಯೂರಪ್ಪ, ಕೆ.ಎಸ್‌. ಈಶ್ವರಪ್ಪ, ಜಗದೀಶ್‌ ಶೆಟ್ಟರ, ಅರವಿಂದ ಲಿಂಬಾವಳಿ, ಸಿ.ಎಂ. ಉದಾಸಿ, ಆರ್‌. ಅಶೋಕ್‌, ಸಂಸದ ನಳಿನ್‌ಕುಮಾರ್‌ ಕಟೀಲ್‌, ಸಿ.ಟಿ. ರವಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಸಂತೋಷ್‌ ಸೇರಿದಂತೆ 15 ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

***

ಪರಿವರ್ತನಾ ರ‍್ಯಾಲಿಯ ಮುಂದಿನ ಭಾಗದ ಯಶಸ್ಸಿನ ಕುರಿತು ಕೋರ್‌ ಕಮಿಟಿ ಸಭೆಯಲ್ಲಿ ವಿಸ್ತೃತ ಚರ್ಚೆ ಮಾಡಲಾಗಿದೆ.
ಅರವಿಂದ ಲಿಂಬಾವಳಿ, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT