ಸೋಮವಾರ, ಮಾರ್ಚ್ 8, 2021
31 °C

ದುಷ್ಕೃತ್ಯ ತಡೆಗೆ ಫೇಸ್‌ಬುಕ್ ಕಾರ್ಯಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಷ್ಕೃತ್ಯ ತಡೆಗೆ ಫೇಸ್‌ಬುಕ್ ಕಾರ್ಯಯೋಜನೆ

ಸಿಡ್ನಿ (ಎಎಫ್‌ಪಿ): ಸಂಗಾತಿಯೊಂದಿಗೆ ಅತ್ಯಾಪ್ತವಾಗಿರುವ ಕ್ಷಣಗಳ ಅಥವಾ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಛಾಯಾಚಿತ್ರಗಳನ್ನು ದ್ವೇಷ ಸಾಧನೆಗೆಂದು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುವ ಕೃತ್ಯವನ್ನು ತಡೆಯುವ ನಿಟ್ಟಿನಲ್ಲಿ ಫೇಸ್‌ಬುಕ್ ಹೊಸ ಕಾರ್ಯಯೋಜನೆಯೊಂದನ್ನು ಆರಂಭಿಸಿದೆ.

ಇಂತಹ ಚಿತ್ರಗಳನ್ನು ಯಾರೊಂದಿಗಾದರೂ ಹಂಚಿಕೊಂಡು, ಅವು ಜಾಲತಾಣಗಳಲ್ಲಿ ಹಂಚಿಕೆಯಾಗುವ ಬಗ್ಗೆ ಚಿಂತೆಗೀಡಾಗಿರುವವರು ತಮ್ಮ ನಗ್ನ ಚಿತ್ರಗಳನ್ನು ಮೆಸೆಂಜರ್ ತಂತ್ರಾಂಶದ ಮೂಲಕ ಆಸ್ಟ್ರೇಲಿಯಾ ಸರ್ಕಾರದ ಇ–ಸೇಫ್ಟಿ ಆಯೋಗಕ್ಕೆ ಕಳುಹಿಸುವಂತೆ ಫೇಸ್‌ಬುಕ್ ಕೋರಿದೆ. ಹೀಗೆ ಕಳುಹಿಸಿದ ನಗ್ನ ಚಿತ್ರ ಮತ್ತು ಹಗೆ ಸಾಧನೆಗೆ ಅಂತರ್ಜಾಲದಲ್ಲಿ ಅಪ್‌ಲೋಡ್ ಮಾಡಲು ಪ್ರಯತ್ನಿಸುವ ಚಿತ್ರಗಳನ್ನು ಹೋಲಿಸಿ, ಅವು ಅಪ್‌ಲೋಡ್ ಆಗುವುದನ್ನು ತಡೆಯುವುದು ಮತ್ತು ಅವುಗಳನ್ನು ನಾಶಪಡಿಸುವ ತಂತ್ರಜ್ಞಾನ ರೂಪಿಸುವುದು ಯೋಜನೆಯ ಉದ್ದೇಶ.

‘ಅನುಮತಿ ಇಲ್ಲದೇ ಜಾಲತಾಣದಲ್ಲಿ ಚಿತ್ರಗಳು ಹಂಚಿಕೆ ಆಗುವುದನ್ನು ತಡೆಯುವ ಸಲುವಾಗಿ ಈ ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ’ ಎಂದು ಫೇಸ್‌ಬುಕ್‌ನ ಜಾಗತಿಕ ಭದ್ರತೆ ವಿಭಾಗದ ಮುಖ್ಯಸ್ಥ ಆಂಟಿಗನ್ ಡೇವಿಸ್ ಹೇಳಿದ್ದಾರೆ.

‘ಛಾಯಾಚಿತ್ರಗಳನ್ನು ಅಂತರ್ಜಾಲದಲ್ಲಿ ಹಂಚಿಕೊಳ್ಳುವ ಮೂಲಕ ನಡೆಯುವ ಲೈಂಗಿಕ ಶೋಷಣೆಯನ್ನು ತಡೆಯುವ ಫೇಸ್‌ಬುಕ್‌ನ ಪ್ರಯತ್ನ ಸಫಲವಾದರೆ, ಅದನ್ನು ಬೇರೆ ಅಂತರ್ಜಾಲ ತಾಣಗಳಿಗೂ ವಿಸ್ತರಿಸಬಹುದು’ ಎಂದು ಇ–ಸೇಫ್ಟಿ ಆಯುಕ್ತೆ ಜೂಲಿ ಇನ್ಮಾನ್ ಗ್ರ್ಯಾಂಟ್ ಹೇಳಿದ್ದಾರೆ.

ಸಮ್ಮತಿ ಇಲ್ಲದೇ ಚಿತ್ರಗಳನ್ನು ಹಂಚಿಕೊಳ್ಳುವುದರ ವಿರುದ್ಧ ದೂರು ನೀಡುವ ಸಲುವಾಗಿ ಇ–ಸೇಫ್ಟಿ ಆಯೋಗವು ಕಳೆದ ತಿಂಗಳು ಜಾಲತಾಣವೊಂದನ್ನು ಆರಂಭಿಸಿದೆ. ಈ ರೀತಿಯ ವಿಚಾರಗಳಲ್ಲಿ ಭದ್ರತೆ ಒದಗಿಸುವ ಪ್ರಯತ್ನದಲ್ಲಿ ಆಸ್ಟ್ರೇಲಿಯಾ ಮುಂಚೂಣಿಯಲ್ಲಿದೆ.

‘ಆಸ್ಟ್ರೇಲಿಯಾದಲ್ಲಿ 18ರಿಂದ 45 ವರ್ಷದ ಒಳಗಿನ ಪ್ರತಿ ಐವರು ಮಹಿಳೆಯರಲ್ಲಿ ಒಬ್ಬರು ಈ ರೀತಿಯ ಚಿತ್ರಗಳನ್ನು ಹಂಚಿಕೊಳ್ಳುವುದರಿಂದ ಶೋಷಣೆಗೆ ಒಳಗಾಗುತ್ತಿದ್ದಾರೆ’ ಎಂದು ಆಯೋಗ ಇತ್ತೀಚೆಗೆ ಬಿಡುಗಡೆ ಮಾಡಿದ ಸಮೀಕ್ಷೆಯ ವರದಿಯಲ್ಲಿ ತಿಳಿದುಬಂದಿದೆ. ಫೇಸ್‌ಬುಕ್ ಮತ್ತು ಮೆಸೆಂಜರ್‌ನಲ್ಲಿ ಶೇ 53, ಸ್ನ್ಯಾಪ್‌ಚಾಟ್‌ ಆ್ಯಪ್‌ನಲ್ಲಿ ಶೇ 11 ಮತ್ತು ಇನ್‌ಸ್ಟಾಗ್ರಾಂನಲ್ಲಿ ಶೇ 4ರಷ್ಟು ಇಂಥ ಕೃತ್ಯಗಳು ನಡೆಯುತ್ತಿವೆ. ಪುರುಷರು ಮತ್ತು ಮಹಿಳೆಯರು ಸಮಾನವಾಗಿ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂಬುದನ್ನು ಕಂಡುಕೊಳ್ಳಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.