ಶುಕ್ರವಾರ, ಮಾರ್ಚ್ 5, 2021
25 °C

‘ರೇರಾ ನೋಂದಣಿಯಿಂದ ವಿಶ್ವಾಸಾರ್ಹತೆ ವೃದ್ಧಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ರೇರಾ ನೋಂದಣಿಯಿಂದ ವಿಶ್ವಾಸಾರ್ಹತೆ ವೃದ್ಧಿ’

ಮಂಗಳೂರು: ರಿಯಲ್‌ ಎಸ್ಟೇಟ್‌ ನಿಯಂತ್ರಣ ಕಾಯ್ದೆಯ ಅನ್ವಯ ರಿಯಲ್‌ ಎಸ್ಟೇಟ್ ಡೆವಲಪ್‌ರಗಳು ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರದಲ್ಲಿ ನೋಂದಣಿ ಮಾಡುವುದು ಕಡ್ಡಾಯ. ಇಲ್ಲದೇ ಇದ್ದರೆ, ದಂಡ ಪಾವತಿಸುವುದು ಅನಿವಾರ್ಯವಾಗಲಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ವಿನೋದ್ ಪ್ರಿಯ ಹೇಳಿದರು.

ರೇರಾ ಪ್ರಾಧಿಕಾರ ಕರ್ನಾಟಕ ಮತ್ತು ಕಾಮನ್‌ಫ್ಲೋರ್‌ ಸಂಸ್ಥೆಗಳ ಆಶ್ರಯದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ರೇರಾ ಕಾಯ್ದೆ ಕುರಿತಾದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ರೇರಾ ನೋಂದಣಿಯಿಂದ ಬಿಲ್ಡರ್‌ಗಳಿಗೆ ಹೆಚ್ಚಿನ ಡೇಟಾಬೇಸ್‌ಗೆ ಅವಕಾಶ ಸಿಗುತ್ತದೆ. ಕೊಳ್ಳುಗರು ಮತ್ತು ಪ್ರವರ್ತಕರು, ಬಿಲ್ಡರ್‌ಗಳ ಬ್ರಾಂಡ್ ಕುರಿತು ಹೆಚ್ಚು ವಿಶ್ವಾಸ ಹೊಂದುತ್ತಾರೆ. ನಿರ್ಮಾಣ ಹಂತದಲ್ಲಿರುವ ಪ್ರಾಜೆಕ್ಟ್‌ಗಳನ್ನು ರೇರಾ ಪರೀಕ್ಷಿಸಲಿದ್ದು, ರಿಯಲ್ ಎಸ್ಟೇಟ್ ವಲಯದಲ್ಲಿ ವಂಚಕರಿಂದ ಹೊರಬರಲು ನೆರವಾಗುತ್ತದೆ ಎಂದು ತಿಳಿಸಿದರು.

ರಿಯಲ್ ಎಸ್ಟೇಟ್‌ ವಲಯಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ರೇರಾ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಇದರಿಂದ ಪಾರದರ್ಶಕತೆ ಹೆಚ್ಚಾಗಲಿದ್ದು, ಬಿಲ್ಡರ್‌ಗಳು ಮತ್ತು ಗ್ರಾಹಕರ ನಡುವಿನ ದೂರ ಕಡಿಮೆ ಆಗಲಿದೆ ಎಂದರು.

ರೇರಾದೊಂದಿಗೆ ನೋಂದಣಿ ಮಾಡಿಕೊಳ್ಳುವ ಬಿಲ್ಡರ್‌ಗಳ ಕಟ್ಟಡಗಳಿಗೆ ಸಂಬಂಧಿಸಿದ ಭೂ ದಾಖಲೆಗಳನ್ನು ರೇರಾ ವೆಬ್‌ಸೈಟ್‌ನಲ್ಲಿ ಹಾಕಲಾಗುವುದು. ಇದರಿಂದ ಕಟ್ಟಡ ಖರೀದಿಸುವ ಗ್ರಾಹಕರು, ದಾಖಲೆಗಳನ್ನು ಸುಲಭವಾಗಿ ಪರಿಶೀಲಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದ ಅವರು, ಬಿಲ್ಡರ್‌ಗಳು ಕಾಲಮಿತಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸುವಂತೆ ಕಾಯ್ದೆಯಲ್ಲಿ ಹೇಳಲಾಗಿದ್ದು, ಬಿಲ್ಡರ್‌ಗಳ ಕಾರ್ಯಕ್ಕೆ ಅನುಗುಣವಾಗಿ ರೇಟಿಂಗ್‌ ನೀಡಲಾಗುವುದು ಎಂದರು.

ನಗರ ಯೋಜನಾ ಪ್ರಾಧಿಕಾರ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ನಡೆಯುವ ಎಲ್ಲ ಯೋಜನೆಗಳು ರೇರಾ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ಆದರೆ, ಕೆಲ ಬಿಲ್ಡರ್‌ಗಳು ತಮ್ಮ ಯೋಜನೆಗಳ ನೋಂದಣಿಗೆ ಹಿಂದೇಟು ಹಾಕುತ್ತಿದ್ದಾರೆ. ಇದು ಸರಿಯಲ್ಲ ಎಂದು ತಿಳಿಸಿದರು.

ಮಂಗಳೂರಿನಲ್ಲಿ ಸುಮಾರು 100 ಯೋಜನೆಗಳು ರೇರಾ ನೋಂದಣಿ ಪಡೆದಿದ್ದು, ನೋಂದಣಿ ಮಾಡದೇ ಇರುವ ಯೋಜನೆಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ರೇರಾ ಕರ್ನಾಟಕದ ಕಾನೂನು ಸಲಹೆಗಾರ ಕೆ. ಪಾಲಾಕ್ಷಪ್ಪ ಮಾತನಾಡಿ, ಸದ್ಯಕ್ಕೆ ನಡೆಯುತ್ತಿರುವ ಯೋಜನೆಗಳು 90 ದಿನದಲ್ಲಿ ನೋಂದಣಿ ಮಾಡಿಕೊಳ್ಳಬೇಕು.

ನೋಂದಣಿ ಮಾಡದ ಯೋಜನೆಗಳಿಗೆ ರೇರಾ ಮಾನ್ಯತೆ ನೀಡುವುದಿಲ್ಲ. ನಿಗದಿತ ಅವಧಿಯಲ್ಲಿ ನೋಂದಣಿ ಮಾಡದೇ ಇದ್ದಲ್ಲಿ, ವಿರುದ್ಧ ದೂರು ದಾಖಲಿಸಲು ಕಾಯ್ದೆಯಲ್ಲಿ ಅವಕಾಶವಿದೆ. ಜತೆಗೆ ಶೇ 10 ರಷ್ಟು ದಂಡ ವಿಧಿಸಬಹುದಾಗಿದೆ ಎಂದು ತಿಳಿಸಿದರು.

ರಿಯಲ್‌ ಎಸ್ಟೇಟ್‌ ಏಜೆಂಟರೂ ರೇರಾ ನೋಂದಣಿ ಪಡೆಯುವುದು ಕಡ್ಡಾಯ. ರೇರಾ ಕಾಯ್ದೆಯ ಪ್ರಕಾರ ನೋಂದಣಿ ಮಾಡದ ಏಜೆಂಟರು, ಯೋಜನೆಗಳ ಕುರಿತು ಜಾಹೀರಾತು ಅಳವಡಿಸುವಂತಿಲ್ಲ. ಜತೆಗೆ ಗ್ರಾಹಕರ ಜತೆಗೆ ವ್ಯವಹಾರ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದರು. ರೇರಾ ಯೋಜನಾ ವ್ಯವಸ್ಥಾಪಕ ಜಾನ್‌ ಬೆನಡಿಕ್ಟ್‌, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶ್ರೀಕಾಂತ್‌ ರಾವ್‌ ವೇದಿಕೆಯಲ್ಲಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.