ಭಾನುವಾರ, ಮಾರ್ಚ್ 7, 2021
22 °C

ಸಮ–ಬೆಸ ಸಂಖ್ಯೆ ಜಾರಿಗೆ ರಾಮಲಿಂಗಾರೆಡ್ಡಿ ಒಲವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಮ–ಬೆಸ ಸಂಖ್ಯೆ ಜಾರಿಗೆ ರಾಮಲಿಂಗಾರೆಡ್ಡಿ ಒಲವು

ಬೆಂಗಳೂರು: ನಗರದಲ್ಲಿ ‌‌ವಾಹನ ದಟ್ಟಣೆ ಕಡಿಮೆ ಮಾಡಲು ಸಮ–ಬೆಸ ಸಂಖ್ಯೆ ಆಧಾರದಲ್ಲಿ ಕಾರು ಸಂಚಾರ ನಿಯಮ ಜಾರಿಗೆ ತರುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಮಾಧ್ಯಮ ಸಂವಾದದಲ್ಲಿ ಶನಿವಾರ ಮಾತನಾಡಿದ ಅವರು, ಎರಡು ವರ್ಷದ ಹಿಂದೆ ನಗರದಲ್ಲಿ 50 ಲಕ್ಷ ವಾಹನಗಳಿದ್ದವು. ಈಗ ಈ ಸಂಖ್ಯೆ 64 ಲಕ್ಷಕ್ಕೆ ಏರಿಕೆಯಾಗಿದೆ. ಇದರಿಂದ ವಾಯು ಮಾಲಿನ್ಯ, ಶಬ್ಧ ಮಾಲಿನ್ಯ ಹೆಚ್ಚಾಗುತ್ತಿದೆ ಎಂದರು.

ಮಾಲಿನ್ಯ ತಡೆಯಲು ದೆಹಲಿಯಲ್ಲಿ ಸಮ–ಬೆಸ ಪದ್ದತಿ ಜಾರಿಯಾಗುತ್ತಿದೆ. ಅಲ್ಲಿನ ಯಶಸ್ಸು ನೋಡಿಕೊಂಡು ರಾಜ್ಯದ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ’ ಎಂದು ಹೇಳಿದರು.

ಮತೀಯ ಗೂಂಡಾಗಿರಿ ವಿರುದ್ಧ ಕ್ರಮ: ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದೆ. ಪದೇ ಪದೇ ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಗಡಿಪಾರು ಮಾಡಲಾಗುವುದು. ಮತೀಯ ಗೂಂಡಾಗಿರಿ ಮಾಡುವವರ ವಿರುದ್ಧವೂ ಇದೇ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ’ ಎಂದು ತಿಳಿಸಿದರು.

‘ಮಂಗಳೂರಿನಲ್ಲಿ ಬಿಜೆಪಿ ಬೈಕ್‌ ರ‍್ಯಾಲಿಗೆ ಅವಕಾಶ ನೀಡಿದ್ದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತಿತ್ತು. ಟಿಪ್ಪು ಜಯಂತಿ ವೇಳೆಯೂ ಕಠಿಣ ನಿರ್ಧಾರ ಕೈಗೊಂಡು ಶಾಂತಿ ಕಾಪಾಡಿದ್ದೇವೆ’ ಎಂದರು. ಟಿಪ್ಪು ಜಯಂತಿಗೆ ವ್ಯಕ್ತವಾಗುತ್ತಿರುವ ವಿರೋಧ ರಾಜಕೀಯ ಕಾರಣಕ್ಕೆ ಎಂಬುದು ಎಲ್ಲರಿಗೂ ಗೊತ್ತಿದೆ. ಯಡಿಯೂರಪ್ಪ, ಜಗದೀಶ ಶೆಟ್ಟರ್, ಡಿ.ವಿ. ಸದಾನಂದಗೌಡ, ಶೋಭಾ ಕರಂದ್ಲಾಜೆ, ಆರ್. ಅಶೋಕ್ ಈ ಹಿಂದೆ ಟಿಪ್ಪು ಬಗ್ಗೆ ಹಾಡಿ ಹೊಗಳಿಲ್ಲವೇ ಎಂದು ಪ್ರಶ್ನಿಸಿದರು.

ದೂರವಾಣಿ ಕದ್ದಾಲಿಕೆ ಸರಿಯಲ್ಲ: ಕೇಂದ್ರ ಸರ್ಕಾರ ಕಾಂಗ್ರೆಸ್‌ ನಾಯಕರ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡುತ್ತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು. ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ, ಸಿಬಿಐ, ಚುನಾವಣಾ ಆಯೋಗವನ್ನು ಕೇಂದ್ರ ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದೂ ಅವರು ಆಪಾದಿಸಿದರು.

***

ಸಿದ್ದರಾಮಯ್ಯ ನಂ.1

ಮುಂದಿನ ಅವಧಿಗೂ ಸಿದ್ದರಾಮಯ್ಯ ಅವರೇ ನಂಬರ್ 1 (ಮುಖ್ಯಮಂತ್ರಿ) ಸ್ಥಾನದಲ್ಲಿ ಇರಲಿದ್ದಾರೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.

‘ಮುಖ್ಯಮಂತ್ರಿ ನಂತರ ಎರಡನೇ ಸ್ಥಾನದಲ್ಲಿರುವ ನೀವು ಮುಂದಿನ ಅವಧಿಗೆ ಮೊದಲ ಸ್ಥಾನಕ್ಕೆ ಹೋಗಬೇಕೆಂಬ ಬಯಕೆ ಇದೆಯೇ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನನಗೆ ಅಷ್ಟು ದೊಡ್ಡ ಆಸೆ ಇಲ್ಲ. ಈಗ ನಂ.1 ಸ್ಥಾನದಲ್ಲಿ ಇರುವವರೇ ಮುಂದುವರಿಯುತ್ತಾರೆ. ಈ ಬಗ್ಗೆ ಅನುಮಾನ ಬೇಡ’ ಎಂದರು.

ರಾಜಕಾರಣಿಗಳು ಮಕ್ಕಳಿಗೆ‌ ಪಕ್ಷದ ಟಿಕೆಟ್ ನೀಡುವುದು ತಪ್ಪಲ್ಲ. ಆದರೆ, ಅರ್ಹತೆ ಇರಬೇಕು ಎಂದರು.

‘ನನ್ನ ಮಗನಿಗೆ ರಾಜಕೀಯದ ಬಗ್ಗೆ ಆಸಕ್ತಿ ಇಲ್ಲ. ಮಗಳಿಗೆ ‌ ಮೊದಲಿಂದಲೂ ಸಮಾಜ ಸೇವೆ ಆಸಕ್ತಿ ಇದೆ. ಪಕ್ಷ ಟಿಕೆಟ್‌ ಕೊಟ್ಟರೆ ಸ್ಪರ್ಧಿಸುತ್ತಾಳೆ, ಇಲ್ಲದಿದ್ದರೆ ಟಿಕೆಟ್ ಪಡೆದವರ ಪರ ಕೆಲಸ ಮಾಡುತ್ತಾಳೆ. ಆದರೆ, ನನ್ನ ಸ್ಪರ್ಧೆಯಂತೂ ಖಚಿತ’ ಎಂದು ಸ್ಪಷ್ಟ‍ಪಡಿಸಿದರು.

***

ಗೌರಿ ಲಂಕೇಶ್ ಹತ್ಯೆ ಯಾರು ಮಾಡಿದ್ದಾರೆ ಎಂದು‌ ಗೊತ್ತಿದೆ. ಸಾಕ್ಷ್ಯಗಳನ್ನು ಕಲೆ<br/>ಹಾಕಲಾಗುತ್ತಿದ್ದು, ಕೆಲವೇ ವಾರಗಳಲ್ಲಿ ಹಂತಕರನ್ನು ಬಂಧಿಸಲಾಗುವುದು ರಾಮಲಿಂಗಾರೆಡ್ಡಿ, ಗೃಹ ಸಚಿವ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.