ಮಂಗಳವಾರ, ಮಾರ್ಚ್ 2, 2021
31 °C

ಪ್ಲಾಸ್ಟಿಕ್‌; ಇಲ್ಲಿನ ದನಗಳ ಆಹಾರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ಲಾಸ್ಟಿಕ್‌; ಇಲ್ಲಿನ ದನಗಳ ಆಹಾರ!

ಚಾಮರಾಜನಗರ: ನಗರದ ಬಹುತೇಕ ಕಡೆ ಎಲ್ಲೆಂದರಲ್ಲಿ ಬಿದ್ದಿರುವ ಪ್ಲಾಸ್ಟಿಕ್‌ ತ್ಯಾಜ್ಯಗಳು ಅನೈರ್ಮಲ್ಯಕ್ಕೆ ಕಾರಣವಾಗುತ್ತಿದ್ದರೆ, ಇನ್ನೊಂದೆಡೆ ದನಗಳ ಹೊಟ್ಟೆ ಸೇರುವ ಮೂಲಕ ಅವುಗಳಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ.

ನಗರದ ಅನೇಕ ಬಡಾವಣೆಗಳಲ್ಲಿ ಕಸದ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಸಾರ್ವಜನಿಕರೂ ಮನೆಬಾಗಿಲಿಗೆ ಬರುವ ತಳ್ಳುಗಾಡಿಗಳಿಗೆ ಕಸ ಹಾಕದೆ ಮರ, ವಿದ್ಯುತ್‌ ಕಂಬದ ಬುಡ, ಚರಂಡಿ ಮುಂತಾದೆಡೆ ಬಿಸಾಡುತ್ತಾರೆ. ಅಲ್ಲದೆ, ಕೊಳೆತ ತರಕಾರಿ, ಮಿಕ್ಕ ಅಡುಗೆ ಮುಂತಾದ ಪದಾರ್ಥಗಳನ್ನು ಪ್ಲಾಸ್ಟಿಕ್ ಕವರ್‌ಗಳಲ್ಲಿ ತುಂಬಿ ರಸ್ತೆ ಬದಿ ಎಸೆಯುತ್ತಾರೆ. ಅವುಗಳನ್ನು ತಿನ್ನಲು ಜಾನುವಾರುಗಳು ಮತ್ತು ನಾಯಿಗಳು ಕಸದ ರಾಶಿ ಮೇಲೆ ಮುಗಿಬೀಳುತ್ತವೆ.

ಕಸದ ರಾಶಿಯಲ್ಲಿನ ತಿನಿಸುಗಳ ಜತೆಯಲ್ಲಿ ದನಗಳು ಪ್ಲಾಸ್ಟಿಕ್‌, ಕಾಗದದಂತಹ ವಸ್ತುಗಳನ್ನೂ ತಿನ್ನುತ್ತಿವೆ. ಇದರಿಂದ ಅವು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ಇವು ಪರೋಕ್ಷವಾಗಿ ಜನರ ಮೇಲೂ ಪರಿಣಾಮ ಬೀರುತ್ತಿವೆ.

ಕಸವನ್ನು ಎಲ್ಲೆಂದರಲ್ಲಿ ಎಸೆಯಬೇಡಿ ಎಂದು ನಗರಸಭೆ ಮನವಿ ಮಾಡಿದ್ದರೂ, ಜನರು ಅದನ್ನು ಪಾಲಿಸುತ್ತಿಲ್ಲ. ಇದರಿಂದ ಅನೈರ್ಮಲ್ಯ ಹೆಚ್ಚಾಗಿ ಕಸದ ರಾಶಿಗಳು ನಾಯಿ, ಬಿಡಾಡಿ ದನಗಳು, ಹಂದಿಗಳ ತಾಣವಾಗುತ್ತಿವೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಕೆಲವು ಬಡಾವಣೆಗಳಲ್ಲಿ ನಿಯಮಿತವಾಗಿ ಕಸ ವಿಲೇವಾರಿಗೆ ಪೌರಕಾರ್ಮಿಕರು ಬರುತ್ತಿಲ್ಲ. ಹಸಿ ತ್ಯಾಜ್ಯಗಳನ್ನು ಮನೆಯಲ್ಲಿ ಎರಡು ಮೂರು ದಿನ ಇರಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಅವುಗಳನ್ನು ಜನವಸತಿಯಿಂದ ದೂರವಿರುವ ಸ್ಥಳದಲ್ಲಿ ಎಸೆಯುವುದು ಅನಿವಾರ್ಯವಾಗುತ್ತದೆ ಎನ್ನುತ್ತಾರೆ ನಾಗರಿಕರು.

ಪ್ಲಾಸ್ಟಿಕ್‌ ನಿಯಂತ್ರಣ ಇಲ್ಲ: ಪ್ಲಾಸ್ಟಿಕ್‌ ಕವರ್‌ಗಳ ಬಳಕೆಯನ್ನು ನಿಯಂತ್ರಿಸುವ ಮೂಲಕ ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಪ್ರಯತ್ನಗಳು ನಡೆಯುತ್ತಿವೆ. 40 ಮೈಕ್ರಾನ್‌ಗಿಂತ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್‌ ಕವರ್‌ಗಳ ಬಳಕೆಯನ್ನು ನಿಷೇಧಿಸಿದ್ದರೂ, ಅವುಗಳ ಮಾರಾಟ ನಡೆಯುತ್ತಲೇ ಇದೆ.

ನಗರಸಭೆ ಅಧಿಕಾರಿಗಳು ಕೆಲವು ತಿಂಗಳ ಹಿಂದೆ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದರು. ಹೀಗಿದ್ದರೂ, ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ.

ಪ್ಲಾಸ್ಟಿಕ್‌ ಬದಲು ಬಟ್ಟೆ ಅಥವಾ ಪೇಪರ್‌ ಚೀಲಗಳನ್ನು ಬಳಸುವಂತೆ ನಡೆಸಿದ ಜಾಗೃತಿ ಕಾರ್ಯಕ್ರಮಗಳಿಂದ ಪ್ರಯೋಜನವಾಗಿಲ್ಲ. ತರಕಾರಿ ಮತ್ತಿತರ ಉತ್ಪನ್ನಗಳನ್ನು ಕೊಳ್ಳಲು ಬರುವ ಜನರು ಪ್ಲಾಸ್ಟಿಕ್‌ ಕವರ್‌ ಕೇಳುತ್ತಾರೆ ಎನ್ನುತ್ತಾರೆ ವ್ಯಾಪಾರಿಗಳು. ಇದರಿಂದಾಗಿ ಭೂಮಿಯ ಒಡಲು ಸೇರುತ್ತಿರುವ ಪ್ಲಾಸ್ಟಿಕ್‌ ತ್ಯಾಜ್ಯದ ಪ್ರಮಾಣ ಕಡಿಮೆಯಾಗಿಲ್ಲ.

ಬಿಡಾಡಿ ದನಗಳಿಗೆ ಕಡಿವಾಣವಿಲ್ಲ: ರಸ್ತೆ ಮಧ್ಯೆ ನಿಂತು ತೊಂದರೆ ಕೊಡುವ ಬಿಡಾಡಿ ದನಗಳನ್ನು ವಶಕ್ಕೆ ಪಡೆದುಕೊಂಡು, ಅವುಗಳ ಮಾಲೀಕರಿಗೆ ದಂಡ ವಿಧಿಸುವುದಾಗಿ ನಗರಸಭೆ ನೀಡಿರುವ ಎಚ್ಚರಿಕೆಗೆ ಮಾಲೀಕರು ಕಿವಿಗೊಟ್ಟಿಲ್ಲ. ಹೀಗಾಗಿ, ನಗರದೆಲ್ಲೆಡೆ ಬಿಡಾಡಿ ದನಗಳ ಹಾವಳಿ ಮುಂದುವರಿದಿದೆ.

ನಗರದ ಒಳಗೆ ಹಸು ಸಾಕಾಣಿಕೆ ತುಂಬಾ ಕಷ್ಟ. ಇಲ್ಲಿ ಅವುಗಳನ್ನು ಮೇಯಿಸಲು ಸರಿಯಾದ ಜಾಗವಿಲ್ಲ. ಹಾಗೆ ಹುಲ್ಲು ಸಿಗುವ ಕಡೆಗಳಲ್ಲಿ ಅವುಗಳನ್ನು ಮೇಯಲು ಬಿಟ್ಟು ಕಾಯುತ್ತಾ ಕೂರಲು ಸಾಧ್ಯವಿಲ್ಲ. ಮೇವಿಗೆ ಸೂಕ್ತವಾದ ವ್ಯವಸ್ಥೆ ಮಾಡಿಕೊಟ್ಟರೆ ಅನುಕೂಲವಾಗುತ್ತದೆ ಎನ್ನುತ್ತಾರೆ ದನಗಳ ಮಾಲೀಕರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.