ಭಾನುವಾರ, ಮಾರ್ಚ್ 7, 2021
32 °C

15ವರ್ಷದೊಳಗಿನವರ ತಂಡಕ್ಕೆ ಆಯ್ಕೆಯಾಗಿಲ್ಲವೆಂದು ಆತ್ಮಹತ್ಯೆಗೆ ಯತ್ನಿಸಿದ್ದ ಕುಲದೀಪ್‌ ಯಾದವ್‌

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

15ವರ್ಷದೊಳಗಿನವರ ತಂಡಕ್ಕೆ ಆಯ್ಕೆಯಾಗಿಲ್ಲವೆಂದು ಆತ್ಮಹತ್ಯೆಗೆ ಯತ್ನಿಸಿದ್ದ ಕುಲದೀಪ್‌ ಯಾದವ್‌

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಯುವ ಸ್ಪಿನ್ನರ್‌ ಚೀನಾಮನ್‌ ಕುಲದೀಪ್‌ ಯಾದವ್‌ 13 ವಯಸ್ಸಿನಲ್ಲಿ 15 ವರ್ಷದೊಳಗಿನವರ  ಉತ್ತರಪ್ರದೇಶದ ತಂಡದ ಪರ ಆಯ್ಕೆಯಾಗಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದೆ ಎಂದು ಕುಲದೀಪ್‌ ಹೇಳಿದ್ದಾರೆ.

‘ಆಯ್ಕೆಗಾರರು ನನ್ನನ್ನು ಆಯ್ಕೆ ಮಾಡಲು ನಿರಾಕರಿಸಿದ್ದರಿಂದ ಬೇಸತ್ತು ಕ್ರಿಕೆಟ್‌ ಆಟವೇ ಬೇಡ ಎಂದು ನಿರ್ಧರಿಸಿದ್ದೆ. ಆದರೆ ದಿನಗಳು ಉರುಳಿದಂತೆ ಕ್ರೀಡಾಸಕ್ತಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವಂತೆ ಮಾಡಿತು’ ಎಂದು ಕುಲದೀಪ್‌ ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಹಿಂದೂಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಕುಲದೀಪ್‌ ಯಾದವ್‌ ಭಾರತ ರಾಷ್ಟ್ರೀಯ ಕ್ರಿಕೆಟ್‌ ತಂಡದಲ್ಲಿ ಸ್ಥಾನ ಪಡೆಯುವುದಕ್ಕೂ ಮುನ್ನ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಟೂರ್ನಿಯಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದ ಪರ ಕಣಕ್ಕಿಳಿದಿದ್ದರು.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಕುಲದೀಪ್‌ ಯಾದವ್‌, ‘ತಂಡಕ್ಕೆ ಆಯ್ಕೆಯಾಗಬೇಕೆಂದು ನಾನು ಕಠಿಣ ಅಭ್ಯಾಸ ನಡೆಸಿದೆ. ಆದರೆ ನಾನು ಆಯ್ಕೆಯಾಗಲಿಲ್ಲ. ಇದರಿಂದ ಹತಾಶೆಗೆ ಒಳಗಾಗಿ ಆತ್ಮಹತ್ಯೆಗೆ ಪ್ರಯತ್ನಿಸಿದೆ. ಕೆಲವೊಂದು ಸನ್ನಿವೇಶ ಎಲ್ಲರನ್ನೂ ಹತಾಶರನ್ನಾಗಿಸುತ್ತದೆ’ ಎಂದಿದ್ದಾರೆ.

‘ನಾನು ಶಾಲೆ ಓದುವಾಗ ಪ್ರಶಂಸನೀಯ ವಿದ್ಯಾರ್ಥಿಯಾಗಿದ್ದೆ. ಆರಂಭದ ದಿನಗಳಲ್ಲಿ ಕ್ರಿಕೆಟ್‌ ಒಂದು ಮೋಜಿನ ಆಟವೆನಿಸಿತ್ತು. ಆದರೆ ಮುಂದಿನ ದಿನಗಳಲ್ಲಿ ಅದನ್ನೇ ವೃತ್ತಿಯಾಗಿ ತೆಗೆದುಕೊಳ್ಳುತ್ತೇನೆ ಎಂದು ಭಾವಿಸಿರಲಿಲ್ಲ. ನಮ್ಮ ತಂದೆಗೆ ನನ್ನನ್ನು ಕ್ರಿಕೆಟ್‌ ಆಟಗಾರನನ್ನಾಗಿ ಬೆಳೆಸಲು ಕೋಚ್‌ ಒಬ್ಬರಿಂದ ತರಬೇತಿ ಕೊಡಿಸಿದ್ದರು ಎಂದು ಕುಲದೀಪ್‌ ತನ್ನ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದಾರೆ. 

‘ನಾನು ವೇಗದ ಬೌಲರ್‌ ಆಗಬೇಕೆಂದು ಬಯಸಿದ್ದೆ. ಆದರೆ ನಮ್ಮ ಕೋಚ್‌ ನನ್ನನ್ನು ಸ್ಪಿನ್ನರ್‌ ಆಗಿ ತಯಾರು ಮಾಡಿದರು’ ಎಂದು ಕುಲದೀಪ್‌ ಹೇಳಿದ್ದಾರೆ. 

‘ನನ್ನ ಕೌಶಲಗಳಿಗೆ ನಾನು ಬದ್ಧನಾಗಿದೆ. ಇದರಿಂದ ಯಶಸ್ಸನ್ನು ಕಂಡಿದ್ದೇನೆ. ಹಾಗಾಗಿ ಮುಂದಿನ ದಿನಗಳಲ್ಲಿ ಆಟಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಕಠಿಣ ಅಭ್ಯಾಸ ನಡೆಸುತ್ತೇನೆ’ ಎಂದಿದ್ದಾರೆ.

ನ. 16ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿಗೆ ಕುಲದೀಪ್‌ ಆಯ್ಕೆಯಾಗಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.