ಗುರುವಾರ , ಫೆಬ್ರವರಿ 25, 2021
29 °C

ನಟನಾದ ಅನಾಥ ಸೇಲ್ಸ್‌ಮನ್

ವಿಶಾಖ ಎನ್. Updated:

ಅಕ್ಷರ ಗಾತ್ರ : | |

ನಟನಾದ ಅನಾಥ ಸೇಲ್ಸ್‌ಮನ್

ಮಹಾರಾಷ್ಟ್ರದ ಬೋರಿವಲೀಯಿಂದ ಬಾಂದ್ರಾಗೆ ಸಾಗುವ ಬಸ್‌ಗಳಿಗೆ ಒಬ್ಬ ಸೇಲ್ಸ್‌ಮನ್ ಹತ್ತುತ್ತಿದ್ದ. ಮೂವತ್ತೆರಡು ವರ್ಷಗಳ ಹಿಂದಿನ ಮಾತು ಇದು. ಆಗ ಸೇಲ್ಸ್‌ಮನ್‌ಗೆ ಹದಿನೇಳು ವರ್ಷ ವಯಸ್ಸು. ಕೆಲವು ಬಣ್ಣಗಳ ಲಿಪ್‌ಸ್ಟಿಕ್ ಗಳನ್ನು ಹೊರತೆಗೆದು ಬಸ್‌ನಲ್ಲಿ ಇರುತ್ತಿದ್ದ ಕನಸು ಕಂಗಳ ಹುಡುಗಿಯರಿಗೆ ಮಾರುತ್ತಿದ್ದ. ಅವನ ಆತ್ಮವಿಶ್ವಾಸದ ಮಾತಿನಿಂದಲೇ ಎಷ್ಟೋ ಲಲನೆಯರು ಲಿಪ್‌ಸ್ಟಿಕ್ ಖರೀದಿಸುತ್ತಿದ್ದರು. ಅದಕ್ಕೆ ಮೂರು ವರ್ಷಗಳ ಹಿಂದೆಯಷ್ಟೇ ಅವನು ಅನಾಥನಾಗಿದ್ದ. ಅಪ್ಪನೂ ಇಲ್ಲ, ಅಮ್ಮನೂ ಇಲ್ಲದ ಸ್ಥಿತಿ.

ಮೊನ್ನೆ ‘ಗೋಲ್‌ಮಾಲ್’ ಸರಣಿ ಚಿತ್ರದ ಪೋಸ್ಟರ್ ಮೇಲೆ ನಗುನಗುತ್ತಾ ಇದ್ದ ನಟ ಅರ್ಷದ್ ವಾರ್ಸಿ ಅವರನ್ನು ಕಂಡಾಗ, ಅವರದ್ದೇ ಬದುಕಿನ ಈ ಹಳೆಯ ಅಧ್ಯಾಯ ನೆನಪಾಯಿತು.

ಕಾಸ್ಮೆಟಿಕ್ ಕಂಪೆನಿಯ ಸೇಲ್ಸ್‌ಮನ್ ಆಗಿ ತುತ್ತಿನ ಚೀಲ ತುಂಬಿಕೊಳ್ಳಲು ಹೆಣಗಾಡಿದ್ದ ಉತ್ಸಾಹದ ಬುಗ್ಗೆಯಂಥ ವ್ಯಕ್ತಿ, ಚಿತ್ರನಟನಾಗಿ ಉಳಿಯಲು ಪಟ್ಟ ಪಡಿಪಾಟಲು ಒಂದೆರಡಲ್ಲ.

ನಾಸಿಕ್‌ನ ಬೋರ್ಡಿಂಗ್ ಶಾಲೆಯಲ್ಲಿ ಕಲಿತ ಅರ್ಷದ್ ಚಿಕ್ಕಂದಿನಿಂದ ನೃತ್ಯಾಸಕ್ತ. ಅಕ್ಬರ್ ಸಮಿ ನೃತ್ಯ ತಂಡ ಸೇರಿಕೊಂಡರೆ ಸಾವಿರ ರೂಪಾಯಿ ಸಿಗುತ್ತದೆಂಬ ಆಮಿಷ 1991ರಲ್ಲಿ ದೊಡ್ಡದಾಗಿಯೇ ಕಂಡಿತ್ತು. ಲಿಪ್‌ಸ್ಟಿಕ್‌ಗಳಿದ್ದ ಚೀಲ ಪಕ್ಕಕ್ಕಿಟ್ಟು ಕುಣಿಯಲು ಹೊರಟರು. ಇಂಡಿಯನ್ ಡಾನ್ಸ್ ಚಾಂಪಿಯನ್‌ಷಿಪ್ ಗೆದ್ದಿದ್ದೇ ಹುಮ್ಮಸ್ಸು ಹೆಚ್ಚಾಯಿತು. ಲಂಡನ್‌ನಲ್ಲಿ ಮಾಡರ್ನ್ ಜಾಸ್ ವಿಶ್ವ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ತಂಡಕ್ಕೆ ಮೊದಲ ಸ್ಥಾನ ದಕ್ಕಿಸಿ ಕೊಟ್ಟಮೇಲೆ ಭವಿಷ್ಯ ಬದಲಾಗುವ ಸೂಚನೆ ಸಿಕ್ಕಿದ್ದು.

ಆಪ್ತೇಷ್ಟರ ಸಹಾಯ ಪಡೆದು ‘ಆಸಮ್’ ಎಂಬ ನೃತ್ಯಶಾಲೆ ತೆರೆದರು. ಅದು ಬಲು ಬೇಗ ಪ್ರತಿಷ್ಠಿತವಾಯಿತು. ಅಲ್ಲಿ ಕಲಿತರೆ ಮೇಲೆ ಬರಬಹುದು ಎಂದು ಮುಂಬೈನ ಯುವಕ-ಯುವತಿಯರು ಮಾತನಾಡತೊಡಗುವಷ್ಟು ಅದು ಜನಪ್ರಿಯವಾಯಿತು. ಕೇವಲ ಶಾಲೆಯಲ್ಲಷ್ಟೇ ಅಲ್ಲದೆ ಇಂಗ್ಲಿಷ್ ರಂಗ ತಂಡಗಳಿಗೂ ಅರ್ಷದ್ ನೃತ್ಯ ಸಂಯೋಜನೆ ಮಾಡುತ್ತಿದ್ದರು. ನೃತ್ಯ ನಾಟಕಗಳಲ್ಲಿ ಅವರ ರುಜು ಎದ್ದು ಕಾಣುತ್ತಿತ್ತು.

ರಂಗತಂಡಗಳಿಗೂ ಬಾಲಿವುಡ್‌ಗೂ ಸಂಬಂಧವಿತ್ತಲ್ಲ; ಅವಕಾಶ ಅವರನ್ನು ಹುಡುಕಿಕೊಂಡು ಬಂತು. ಮೊದಲು ಅರ್ಷದ್ ಪಳಗಿದ್ದು ನಿರ್ದೇಶಕ ಮಹೇಶ್ ಭಟ್ ಗರಡಿಯಲ್ಲಿ. ನಿರ್ದೇಶನದ ಪಟ್ಟುಗಳನ್ನು ಕಲಿತ ಅವರಿಗೆ ನೃತ್ಯ ಸಂಯೋಜನೆ ಮಾಡುವ ಅವಕಾಶ ಸಿಕ್ಕಿತು. ಬೋನಿ ಕಪೂರ್ ನಿರ್ಮಾಣದ ‘ರೂಪ್ ಕಿ ರಾಣಿ, ಚೋರೋಂ ಕಾ ರಾಜಾ’ ಹಿಂದಿ ಚಿತ್ರದ ಶೀರ್ಷಿಕೆ ಗೀತೆಗೆ ಅರ್ಷದ್ ನೃತ್ಯ ಸಂಯೋಜಿಸಿದರು.

ತುತ್ತಿನ ಚೀಲ ತುಂಬಿಸಿಕೊಳ್ಳುವ ಹೊತ್ತಿಗೆ ನಟನಾಗುವ ಭಾಗ್ಯ ಹುಡುಕಿಕೊಂಡು ಬಂತು. ಅಮಿತಾಭ್ ಬಚ್ಚನ್ ಪ್ರಾರಂಭಿಸಿದ ನಿರ್ಮಾಣ ಕಂಪೆನಿ ‘ಎಬಿಸಿಎಲ್’ ಹೊಸಬರನ್ನು ಹಾಕಿಕೊಂಡು ‘ತೇರೆ ಮೇರೆ ಸಪ್ನೆ’ ಸಿನಿಮಾ ಮಾಡಿತು. ಅದರ ಇಬ್ಬರು ನಾಯಕರಲ್ಲಿ ಅರ್ಷದ್ ಕೂಡ ಒಬ್ಬರು. ಅವರ ಅಭಿನಯ ಹಾಗೂ ನೃತ್ಯ ಸಾಮರ್ಥ್ಯಕ್ಕೆ ಮೆಚ್ಚುಗೆಗಳು ವ್ಯಕ್ತವಾದವು. ನಟಿಸಲು ಕೆಲವು ಚಿತ್ರಗಳು ಸಿಕ್ಕವು. ಆದರೆ, ಎಲ್ಲವೂ ಸೋತವು.

ಎಂಟಿವಿ ನಿರೂಪಕಿ ಮರಿಯಾ ಅವರನ್ನು ಮದುವೆಯಾದ ನಂತರ ಅರ್ಷದ್ ಅವರಿಗೆ ಕಷ್ಟಗಳ ಸರಮಾಲೆ ಎದುರಾಯಿತು. ಅವರಿಗೆ ಸಿನಿಮಾ ಅವಕಾಶಗಳು ಸಿಗಲಿಲ್ಲ. ಯಾವುದ್ಯಾವುದೋ ಕೆಲಸಗಳನ್ನು ಮಾಡಬೇಕಾಯಿತು. ಹೆಂಡತಿ ಕೈಲಿ ಕೆಲಸ ಇದ್ದುದರಿಂದ ಬಚಾವ್. ಪತ್ನಿಯೇ ಮನೆ ನಿಭಾಯಿಸುತ್ತಿದ್ದ ಕುರಿತು ಮೂದಲಿಕೆಗಳು ತೂರಿಬಂದರೂ ತಲೆಕೆಡಿಸಿಕೊಳ್ಳಲಿಲ್ಲ. ಆಗೀಗ ಅಭಿನಯಿಸಿದ ‘ಸೆಹರ್’, ‘ಕಾಬೂಲ್ ಎಕ್ಸ್ ಪ್ರೆಸ್’ ತರಹದ ಚಿತ್ರಗಳೂ ಬ್ರೇಕ್ ಕೊಡಲಿಲ್ಲ. ಆ ಕಾಲಘಟ್ಟದಲ್ಲಿ ಬೆಳ್ಳಿಮಿಂಚಿನಂತೆ ಒದಗಿಬಂದದ್ದು ಸರ್ಕ್ಯೂಟ್ ಪಾತ್ರ. ‘ಮುನ್ನಾಭಾಯಿ ಎಂಬಿಬಿಎಸ್’ ಚಿತ್ರದ ಆ ಪಾತ್ರವನ್ನು ಅರ್ಷದ್ ಅನುಭವಿಸಿದರು. ಆಮೇಲೆ ಅವರಿಗೆ ಶುಕ್ರದೆಸೆ ಶುರುವಾಯಿತು. ‘ಜಾಲಿ ಎಲ್ಎಲ್‌ಬಿ’ ಏಕ ನಾಯಕನಾಗಿ ಮತ್ತೆ ಅವರು ಛಾಪು ಮೂಡಿಸಿದ ಸಿನಿಮಾ.

ಇಷ್ಟೆಲ್ಲ ಏರಿಳಿತಗಳ ಹಾದಿ ಸವೆಸಿರುವ ಅರ್ಷದ್ ನಟ, ನಿರ್ಮಾಪಕ, ಟಿ.ವಿ. ಕಾರ್ಯಕ್ರಮ ನಿರೂಪಕ, ನೃತ್ಯ ನಿರ್ದೇಶಕ ಎಲ್ಲವೂ ಹೌದು. ಅವರಿಗೀಗ 49 ವರ್ಷ ವಯಸ್ಸು.

‘ಬಾಲಿವುಡ್‌ನಲ್ಲಿ ದೀರ್ಘ ಕಾಲದ ನಂತರ ಎರಡನೇ ಜನ್ಮ ಪಡೆದ ಎರಡನೇ ನಟ ನಾನು ಎಂದು ಭಾವಿಸಿರುವೆ. ಮೊದಲನೆಯವರು ಅಮಿತಾಭ್ ಬಚ್ಚನ್’- ಅರ್ಷದ್ ಅವರ ಈ ಮಾತಿನಲ್ಲಿ ತೂಕವಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.