7

ಬಾವಿಯಲ್ಲಿ ಬಿದ್ದ ಜಾಣ!

Published:
Updated:

ಮಾನವ ಇತಿಹಾಸದಲ್ಲಿ ಗ್ರೀಕ್‌ ಸಂಸ್ಕೃತಿಗೆ ಮಹತ್ವದ ಸ್ಥಾನವಿದೆ. ವಿಶ್ವದ ಪ್ರಾಚೀನ ಸಂಸ್ಕೃತಿಗೆ ಮಾತ್ರವಲ್ಲದೆ, ಇಂದಿನ ನಮ್ಮ ಜನಜೀವನದ ಮೇಲೂ ಅದರ ಪ್ರಭಾವವನ್ನು ಕಾಣಬಹುದು. ಅದರಲ್ಲೂ ಪಾಶ್ಚಾತ್ಯರ ಚಿಂತನೆ, ಕಲೆ, ಧರ್ಮ, ಸಾಹಿತ್ಯಗಳ ಮೇಲೆ ಅದರ ಪ್ರಭಾವ ಹೆಚ್ಚು. ಖ್ಯಾತ ಚಿಂತಕ, ಗಣಿತಜ್ಞ ಬರ್ಟ್ರಂಡ್‌ ರಸಲ್‌ ರಚಿತ ಪಾಶ್ಚಾತ್ಯ ತತ್ತ್ವಶಾಸ್ತ್ರದ ಇತಿಹಾಸವನ್ನು ಕುರಿತ ಗ್ರಂಥ ವಿಶ್ವಮನ್ನಣೆಯನ್ನು ಪಡೆದಿದೆಯಷ್ಟೆ (History of Western Philosophy). ಅದರ ಮೊದಲ ಅಧ್ಯಾಯ ‘ಗ್ರೀಕ್‌ ಸಂಸ್ಕೃತಿ’ಗೆ ಮೀಸಲಾಗಿದೆ. ಅದರ ಆರಂಭದ ಸಾಲುಗಳು ಗ್ರೀಕ್‌ ಸಂಸ್ಕೃತಿಯ ಹೆಚ್ಚುಗಾರಿಕೆಯನ್ನು ಚೆನ್ನಾಗಿ ಹೇಳಿವೆ:

‘In all history, nothing is so surprising or so difficult to account for as the sudden rise of civilization in Greece’.

‘ಗ್ರೀಕ್‌ ಸಂಸ್ಕೃತಿಗೆ ಒಮ್ಮೆಲೆ ಒದಗಿದ ಉತ್ಕರ್ಷ ಇತಿಹಾಸದ ಅತ್ಯಂತ ಅಚ್ಚರಿಯ ವಿದ್ಯಮಾನ; ಅಥವಾ ಈ ಉತ್ಕರ್ಷಕ್ಕೆ ಕಾರಣವಾದ ವಿವರಗಳನ್ನು ಪತ್ತೆ ಹಚ್ಚುವುದು ಇತಿಹಾಸದಲ್ಲೇ ಅತ್ಯಂತ ಕಷ್ಟಕರವಾದ ಸಂಗತಿ.’ ಇದು ರಸಲ್ ಅವರ ಮಾತಿನ ನಿಲುವು.

ಗ್ರೀಕರು ನಾಗರಿಕತೆಯಲ್ಲಿ ಸಾಧಿಸಿದ್ದ ಸಿದ್ಧಿಯಿಂದ ಅವರು ನಮಗೆ ಮುಖ್ಯರಲ್ಲ; ಆ ಹೊತ್ತಿಗೇ ಅಕ್ಕಪಕ್ಕದ ಹಲವು ಜನಾಂಗಗಳು ನಾಗರಿಕತೆಯಲ್ಲಿ ಮುಂದುವರೆದಿದ್ದರು. ಈಜಿಪ್ಟ್‌, ಮೆಸೊಪೊಟೋಮಿಯಾ ಮುಂತಾದ ದೇಶಗಳಲ್ಲಿ ನಾಗರಿಕತೆಯ ಅಂಶಗಳು ನೆಲೆಗೊಂಡಿದ್ದವು. ಆದರೆ ಈ ನಾಗರಿಕತೆಗಳಲ್ಲಿ ಹಲವು ಕೊರತೆಗಳಿದ್ದವು. ಅವನ್ನು ತುಂಬಿದ್ದು ಮಾತ್ರ ಗ್ರೀಕರೇ – ಎನ್ನುವುದು ರಸಲ್‌ ಅವರ ಮಾತು. ಗ್ರೀಕರು ಕಲೆ–ಸಾಹಿತ್ಯಗಳಲ್ಲಿ ಸಾಧಿಸಿದ್ದುದನ್ನು ಇವರೆಲ್ಲರೂ ಸಾಧಿಸಿದ್ದರು, ಹೌದು. ಆದರೆ ಬೌದ್ಧಿಕ ಪ್ರಪಂಚದಲ್ಲಿ ಗ್ರೀಕರು ಸಾಧಿಸಿದ್ದುದು ಅಪೂರ್ವವಾದುದು. ಗಣಿತ, ವಿಜ್ಞಾನ ಮತ್ತು ತತ್ತ್ವಶಾಸ್ತ್ರವನ್ನು ಅವರು ‘ಕಂಡುಹಿಡಿದದ್ದು’ ಅನನ್ಯ ಸಾಧನೆ. ಮಾತ್ರವಲ್ಲ, ಇತಿಹಾಸ ರಚನೆಯನ್ನೂ ಆರಂಭಿಸಿದವರು ಅವರು. ನಿಸರ್ಗದ ವಿದ್ಯಮಾನಗಳ ಹಿಂದಿರುವ ತಾತ್ವಿಕತೆಯ ಬಗ್ಗೆಯೂ ಚಿಂತನ ನಡೆಸಿದರು. ಈಜಿಪ್ಟ್‌ ಮತ್ತು ಬ್ಯಾಬಿಲೋನಿಯಾಗಳಲ್ಲಿ ಅಂಕಗಣಿತ ಮತ್ತು ರೇಖಾಗಣಿತದಂಥವು ಇದ್ದವಾದರೂ ಅವಕ್ಕೆ ವೈಜ್ಞಾನಿಕ ತಳಹದಿಯನ್ನು ಒದಗಿಸಿದವರು ಮಾತ್ರ ಗ್ರೀಕರೇ– ಎನ್ನುವುದು ರಸಲ್‌ ಅವರ ವಾದ.

ಗ್ರೀಕರ ಮೊದಲ ತತ್ತ್ವಶಾಸ್ತ್ರಜ್ಞ ಎಂದರೆ ಥೇಲಿಸ್‌. ಅವನು ಅಯೋಮಿಯಾಗೆ ಸೇರಿದ ಮಿಲೆಟಸ್‌ ಪಟ್ಟಣಕ್ಕೆ ಸೇರಿದವನು. ಅವನು ಕ್ರಿ.ಪೂ. 624ರಲ್ಲಿ ಜನಿಸಿ, ಕ್ರಿ.ಪೂ. 550ರಲ್ಲಿ ತೀರಿಕೊಂಡ. ಅವನು ಸೂಚಿಸಿದ ಸೂರ್ಯಗ್ರಹಣದ ಕಾಲವನ್ನು ಆಧರಿಸಿ ವಿದ್ವಾಂಸರು ಈ ನಿರ್ಧಾರಕ್ಕೆ ಬರುತ್ತಾರೆ. ಗ್ರೀಸಿನ ಏಳು ಮಂದಿ ಜ್ಞಾನಿಗಳಲ್ಲಿ ಇವನೂ ಒಬ್ಬ ಎಂಬ ಎಣಿಕೆಯಿದೆ. ತುಂಬ ತಿಳಿವಳಿಕೆಯುಳ್ಳವನು ಎಂಬ ಪ್ರಶಂಸೆಗೆ ಪಾತ್ರನಾಗಿದ್ದ ಥೇಲಿಸ್‌ ಬಗ್ಗೆ ಕೆಲವು ಕಥೆಗಳೂ ಪ್ರಚಲಿತದಲ್ಲಿದ್ದವೆಂದು ತಿಳಿದುಬರುತ್ತದೆ. ಅವನು ಒಮ್ಮೆ ನಕ್ಷತ್ರಗಳನ್ನು ನೋಡುತ್ತ, ಅವುಗಳ ಬಗ್ಗೆಯೇ ಆಲೋಚಿಸುತ್ತ, ಬಾವಿಯೊಂದರಲ್ಲಿ ಬಿದ್ದನಂತೆ. ಇಡಿಯ ಸೃಷ್ಟಿಗೇ ಮೂಲ ಎಂದರೆ ನೀರು – ಎನ್ನುವುದು ಅವನ ಪ್ರಧಾನ ಸಿದ್ಧಾಂತ.

-ಸುಜನ್‌

ನಿಮ್ಮ ಅನಿಸಿಕೆಗಳನ್ನು ನಮಗೆ ಕಳುಹಿಸಿ. ವಿಳಾಸ: ಸಂಪಾದಕರು, ಪ್ರಜಾವಾಣಿ, ಅರಿವು ವಿಭಾಗ, ನಂ. 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು – 560001 email: arivu@prajavani.co.in.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry