7

ವರ್ಷಾಂತ್ಯದ ‘ಚಾಲೆಂಜ್‌’

Published:
Updated:
ವರ್ಷಾಂತ್ಯದ ‘ಚಾಲೆಂಜ್‌’

ಹೇಶ್ ಭೂಪತಿ ಅವರ ನೇತೃತ್ವದ ಭಾರತ ತಂಡ ಎದುರಾಳಿ ಉಸ್ಬೆಕಿಸ್ತಾನವನ್ನು ಡೇವಿಸ್ ಕಪ್‌ ಏಷ್ಯಾ ಒಷಿನಿಯಾ ಗುಂಪು–1ರ ಪಂದ್ಯಗಳಲ್ಲಿ ನಿರಾಯಾಸವಾಗಿ ಮಣಿಸಿದ ರೋಚಕ ಕ್ಷಣಗಳ ನೆನಪು ಇನ್ನೂ ಹಸಿರಾಗಿಯೇ ಇದೆ. ಆರು ತಿಂಗಳ ಹಿಂದೆ ಆ ರೋಚಕ ಪಂದ್ಯಗಳಿಗೆ ವೇದಿಕೆಯಾದ ಬೆಂಗಳೂರಿನ ರಾಜ್ಯ ಲಾನ್‌ ಟೆನಿಸ್ ಸಂಸ್ಥೆಯ ಅಂಗಣ ಮತ್ತೊಂದು ಭಾರಿ ಹಣಾಹಣಿಗೆ ಸಜ್ಜಾಗಿದೆ.

ಈ ವರ್ಷದ ಏಪ್ರಿಲ್‌ನಲ್ಲಿ ನಡೆದ ಡೇವಿಸ್ ಕಪ್‌ ಪಂದ್ಯಗಳಲ್ಲಿ ಭಾರತದ ರಾಮ್‌ಕುಮಾರ್ ರಾಮನಾಥನ್‌ ಮತ್ತು ಪ್ರಜ್ಞೇಶ್‌ ಗುನ್ನೇಶ್ವರನ್‌ ಸಿಂಗಲ್ಸ್‌ನಲ್ಲಿ, ರೋಹನ್ ಬೋಪಣ್ಣ ಮತ್ತು ಶ್ರೀರಾಮ್ ಬಾಲಾಜಿ ಜೋಡಿ ಡಬಲ್ಸ್‌ನಲ್ಲಿ ಮಿಂಚಿನ ಆಟ ಆಡಿದ್ದರು. ಈ ಎಲ್ಲ ಆಟಗಾರರ ಜೊತೆ ಈ ಹಿಂದೆ ಜೂನಿಯರ್ ವಿಭಾಗದಲ್ಲಿ ಅಗ್ರ ಕ್ರಮಾಂಕಕ್ಕೆ ಏರಿ ಸುದ್ದಿಯಾಗಿದ್ದ ಯೂಕಿ ಭಾಂಬ್ರಿ, ಒಲಿಂಪಿಯನ್ ವಿಷ್ಣುವರ್ಧನ್‌, ಈಚೆಗಷ್ಟೇ ಜೀವನಶ್ರೇಷ್ಠ 50ನೇ ರ‍್ಯಾಂಕಿಂಗ್‌ ಮೂಲಕ ಗಮನ ಸೆಳೆದಿದ್ದ ದಿವಿಜ್ ಶರಣ್‌, ಈಚಿನ ದಿನಗಳಲ್ಲಿ ಟೆನಿಸ್‌ ಲೋಕದಲ್ಲಿ ಹೆಸರು ಮಾಡುತ್ತಿರುವ ಸುಮಿತ್ ನಗಾಲ್, ಸಾಕೇತ್ ಮೈನೇನಿ, ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್ ಅಪ್ ಆಗಿದ್ದ ಮೈಸೂರಿನ ಸೂರಜ್‌ ಪ್ರಭೋದ್ ಮುಂತಾದವರು ಈಗ ಉದ್ಯಾನ ನಗರಿಗೆ ಬಂದಿಳಿದಿದ್ದಾರೆ.

ನವೆಂಬರ್‌ 20ರಿಂದ 25ರ ವರೆಗೆ ರಾಜ್ಯ ಲಾನ್ ಟೆನಿಸ್ ಸಂಸ್ಥೆ ಅಂಗಣದಲ್ಲಿ ನಡೆಯಲಿರುವ ಬೆಂಗಳೂರು ಓಪನ್ ಟೆನಿಸ್‌ನಲ್ಲಿ ಮಿಂಚುವ ಹುಮ್ಮಸ್ಸಿನಲ್ಲಿದ್ದಾರೆ ಇವರು. ಭಾರತದ ಈ ಆಟಗಾರರೊಂದಿಗೆ ಟೆನಿಸ್ ಪ್ರಿಯರು ಸ್ಲೊವಾಕಿಯಾದ ಬ್ಲಾಜ್ ಕಾವ್ಸಿಕ್‌, ಮಾಲ್ಡೋವಾದ ರಾಡು ಅಲ್ಬೋಟ್‌ ಮುಂತಾದವರು ಕೂಡ ಹಸಿರು ಅಂಗಣದಲ್ಲಿ ‘ದೂಳೆಬ್ಬಿಸಲು’ ಸಜ್ಜಾಗಿದ್ದಾರೆ.

ವಿಲಿಯಮ್ಸ್ ಸಹೋದರಿಯರು ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದ ಅನೇಕ ಟೆನಿಸ್ ತಾರೆಗಳನ್ನು ಬೆಂಗಳೂರು ಅಂಗಣದಲ್ಲಿ ಆಡಿಸಿದ ಕೀರ್ತಿ ಹೊಂದಿರುವ ರಾಜ್ಯ ಟೆನಿಸ್ ಸಂಸ್ಥೆ ಎರಡು ವರ್ಷಗಳ ನಂತರ ಬೆಂಗಳೂರು ಓಪನ್ ಆಯೋಜಿಸುತ್ತಿದೆ. ವಿಯೆಟ್ನಾಂ, ಚೀನಾ ಮತ್ತು ಪುಣೆಯಲ್ಲಿ ನಡೆದ ಎಟಿಪಿ ಟೂರ್‌ ನಂತರ ಇದೀಗ ಟೆನಿಸ್ ಪ್ರಿಯರ ದೃಷ್ಟಿ ಬೆಂಗಳೂರಿನತ್ತ ನೆಟ್ಟಿದೆ. ವರ್ಷದ ಕೊನೆಯ ಮಹತ್ವದ ಚಾಲೆಂಜರ್‌ ಟೂರ್ನಿ ಇದು ಆಗಿರುವುದರಿಂದ ಆಟಗಾರರು ಈ ಋತುವಿಗೆ ‘ಶುಭ’ ಹಾಡಲು ತುದಿಗಾಲಲ್ಲಿ ನಿಂತಿದ್ದಾರೆ.

ಏಷ್ಯಾದಲ್ಲಿ ಅತ್ಯಂತ ಹೆಚ್ಚು ಮೊತ್ತದ ಬಹುಮಾನ ಹೊಂದಿರುವ ಟೂರ್ನಿಯಲ್ಲಿ ಪ್ರಬಲ ಹಣಾಹಣಿ ಕಂಡುಬರುವ ವಿಶ್ವಾಸ ಸಂಘಟಕರದ್ದು. 20 ರಾಷ್ಟ್ರಗಳ ಒಟ್ಟು 32 ಆಟಗಾರರು ಪಾಲ್ಗೊಳ್ಳುವ ಟೂರ್ನಿಯಲ್ಲಿ 22 ಮಂದಿಗೆ ನೇರ ಪ್ರವೇಶ ಇದೆ. ಬ್ಲಾಜ್ ಕಾವ್ಸಿಕ್‌ ಅಗ್ರ ಶ್ರೇಯಾಂಕ ಹೊಂದಿದ್ದು ಅವರೊಂದಿಗೆ ರಾಡು ಅಲ್ಬೋಟ್ ಕೂಡ ನೇರ ಪ್ರವೇಶ ಗಿಟ್ಟಿಸಿದ್ದಾರೆ. ಭಾರತದ ಯೂಕಿ ಭಾಂಬ್ರಿ, ಪ್ರಜ್ಞೇಶ್ ಮತ್ತು ರಾಮ್‌ಕುಮಾರ್ ಕೂಡ ನೇರ ಪ್ರವೇಶ ಗಿಟ್ಟಿಸಿದವರ ಪಟ್ಟಿಯಲ್ಲಿದ್ದಾರೆ.

ಟೆನಿಸ್‌ ರಾಜಧಾನಿ ಬೆಂಗಳೂರು?

ಬೆಂಗಳೂರು ಈಗ ಭಾರತದ ಟೆನಿಸ್‌ ಭೂಪಟದಲ್ಲಿ ಹೆಮ್ಮೆಯ ‘ಅಂಗಣ’ವಾಗಿ ಗಮನ ಸೆಳೆದಿದೆ. ನಿರಂತರ ಟೆನಿಸ್ ಚಟುವಟಿಕೆ ನಡೆಯುತ್ತಿರುವ ಇಲ್ಲಿನ ರಾಜ್ಯ ಟೆನಿಸ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಟೂರ್ನಿಗಳಿಗೆ ಕೊರತೆ ಇಲ್ಲ. ಅಂತರರಾಷ್ಟ್ರೀಯ ಟೂರ್ನಿಗಳು ಆಗಾಗ ನಡೆಯುವ ಈ ಕ್ರೀಡಾಂಗಣ ಟೆನಿಸ್ ಜಗತ್ತಿನ ದಿಗ್ಗಜರ ಆಟಕ್ಕೆ ಸಾಕ್ಷಿಯಾಗಿದೆ. ಹೀಗಾಗಿ ಭಾರತ ಟೆನಿಸ್‌ನ ರಾಜಧಾನಿ ಎಂಬ ಹೆಸರು ಗಳಿಸುವತ್ತ ಉದ್ಯಾನ ನಗರಿ ಹೆಜ್ಜೆ ಇರಿಸಿದೆ.

2003ರಲ್ಲಿ ಎಟಿಪಿ ಚಾಲೆಂಜರ್ ಟೂರ್ನಿ 2006ರಿಂದ ನಿರಂತರ ಮೂರು ವರ್ಷ ಡಬ್ಲ್ಯುಟಿಎ ಟೂರ್ನಿ, ಹೊನಲು ಬೆಳಕಿನಲ್ಲಿ ನಡೆದ ಪಂದ್ಯಗಳು ಒಳಗೊಂಡಂತೆ ವಿವಿಧ ಡೇವಿಸ್ ಕಪ್‌ ಹಣಾಹಣಿ, ಐಟಿಎಫ್‌ ಫೀಚರ್ ಟೂರ್ನಿಗಳು ಹೀಗೆ ವಿವಿಧ ಟೂರ್ನಿಗಳಿಗೆ ಈ ಅಂಗಣ ಸಾಕ್ಷಿಯಾಗಿದೆ.

‘ನಿರಂತರ ಟೂರ್ನಿಗಳನ್ನು ಆಯೋಜಿಸುತ್ತ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೂ ಆತಿಥ್ಯ ವಹಿಸುತ್ತಿರುವುದು ಸಂತಸದ ವಿಷಯ. ಬೆಂಗಳೂರು ಈಗ ದೇಶದ ಟೆನಿಸ್‌ನ ಹೆಮ್ಮೆಯಾಗುತ್ತಿದೆ’ ಎಂದು ಡೇವಿಸ್ ಕಪ್‌ ತಂಡದ ಕೋಚ್‌ ಜೀಶನ್ ಅಲಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಏಳು ಸಾವಿರ ಪ್ರೇಕ್ಷಕರ ಆಸನ ಒಳಗೊಂಡ ರಾಜ್ಯ ಟೆನಿಸ್ ಸಂಸ್ಥೆಯ ಅಂಗಣದಲ್ಲಿ ಅಂತರರಾಷ್ಟ್ರೀಯ ಮಟ್ಟದ ಎಲ್ಲ ಸೌಲಭ್ಯಗಳು ಇವೆ. 1930ರಲ್ಲಿ ಮೈಸೂರು ರಾಜ್ಯ ಲಾನ್ ಟೆನಿಸ್ ಸಂಸ್ಥೆ ಎಂಬ ಹೆಸರಿನಲ್ಲಿ ಆರಂಭಗೊಂಡ ರಾಜ್ಯ ಸಂಸ್ಥೆಯನ್ನು 1952ರಲ್ಲಿ ನೋಂದಾಯಿಸಲಾಯಿತು. ಬೆಂಗಳೂರು ಟೆನಿಸ್‌ ಕ್ಲಬ್‌ನ ಆಶ್ರಯದಲ್ಲಿ 1970ರಲ್ಲಿ ನಡೆದ ಭಾರತ–ಆಸ್ಟ್ರೇಲಿಯಾ ಡೇವಿಸ್ ಕಪ್ ಪಂದ್ಯಗಳ ನಂತರ ಸಂಸ್ಥೆಯ ಚಿತ್ರಣ ಬದಲಾಯಿತು. ಸರ್ಕಾರದ ನೆರವಿನಿಂದ ಅಭಿವೃದ್ದಿ ಕೆಲಸಗಳು ಆರಂಭಗೊಂಡವು. 1976ರಲ್ಲಿ ಕ್ರೀಡಾಂಗಣ ಸಿದ್ಧಗೊಂಡಿತು. 2000ನೇ ಇಸವಿಯಲ್ಲಿ ಅಭಿವೃದ್ಧಿಯ ಶಕೆಯನ್ನು ಪೂರೈಸಿತು. ನಂತರ ನಿರಂತರ ಪಯಣ ಮುಂದುವರಿದಿದೆ.

***

ಇದು ಮಹತ್ವದ ಟೂರ್ನಿ

ಬಹುಮಾನ ಮೊತ್ತದ ದೃಷ್ಟಿಯಲ್ಲಿ ಇದು ದೊಡ್ಡ ಟೂರ್ನಿ. ಕಳೆದ ಬಾರಿ ನಡೆದ ಎಟಿಪಿ ಟೂರ್ನಿಗೆ ಹೋಲಿಸಿದರೆ ಈ ಸಲ ಬಹುಮಾನ ಮೊತ್ತವನ್ನು ದುಪ್ಪಟ್ಟು ಮಾಡಲು ಸಾಧ್ಯವಾಗಿದೆ. ಸರ್ಕಾರದ ಪ್ರವಾಸೋದ್ಯಮ ಇಲಾಖೆ ಕೈಜೋಡಿಸಿರುವುದರಿಂದ ಇದು ಸಾಧ್ಯವಾಗಿದೆ. ಪಂದ್ಯಗಳು ಮಧ್ಯಾಹ್ನ ಎರಡು ಗಂಟೆಯಿಂದ ರಾತ್ರಿ ಒಂಬತ್ತು ಗಂಟೆಯವರೆಗೆ ನಡೆಯಲಿವೆ. ಉದ್ಯೋಗಸ್ಥರಿಗೆ ಮತ್ತು ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ವೀಕ್ಷಿಸಲು ಅನುಕೂಲವಾಗುವಂತೆ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ಕರ್ನಾಟಕ ಲಾನ್ ಟೆನಿಸ್ ಸಂಸ್ಥೆಯ ಅಂಗಣಗಳಿಗೆ ಹೊಸ ರೂಪ ನೀಡಲಾಗಿದ್ದು ಅತ್ಯುತ್ತಮ ಹಣಾಹಣಿ ನಡೆಯುವ ನಿರೀಕ್ಷೆ ಇದೆ. ಒಂದು ದಶಕದ ಹಿಂದೆ ವೀನಸ್‌ ವಿಲಿಯಮ್ಸ್‌, ಸೆರೆನಾ ವಿಲಿಯಮ್ಸ್ ಮುಂತಾದವರ ಆಟ ಕಂಡವರಿಗೆ ಈ ಬಾರಿ ವಿದೇಶ ಮತ್ತು ಭಾರತದ ಅತ್ಯುತ್ತಮ ಆಟಗಾರರನ್ನು ಹತ್ತಿರದಿಂದ ನೋಡುವ ಅವಕಾಶ ಲಭಿಸಿದೆ. ಟೂರ್ನಿ ಇಲ್ಲಿನ ಟೆನಿಸ್‌ಗೆ ಹೊಸ ಆಯಾಮ ನೀಡಲು ನೆರವಾಗುವ ಭರವಸೆ ಇದೆ.

–ಸುನಿಲ್ ಯಜಮಾನ್‌,ಟೂರ್ನಿ ನಿರ್ದೇಶಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry