7

ಮಾದಿಗ ಸಂಘಗಳಿಂದ ರಸ್ತೆ ತಡೆ

Published:
Updated:

ವಿಜಯಪುರ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿ ಮಾದಿಗ ಸಂಘಟನೆಗಳ ಪದಾಧಿಕಾರಿಗಳು ಮಂಗಳವಾರ ಇಲ್ಲಿಯ ರಾಷ್ಟ್ರೀಯ ಹೆದ್ದಾರಿ–7 ರಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಹೋಬಳಿಯ ವೆಂಕಟಗಿರಿಕೋಟೆ ಬಳಿ ರಾಷ್ಟ್ರೀಯ ಹೆದ್ದಾರಿಯನ್ನು ಮಾದಿಗ ದಂಡೋರ ಸಂಘಟನೆ, ಮಾದಾರ ಮಹಾಸಭಾ, ಅರುಂಧತಿ ಸೇವಾ ಸಮಿತಿ ಸೇರಿದಂತೆ ಹಲವಾರು ಮಾದಿಗ ಸಂಘಟನೆಗಳು ಅರ್ಧ ಗಂಟೆಗೂ ಹೆಚ್ಚುಕಾಲ ಬಂದ್ ಮಾಡಿದ್ದವು. ಹೈದರಾಬಾದ್ ನಿಂದ ಬೆಂಗಳೂರಿಗೆ ಸಂಚರಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಕಿ.ಮೀ.ಗೂ ಹೆಚ್ಚು ದೂರ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಹುರುಳಗುರ್ಕಿ, ಬುಳ್ಳಹಳ್ಳಿ, ಕೋರಮಂಗಲ, ದಂಡಿಗಾನಹಳ್ಳಿ, ವೆಂಕಟಗಿರಿಕೋಟೆ, ವಿಜಯಪುರ, ಹಾರೋಹಳ್ಳಿ ಸುತ್ತಲಿನ ಪ್ರದೇಶಗಳಿಂದ ಬಂದಿದ್ದ ಸಂಘಟನೆಗಳ ಸದಸ್ಯರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮಾಡಿದರು. ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಿ, ಅದನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಘೋಷಣೆ ಕೂಗಿದರು.

ಶಾಸಕ ನರೇಂದ್ರಸ್ವಾಮಿ ಅವರು ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಬಾರದು ಎಂದು ಅಡ್ಡಗಾಲಾಗಿದ್ದಾರೆ ಎಂದು ಆಕ್ಷೇಪಿಸಿ ಧಿಕ್ಕಾರ ಕೂಗಿದರು. ಅವರ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.

ಮಾದಿಗ ದಂಡೋರ ರಾಜ್ಯ ಘಟಕದ ಉಪಾಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ ಮಾತನಾಡಿ, ರಾಜ್ಯದಲ್ಲಿ ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ಆಯೋಗವನ್ನು ರಚನೆ ಮಾಡಿ ₹ 12 ಕೋಟಿ ವೆಚ್ಚದಲ್ಲಿ ಸಮೀಕ್ಷೆ ನಡೆಸಿದೆ. ಜನಸಂಖ್ಯಾಧಾರಿತವಾಗಿ ಮಾದಿಗ ಜನಾಂಗದವರು ಹೆಚ್ಚಾಗಿದ್ದಾರೆ ಎಂದು ವರದಿ ಹೇಳುತ್ತಿದೆ. ಈಗಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಜಾತಿವಾರು ಜನಗಣತಿ ನಡೆದಿದೆ ಎಂದರು.

ಮಾದಾರ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎಂ.ನಾರಾಯಣಸ್ವಾಮಿ ಮಾತನಾಡಿ, ‘ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚನೆ ಮಾಡಿರುವ ಸಂವಿಧಾನದ ಅಡಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ನಮಗೆ ಮೀಸಲಾತಿ ಕೊಡಿ ಎಂದು ಹಕ್ಕನ್ನು ನಾವು ಕೇಳುತ್ತಿದ್ದೇವೆ. ನ್ಯಾ.ಸದಾಶಿವ ಅವರೇ ತಮ್ಮ ವರದಿಯನ್ನು ಅನುಷ್ಠಾನಗೊಳಿಸಲು ಸಾಧ್ಯವಿಲ್ಲದಿದ್ದರೆ ವಾಪಸ್‌ ಕೊಡಿ ಎಂದು ಕೇಳುವ ಮಟ್ಟಕ್ಕೆ ರಾಜಕಾರಣಿಗಳು ನಡೆದುಕೊಳ್ಳುತ್ತಿದ್ದಾರೆ’ ಎಂದರು.

ಮುಖಂಡರಾದ ಮುದಗುರ್ಕಿ ಆಂಜಿನಪ್ಪ, ನಾರಾಯಣಸ್ವಾಮಿ, ಈರಪ್ಪ, ನರಸಿಂಹಮೂರ್ತಿ (ಭಾಷ), ವೆಂಕಟಗಿರಿಕೋಟೆ, ಚಿನ್ನಪ್ಪ, ಹಾರೋಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿರಾಜು, ಮಂಡಿಬೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್, ಮುನಿಯಪ್ಪ, ವಿಜಯಪುರ ವೇಣು, ಮುದುಗುರ್ಕಿ ಮೂರ್ತಿ, ವೆಂಕಟೇಶ್ ಪ್ರಭು, ರಾಘವ, ಭಾನು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry