7

ಪಿಂಚಣಿ ಹೆಚ್ಚಿಸಲು ನಿವೃತ್ತ ಕಾರ್ಮಿಕರ ಒತ್ತಾಯ

Published:
Updated:
ಪಿಂಚಣಿ ಹೆಚ್ಚಿಸಲು ನಿವೃತ್ತ ಕಾರ್ಮಿಕರ ಒತ್ತಾಯ

ಶಿವಮೊಗ್ಗ: ಪಿಂಚಣಿ ಹೆಚ್ಚಿಸುವಂತೆ ಆಗ್ರಹಿಸಿ ಭದ್ರಾವತಿಯ ವಿಐಎಸ್ಎಲ್ ಹಾಗೂ ಎಂಪಿಎಂ ಕಾರ್ಖಾನೆಗಳ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಸದಸ್ಯರು ನಗರಪಾಲಿಕೆ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಪಿಂಚಣಿದಾರರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಕೇಂದ್ರ ಕಾರ್ಮಿಕ ಸಚಿವ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಈಗಾಗಲೆ ಮನವಿ ಸಲ್ಲಿಸಲಾಗಿದೆ. ಹೈಕೋರ್ಟ್‌ನಲ್ಲೂ ಹಲವು ಪ್ರಕರಣ ದಾಖಲಾಗಿದೆ. ಸಚಿವರು ಕೋರ್ಟ್‌ ಆದೇಶವನ್ನು ಜಾರಿಗೊಳಿಸುವ ಆಶ್ವಾಸನೆ ನೀಡಿದ್ದಾರೆ. ಆದರೆ, ಭವಿಷ್ಯನಿಧಿ ಕಚೇರಿ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ದೂರಿದರು.

ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪನ್ನು ನೀಡಿದ್ದು, ಭವಿಷ್ಯನಿಧಿ ಪಿಂಚಣಿದಾರರಿಗೆ ಅವರ ಪೂರ್ಣ ವೇತನದಲ್ಲಿ ಪಿಂಚಣಿ ನಿಗದಿಪಡಿಸಬೇಕು. ಹೆಚ್ಚುವರಿ ಪಿಂಚಣಿ ಬಾಕಿ ನೀಡಬೇಕು ಎಂದು ತಿಳಿಸಿದೆ. ಈ ತೀರ್ಪಿನ ಅನ್ವಯ ಬಹುಪಾಲು ಪಿಂಚಣಿದಾರರಿಗೆ ಕನಿಷ್ಠ  ₹ 3ಸಾವಿರದಿಂದ ₹ 30ಸಾವಿರದವರೆಗೆ ಪಿಂಚಣಿ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

ಪಿಂಚಣಿದಾರರು 1995ರ ನವೆಂಬರ್‌ 16ರಿಂದ ತಮ್ಮ ನಿವೃತ್ತ ದಿನಾಂಕದವರೆಗೆ ಹೆಚ್ಚುವರಿ ವಂತಿಕೆಯನ್ನು ಬಡ್ಡಿ ಸಹಿತ ಪಿಂಚಣಿ ನಿಧಿಗೆ ಪಾವತಿ ಮಾಡಬೇಕು ಎಂದು ಭವಿಷ್ಯನಿಧಿ ಕೇಂದ್ರ ಕಚೇರಿ ಸುತ್ತೋಲೆ ಹೊರಡಿಸಿದೆ. ನ್ಯಾಯಾಲಯದ ಆದೇಶವು ಎಲ್ಲ ಪಿಂಚಣಿದಾರರಿಗೆ ಅನ್ವಯವಾಗುತ್ತದೆ ಎಂದು ತಿಳಿಸಿದೆ. ಆದರೆ ಪುನಃ ವಿಭಾಗೀಯ ಕಚೇರಿಗೆ ಮತ್ತೊಂದು ಸುತ್ತೋಲೆ ಕಳುಹಿಸಿ ವಿನಾಯಿತಿ ಹೊಂದಿದ ಕಾರ್ಖಾನೆಗಳಿಗೆ ಇದು ಅನ್ವಯವಾಗುವುದಿಲ್ಲ ಎಂದು ತಿಳಿಸಿದೆ. ಇದರಿಂದಾಗಿ ದೇಶದಾದ್ಯಂತ ಸುಮಾರು 10 ಲಕ್ಷ ಪಿಂಚಣಿದಾರರಿಗೆ ಅನ್ಯಾಯವಾಗಲಿದೆ ಎಂದು ದೂರಿದರು.

ಆದರೆ, ನ್ಯಾಯಾಲಯದ ಆದೇಶದಲ್ಲಿ ಈ ರೀತಿ ಯಾವುದೇ ಉಲ್ಲೇಖಗಳು ಇರುವುದಿಲ್ಲ. ಕೂಡಲೆ ಭವಿಷ್ಯನಿಧಿ ಪಿಂಚಣಿ ಹೆಚ್ಚಿಸಬೇಕು. ಪಿಂಚಣಿದಾರರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಕೇಂದ್ರ ಕಾರ್ಮಿಕ ಸಚಿವರ ಅಧ್ಯಕ್ಷತೆಯಲ್ಲಿ ಭವಿಷ್ಯ ನಿಧಿ ಸಂಸ್ಥೆ ಸಭೆ ನಡೆಸಬೇಕು. ಕೋರ್ಟ್‌ ಆದೇಶವನ್ನು ಜಾರಿಗೊಳಿಸಲು ತೀರ್ಮಾನ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಸಂಘದ ಪ್ರಮುಖರಾದ ನಾಗಭೂಷಣ್, ನರಸಿಂಹಯ್ಯ, ಎಸ್.ನರಸಿಂಹಾಚಾರ್, ಬಸವರಾಜ್, ಮರಿಯಪ್ಪ, ರಮೇಶ್‌, ಹನುಮಂತಪ್ಪ, ರಾಮಲಿಂಗಯ್ಯ, ಮಂಜುನಾಥ್‌ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry