7

ಅಕ್ಷರ ಮೆರವಣಿಗೆಯಲ್ಲಿ ಕನ್ನಡ ವೈಭವ

Published:
Updated:
ಅಕ್ಷರ ಮೆರವಣಿಗೆಯಲ್ಲಿ ಕನ್ನಡ ವೈಭವ

ಮೈಸೂರು: ಸಾಹಿತ್ಯದ ತೇರು ಸಾಂಸ್ಕೃತಿಕ ನಗರಿಯ ಬೀದಿಗಳಲ್ಲಿ ಸಾಗುತ್ತಿದ್ದರೆ ಎಲ್ಲೆಲ್ಲೂ ಕನ್ನಡದ್ದೇ ಧ್ಯಾನ, ಕನ್ನಡದ್ದೇ ಗರ್ಜನೆ. ಎಲ್ಲರ ಮನಸ್ಸು, ಹೃದಯಗಳಲ್ಲಿ ನುಡಿಜಾತ್ರೆಯ ಬಿಂಬ. ‘ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ’ ಎಂಬ ಉದ್ಘೋಷ.

83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ) ಅವರು ಆಸೀನರಾಗಿದ್ದ ಮಲ್ಲಿಗೆ ಹೂವಿ

ನಿಂದ ಅಲಂಕೃತವಾದ ರಥದ ತುಂಬಾ ಕನ್ನಡ ನಾಡುನುಡಿಯದ್ದೇ ಘಮಲು. ಕನ್ನಡದ ಶ್ರೀಮಂತಿಕೆಯ ಜೊತೆಗೆ ಸಾವಿರಾರು ದನಿಗಳಲ್ಲಿ ಕನ್ನಡದ ಕಹಳೆ ಮೊಳಗಿತು.

ವಿಶ್ವವಿಖ್ಯಾತ ಅರಮನೆಯ ಅಂಗಳದಿಂದ ಶುಕ್ರವಾರ ಬೆಳಿಗ್ಗೆ ಹೊರಟ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ ದಸರಾ ಮಹೋತ್ಸವದ ಜಂಬೂಸವಾರಿ ವೈಭವ ನೆನಪಿಸುವಂತಿತ್ತು. ರಥದಲ್ಲಿ ಪತ್ನಿ ನೀಲಾ ಪಾಟೀಲ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ ಆಸೀನರಾಗಿದ್ದರು.

ನಗರದ ಬೀದಿಗಳ ಇಕ್ಕೆಲಗಳಲ್ಲಿ ಸೇರಿದ್ದ ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಚಂಪಾ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಪ್ರೀತಿಯಿಂದ ಕೈಹಿಡಿದು ಸಿಹಿಮುತ್ತು ನೀಡಿದರು. ಕೆಲವರು ಶಾಲು ಹಾಕಿ ಅಭಿಮಾನ ಮೆರೆದರು. ಇನ್ನು ಕೆಲವರು ಬಂಡಾಯ ಸಾಹಿತಿಯ ಕೊರಳಿಗೆ ಹೂವಿನ ಹಾರ ಹಾಕಿ ಪುನೀತರಾದರು. ಅದಕ್ಕೆ ಪ್ರತಿಯಾಗಿ ಚಂಪಾ ಜನರತ್ತ ಕೈ ಬೀಸಿ ಕೃತಜ್ಞತೆ ಅರ್ಪಿಸಿದರು.

ಕುದುರೆ ಏರಿದ ಅಧ್ಯಕ್ಷ: ಕಸಾಪ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಕುದುರೆ ಏರಿ ಮೆರವಣಿಗೆಯಲ್ಲಿ ಸಾಗಿದರು. ಇನ್ನುಳಿದ 29 ಜಿಲ್ಲೆಗಳ ಅಧ್ಯಕ್ಷರು ಸಾರೋಟಿನಲ್ಲಿ ಬಂದರು. ಎತ್ತಿನ ಗಾಡಿಗಳು, ಟಾಂಗಾಗಳು ದೇಸಿ ಸೊಬಗು ತುಂಬಿದವು.

9,000 ವಿದ್ಯಾರ್ಥಿಗಳು ದೇಸಿ ಉಡುಗೆಯಲ್ಲಿ ಮಿಂಚಿದರು. 2,000 ಮಹಿಳೆಯರು, 56 ವಿವಿಧ ಕಲಾ ತಂಡಗಳು, 600 ಕಲಾವಿದರು ಭಾಗಿಯಾದರು. ಕನ್ನಡದ ಕಂಪು ಸೂಚಿಸುವ 15 ಸ್ತಬ್ಧಚಿತ್ರಗಳು ಗಮನ ಸೆಳೆದವು. ಸಾವಿರಾರು ಸಾಹಿತ್ಯಾಭಿಮಾನಿಗಳು 4.5 ಕಿ.ಮೀ ದೂರ ಸಾಗಿದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಅರಮನೆ ಅಂಗಳದಿಂದ ಪ್ರಧಾನ ವೇದಿಕೆ ಇರುವ ಮಹಾರಾಜ ಕಾಲೇಜು ಮೈದಾನದವರೆಗೆ ಕನ್ನಡ ಧ್ವಜಗಳ ಹಾರಾಟ ಬಾನೆತ್ತರಕ್ಕೆ ಚಾಚಿಕೊಂಡಿತು. ‘ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ’, ‘ಕನ್ನಡವೇ ಸತ್ಯ ಕನ್ನಡವೇ ನಿತ್ಯ’ ಗೀತೆಗಳು ಪ್ರತಿಧ್ವನಿಸಿದವು. ನೂರಾರು ಮಹಿಳೆಯರು ಕಲಶ ಹೊತ್ತು ನಡೆದರು. ಭುವನೇಶ್ವರಿ, ಅಕ್ಕಮಹಾದೇವಿ, ಕಿತ್ತೂರು ರಾಣಿಯ ವೇಷ ತೊಟ್ಟು ಮೆರವಣಿಗೆಯ ಆಕರ್ಷಣೆ ಹೆಚ್ಚಿಸಿದರು.

ಕಂಸಾಳೆ, ಡೊಳ್ಳು ಕುಣಿತ, ಪೂಜಾ ಕುಣಿತ, ಹುಲಿವೇಷ, ನಗಾರಿ, ನಂದಿಧ್ವಜ, ವೀರಭದ್ರನ ಕುಣಿತ, ಚರ್ಮವಾದ್ಯ, ನಾದಸ್ವರ, ಕೋಲಾಟ, ಆದಿವಾಸಿ

ಗಳ ನೃತ್ಯ, ವೀರಗಾಸೆ ಕಲಾ ತಂಡಗಳು ಸಾಂಸ್ಕೃತಿಕ ವೈಭವವನ್ನು ತೆರೆದಿಟ್ಟವು.

ದೇಗುಲ ಪ್ರವೇಶಿಸಲಿಲ್ಲ, ಪೇಟ ಧರಿಸಲಿಲ್ಲ...

ಮೆರವಣಿಗೆ ಆರಂಭಕ್ಕೂ ಮುನ್ನ ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹಾಗೂ ಕಸಾಪ ಅಧ್ಯಕ್ಷ ಮನು ಬಳಿಗಾರ ಪೂಜೆ ನೆರವೇರಿಸಿದರು. ಆಗ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಪಾಟೀಲರು ದೇಗುಲದೊಳಗೆ ಪ್ರವೇಶಿಸಲಿಲ್ಲ. ಮೈಸೂರು ಪೇಟ ಕೂಡ ಧರಿಸಲಿಲ್ಲ.

ಕನ್ನಡಿಗರಿಗೆ ಕೆಲಸ ಕೊಡಿ…

ಮೆರವಣಿಗೆಯಲ್ಲಿ ಪಾಲ್ಗೊಂಡ ವಿವಿಧ ಕನ್ನಡ ಸಂಘಟನೆಗಳು ದಾರಿಯುದ್ದಕ್ಕೂ ಕನ್ನಡ ಪ್ರೀತಿ ಮೆರೆಯುತ್ತಾ ಸಾಗಿದವು.

ಪ್ರಮುಖ ವೃತ್ತಗಳಲ್ಲಿ ಈ ಸಂಘಟನೆಗಳ ಸದಸ್ಯರು ಒಮ್ಮೆಲೇ ಪ್ರತಿಭಟನೆಗಿಳಿದು ‘ಕೊಡ್ಸಿ ಕೊಡ್ಸಿ ಕನ್ನಡಿಗರಿಗೆ ಕೆಲಸ ಕೊಡ್ಸಿ’ ಎಂದು ಘೋಷಣೆ ಕೂಗುತ್ತಿದ್ದರು.

ಮೈಕೊ ಕನ್ನಡ ಬಳಗ, ಎಚ್‌ಎಎಲ್‌ ಲಲಿತ ಕಲಾ ಸಂಘ, ಎಚ್‌ಎಎಲ್‌ ಹೆಲಿಕಾಪ್ಟರ್‌ ಕನ್ನಡ ಸಂಘಗಳು ಕನ್ನಡಿಗರ ಹಿತಕ್ಕಾಗಿ ಹಕ್ಕೊತ್ತಾಯ ಮಂಡಿಸಿದವು.

ಜೀವಮಾನದ ಅದ್ಭುತ ಕ್ಷಣ: ನೀಲಾ ಪಾಟೀಲ

‘ಜೀವಮಾನದ ಅದ್ಭುತ ಕ್ಷಣವಿದು. ಇಂಥ ಕ್ಷಣ ಮತ್ತೆಂದೂ ಬಾರದು. ಈ ಸಂತೋಷದ ಸವಿನೆನಪಿನಲ್ಲಿ ಇನ್ನು ಬದುಕು ಕಳೆಯಬಹುದು’

ಹೀಗೆಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದು ಚಂಪಾ ಅವರ ಪತ್ನಿ ನೀಲಾ ಪಾಟೀಲ. ಮೆರವಣಿಗೆಯಲ್ಲಿ ಅವರ ಪುತ್ರಿ ಮೀನಾ ಪಾಟೀಲ ಹಾಗೂ ಸಂಬಂಧಿಗಳು ಪಾಲ್ಗೊಂಡಿದ್ದರು.

ಮುಖ್ಯಾಂಶಗಳು

* ಸಮ್ಮೇಳನಾಧ್ಯಕ್ಷರ ವೈಭವದ ಮೆರವಣಿಗೆ

* ಮೆರವಣಿಗೆಯಲ್ಲಿ ಸಾಂಸ್ಕೃತಿಕ ಸಮಾಗಮ

* ಬಂಡಾಯ ಸಾಹಿತಿಗೆ ಕನ್ನಡ ಪ್ರೇಮಿಗಳಿಂದ ಆತ್ಮೀಯ ಸ್ವಾಗತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry