6
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ಭಕ್ತರ ಸೆಳೆವ ಗೊಡಚಿ ವೀರಭದ್ರೇಶ್ವರ ಕ್ಷೇತ್ರ

Published:
Updated:
ಭಕ್ತರ ಸೆಳೆವ ಗೊಡಚಿ ವೀರಭದ್ರೇಶ್ವರ ಕ್ಷೇತ್ರ

ರಾಮದುರ್ಗ ತಾಲ್ಲೂಕಿನ ಜಾಗೃತ ಕ್ಷೇತ್ರ, ಉತ್ತರ ಕರ್ನಾಟಕದ ಧರ್ಮಸ್ಥಳ ಎಂದೇ ಖ್ಯಾತಿ ಪಡೆದ ಗೊಡಚಿ ವೀರಭದ್ರೇಶ್ವರ ರಥೋತ್ಸವವು ಡಿ.3ರಂದು ವಿಜೃಂಭಣೆಯಿಂದ ನೆರವೇರಲಿದೆ. ಇದಕ್ಕೆ ಎರಡು ದಿನ ಮುಂಚಿತವಾಗಿ ಜಾತ್ರಾ ಮಹೋತ್ಸವ ಕಳೆಗಟ್ಟಲಿದೆ.

ನಂಬಿದವರ ಇಷ್ಟಾರ್ಥಗಳನ್ನು ಈಡೇರಿಸುವ ದೈವಾದಿ ಪುರುಷನೆಂದು ಪ್ರಸಿದ್ಧಿ ಪಡೆದು ಭಕ್ತರ ಮನದಲ್ಲಿ ಮನೆ ಮಾಡಿರುವ ವೀರಭದ್ರನ ಜಾತ್ರೆ ಈ ಭಾಗದಲ್ಲಿ ಖ್ಯಾತಿ ಪಡೆದಿದೆ. ದೇವಸ್ಥಾನದಲ್ಲಿ ನಿರಂತರ ಅನ್ನದಾಸೋಹ ನಡೆಸುತ್ತಿರುವುದು ವಿಶೇಷ.

ಡಿ. 3ರಂದು (ಹೊಸ್ತಿಲ ಹುಣ್ಣಿಮೆ) ಸಂಜೆ 5ಕ್ಕೆ ವೀರಭದ್ರೇಶ್ವರನ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಜರುಗಲಿದೆ. ಡಿ. 2ರ ಮಧ್ಯರಾತ್ರಿಯಿಂದಲೇ ಹನ್ನೊಂದು ಮಂದಿ ಶಾಸ್ತ್ರಿಗಳಿಂದ ವೀರಭದ್ರ ದೇವರು, ಭದ್ರಕಾಳಿ ಮಾತೆಗೆ ಮಹಾಮಸ್ತಕಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಅಮ್ಮನಿಗೆ ಕುಂಕುಮಾರ್ಚನೆ, ಮಹಾ ಮಂಗಳಾ ರತಿ ಕಾರ್ಯಕ್ರಮ ನೆರವೇರಲಿದೆ.

ಜಾತ್ರೆಯ ವಿಶೇಷತೆ: ಪ್ರತಿ ಜಾತ್ರೆಗಳಲ್ಲಿ ಒಂದಲ್ಲ ಒಂದು ವಿಶೇಷತೆ ಇರುತ್ತದೆ. ಇಲ್ಲಿ ಮಾತ್ರ ಬಳವೊಲು ಹಣ್ಣಿನ ವಿಶೇಷತೆ ಜಾತ್ರೆಯ ಖ್ಯಾತಿ ಇಮ್ಮಡಿಗೊಳಿಸಿದೆ. ಬೆಳವಲ ಹಣ್ಣಿನ ಜತೆಗೆ ಬೋರೆ, ಬಾಳೆ ಹಣ್ಣಿನ ವ್ಯಾಪಾರವೂ ಜೋರಾಗಿಯೇ ನಡೆಯುತ್ತದೆ. ಬೆಳವಲ ಹಣ್ಣಿನ ವಿಶೇಷತೆಯು ಯಾತ್ರಾರ್ಥಿಗಳನ್ನು ಆಕರ್ಷಿಸುತ್ತದೆ. ಜಾತ್ರೆಗೆ ಬರುವ ಪ್ರತಿಯೊಬ್ಬರೂ ಈ ಹಣ್ಣಿನ ಖರೀದಿಗೆ ಮುಂದಾಗುವುದು ಕಂಡುಬರುತ್ತದೆ.

ಜಾತ್ರಾ ಸಮಿತಿ ಹಾಗೂ ಗೊಡಚಿ ಗ್ರಾಮ ಪಂಚಾಯ್ತಿ ಭಕ್ತರ ಅನುಕೂಲಕ್ಕಾಗಿ ಸೌಲಭ್ಯ ಕಲ್ಪಿಸಿದೆ. ಗೊಡಚಿ ದೇವಸ್ಥಾನದ ಸುತ್ತಲೂ ವಸತಿಗೃಹ, ಕಲ್ಯಾಣಮಂಟಪ, ಸುಲಭ ಶೌಚಾಲಯ ಹಾಗೂ ಮಳಿಗೆಗಳನ್ನು ನಿರ್ಮಿಸಲಾಗಿದೆ. ಜಾತ್ರೆಯಂದು ಭಕ್ತರಿಗೆ ಸಿಹಿ ಊಟದ ವ್ಯವಸ್ಥೆಯನ್ನೂ ಮಾಡಲಾಗುತ್ತದೆ.

ಗೊಡಚಿಯ ಸುತ್ತಲಿನ ಭಕ್ತರು ಚಕ್ಕಡಿ, ಟ್ರ್ಯಾಕ್ಟರ್‌, ಟಂಟಂ, ಬೈಸಿಕಲ್‌, ಟ್ರಕ್‌ಗಳಲ್ಲಿ ಆಗಮಿಸಿ ದೇವಸ್ಥಾನದ ಮುಂದಿನ ಬಯಲಿನಲ್ಲಿ ಟೆಂಟ್‌ ಹಾಕಿಕೊಂಡು ಇದ್ದು, ಐದು ದಿನಗಳ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ದೂರದ ಜಿಲ್ಲೆಗಳು ಸೇರಿದಂತೆ ಪಕ್ಕದ ರಾಜ್ಯಗಳಿಂದಲೂ ಭಕ್ತರು ಬರುವುದು ವಿಶೇಷ.

ನೀರಿನ ಸೌಲಭ್ಯ ಕಲ್ಪಿಸಿ: ರಾಮದುರ್ಗ ಮತ್ತು ತೊರಗಲ್‌ ರಾಜಮನೆತನ ಪರಂಪರೆ ಹೊಂದಿವೆ. ಪ್ರಾಚೀನ ಸಂಸ್ಥಾನಿಕರ ಕಾಲದಲ್ಲಿ ಗೊಡಚಿ ಕ್ಷೇತ್ರವು ತೊರಗಲ್‌ನ ಶಿಂಧೆ ಮನೆತನದ ಒಡೆತನಕ್ಕೆ ಸೇರಿತ್ತು.

ಶಿಂಧೆ ಮನೆತನವು ಮರಾಠಿ ಸಂಸ್ಥಾನದವರಿಗೆ ಸೇರಿದ್ದರೂ, ಈ ಭಾಗದಲ್ಲಿ ಹೆಚ್ಚಾಗಿರುವ ಲಿಂಗಾಯತ ಸಮುದಾಯದವರ ಕುಲದೇವರು ಎನಿಸಿರುವ ವೀರಭದ್ರ ದೇವರಿಗೂ ಮಹತ್ವ ನೀಡಿ ದೇವಸ್ಥಾನದ ಉನ್ನತಿಗೆ ಶ್ರಮಿಸಿದ್ದಾರೆ. ಈಗಲೂ ಈ ಕ್ಷೇತ್ರದ ಅಭಿವೃದ್ಧಿ ಮತ್ತು ಜಾತ್ರೆ ಜವಾಬ್ದಾರಿಯನ್ನು ಶಿಂಧೆ ಮನೆತನದವರೇ ಹೆಚ್ಚಾಗಿ ನೋಡಿಕೊಳ್ಳುತ್ತಾರೆ.

‘ಹಿಂದೆ ಕ್ಷೇತ್ರದಲ್ಲಿ ಭಕ್ತರಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ಕೊರತೆಯಾಗಿ ತೊಂದರೆಯಾಗಿತ್ತು. ಈ ಬಾರಿಯಾದರೂ ಅಧಿಕಾರಿಗಳು ಇತ್ತ ಗಮನಹರಿಸಬೇಕು. ಮಲಪ್ರಭಾ ಎಡದಂಡೆ ಕಾಲುವೆಗೆ ನೀರು ಹರಿಸಬೇಕು’ ಎಂದು ತಡಸದ ಗೌಡಪ್ಪ ಗೌಡ ಬಿ. ಪಾಟೀಲ ಒತ್ತಾಯಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry