7

ಹೆದ್ದಾರಿಯಲ್ಲಿ ಹೈಟೆಕ್‌ ಹಾಪ್‌ಕಾಮ್ಸ್‌ ಮಳಿಗೆ

Published:
Updated:
ಹೆದ್ದಾರಿಯಲ್ಲಿ ಹೈಟೆಕ್‌ ಹಾಪ್‌ಕಾಮ್ಸ್‌ ಮಳಿಗೆ

ಮಂಡ್ಯ: ತಾಜಾ ತರಕಾರಿ ಹಾಗೂ ಹಣ್ಣುಗಳ ಪ್ರಿಯರಿಗೆ ಸಿಹಿ ಸುದ್ದಿಯೊಂದಿದೆ. ಇನ್ನೂ ಮೂರು ತಿಂಗಳೊಳಗೆ ನಗರದ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಸಮೀಪ ಹೈಟೆಕ್‌ ಹಾಪ್‌ಕಾಮ್ಸ್‌ ಮಳಿಗೆ ಆರಂಭಗೊಳ್ಳಲಿದ್ದು ಗ್ರಾಹಕರಿಗೆ ಗುಣಮಟ್ಟದ ಹಣ್ಣು–ತರಕಾರಿ ಸಿಗಲಿದೆ.

ಕಾವೇರಿ ಉದ್ಯಾನ, ವಿಶ್ವೇಶ್ವರಯ್ಯ ಪ್ರತಿಮೆ ಸಮೀಪ ಜಿಲ್ಲಾ ಹಾಪ್‌ಕಾಮ್ಸ್‌ ಜಾಗದಲ್ಲಿ ಕರ್ನಾಟಕ ತೋಟಗಾರಿಕೆ ಫೆಡರೇಷನ್‌ (ಕೆಎಚ್‌ಎಫ್‌) ವತಿಯಿಂದ ₹ 20 ಲಕ್ಷ ವೆಚ್ಚದಲ್ಲಿ ನೂತನ ಮಳಿಗೆ ನಿರ್ಮಾಣ ಕಾಮಗಾರಿ ಆರಂಭವಾಗಿದೆ. 20x10 ಅಳತೆಯ ನಿವೇಶನದಲ್ಲಿ ಕಾಮಗಾರಿ ಆರಂಭವಾಗಲಿದ್ದು ಮೂರು ತಿಂಗಳೊಳಗೆ ಮಳಿಗೆ ಉದ್ಘಾಟನೆಗೊಳ್ಳಲಿದೆ. ಎ.ಸಿ ಕೊಠಡಿಯೊಳಗೆ ಹಣ್ಣು– ತರಕಾರಿ ಪ್ರದರ್ಶನ, ಶೀತಲೀಕರಣ ಘಟಕದಿಂದ ಸಂರಕ್ಷಣೆ ಸೌಲಭ್ಯವುಳ್ಳ ಮಳಿಗೆ ಇದಾಗಿದ್ದು ಗ್ರಾಹಕಸ್ನೇಹಿ ಮಾರಾಟ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ.

ಮಳಿಗೆ ಇಡೀ ಹವಾನಿಯಂತ್ರಿತ ವಾಗಿದ್ದು ವಸ್ತುಗಳು ಕೆಡದಂತೆ ತಾಜಾತನ ಕಾಯ್ದುಕೊಳ್ಳಲು ಯೋಜನೆ ರೂಪಿಸಲಾಗಿದೆ. ನಗರದಲ್ಲಿ ಸದ್ಯ 15 ಹಾಪ್‌ಕಾಮ್ಸ್‌ ಮಳಿಗೆಗಳು ಇವೆ. ಆದರೆ ಆ ಮಳಿಗೆಗಳಲ್ಲಿ ಯಾವುದೇ ಹವಾನಿಯಂತ್ರಿತ, ಶೀತಲೀಕರಣ ವ್ಯವಸ್ಥೆ ಇಲ್ಲ. ಹೀಗಾಗಿ ಹಾಪ್‌ಕಾಮ್ಸ್‌ನಲ್ಲಿ ಕೊಳ್ಳುವ ಹಣ್ಣು–ತರಕಾರಿಗೂ ಹಾಗೂ ಇತರ ಮಾರುಕಟ್ಟೆ ಕೊಳ್ಳುವ ವಸ್ತುಗಳಿಗೂ ಯಾವುದೇ ವ್ಯತ್ಯಾಸ ಇರಲಿಲ್ಲ. ಹೀಗಾಗಿ ಹೊಸ ಹಾಪ್‌ಕಾಮ್ಸ್‌ ಮಳಿಗೆಗೆ ಹೈಟೆಕ್‌ ರೂಪ ನೀಡುತ್ತಿದ್ದು ಗ್ರಾಹಕರಿಗೆ ಇಷ್ಟವಾಗುವ ರೀತಿಯಲ್ಲಿ ವಿನ್ಯಾಸ ಮಾಡುವ ಚಿಂತನೆ ನಡೆದಿದೆ.

‘ಮಳಿಗೆ ಸಂಪೂರ್ಣ ಡಿಜಿಟಲ್‌ ಮಯವಾಗಿರುತ್ತದೆ. ಗ್ರಾಹಕರಿಗೆ ಡಿಜಿಟಲ್‌ ಬಿಲ್‌ ನೀಡುತ್ತೇವೆ. ಅಲ್ಲದೆ ಮಳಿಗೆಗೆ ಗ್ಲಾಸ್‌ ಅಳವಡಿಸಿ ವಿಶೇಷ ಒಳಾಂಗಣ ವಿನ್ಯಾಸ ಮಾಡಲಾಗುವುದು. ಹಣ್ಣು ತರಕಾರಿ ಬೆಲೆಯನ್ನು ಡಿಜಿಟಲ್‌ ಪರದೆಯ ಮೇಲೆ ಪ್ರದರ್ಶನ ಮಾಡಲಾಗುವುದು. ಈ ರೀತಿಯ ಹೈಟೆಕ್‌ ಹಾಪ್‌ಕಾಮ್ಸ್‌ ಮಳಿಗೆ ಬೆಂಗಳೂರಿನಲ್ಲಿ ಇದೆ. ಅದೇ ಮಾದರಿಯಲ್ಲಿ ನಗರದಲ್ಲೂ ನಿರ್ಮಿಸಲಾಗುತ್ತಿದೆ, ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಮಳಿಗೆ ಇರುವ ಕಾರಣ ರಸ್ತೆಯಲ್ಲಿ ಸಂಚರಿಸುವ ಪ್ರವಾಸಿಗರು ಹಾಗೂ ಜನರನ್ನು ಆಕರ್ಷಿಸುತ್ತದೆ. ಮಳಿಗೆಯಲ್ಲಿ ಮಾರಾಟ ಹೆಚ್ಚಾದರೆ ರೈತರಿಗೆ ಅನುಕೂಲವಾಗಲಿದೆ’ ಎಂದು ರಾಜ್ಯ ತೋಟಗಾರಿಕೆ ಫೆಡರೇಷನ್‌ ವ್ಯವಸ್ಥಾಪಕ ನಿರ್ದೇಶಕ ಎಲ್‌.ಸಿ.ಶಶಿಧರ್ ಹೇಳಿದರು.

ಸಿರಿಧಾನ್ಯ ಕೌಂಟರ್‌: ಈ ಹೈಟೆಕ್‌ ಹಾಪ್‌ಕಾಮ್ಸ್‌ ಮಳಿಗೆ ಯಲ್ಲಿ ಸಿರಿಧಾನ್ಯ ಕೌಂಟರ್‌ ನಿರ್ಮಿಸುತ್ತಿರುವುದು ವಿಶೇಷವಾಗಿದೆ. ಈಚೆಗೆ ಗ್ರಾಹಕರು ಸಿರಿಧಾನ್ಯಗಳ ಕಡೆಗೆ ಹೆಚ್ಚು ಒಲವು ತೋರುತ್ತಿರುವ ಕಾರಣ ತೋಟಗಾರಿಕೆ ಇಲಾಖೆ ಅನುಮೋದಿಸಿದ ಎಲ್ಲಾ ಸಿರಿಧಾನ್ಯ ಉತ್ಪನ್ನಗಳನ್ನು ಹಾಪ್‌ಕಾಮ್ಸ್‌ನಲ್ಲಿ ಮಾರಾಟಕ್ಕೆ ಇಡಲು ಕ್ರಮ ಕೈಗೊಳ್ಳಲಾಗಿದೆ. ನವಣೆ, ಸಜ್ಜೆ, ಹಾರ್ಕ, ಬರಗು ಮುಂತಾದ ಸಿರಿಧಾನ್ಯ ಮಾರಾಟಕ್ಕೆ ಇಡಲು ಚಿಂತಿಸಲಾಗಿದೆ.

‘ಬೆಂಗಳೂರಿನ ಹೈಟೆಕ್‌ ಹಾಪ್‌ಕಾಮ್ಸ್‌ ಮಳಿಗೆಯಲ್ಲಿ ತೆರೆಯಲಾಗಿರುವ ಸಿರಿಧಾನ್ಯ ಕೌಂಟರ್‌ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಉತ್ತಮ ಗುಣಮಟ್ಟದ ಸಿರಿಧಾನ್ಯ ಮಾರಾಟ ಮಾಡುತ್ತಿರವ ಕಾರಣ ಅತೀ ಹೆಚ್ಚು ಜನರು ಕೊಳ್ಳುತ್ತಿದ್ದಾರೆ. ಅದೇ ಮಾದರಿಯಲ್ಲಿ ನಗರದಲ್ಲೂ ಸಿರಿಧಾನ್ಯ ಕೌಂಟರ್‌ ಆರಂಭಿಸಲಾಗುತ್ತಿದೆ’ ಎಂದು ಶಶಿಧರ್‌ ಹೇಳಿದರು.

ಮಾವುಮೇಳ: ಹೈಟೆಕ್‌ ಹಾಪ್‌ಕಾಮ್ಸ್‌ ಮಳಿಗೆ ನಿರ್ಮಾಣವಾಗುತ್ತಿರುವ ಸ್ಥಳದಲ್ಲಿ ಪ್ರತಿವರ್ಷ ಮಾವುಮೇಳ ನಡೆಯುತ್ತದೆ. ಜಿಲ್ಲೆ ಸೇರಿ ಸುತ್ತಮುತ್ತಲಿನ ಜಿಲ್ಲೆಗಳ ಮಾವು ಬೆಳೆಗಾರರು ನೈಸರ್ಗಿಕ ಮಾವಿನ ಹಣ್ಣುಗಳನ್ನು ಮೇಳದಲ್ಲಿ ಮಾರಾಟ ಮಾಡುತ್ತಾರೆ. ಈ ಬಾರಿ ತೋಟಗಾರಿಕೆ ಇಲಾಖೆ ಇನ್ನೂ ವಿಶೇಷವಾಗಿ ಮಾವು ಮೇಳ ಆರಂಭಿಸುವ ಚಿಂತನೆ ನಡೆಸಿದೆ.

‘ಈ ಬಾರಿ ಕಾವೇರಿ ಉದ್ಯಾನದಲ್ಲಿ ಅತಿ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಿ ಮಾವು ಮೇಳ ಆಯೋಜನೆ ಮಾಡಲು ಯೋಜನೆ ರೂಪಿಸಲಾಗಿದೆ. ಈಗ ಹೈಟೆಕ್‌ ಹಾಪ್‌ಕಾಮ್ಸ್‌ ಆರಂಭ ವಾಗುತ್ತಿರುವುದರಿಂದ ಮಳಿಗೆ ಯನ್ನು ರೈತ ರಿಗೆ ಅನುಕೂಲವಾಗುವ ರೀತಿಯಲ್ಲಿ ಸದುಪಯೋಗ ಮಾಡಿಕೊಳ್ಳಲಾಗುವುದು’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಂ.ಎಸ್‌.ರಾಜು ತಿಳಿಸಿದರು.

ಮಂಡ್ಯದಲ್ಲಿ ಸಾವಯವ ಹೋಟೆಲ್‌

ಮೈಸೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗ್ರೀನ್‌ ಪ್ಯಾಲೇಸ್‌ ಎದುರಿನ 30 ಗುಂಟೆ ಭೂಮಿಯಲ್ಲಿ ಕೆಎಚ್‌ಎಫ್‌ ಸಾವಯವ ಹೋಟೆಲ್‌ ನಿರ್ಮಿಸಲು ಚಿಂತನೆ ನಡೆಸಿದೆ. ಸಾವಯವ ಉತ್ಪನ್ನಗಳಿಂದ ತಯಾರಿಸಿದ ತಿನಿಸುಗಳನ್ನು ಹೋಟೆಲ್‌ನಲ್ಲಿ ಮಾರಾಟ ಮಾಡುವ ಯೋಜನೆ ಇದಾಗಿದೆ.

₹ 3 ಕೋಟಿ ವೆಚ್ಚದಲ್ಲಿ ಹೋಟೆಲ್‌ ನಿರ್ಮಿಸಲು ಸಿದ್ಧತೆ ನಡೆಸಲಾಗುತ್ತಿದೆ. ಪೌಷ್ಟಿಕಾಂಶವುಳ್ಳ ಹಾಗೂ ನೈಸರ್ಗಿಕ ಸಿರಿಧಾನ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶ ಹೊಂದಿರುವ ಈ ಯೋಜನೆಗೆ 2018ರಲ್ಲಿ ಚಾಲನೆ ನೀಡಲಾಗುವುದು ಎಂದು ಕೆಎಚ್‌ಎಫ್‌ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry