6

‘ವೃಕ್ಷ ಕ್ರಾಂತಿ’ಗೆ ತೆರೆದಿದೆ ಹಾದಿ

Published:
Updated:
‘ವೃಕ್ಷ ಕ್ರಾಂತಿ’ಗೆ ತೆರೆದಿದೆ ಹಾದಿ

ಇದೊಂದು ಅಭಿವೃದ್ಧಿಯಾಗದ ಉದ್ಯಾನ. ಇಲ್ಲಿನ್ನೂ ‘ಕಾಂಕ್ರೀಟ್‌ ವಾಕಿಂಗ್‌ ಪಾಥ್‌’ ಹೆಜ್ಜೆಯೂರಿಲ್ಲ. ಆದರೆ, ‘ವೃಕ್ಷ ಕ್ರಾಂತಿ’ಗೆ ಹಾದಿಯನ್ನು ತೆರೆದಿಟ್ಟಿದೆ.

ಹೇಗೆ ಎಂದಿರಾ, ಮೈಸೂರಿನ ಶ್ರೀಕಾಂತ್‌ ಭಟ್‌, ಜಿಲ್ಲೆಯಲ್ಲಿ ಕೋಟಿ ಮರಗಳನ್ನು ಬೆಳೆಸುವ ಕನಸಿನ ಬೀಜವನ್ನು ಇದೇ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಉದ್ಯಾನದಲ್ಲಿ ಬಿತ್ತಿದ್ದಾರೆ. ಆ ಬೀಜ ಮೊಳಕೆಯೊಡೆದು ಚಿಗುರಿ ನಿಂತಿದೆ. 2 ವರ್ಷ ವಯಸ್ಸಿನ ಈ ಪುಟ್ಟ ಕೂಸು ಬೆಳೆದು ಕೋಟಿ ಸಸ್ಯಗಳ ಸಮೃದ್ಧಿಯಾಗಲು ಬೇಕಿರುವುದು ನಾಗರಿಕರ ಸಹಭಾಗಿತ್ವ.

ಉತ್ತರಕನ್ನಡ ಜಿಲ್ಲೆಯ ಕೊಡೆಗದ್ದೆಯವರಾದ ಶ್ರೀಕಾಂತ ಅವರು ಮೈಸೂರಿನಲ್ಲಿ ಬಂದು ನೆಲೆಸಿದ ನಂತರವೂ ಚಿಕ್ಕಂದಿನಿಂದ ಇದ್ದ ಪರಿಸರ ಪ್ರೀತಿ ಸುಪ್ತವಾಗಿತ್ತು. ಪರಿಸರ ಅಸಮತೋಲನ, ಮಳೆ ಕೊರತೆ, ರೋಗಗಳ ಹಾವಳಿ ಅವರ ಈ ಪ್ರೀತಿಯನ್ನು ಬಡಿದೆಬ್ಬಿಸಿತು. 2 ವರ್ಷಗಳ ಹಿಂದೆ ಅವರು ತಮ್ಮ ಕನಸಿಗೆ ಒಂದು ರೂಪ ನೀಡಿದರು. ‘ಕೋಟಿ ವೃಕ್ಷ ಪ್ರತಿಷ್ಠಾನ’ ಆರಂಭಿಸಿದರು. 5 ವರ್ಷಗಳ ಅವಧಿಯಲ್ಲಿ ಮೈಸೂರು ಜಿಲ್ಲೆಯಲ್ಲಿ ಕೋಟಿ ಮರಗಳನ್ನು ಸೃಷ್ಟಿಸುವುದು ಅವರ ಗುರಿ. ಇದೇನು ಸುಲಭವೆ? ಖಂಡಿತ ಅಲ್ಲ. ಅದಕ್ಕಾಗಿ ಹಂತಹಂತದ ಯೋಜನೆಯೂ ಸಿದ್ಧವಾಯಿತು. ಅವರೇ ನಿರ್ದೇಶಕರಾಗಿರುವ ‘ಐಕ್ಯೂ ಪ್ಲಸ್‌’ ಅಕಾಡೆಮಿ ಇದಕ್ಕೆ ಬೇಕಾದ ಧನಸಹಾಯ ಒದಗಿಸಿತು.

ಸ್ನೇಹಿತರೊಡಗೂಡಿ ಬೆಮಲ್‌ ನಗರದ ಕೊನೆಯ ಬಸ್‌ ನಿಲ್ದಾಣದ ಬಳಿ ಖಾಲಿ ಬಿದ್ದಿದ್ದ ಉದ್ಯಾನದಲ್ಲೇ 2 ವರ್ಷಗಳ ಹಿಂದೆ 276 ಸಸಿಗಳನ್ನು ನೆಟ್ಟರು. ಆದರೆ ಅಲ್ಲಿ ಸ್ವಲ್ಪವೂ ನೀರಿಲ್ಲ. ಶ್ರೀಕಾಂತ್‌, ಅವರ ಮಗ ಶಿವಾ, ಪ್ರತಿಷ್ಠಾನದ ಕಾರ್ಯದರ್ಶಿ ವಿನಾಯಕ, ಎದುರು ಮನೆಯ ಪುರುಷೋತ್ತಮ್‌ ಸಮೀಪದ ತಮ್ಮ ಮನೆಗಳಿಂದ ಬಕೆಟ್‌ಗಳಲ್ಲಿ ನೀರು ತಂದು ಹಾಕಿದ್ದೇ ಹಾಕಿದ್ದು..!

ಅಂತೂ ಅಷ್ಟೂ ಸಸಿಗಳು ಬದುಕಿದವು. ಚಿಗುರಿ ನಳನಳಿಸಿದವು. ಆಗ ಪ್ರತಿಷ್ಠಾನದ ಕನಸಿಗೆ ಜೀವ ಬಂದಂತಾಯ್ತು. ಹೆಚ್ಚು ನೀರಿಲ್ಲದೇ ಬೆಳೆಯಬಲ್ಲ ಹೊಂಗೆ, ನೇರಳೆ, ಕಾಡುಬಾದಾಮಿ, ಬೇವು, ಹೊನ್ನೆ, ಮತ್ತಿ, ಮಾವು, ನೇರಳೆ ಮೊದಲಾದ ಸಸಿಗಳಿಗೆ ಮಹತ್ವ ನೀಡಿದರು. ಆರಂಭದಲ್ಲಿ ಅರಣ್ಯ ಇಲಾಖೆಯೇ ಸಸಿಗಳನ್ನು ನೀಡಿತ್ತು. ನಂತರ ಅಲ್ಲಿಂದ ಸಸಿಗಳು ಸಿಗಲಿಲ್ಲ. ಹೀಗಾಗಿ ಪ್ರತಿಷ್ಠಾನದಿಂದಲೇ ಸಸಿಗಳನ್ನು ತಯಾರಿಸುವ ಯೋಜನೆ ಆರಂಭವಾಯಿತು. ಬರುವ ಜೂನ್‌ ತಿಂಗಳೊಳಗೆ 1 ಲಕ್ಷ ಸಸಿಗಳನ್ನು ಸಿದ್ಧಪಡಿಸುವ ಯೋಜನೆಯೊಂದಿಗೆ ಪ್ರತಿದಿನವೂ ದುಡಿಯುತ್ತಿದೆ ಪ್ರತಿಷ್ಠಾನ.

ಇಲ್ಲಿ ಕಾಯಂ ಸದಸ್ಯರೆಂಬುದಿಲ್ಲ. ಮುಡಾ ಉದ್ಯಾನದಲ್ಲಿ ಯಾರು ಬೇಕಾದರೂ ಸ್ವಯಂ ಸ್ಫೂರ್ತಿಯಿಂದ ಬಂದು ಸಹಾಯ ಮಾಡಬಹುದು. ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸಲು ವಾಟ್ಸ್‌ಆ್ಯಪ್‌ ಗ್ರೂಪ್‌ ಇದೆ. ಬೀಜ ಬಿತ್ತಿ ಕಣವನ್ನು ಇಲ್ಲಿ ತಯಾರು ಮಾಡಿರುತ್ತಾರೆ. ಪ್ಲಾಸ್ಟಿಕ್‌ ಕವರ್‌ಗಳಲ್ಲಿ ಮಣ್ಣು, ಗೊಬ್ಬರ ತುಂಬಿ ಸಸಿ ನೆಡುವ ಕಾರ್ಯವನ್ನಷ್ಟೇ ಸ್ವಯಂಸೇವಕರು ಮಾಡಬೇಕಿರುವುದು. ಇದೇ ಸ್ಥಳಕ್ಕೆ ಬರಲು ಸಾಧ್ಯವಿಲ್ಲದವರು ತಮ್ಮ ಮನೆಗಳಲ್ಲೇ ಸಸಿಗಳನ್ನು ತಯಾರು ಮಾಡಿ ತಂದು ಕೊಡಬಹುದು. ಬೀಜ, ಮಣ್ಣು, ಗೊಬ್ಬರ, ಕವರ್‌ಗಳನ್ನೂ ಉಚಿತವಾಗಿ ಒದಗಿಸಲು ಇವರು ಸಿದ್ಧ. ಸಸಿ ನಾಟಿ ವಿಧಾನ ಗೊತ್ತಿಲ್ಲದಿದ್ದರೆ ಅದರ ತರಬೇತಿಯನ್ನೂ ಕೊಡುತ್ತಾರೆ. ಪ್ರತಿಷ್ಠಾನಕ್ಕೆ ಬೀಜ, ಮಣ್ಣು, ಗೊಬ್ಬರ, ಕವರ್‌ಗಳನ್ನು ನೀಡುವವರಿಗೂ ಸ್ವಾಗತವಿದೆ. ಪರಿಸರಕ್ಕಾಗಿ ಅಳಿಲು ಸೇವೆಯಷ್ಟೇ ಬೇಕಿದೆ.

ಇಷ್ಟು ದಿನಗಳ ಕಾಲ ಸುಮಾರು 200ರಷ್ಟು ಮಂದಿ ಪ್ರತಿಷ್ಠಾನದೊಂದಿಗೆ ಕೈಜೋಡಿಸಿದ್ದಾರೆ. ಪುರುಷೋತ್ತಮ್‌ ಹಾಗೂ ಗಾಯತ್ರಿ ಮೊದಲಿನಿಂದಲೂ ಸಸಿಗಳನ್ನು ಬೆಳೆಸುವಲ್ಲಿ ನಿರಂತರವಾಗಿ ಪಾಲ್ಗೊಂಡಿದ್ದಾರೆ. ಹಲವು ಹಿರಿಯರು ಉಪಯುಕ್ತ ಸಲಹೆಗಳನ್ನು, ಮಾರ್ಗದರ್ಶನವನ್ನೂ ನೀಡಿದ್ದಾರೆ. ಮನೆಯಿಂದಲೇ ಸಸಿಗಳನ್ನು ಸಿದ್ಧ ಮಾಡಿಕೊಡುವವರೂ ಹಲವರಿದ್ದಾರೆ.

(ಬೀಜಗಳನ್ನು ಅಣಿ ಮಾಡುತ್ತಿರುವ ಶ್ರೀಕಾಂತ್‌)

ಸಸಿ ಸಿದ್ಧಪಡಿಸುವುದು ಮೊದಲ ಹಂತವಾದರೆ, ಎಲ್ಲೆಲ್ಲಿ ನೆಡುವುದು ಎಂಬ ಯೋಜನೆಯೂ ಶ್ರೀಕಾಂತ್‌ ಅವರ ಬಳಿ ಸಿದ್ಧವಾಗಿದೆ. ಆಗಲೇ ಅದನ್ನು ನಿಧಾನಕ್ಕೆ ಕಾರ್ಯರೂಪಕ್ಕೆ ತಂದಿದ್ದಾರೆ. ಲಯನ್ಸ್‌ ಕ್ಲಬ್‌, ರೋಟರಿ ಕ್ಲಬ್‌, ಉತ್ತರ ಕನ್ನಡ ಸಂಘ, ಎನ್‌.ಸಿ.ಸಿ, ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಾನೂನು ಸಂಶೋಧನಾ ಹಾಗೂ ಅಧ್ಯಯನ ಕೇಂದ್ರ, ಚೈತ್ರಾ ಸ್ಕೂಲ್‌, ವಿಜಯವಿಠ್ಠಲ ಕಾಲೇಜು ಸೇರಿದಂತೆ ಹಲವು ಸಂಘ ಸಂಸ್ಥೆಗಳ ಜತೆ ಸೇರಿ ಸಸಿಗಳನ್ನು ಯೋಗ್ಯ ಸ್ಥಳಗಳಲ್ಲಿ ನೆಡಲಾಗಿದೆ.

ಸಸಿಗಳನ್ನು ಸಿಕ್ಕಲ್ಲೆಲ್ಲ ನೆಡುವಂತಿಲ್ಲ. ಒಂದನ್ನೂ ವ್ಯರ್ಥ ಮಾಡದಂತೆ ಜವಾಬ್ದಾರಿ ನಿಭಾಯಿಸಬಲ್ಲವರೆಂದು ಅನಿಸಿದವರ ಕೈಯಲ್ಲಿ ಮಾತ್ರ ಕೊಡುವುದು. ಆ ಸಸಿ ದನ–ಕರು–ಕುರಿಗಳ ಪಾಲಾಗದಂತೆ ಭದ್ರವಾಗಿ ಬೇರೂರಿ ನಿಲ್ಲುವಂತೆ ಮಾಡುವ ಭರವಸೆ ದೊರೆತರಷ್ಟೇ ಸಸಿಗಳನ್ನು ಉಚಿತವಾಗಿ ನೀಡಲಾಗುತ್ತದೆ. ಅವುಗಳನ್ನು ನೆಡುವುದಕ್ಕೂ ಸಹಾಯ ಮಾಡುತ್ತಾರಿವರು. ಶೈಕ್ಷಣಿಕ ಸಂಸ್ಥೆಗಳು, ಖಾಸಗಿ ಕಾರ್ಖಾನೆಗಳು, ಉದ್ಯಾನಗಳಲ್ಲಿ ಈ ಸಸಿಗಳನ್ನು ನೆಡುವ ಉದ್ದೇಶ ಪ್ರತಿಷ್ಠಾನದ್ದು. ಈಗಾಗಲೇ ಕೂರ್ಗಳ್ಳಿಯ ‘ಸಾಯಿ ಕಾರ್ಟನ್‌’ ಕಂಪನಿ 2,000 ಸಸಿಗಳನ್ನು ಪಡೆದು ನೆಟ್ಟು ಪೋಷಿಸುತ್ತಿದೆ. ಕ್ಲೀನ್‌ ಮೈಸೂರು, ಗ್ರೀನ್‌ ಮೈಸೂರು, ಮೈಸೂರು ಗ್ರಾಹಕರ ಪರಿಷತ್‌, ಕಾನೂನು ಸೇವಾ ಪ್ರಾಧಿಕಾರದವರೂ ಸಹಾಯ ಹಸ್ತ ನೀಡಿದ್ದಾರೆ.

ರಸ್ತೆ ಬದಿಗಳಲ್ಲಿ ನೆಡುತ್ತೇವೆಂದು ನಾಗರಿಕರು ಮುಂದೆ ಬಂದರೂ ಅವುಗಳಿಗೆ ‘ಟ್ರೀ ಗಾರ್ಡ್’ ಇರಬೇಕು. ಉದ್ಯಾನಗಳಲ್ಲಾದರೆ ಫೆನ್ಸಿಂಗ್‌ ಇರಬೇಕು ಎನ್ನುತ್ತಾರೆ ಶ್ರೀಕಾಂತ್‌. ಮನೆಮುಂದೆ ನೆಡುವ ಅಭಿಯಾನವನ್ನೂ ಮಾಡಿ 400ರಷ್ಟು ಸಸಿಗಳನ್ನು ನೆಡಿಸಲಾಗಿದೆ. ಕೋಟಿ ವೃಕ್ಷ ನೆಡುವ ಅಭಿಯಾನದ ಅಡಿ ಮೈಸೂರು ನಗರದಲ್ಲಿ ಶೇ 20ರಷ್ಟು ಸಸಿಗಳನ್ನು ನೆಟ್ಟರೆ, ಉಳಿದದ್ದನ್ನು ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ನೆಡಬೇಕೆನ್ನುವುದು ಇವರ ಯೋಜನೆ. ರೈತರು ಎಕರೆಗೆ 2 ಗುಂಟೆಗಳಷ್ಟು ಭಾಗದಲ್ಲಿ ಮರಗಳನ್ನು ಬೆಳೆಸಿ ಎಂಬ ಅಭಿಯಾನ ಕೈಗೆತ್ತಿಕೊಳ್ಳುವುದು ಪ್ರತಿಷ್ಠಾನದ ಮುಂದಿನ ಹೆಜ್ಜೆ. ಇದರಿಂದ ರೈತರಿಗೆ ಆರ್ಥಿಕ ಲಾಭವೂ ಆಗುವಂತೆ ಮಾಡಿದರೆ, ‘ಪರಿಸರ ಸ್ನೇಹಿ, ಮರ ಆಧಾರಿತ ಕೃಷಿ’ಯನ್ನು ಮಾಡಬಹುದು ಎಂಬ ಚಿಂತನೆ ನಡೆದಿದೆ. ಮಾಹಿತಿಗೆ ಶ್ರೀಕಾಂತ್‌– 9480505931, 9148520681.

**

ಪ್ರತಿ ಭಾನುವಾರ ಹಬ್ಬ

ಹಬ್ಬವೆಂದರೆ ಎಲ್ಲರಿಗೂ ಸಂಭ್ರಮ. ವರ್ಷದಲ್ಲಿ ಬರುವ ಹತ್ತಾರು ಹಬ್ಬಗಳೊಂದಿಗೆ ಬೆಮಲ್‌ ನಗರದ ಉದ್ಯಾನದಲ್ಲಿ ಪ್ರತಿ ಭಾನುವಾರ ಮಧ್ಯಾಹ್ನ 4ರ ನಂತರ ‘ಬೀಜ ನೆಡುವ ಹಬ್ಬ’ ನಡೆಯುತ್ತದೆ. ಮಣ್ಣು, ಗೊಬ್ಬರ, ನೀರು ಎಲ್ಲವೂ ಅಲ್ಲಿ ಸಿದ್ಧವಾಗಿರುತ್ತದೆ. ಎಷ್ಟು ಮಂದಿ ಬೇಕಾದರೂ ಬಂದು ಕೈಲಾದಷ್ಟು ಸಸಿಗಳನ್ನು ಸಿದ್ಧಪಡಿಸಬಹುದು. ಎಲ್ಲ ವಯೋಮಾನ ದವರೂ ಈ ಹಬ್ಬದಲ್ಲಿ ಸಂಭ್ರಮದಿಂದ ಪಾಲ್ಗೊಳ್ಳುತ್ತಿದ್ದಾರೆ.

ಸ್ವಾರ್ಥಕ್ಕಾದರೂ ಗಿಡ ಬೆಳೆಸಬೇಕಿದೆ: ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಸರ್ಕಾರದ ಮೇಲೆ ಹಾಕಿ ನಾವು ಕೈಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿ ಈಗ ಇಲ್ಲ. ಪ್ರಕೃತಿಯನ್ನು ಉಳಿಸಬೇಕೆಂದಷ್ಟೇ ಅಲ್ಲ, ನಾವು ಉಳಿಯಬೇಕಾದರೆ, ನೆಮ್ಮದಿಯ ಜೀವನ ಬೇಕಾದರೆ ಪ್ರತಿಯೊಬ್ಬನೂ ಈಗ ಗಿಡ ನೆಡಲೇಬೇಕಿದೆ. ನಮ್ಮ ಸ್ವಾರ್ಥಕ್ಕಾದರೂ ಹೆಚ್ಚು ಮರಗಳನ್ನು ಬೆಳೆಸುವುದೊಂದೇ ನಮ್ಮ ಎದುರಿಗಿರುವ ಏಕೈಕ ದಾರಿ. ಮೂಲ ಕರ್ನಾಟಕ ತಳಿಯ 600 ಮರಗಳಲ್ಲಿ ಈಗ ಉಳಿದುಕೊಂಡಿರುವಂಥವು 300 ಮಾತ್ರ. ಹೀಗಾಗಿ ಕಡಿಮೆ ನೀರಿನಲ್ಲಿ ಬೆಳೆಯುವಂಥ, ನೂರಾರು ವರ್ಷಗಳ ಕಾಲ ಉಳಿಯುವಂಥ, ಇಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳುವಂಥ ಗಿಡಗಳನ್ನು ಬೆಳೆಸುವುದು ಮಹತ್ವದ್ದು ಎನ್ನುತ್ತಾರೆ ಶ್ರೀಕಾಂತ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry