7

ನೀರು; ಸಿ.ಎಂ ಭೇಟಿಗೆ ನಿರ್ಣಯ

Published:
Updated:

ಚಿಕ್ಕಮಗಳೂರು: ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಅನುದಾನ ಬಿಡುಗಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಸಾಮಾನ್ಯಸಭೆಯಲ್ಲಿ ನಿರ್ಣಯಿಸಲಾಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್‌.ಚೈತ್ರಶ್ರೀ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ  ನಿರ್ಧಾರ ಕೈಗೊಳ್ಳಲಾಯಿತು. ಜಿಲ್ಲೆಯ ವಿವಿಧೆಡೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಬೇಸಿಗೆ ಮತ್ತಷ್ಟು ಸಮಸ್ಯೆ ಬಿಗಡಾಯಿಸಲಿದೆ. ತತ್ವಾರ ನಿಭಾಯಿಸುವ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದು ಬಹುತೇಕ ಸದಸ್ಯರು ಗಮನ ಸೆಳೆದರು.

ಈ ಬಾರಿ ಮಳೆ ಬಂದಿದೆ, ಆದರೆ, ಅಂತರ್ಜಲ ವೃದ್ಧಿಯಾಗುವಷ್ಟು ಬಂದಿಲ್ಲ. ಮಲೆನಾಡು ಮತ್ತು ಬಯಲು ಸೀಮೆ ಎರಡೂ ಕಡೆ ನೀರಿನ ಸಮಸ್ಯೆ ಇದೆ. ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾಗಿದೆ. ಕೆಲವಾರು ಗ್ರಾಮಗಳಿಗೆ ಟ್ಯಾಂಕರ್‌ನಲ್ಲಿ ನೀರು ಪೂರೈಸಲಾಗುತ್ತಿದೆ. ಸಮಸ್ಯೆಯನ್ನು ಅರ್ಥಮಾಡಿಕೊಂಡು ಈಗಲೇ ಎಚ್ಚೆತ್ತುಕೊಂಡು, ಬೇಸಿಗೆಯಲ್ಲಿ ನಿರ್ವಹಣೆಗೆ ಕ್ರಮ ವಹಿಸುವುದು ಒಳಿತು ಎಂದು ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಲಿಂಗರಾಜು ಹೇಳಿದರು.

ಕಡೂರು ತಾಲ್ಲೂಕಿನ ಚೌಳಹಿರಿಯೂರಿನ ಶಾಲೆಯಲ್ಲಿ ಸುಮಾರು 400 ವಿದ್ಯಾರ್ಥಿಗಳು ಇದ್ದಾರೆ. ಇಲ್ಲಿನ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಎಂದು ಸದಸ್ಯೆಯೊಬ್ಬರು ಹೇಳಿದರು.

ಗೋಣಿಬೀಡು ಹೋಬಳಿಯಲ್ಲೂ ನೀರಿಗಾಗಿ ತತ್ವಾರ ಉಂಟಾಗಿದೆ. ನಮ್ಮ ಮನೆ ಮುಂದೆ ಮಹಿಳೆಯರು ಖಾಲಿ ಬಿಂದಿಗೆ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಸದಸ್ಯೆ ಅಮಿತಾ ಮುತ್ತಪ್ಪ ಹೇಳಿದರು.

ಕುಡಿಯುವ ನೀರಿಗೆ ಎಲ್ಲ ಜಿಲ್ಲೆಗಳಿಗೂ ಅಗತ್ಯ ಅನುದಾನ ಬಿಡುಗಡೆ ಮಾಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ.ಪಾಟೀಲ ಹೇಳಿದ್ದಾರೆ. ಹೀಗಾಗಿ, ಸರ್ವಸದಸ್ಯರು ಒಗ್ಗೂಡಿ ನಿಯೋಗ ತೆರಳಿ ಅವರನ್ನು ಭೇಟಿ ಮಾಡಿ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಮನವರಿಕೆ ಮಾಡಿಕೊಟ್ಟು, ಅನುದಾನ ಬಿಡುಗಡೆಗೆ ಒತ್ತಡ ಹೇರಬೇಕಿದೆ ಎಂದು ವಿಧಾನಪರಿಷತ್‌ ಸದಸ್ಯ ಎಂ.ಕೆ.ಪ್ರಾಣೇಶ್‌ ಹೇಳಿದರು.

ಇದೇ 30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನರಸಿಂಹರಾಜಪುರಕ್ಕೆ ಬರುತ್ತಾರೆ. ಸದಸ್ಯರೆಲ್ಲರೂ ಅಲ್ಲಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ನಿರ್ಧರಿಸಲಾಯಿತು ಎಂದು ಉಪಾಧ್ಯಕ್ಷ ರಾಮಸ್ವಾಮಿ ಶೆಟ್ಟಿ ಗದ್ದೆ ಪ್ರಜಾವಾಣಿಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry