7

12 ಗಂಟೆ ವಿದ್ಯುತ್‌ಗೆ ಲಿಖಿತ ಆದೇಶ ಕೊಡಿ

Published:
Updated:
12 ಗಂಟೆ ವಿದ್ಯುತ್‌ಗೆ ಲಿಖಿತ ಆದೇಶ ಕೊಡಿ

ರಾಯಚೂರು: ‘ತಾಲ್ಲೂಕಿನ ಪಂಪ್‌ಸೆಟ್‌ಗಳಿಗೆ 3 ಫೇಸ್‌ ವಿದ್ಯುತ್‌ 12 ಗಂಟೆ ಪೂರೈಸಲು ಮೌಖಿಕ ಆದೇಶ ನೀಡಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಮುಖಂಡರು ವಿಜಯೋತ್ಸವ ಆಚರಿಸಿದ್ದಾರೆ. ಇದನ್ನು ನಂಬುವುದಕ್ಕೆ ಸಾಧ್ಯವಿಲ್ಲ. ಸರ್ಕಾರವು ಲಿಖಿತ ಆದೇಶ ಮಾಡಿದರೆ ಮಾತ್ರ ಧರಣಿ ಕೈಬಿಡುತ್ತೇವೆ’ ಎಂದು ಶಾಸಕರಾದ ತಿಪ್ಪರಾಜು ಹವಾಲ್ದಾರ್‌ ಹಾಗೂ ಡಾ.ಶಿವರಾಜ ಪಾಟೀಲ ಪಟ್ಟು ಹಾಕಿದರು.

ತಾಲ್ಲೂಕಿನ ವೈಟಿಪಿಎಸ್‌ ಎದುರು ತಾಳೇಮರ ತಾಯಮ್ಮದೇವಿ ದೇವಸ್ಥಾನದ ಬಳಿ ಗುರುವಾರ ಏರ್ಪಡಿಸಿದ್ದ ನಾಲ್ಕು ದಿನಗಳ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

56 ಕಿ.ಮೀ ಪಾದಯಾತ್ರೆ ಮಾಡಿ ಈ ಹೋರಾಟವನ್ನು ಇಲ್ಲಿಗೆ ಕೈಬಿಡುತ್ತಿಲ್ಲ. ಆರ್‌ಟಿಪಿಎಸ್‌ವರೆಗೂ ಹೋಗಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಸರ್ಕಾರದಿಂದ ಅಧಿಕೃತ ಆದೇಶ ಪತ್ರ ಕೈಗೆ ಕೊಡುವವರೆಗೂ ಸತ್ಯಾಗ್ರಹ ಮುಂದುವರಿಸುತ್ತೇವೆ. ಪ್ರಾಣ ಇರುವವರೆಗೂ ರೈತರೊಂದಿಗೆ ನಡೆಸುವ ಸತ್ಯಾಗ್ರಹ ನಿಲ್ಲುವುದಿಲ್ಲ ಎಂದರು.

ಪ್ರಮುಖವಾಗಿ ನಾಲ್ಕು ಬೇಡಿಕೆಗಳನ್ನು ಈಡೇರಿಸಬೇಕು. ರೈತರ್‌ ಪಂಪ್‌ಸೆಟ್‌ಗಳಿಗೆ ಕನಿಷ್ಠ 12 ಗಂಟೆ ವಿದ್ಯುತ್‌ ಕೊಡಬೇಕು. ವೈಟಿಪಿಎಸ್‌ ಸ್ಥಾಪಿಸಲು ಭೂಮಿ ನೀಡಿದ ಕುಟುಂಬಗಳಿಗೆ ಉದ್ಯೋಗ ಒದಗಿಸಬೇಕು. ಹೊರಗುತ್ತಿಗೆ ನೌಕರರ ಮೇಲಿನ ದಬ್ಬಾಳಿಕೆ ನಿಲ್ಲಿಸಿ ಕಾಯಂ ಮಾಡಿಕೊಳ್ಳಬೇಕು ಹಾಗೂ ಆರ್‌ಟಿಪಿಎಸ್‌ ಹತ್ತಿರ ಕೊಳಚೆ ಪ್ರದೇಶದಲ್ಲಿ ಬದುಕುತ್ತಿರುವ ಜನರಿಗೆ ಹಕ್ಕುಪತ್ರ ನೀಡಬೇಕು. ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳಿ ಸಲಾಗುವುದು ಎಂದು ಹೇಳಿದರು.

ಶಾಸಕ ಶಿವನಗೌಡ ನಾಯಕ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಸರ್ಕಾರಕ್ಕೆ ಮಾನ, ಮರ್ಯಾದೆ ಇಲ್ಲ. ಶಾಸಕರು ನಡೆಸಿರುವ ಪಾದಯಾತ್ರೆಗೆ ಜಿಲ್ಲಾ ಕಾಂಗ್ರೆಸ್‌ ಮುಖಂಡರು ಬೆಚ್ಚಿರುವುದು ಅಚ್ಚರಿ ಮೂಡಿಸಿದೆ. ಇದು ಒಳ್ಳೆಯ ಬೆಳವಣಿಗೆಯಾಗಿದ್ದು, ರೈತರ ಬೇಡಿಕೆಗಳು ಈಡೇರುತ್ತವೆ ಎನ್ನುವ ಭರವಸೆ ಹೆಚ್ಚಾಗಿದೆ. ಯಾವುದೇ ಕಾರಣಕ್ಕೂ ಹೋರಾಟ ಅರ್ಧಕ್ಕೆ ಕೈಬಿಡಬಾರದು. ಆರ್‌ಟಿಪಿಎಸ್‌ಗೆ ನುಗ್ಗಿ ನ್ಯಾಯೋಚಿತ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಬೇಕು ಎಂದು ತಿಳಿಸಿದರು.

‘ಕುಡಿಯುವ ನೀರು, ವಿದ್ಯುತ್‌ನ್ನು ಸಮರ್ಪಕವಾಗಿ ಕೊಡುವಷ್ಟು ಯೋಗ್ಯತೆಯನ್ನು ಸರ್ಕಾರ ಉಳಿಸಿಕೊಂಡಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ಹರಿಹಾಯ್ದರು.

‘ಬರುವ ಚುನಾವಣೆಯಲ್ಲಿ ಮುಖ್ಯಮಂತ್ರಿಯ ಫ್ಯೂಜ್‌ ತೆಗೆಯಬೇಡಿ. ಇದನ್ನು ಅವರ ಮನೆಯವರು ಪ್ರಶ್ನಿಸಬಹುದು. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದ ಫ್ಯೂಜ್‌ ತೆಗೆದುಹಾಕಿ’ ಎಂದು ಟೀಕಿಸಿದರು.

ಬಿಜೆಪಿ ಮುಖಂಡ ಎನ್‌.ಶಂಕ್ರಪ್ಪ ಮಾತನಾಡಿ, ರಾಜ್ಯಕ್ಕೆ ಶೇ 45ರಷ್ಟು ವಿದ್ಯುತ್‌ ಉತ್ಪಾದಿಸಿ ಕೊಡುವ ರಾಯಚೂರಿನಲ್ಲೆ ವಿದ್ಯುತ್‌ಗಾಗಿ ರೈತರು ಹೋರಾಟ ನಡೆಸುತ್ತಿರುವುದು ಸರ್ಕಾರಕ್ಕೆ ನಾಚಿಕೆಯಾಗಬೇಕು. ಪಾದಯಾತ್ರೆ ಆರಂಭಿಸಿದ ತಕ್ಷಣ ನಿದ್ರೆಯಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾ ಕಾಂಗ್ರೆಸ್‌ ಮುಖಂಡರು 12 ಗಂಟೆ ವಿದ್ಯುತ್‌ ಸರಬರಾಜಿಗೆ ವ್ಯವಸ್ಥೆ ಮಾಡಿಸಿದ್ದಾರೆ.

ಇತ್ತ ಹೋರಾಟ ಕೈಬಿಡುತ್ತಿದ್ದಂತೆ ಫ್ಯೂಜ್‌ ತೆಗೆದುಹಾಕಿ ಮತ್ತೆ ರೈತರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಾರೆ. ಮೌಖಿಕ ಆದೇಶವು ಲಿಖಿತ ಆದೇಶವಾಗಿ ಬರುವವರೆಗೂ ಹೋರಾಟ ಸ್ಥಗಿತಗೊಳಿಸುವುದು ಬೇಡ ಎಂದರು. ಬಿಜೆಪಿ ಮುಖಂಡರಾದ ಶ್ರೀನಿವಾಸ ರೆಡ್ಡಿ, ನಾಗರತ್ನಾ ಕುಪ್ಪಿ, ಜೆಡಿಎಸ್‌ ಮುಖಂಡ ಶಿವಶಂಕರ, ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಜೈನ್‌ ಮಾತನಾಡಿದರು.

ವಾಹನ ಸಂಚಾರ ಅಸ್ತವ್ಯಸ್ತ

ನಿರಂತರ ವಿದ್ಯುತ್‌ ಸರಬರಾಜಿಗೆ ಆಗ್ರಹಿಸಿ ಶಾಸಕರು ಗುರುವಾರ ನಡೆಸಿದ ಪಾದಯಾತ್ರೆಯಿಂದ ರಾಯಚೂರು ನಗರದಿಂದ ಶಕ್ತಿನಗರದವರೆಗೂ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡು ಚಾಲಕರು, ಪ್ರಯಾಣಿಕರು ಸಂಕಷ್ಟ ಅನುಭವಿಸಿದರು.

ಯರಮರಸ್‌ನಲ್ಲಿ ನಡೆದ ಸಮಾರೋಪ ಸಮಾರಂಭದ ಬಳಿಕ ಸಂಜೆ 4.30 ಕ್ಕೆ ಆರ್‌ಟಿಪಿಎಸ್‌ನತ್ತ ಜನರು ರಸ್ತೆಯುದ್ದಕ್ಕೂ ನುಗ್ಗಿದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

ಬೈಕ್‌ ಸೇರಿದಂತೆ ಎಲ್ಲ ವಾಹನಗಳನ್ನು ಶಕ್ತಿನಗರದಲ್ಲೆ ತಡೆಲಾಗಿತ್ತು. ರಾಯಚೂರಿನಿಂದ ಶಕ್ತಿನಗರದತ್ತ ಹೋಗುತ್ತಿದ್ದ ಎಲ್ಲ ವಾಹನಗಳನ್ನು ಬೈಪಾಸ್‌ ಬಳಿ ಸ್ಥಗಿತಗೊಳಿಸಲಾಗಿತ್ತು.

ಸಂಜೆ ಏಳು ಗಂಟೆಯಾದರೂ ವಾಹನಗಳ ಸಂಚಾರ ಆರಂಭವಾಗಲಿಲ್ಲ. ಹೀಗಾಗಿ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ವಾಹನಗಳ ಸಾಲು ಏರ್ಪಟ್ಟಿತ್ತು. ಸರ್ಕಾರಿ ಬಸ್‌ಗಳು ಮತ್ತು ಲಾರಿಗಳು ನಿಂತಿದ್ದವು. ಬೈಕ್‌ಗಳು ಕೂಡಾ ಹೋಗಲು ಅವಕಾಶ ಇರಲಿಲ್ಲ.

* * 

ಶಾಸಕರಿಬ್ಬರು ರೈತರ ಬೇಡಿಕೆಗಳನ್ನು ಈಡೇರಿಸಲು ಸತ್ತರೂ ಪರವಾಗಿಲ್ಲ. ಜನರು ನಿಮ್ಮನ್ನು ಸದಾಕಾಲ ಸ್ಮರಿಸುತ್ತಾರೆ. ಆದರೆ ಹೋರಾಟ ಕೈ ಬಿಡಬೇಡಿ.

ಶಿವನಗೌಡ ನಾಯಕ

ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry