ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಹಾರ ಕ್ಷೇತ್ರ; ವಿಜ್ಞಾನ ಬಳಕೆ ಹೆಚ್ಚಲಿ’

Last Updated 1 ಡಿಸೆಂಬರ್ 2017, 8:43 IST
ಅಕ್ಷರ ಗಾತ್ರ

ಮೂಡಿಗೆರೆ: ಆಹಾರ ಕ್ಷೇತ್ರದಲ್ಲಿ ವಿಜ್ಞಾನ ತಂತ್ರಜ್ಞಾನದ ಬಳಕೆ ಇನ್ನಷ್ಟು ಹೆಚ್ಚಳವಾಗಬೇಕು ಎಂದು ತೋಟಗಾರಿಕೆ ಮಹಾವಿದ್ಯಾಲಯ ಡೀನ್‌ ಹನುಮಂತಪ್ಪ ಅಭಿಪ್ರಾಯಪಟ್ಟರು. ಪಟ್ಟಣದ ಎಂಇಎಸ್‌ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದಲ್ಲಿ ಏರಿಕೆಯಾಗುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ, ಮಿತವಾಗಿರುವ ಭೂಮಿಯಲ್ಲಿ ಗರಿಷ್ಠ ಪ್ರಮಾಣದ ಆಹಾರ ಉತ್ಪಾದನೆ ಮಾಡಲು ವಿಜ್ಞಾನ ಹಾಗೂ ತಂತ್ರಜ್ಞಾನದ ಕೊಡುಗೆ ಅಗತ್ಯವಾಗಿದೆ. ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡು, ದೇಶಕ್ಕೆ ಅಗತ್ಯವಾಗಿರುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವತ್ತ ಮುಂದಾಗಬೇಕು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಪನ್ಮೂಲ ಅಧಿಕಾರಿ ರಿಯಾಜ್‌ ಅಹಮ್ಮದ್‌ ಮಾತನಾಡಿ, ‘ವಿಜ್ಞಾನ ವಸ್ತು ಪ್ರದರ್ಶನವು ಬಾಲವಿಜ್ಞಾನ ಮೇಳದಂತೆ ಕಂಗೊಳಿಸುತ್ತಿದ್ದು, ಭವಿಷ್ಯದಲ್ಲಿ ಭಾರತಕ್ಕೆ ಬಾಲಕರು ನೀಡುವ ಕೊಡುಗೆಗೆ ಕನ್ನಡಿ ಹಿಡಿದಂತಿದೆ.

ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ, ರಾಷ್ಟ್ರದ ಸಂಪತ್ತೆಲ್ಲವೂ ಪೆಟ್ರೋಲಿಯಂ ಉತ್ಪನ್ನಗಳಿಗೆ ಕಳೆದು ಹೋಗುತ್ತಿದ್ದು, ಇದರಿಂದ ಭಾರತದ ಆದಾಯ ಪೆಟ್ರೋಲಿಯಂ ಉತ್ಪಾದನಾ ದೇಶಗಳಿಗೆ ರವಾನೆಯಾಗುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ರದ್ದು ಪಡಿಸಿ ಪರಿಸರಸ್ನೇಹಿ ಇಂಧನಗಳನ್ನು ಬೆಳೆಸುವ ಕುರಿತು ಹೆಚ್ಚು ಅನ್ವೇಷಣೆ ನಡೆಸಬೇಕು’ ಎಂದರು.

ಎಂಇಎಸ್‌ ಶಾಲೆಯ ಮುಖ್ಯಸ್ಥ ಎಂ.ಎಸ್‌. ಹರೀಶ್‌ ಮಾತನಾಡಿ, ‘ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ವಿಜ್ಞಾನ ವಸ್ತು ಪ್ರದರ್ಶನವನ್ನು ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳು ವಿಜ್ಞಾನದ ಪ್ರಗತಿಯನ್ನು ದೇಶದ ಸದ್ಭಳಕೆಗೆ ಬಳಸಿಕೊಳ್ಳಬೇಕು.

ಜಗತ್ತಿನ ನಾನಾ ರಾಷ್ಟ್ರಗಳು ವಿಜ್ಞಾನದ ಸಾಧನೆಯನ್ನು ದುರುದ್ದೇಶಗಳಿಗೆ ಬಳಸಿಕೊಳ್ಳುತ್ತಿರುವುದು ಕಳವಳಕಾರಿಯಾಗಿದೆ’ ಎಂದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಚಿಂಟು, ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿ ರಾಮೇಗೌಡ, ಶಿಕ್ಷಕರಾದ ಫರ್ಜಾನ, ಮೀನಾಕ್ಷಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT