ಮಂಗಳವಾರ, ಮಾರ್ಚ್ 2, 2021
26 °C

ಫ್ಯಾಷನ್ ಎಂಬ ಮಾಯಾವಿ

ಮೇದಿನಿ ಎಂ. ಭಟ್‌ Updated:

ಅಕ್ಷರ ಗಾತ್ರ : | |

ಫ್ಯಾಷನ್ ಎಂಬ ಮಾಯಾವಿ

ಅವಳೆಂದರೆ ರೂಪವತಿ.. ಅವಳೆಂದರೆ ನೀರೊಳಗಣ ಮೀನಿನ ಹೆಜ್ಜೆಯಂತೆ ಸೂಕ್ಷ್ಮ-ಸುಪ್ತಗಳ ಮಾನಿನಿ. ಅವಳೆಂದರೆ ಸೌಂದರ್ಯದ ಗಣಿ. ಅವಳು ಅವಳನ್ನೊಮ್ಮೆ ಶೃಂಗರಿಸಿಕೊಂಡಳೆಂದರೆ; ಕಾಡಿಗೆಯ ಕಪ್ಪು ಕಣ್ಣಲ್ಲೇ ಮಿನುಗುತ್ತದೆ. ಆ ಜುಮುಕಿ ಸಾವಿರ ಸಲ್ಲಾಪಗಳನ್ನ ಹಾಡುತ್ತದೆ. ತಲೆಯಲ್ಲಿನ ಮಲ್ಲಿಗೆ ಮತ್ತೆ ಅರಳುತ್ತೆ. ಹಣೆಯಲ್ಲಿನ ಸಿಂಧೂರ ಬಿಮ್ಮಗೆ ಬೀಗುತ್ತದೆ. ಹಾ ಅವಳೆಂದರೆ ಹಾಗೆ! ಅವಳ ಸ್ಪರ್ಶದಿಂದ ಕೈ ಬಳೆಗಳು, ಕಾಲ್ಗೆಜ್ಜೆ ಎಲ್ಲವು ಮರುಜೀವ ಪಡೆದುಕೊಳ್ಳುತ್ತದೆ. ಇಲ್ಲಿ ಅವಳೆಂದರೆ ಪ್ರತಿ ಹೆಣ್ಣು. ನಾಲ್ಕು ಗೋಡೆಯೊಳಗೆ ಅವಳ ಬದುಕು ಸೀಮಿತ ಎನ್ನುವಂತಿದ್ದ ಕಲ್ಪನೆಯನ್ನು ಪ್ರಬಲವಾಗಿ ಆಧುನಿಕತೆಗೆ ತಕ್ಕಂತೆ ಚೇಂಜ್ ಮಾಡಿದ್ದು ಈ ಫ್ಯಾಷನ್ ಲೋಕ.

ದಿನೇ ದಿನೇ ಬದಲಾಗುತ್ತಿರುವ ಈ ಲೋಕದಲ್ಲಿ ತನ್ನದೊಂದು ಛಾಪನ್ನು ಮೂಡಿಸುವುದಕ್ಕೆ ಒಂದು ತೆರನಾಗಿ ಸಹಾಯ ಮಾಡುತ್ತಿರುವುದು ಕೂಡ ಈ ಫ್ಯಾಷನ್ ಲೋಕವೇ.

ಇತ್ತೀಚೆಗಷ್ಟೇ ಫ್ಯಾಷನ್ ಲೋಕಕ್ಕೆ ಲಗ್ಗೆ ಇಟ್ಟ ಫಲಾಜೋ ಧರಿಸಿ, ಮೇಲೊಂದು ಅದಕ್ಕೊಪ್ಪುವ ಕ್ರಾಪ್ ಟಾಪ್, ಹಾಗೇ ತನ್ನ ತನವನ್ನು ದುಪ್ಪಟ್ಟುಗೊಳಿಸೋ ದುಪ್ಪಟ್ಟ, ಬಣ್ಣಗಳಿಂದ ಚಿತ್ತಾರಗೊಂಡ ಆ ಕೈಗೊಂದು ಫಾಸ್ಟ್ರ್ಯಾಕ್‌ ವಾಚ್, ಜೊತೆಗೊಂದು ಝೆನಿಟಿ ಬ್ಯಾಗ್, ಕಂಪ್ಯೂಟರ್ ಕಿರಣಗಳಿಂದ ಸುರಕ್ಷತೆಗೆ ಎಂಬ ನೆಪ ಹಿಡಿದು ಕ್ಲಾಸಿ ಆಗಿ ಕಾಣೋಕೆ ಮೂಗಿನ ಮೇಲೊಂದು ಕನ್ನಡಕ. ತನ್ನ ಮೊದಲ ಜಾಬ್, ಮೊದಲ ದಿನ ತನ್ನನ್ನ ತಾನು ಮೀರಾ ಅಲಂಕರಿಸಿಕೊಂಡಿದ್ದನ್ನು ನೋಡಿ, ಈಗಿನ ಕಾಲದ ಹುಡುಗಿಯರು ತಮ್ಮನ್ನ ತಾವು ಒಪ್ಪಗೊಳಿಸಿಕೊಳ್ಳುವ ಪರಿಯೇ ಚಂದ ಅನಿಸದೇ ಇರದು. ಈ ಫ್ಯಾಷನ್ ಲೋಕ ಅದೆಷ್ಟು ಚಂದ ಅಂತ ಅನ್ನಿಸುವುದೇ ಆಗ.

ಮೂಗುತಿ ಧರಿಸಿ ಗೌರಮ್ಮಳಾಗಿದ್ದವಳನ್ನು ಮತ್ತೆ ಆಧುನಿಕತೆಗೆ ಬೆರೆಸಿದ್ದು ಇದೇ ಫ್ಯಾಷನ್ ಲೋಕ..!

ಕಾಲ್ಗೆಜ್ಜೆ ಧರಿಸುತ್ತಾ ಹಳೇ ಕಾಲದವಳಾಗಿದ್ದವಳನ್ನ ಮತ್ತೆ ಜಿಲ್ ಗುಡಿಸಿದ್ದು  ಇದೇ ಫ್ಯಾಷನ್ ಲೋಕ..!   

ಪುರಾತನವಾದ ಜುಮುಕಿಗೆ ಅಲ್ಪ ವಿರಾಮಕೊಟ್ಟು ಮತ್ತೆ ಪರಿಚಯಿಸಿದ್ದು ಇದೇ ಫ್ಯಾಷನ್ ಲೋಕ...!

ಫ್ಯಾಷನ್ ಅನ್ನೋದು ದಿನದಿಂದ ದಿನಕ್ಕೆ ಹೊಸರೂಪಗಳನ್ನ ತಾಳುತ್ತಲೇ ಬಂದಿದೆ. ಅದಕ್ಕೇ ಇರಬೇಕು ಇದನ್ನು ಫ್ಯಾಷನ್ ಅನ್ನೋದು. ಯುವಪೀಳಿಗೆಯನ್ನು ಅತ್ಯಂತ ಪ್ರಭಾವಶಾಲಿಯಾಗಿ ತನ್ನೆಡೆಗೆ ಸೆಳೆದುಕೊಂಡು, ಪದರ ಪದರವಾಗಿ ಪಕ್ವಗೊಳ್ಳುತ್ತಿರುವ ಏಕೈಕ ಕ್ಷೇತ್ರ ಅಂದರೆ ಬಹುಶಃ ಫ್ಯಾಷನ್ ಲೋಕವಿರಬೇಕು. ಮುಂದಿನವಾರ ಸಂಬಳ ಬಂದ ಮೇಲೆ ತೊಗೆದುಕೊಳ್ಳೋಣ ಎಂದು ಆರಿಸಿಟ್ಟ ಡ್ರೆಸ್ ಅವತ್ತಿಗೆ ಮಾರುಕಟ್ಟೆಯಿಂದಾನೆ ಮಾಯವಾಗಿರತ್ತೆ. ಚಂದ ಕಂಡ ಕಿವಿಯೋಲೆಯನ್ನು ಕಾರ್ಟ್‌ಗೆ ಹಾಕಿ, ಮರುದಿನ ಸಹೋದ್ಯೋಗಿ ಅದೇ ಕಿವಿಯೋಲೆ ಧರಿಸಿದ್ದನ್ನು ನೋಡಿ ಮನಸ್ಸು ಪೆಚ್ಚಾಗಿರುತ್ತೆ . ಹೀಗೇ ಕಣ್ಮುಚ್ಚಿ ಕಣ್ ಬಿಡುವುದರೊಳಗೆ ಬದಲಾಗೋ ಈ ಫ್ಯಾಷನ್ ಒಂಥರಾ ಮಾಯಾವಿಯೇ ಸರಿ.

ಫ್ಯಾಷನ್ ಅಂದರೆ ಕೇವಲ ಬಟ್ಟೆಯಲ್ಲ. ಅದು ಕೇವಲ ಅಲಂಕಾರವಲ್ಲ, ಅಥವಾ ಅದು ಬರೀ ಬದಲಾದ ಜಗತ್ತಲ್ಲ. ಅಲ್ಲಿ ನಿರುಮ್ಮಳವಾಗಿ ಉಸಿರಾಡಬಲ್ಲ ಅನೇಕ ನೀರೆಯರ ಸಮಾಧಾನವಿದೆ. ಅನೇಕ ಕನಸುಗಳ ಸಾಕಾರವಿದೆ. ತಾನು, ತನ್ನದು ತನ್ನ ತನವೆಂಬ ಆತ್ಮೀಯತೆ ಇದೆ. ಅಲ್ಲಿ ಓಡುತ್ತಿರುವ ಜಗತ್ತಿನೊಂದಿಗೆ ತಾನೂ ಬೆಸೆದುಕೊಂಡಿದ್ದೇನೆ ಎಂಬ ಭರವಸೆ ಇದೆ.

ಫ್ಯಾಷನ್ ಅಂದರೆ ಅದು ಕಂಫರ್ಟ್..!

ಅಯ್ಯೋ ತನಗೆ ಈ ಡ್ರೆಸ್ ಕೆಟ್ಟದಾಗಿ ಕಾಣಬಹುದೇನೋ, ಅಕ್ಕಪಕ್ಕದವರು ತನ್ನ ಬಗ್ಗೆ ಏನಂದುಕೊಂಡಾರೋ, ರಸ್ತೆ ಬದಿಯಲ್ಲಿನ ಹುಡುಗರು ಏನ್ ಕಾಮೆಂಟ್ ಪಾಸ್ ಮಾಡ್ತಾರೋ ! ಉಹುಂ ಇಂತಹದನ್ನೆಲ್ಲ ಮೀರಿ ತಾನು ಕಂಫರ್ಟಬಲ್ ಆಗಿರಬೇಕು ಅಷ್ಟೇ ಅನ್ನೋ ಆ attitude ಮತ್ತೆ ಆತ್ಮವಿಶ್ವಾಸವನ್ನ ಹೆಣ್ಣೊಳಗೇ ತುಂಬಿರುವುದು ಈ ಫ್ಯಾಷನ್.

ಫ್ಯಾಷನ್ ಅಂದರೆ ಅದು ಹಳೆಯದರೊಂದಿಗೆ ಹೊಸತನದ ತಳುಕು..!

ಸಾಂಪ್ರದಾಯಕವಾದ ದೇಸಿ ಉಡುಗೆ ತೊಡುಗೆಗಳು ಆಧುನಿಕತೆಯ ಮಜಲಿನೊಂದಿಗೆ ತಳುಕಿಕೊಂಡು ಹೊಸರೂಪ ಪಡೆದುಕೊಳ್ಳುತ್ತಿದೆ. ಹಳೆ ಕಾಲದ ಅದೆಷ್ಟೋ ವಿಷಯಗಳು ಕೊಂಚ ಬದಲಾವಣೆಯೊಂದಿಗೆ ಆಧುನಿಕತೆಯ ಹೆಸರಿನಲ್ಲಿ ವಿಜೃಂಭಿಸುತ್ತಿದೆ. ಕಾಲ ಬದಲಾಗಬಹುದು, ಜನ ಬದಲಾಗಬಹುದು, ಆದರೆ ನಮ್ಮ ಅಭಿರುಚಿ, ದೇಸಿ ಸೊಗಡು ಸಂಸ್ಕೃತಿ ನಮಗೇ ಗೊತ್ತಿಲ್ಲದೇ ನಮ್ಮ ಫ್ಯಾಷನ್ ಲೋಕದ ಎಲ್ಲದರಲ್ಲೂ ಹಾಸುಹೊಕ್ಕಾಗಿದೆ.

ಫ್ಯಾಷನ್ ಅಂದರೆ ಅದು "ಚಂದ"‌

ಪ್ರತೀ ಹೆಣ್ಣಿಗೂ ತಾನು ಚೆನ್ನಾಗಿ ಕಾಣಬೇಕು ಅನ್ನೋ ಆಸೆ ಇದ್ದೇ ಇರತ್ತೆ. ಅಂತವರಿಗೆ ಈ ಫ್ಯಾಷನ್ ಲೋಕ ಅಗಾಧವಾದ ಅವಕಾಶವನ್ನಿತ್ತಿದೆ. ಅದಕ್ಕೇ ಅಂತ ಸೌಂದರ್ಯ ಪರಿಕರಗಳ ಮೊರೆ ಹೋಗುವವರ ಇಂಟೆರೆಸ್ಟಿಂಗ್ ತಾಣ ಇದು.   

ಇಷ್ಟಕ್ಕೂ ಯಾವುದೂ ಕೂಡ ತನ್ನಿಂದ ತಾನೇ ಸೃಷ್ಟಿಯಾಗುವಂತದ್ದಲ್ಲ. ಒಬ್ಬೊಬ್ಬರ ಅಭಿರುಚಿ ಒಂದೊಂದು ತೆರನಾಗಿದ್ದರೂ ಫ್ಯಾಷನ್ ಲೋಕದ ಇಷ್ಟೆಲ್ಲಾ ಬೆಳವಣಿಗೆಗೆ ಕಾರಣರಾಗಿರೋ ಫ್ಯಾಷನ್ ಡಿಸೈನರ್ಸ್‌, ತಮ್ಮದೇ ಆದ ಹೊಸ ಹೊಸ ಟ್ರೆಂಡ್‌ಗಳನ್ನು ಹುಟ್ಟುಹಾಕುತ್ತಿರುವ ಟ್ರೆಂಡ್ ಸೆಟ್ಟರ್ಸ್‌ ಗಳ ಕ್ರೀಯಾಶೀಲತೆ ನಿಜಕ್ಕೂ ಪ್ರಶಂಸನೀಯ.

ಮೇದಿನಿ ಎಂ. ಭಟ್‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.