ಮಂಗಳವಾರ, ಮಾರ್ಚ್ 2, 2021
29 °C

ಪಯಣದ ಮಾಸಕ್ಕೆ ಸ್ವಾಗತಕೋರಿ

ಗೀತಾ ಕುಂದಾಪುರ Updated:

ಅಕ್ಷರ ಗಾತ್ರ : | |

ಪಯಣದ ಮಾಸಕ್ಕೆ ಸ್ವಾಗತಕೋರಿ

ಚಳಿಗಾಲದೊಡನೆ ಪಯಣದ ಮಾಸವೂ ಆರಂಭ. ತಣ್ಣನೆಯ ಗಾಳಿಯಲ್ಲಿ ಹಸಿರು ಬೆಟ್ಟಗುಡ್ಡಗಳ ನಡುವೆ ತಿರುಗಾಡುವುದು ಆಹ್ಲಾದಕರ ಅನುಭವ. ಅಂಥದ್ದೊಂದು ಅನುಭವ ಪಡೆಯಲು ಹಾಸನ ಜಿಲ್ಲೆಯ ಸಕಲೇಶಪುರ ಬಳಿಯ ಮಂಜಿರಾಬಾದ್ ಕೋಟೆ ಮತ್ತು ಮಗಜಹಳ್ಳಿ ಅಬ್ಬಿ ಜಲಪಾತ ಪ್ರವಾಸಿಗರಿಗೆ ಹೇಳಿಮಾಡಿಸಿದ ತಾಣ.

ಹಾಸನ ಜಿಲ್ಲೆಯ ಸಕಲೇಶಪುರ  ತಾಲ್ಲೂಕು ಕಾಫಿ, ಅಡಿಕೆ, ಏಲಕ್ಕಿ ಮತ್ತು ಕಾಳುಮೆಣಸಿನ ತವರೂರು. ಸಕಲೇಶಪುರದಿಂದ 10 ಕಿ.ಮೀ. ದೂರವಿರುವ ಮಂಜರಾಬಾದ್ ಕೋಟೆ ಚಾರಣಿಗರು, ಪ್ರಕೃತಿಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳ.

ಮಂಜರಾಬಾದ್ ಕೋಟೆಯು ಸಮುದ್ರಮಟ್ಟದಿಂದ 1000 ಮೀಟರ್ ಎತ್ತರದಲ್ಲಿದೆ. ಎತ್ತರದ ಪ್ರದೇಶದಲ್ಲಿರುವ ಈ ಕೋಟೆಯನ್ನು ಹತ್ತಲು ಸುಮಾರು 200 ಮೆಟ್ಟಿಲುಗಳಿವೆ. ಕೋಟೆ ಹತ್ತುವಾಗ ಸ್ವಲ್ಪ ದಣಿವೆನಿಸಿದರೂ ಸುತ್ತಲ ಪ್ರಕೃತಿ ಸೌಂದರ್ಯ, ಆಹ್ಲಾದಕರ ವಾತಾವರಣಕ್ಕೆ ಮನಸು ಉಲ್ಲಸಿತವಾಗುತ್ತದೆ. 1792ರಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ಟಿಪ್ಪುಸುಲ್ತಾನ್ ಈ ಕೋಟೆಯನ್ನು ಕಟ್ಟಿಸಿದ್ದನಂತೆ. ನಕ್ಷತ್ರಾಕಾರಾದ ಈ ಬೃಹತ್ ಕೋಟೆಯ ವಿನ್ಯಾಸವನ್ನು ಫ್ರೆಂಚ್ ಎಂಜಿನಿಯರ್‌ಗಳು ಮಾಡಿದ್ದಾರೆ. ಕೋಟೆ ಕಟ್ಟುವ ಸಮಯದಲ್ಲಿ ಇದು ಮಂಜಿನಿಂದ ಆವೃತ್ತವಾಗಿತ್ತು. ಮಂಜರಾಬಾದ್‌ ಕೋಟೆ ಎಂಬ ಹೆಸರು ಬಂತು ಎಂಬ ಪ್ರತೀತಿ ಇದೆ.

ಅಷ್ಟಭುಜಾಕೃತಿಯಲ್ಲಿರುವ ಈ ಕೋಟೆಯನ್ನು ಗ್ರಾನೈಟ್ ಕಲ್ಲಿನಿಂದ ಕಟ್ಟಲಾಗಿದ್ದು, ಒಳಭಾಗದಲ್ಲಿ ಸುಣ್ಣದ ಗಾರೆಯಿದೆ. ಗೋಡೆಗಳು ಇಳಿಜಾರಾಗಿವೆ. ಕೋಟೆಯೊಳಗೆ ಸೈನಿಕರು ತಂಗಲು ವ್ಯವಸ್ಥೆ, ಶಸ್ತ್ರಾಗಾರ, ಉಗ್ರಾಣ ಹಾಗೂ ಮೆಟ್ಟಿಲುಗಳಿರುವ ಬಾವಿಯೂ ಇದೆ. ಕೋಟೆಯೊಳಗೆ ಎರಡು ಭೂಗತ ಉಗ್ರಾಣಗಳೂ ಇದ್ದು, ಅಲ್ಲಿ ಮದ್ದುಗುಂಡುಗಳನ್ನು ಸಂಗ್ರಹಿಸಿಡುತ್ತಿದ್ದರಂತೆ. ಮಂಜರಾಬಾದ್ ಕೋಟೆಯಿಂದ ಶ್ರೀರಂಗಪಟ್ಟಣದ ಕೋಟೆಗೆ ಸಂಪರ್ಕ ಕಲ್ಪಿಸುವ ಸುರಂಗ ಮಾರ್ಗವೂ ಇದೆ ಎಂದು ಕೆಲವರು ಹೇಳುತ್ತಾರೆ.

ಮಳೆಗಾಲ ಮುಗಿದ ನಂತರ, ಅಂದರೆ ಸೆಪ್ಟೆಂಬರ್‌ನಿಂದ ಫೆಬ್ರುವರಿ ಅವಧಿಯಲ್ಲಿ ಕೋಟೆಗೆ ಭೇಟಿ ನೀಡುವುದು ಸೂಕ್ತ.

ಮಗಜಹಳ್ಳಿ ಅಬ್ಬಿ

ಅಬ್ಬಿ ಜಲಪಾತದ ಹೆಸರನ್ನು ಅನೇಕರು ಕೇಳಿರಬಹುದು. ಅದು ಮಡಿಕೇರಿ ಸಮೀಪ ಇರುವ ಪ್ರಸಿದ್ಧ ತಾಣ. ಸಕಲೇಶಪುರ ಸಮೀಪ ಇರುವ ಮಗಜಹಳ್ಳಿ ಅಬ್ಬಿ ಜಲಪಾತವನ್ನು ಕಂಡವರು, ಕೇಳಿದವರ ಸಂಖ್ಯೆ ತುಂಬಾ ಕಡಿಮೆ. ಇದು ಸಕಲೇಶಪುರದಿಂದ 20 ಕಿ.ಮೀ. ದೂರದಲ್ಲಿದೆ. ಇಲ್ಲಿ 20 ಅಡಿ ಎತ್ತರದಿಂದ ನೀರು ಧುಮ್ಮಿಕ್ಕುತ್ತದೆ. ಜಲಪಾತ ತಲುಪುವ ಮಾರ್ಗ ದುರ್ಗಮವಾಗಿದೆ. ಈ ಜಲಪಾತದ ಸುತ್ತಮುತ್ತ ಮರಗಿಡಗಳಿದ್ದು, ಎತ್ತರದ ಪ್ರದೇಶದಿಂದ ಧುಮ್ಮಿಕ್ಕುವ ನೀರು ಕಲ್ಲುಬಂಡೆಗಳ ಮೇಲೆ ಹರಿಯುವುದನ್ನು ನೋಡುವುದೇ ಚೆಂದ.

ಮಳೆಗಾಲದಲ್ಲಿ ನೀರಿನ ರಭಸ ಹೆಚ್ಚು. ಜಲಪಾತಕ್ಕೆ ಇಳಿಯುವವರು ಜಾಗ್ರತೆಯಿಂದ ಇರಬೇಕು. ಜಲಪಾತ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಪ್ಲಾಸ್ಟಿಕ್ ಮತ್ತು ಕಸ ಕಂಡುಬರುವುದಿಲ್ಲ. ಸ್ಥಳದ ನಿರ್ವಹಣೆ ಚೆನ್ನಾಗಿದೆ. ಪ್ರವಾಸಕ್ಕೆಂದು ಬಂದವರು ಸ್ವಚ್ಛತೆ ಕಾಪಾಡಲು ಗಮನಕೊಡಬೇಕು.

ಬೆಂಗಳೂರಿನಿಂದ ಬೆಳಿಗ್ಗೆಯೇ ಹೊರಟರೆ ಮಂಜರಾಬಾದ್ ಕೋಟೆ ಮತ್ತು ಮಗಜಹಳ್ಳಿ ಅಬ್ಬಿ ಜಲಪಾತದ ಸೌಂದರ್ಯವನ್ನು ಒಂದೇ ದಿನದಲ್ಲಿ ಕಣ್ತುಂಬಿಕೊಳ್ಳಬಹುದು.

**

ಹೀಗೆ ಬನ್ನಿ

ಬೆಂಗಳೂರು– ಕುಣಿಗಲ್– ಚನ್ನರಾಯಪಟ್ಟಣ– ಹಾಸನ– ಸಕಲೇಶಪುರ– ಮಂಜರಾಬಾದ್– ಮಗಜಹಳ್ಳಿ ಅಬ್ಬಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.