ಬುಧವಾರ, ಮಾರ್ಚ್ 3, 2021
25 °C
ಅಮಾಯಕರನ್ನು ಸಿಲುಕಿಸಲು ಆನ್‌ಲೈನ್‌ ವಂಚಕರ ಹೊಸ ತಂತ್ರ

‘ರೆಸ್ಯುಮೆ’ ಕದ್ದು ಬ್ಯಾಂಕ್‌ ಖಾತೆಗೆ ಕನ್ನ

ಸಂತೋಷ ಜಿಗಳಿಕೊಪ್ಪ Updated:

ಅಕ್ಷರ ಗಾತ್ರ : | |

‘ರೆಸ್ಯುಮೆ’ ಕದ್ದು ಬ್ಯಾಂಕ್‌ ಖಾತೆಗೆ ಕನ್ನ

ಬೆಂಗಳೂರು: ಉದ್ಯೋಗಕ್ಕಾಗಿ ಜಾಲತಾಣಗಳಲ್ಲಿ ವೈಯಕ್ತಿಕ ಮಾಹಿತಿ ಅಪ್‌ಲೋಡ್‌ ಮಾಡುವವರ ‘ರೆಸ್ಯುಮೆ (ಸ್ವ–ವಿವರ)’ ಕದಿಯುತ್ತಿರುವ ಆನ್‌ಲೈನ್‌ ವಂಚಕರು, ಅವರ ಹೆಸರಿನಲ್ಲಿ ಮೊಬೈಲ್‌ ಬ್ಯಾಂಕಿಂಗ್‌ ವಾಲೆಟ್‌ಗಳಲ್ಲಿ ನಕಲಿ ಖಾತೆಗಳನ್ನು ತೆರೆದು ಪರರ ಬ್ಯಾಂಕ್‌ ಖಾತೆಗಳಿಗೆ ಕನ್ನ ಹಾಕುತ್ತಿದ್ದಾರೆ.

ಈ ವಂಚಕರ ಜಾಲದ ಕೃತ್ಯವನ್ನು ಬಯಲು ಮಾಡಿರುವ ಸಿಐಡಿ ಸೈಬರ್‌ ವಿಭಾಗದ ಪೊಲೀಸರು, ತಲೆಮರೆಸಿಕೊಂಡಿರುವ ಜಾಲದ ಆರೋಪಿಗಳನ್ನು ಪತ್ತೆ ಹಚ್ಚುತ್ತಿದ್ದಾರೆ. ಉದ್ಯೋಗ ಆಕಾಂಕ್ಷಿಗಳ ರೆಸ್ಯುಮೆಗಳನ್ನು ರಕ್ಷಿಸುವಂತೆ ಜಾಲತಾಣಗಳಿಗೆ ಎಚ್ಚರಿಕೆ ಸಹ ನೀಡಿದ್ದಾರೆ.

‘ಕೋರಮಂಗಲದ ಖಾಸಗಿ ಕಂಪೆನಿಯ ಉದ್ಯೋಗಿಗೆ ಇತ್ತೀಚೆಗೆ ಕರೆ ಮಾಡಿದ್ದ ವಂಚಕ, ಬ್ಯಾಂಕ್‌ ಅಧಿಕಾರಿ ಎಂದು ಹೇಳಿ ವೈಯಕ್ತಿಕ ಹಾಗೂ ಬ್ಯಾಂಕ್‌ ಖಾತೆ ಮಾಹಿತಿ ಪಡೆದಿದ್ದ. ಕೆಲ ನಿಮಿಷಗಳಲ್ಲೇ ₹20,000 ಡ್ರಾ ಮಾಡಿಕೊಂಡಿದ್ದ. ಈ ಬಗ್ಗೆ ಉದ್ಯೋಗಿ ನೀಡಿದ್ದ ದೂರಿನನ್ವಯ ತನಿಖೆ ನಡೆಸಿದಾಗ ಜಾಲದ ಕೃತ್ಯ ತಿಳಿಯಿತು’ ಎಂದು ಸೈಬರ್‌ ವಿಭಾಗದ ಪೊಲೀಸರು ತಿಳಿಸಿದರು.

‘ಡ್ರಾ ಆಗಿದ್ದ ಹಣವು ಮಡಿವಾಳದ ಯುವಕನೊಬ್ಬನ ವಾಲೆಟ್‌ ಆ್ಯಪ್‌ಗೆ ವರ್ಗಾವಣೆಯಾಗಿತ್ತು. ಆ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ಅಮಾಯಕ ಎಂಬುದು ತಿಳಿಯಿತು. ಉದ್ಯೋಗಕ್ಕಾಗಿ ಆತ ಜಾಲತಾಣವೊಂದರಲ್ಲಿ ರೆಸ್ಯುಮೆ ಅಪ್‌ಲೋಡ್‌ ಮಾಡಿದ್ದ. ಆ ಮಾಹಿತಿ ಕದ್ದಿದ್ದ ವಂಚಕರು, ಮೊಬೈಲ್‌ ವಾಲೆಟ್‌ನಲ್ಲಿ ನಕಲಿ ಖಾತೆ ತೆರೆದಿದ್ದರು. ಉದ್ಯೋಗಿಯಿಂದ ಕದ್ದಿದ್ದ ಹಣವನ್ನು ಆ ವಾಲೆಟ್‌ಗೆ ವರ್ಗಾವಣೆ ಮಾಡಿಕೊಂಡು, ನಂತರ ಬೀಟ್‌ ಕಾಯಿನ್‌ ಆಗಿ ಪರಿವರ್ತಿಸಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಆಫ್‌ ಕೆವೈಸಿ’ ಕಂಟಕ: ಪೇಟಿಎಂ, ಪೇಯುಮನಿ, ಮೊಬಿಕ್ವಿಕ್‌, ಸಿಟಿ ಮಾಸ್ಟರ್‌ ಪಾಸ್‌, ಐಸಿಐಸಿಐ ಪಾಕೆಟ್ಸ್‌, ಎಚ್‌.ಡಿ.ಎಫ್‌.ಸಿ ಚಿಲ್ಲರ್‌, ಲಿಮೆ ಸೇರಿ ಹಲವು ಮೊಬೈಲ್‌ ಬ್ಯಾಂಕಿಂಗ್‌ ವಾಲೆಟ್‌ ಆ್ಯಪ್‌ಗಳಿವೆ. ಇವುಗಳಲ್ಲಿ ಲೋಪಗಳಿದ್ದು, ಅದನ್ನೇ ಬಂಡವಾಳ ಮಾಡಿಕೊಂಡ ವಂಚಕರು ಹಣ ಸಂಪಾದನೆಗೆ ದಾರಿ ಮಾಡಿಕೊಂಡಿದ್ದಾರೆ.

‘ಯಾವುದೇ ದಾಖಲೆ ಹಾಗೂ ಮೊಬೈಲ್‌ ನಂಬರ್‌ ಇದ್ದರೆ, ಯಾರ ಬೇಕಾದರೂ ಈ ಆ್ಯಪ್‌ಗಳಲ್ಲಿ ತ್ವರಿತವಾಗಿ ಖಾತೆ ತೆರೆಯಬಹುದು. ಕೆಲ ದಾಖಲೆಗಳ ವಿವರ ನಮೂದಿಸಿ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಫೋಟೊ ಸಹ ಅವಶ್ಯಕತೆ ಇರುವುದಿಲ್ಲ. ನಂತರ 15 ದಿನಗಳವರೆಗೆ ಬ್ಯಾಂಕ್‌ಗೆ ಹೋಗದೆ ಈ ತಾತ್ಕಾಲಿಕ ಖಾತೆ ಮೂಲಕ ಹಣ ಜಮೆ ಹಾಗೂ ವರ್ಗಾವಣೆ ಮಾಡಬಹುದು. ನಂತರ ಬ್ಯಾಂಕ್‌ ಶಾಖೆಗೆ ಹೋಗಿ ದಾಖಲೆಗಳನ್ನು ಹಾಜರುಪಡಿಸಿದರೆ ಶಾಶ್ವತ ಖಾತೆಯ ಬಳಕೆಗೆ ಅವಕಾಶ ದೊರೆಯುತ್ತದೆ’ ಎಂದು ಸೈಬರ್‌ ವಿಭಾಗದ ಪೊಲೀಸರು ತಿಳಿಸಿದರು.

‘ಪ್ರತಿ ಆ್ಯಪ್‌ಗಳಲ್ಲಿ ತಾತ್ಕಾಲಿಕ ಖಾತೆ ಮೂಲಕ ತಿಂಗಳಿಗೆ ₹20,000 ವಹಿವಾಟು ನಡೆಸಲು ಅನುಮತಿ ಇದೆ. ಸದ್ಯ 40ರಿಂದ 50 ವಾಲೆಟ್‌ಗಳಿವೆ. ಒಂದರಲ್ಲಿ ₹20,000ದಂತೆ 50 ಆ್ಯಪ್‌ಗಳಲ್ಲಿ ತಿಂಗಳಿಗೆ ₹10 ಲಕ್ಷ ವಹಿವಾಟು ನಡೆಸಬಹುದು’ ಎಂದರು.

‘ಜಾಲತಾಣಗಳನ್ನು ಹ್ಯಾಕ್‌ ಮಾಡಿ ರೆಸ್ಯುಮೆ ಕದಿಯುವ ಆನ್‌ಲೈನ್‌ ವಂಚಕರು, ಅದೇ ಮಾಹಿತಿ ಬಳಸಿ ವಾಲೆಟ್‌ಗಳಲ್ಲಿ 15 ದಿನಗಳವರೆಗೆ ವಹಿವಾಟು ನಡೆಸುತ್ತಿದ್ದಾರೆ. ನಂತರ ಆ ಖಾತೆಯನ್ನು ನಿಷ್ಕ್ರಿಯಗೊಳಿಸಿ ಸಾಕ್ಷ್ಯ ನಾಶ ಮಾಡುತ್ತಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ಕೋಟಕ್‌ ಮಹೇಂದ್ರ ಬ್ಯಾಂಕ್‌ ಅಧಿಕಾರಿಗೆ ಪತ್ರ: ‘ಮಡಿವಾಳದ ಖಾಸಗಿ ಉದ್ಯೋಗಿಯೊಬ್ಬರ ಖಾತೆಯಿಂದ ₹3 ಲಕ್ಷ, ಪೀಣ್ಯದ ಹಿರಿಯ ನಾಗರಿಕರ ಖಾತೆಯಿಂದ ₹2 ಲಕ್ಷ ಸೇರಿ ಹಲವು ಖಾತೆಗಳಿಗೆ ಖದೀಮರು ಕನ್ನ ಹಾಕಿದ್ದಾರೆ. ಅವೆಲ್ಲಕ್ಕೂ ವಾಲೆಟ್‌ ಆ್ಯಪ್‌ಗಳನ್ನು ಬಳಸಿದ್ದಾರೆ’ ಎಂದರು.

‘ಈ ಪ್ರಕರಣದಲ್ಲಿ ಇಬ್ಬರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವು. ಅವರು ಅಮಾಯಕರಾಗಿದ್ದರು. ರೆಸ್ಯುಮೆ ಕಳ್ಳತನ ಬಗ್ಗೆ ಅವರಿಂದ ಪ್ರತ್ಯೇಕ ದೂರು ಪಡೆದಿದ್ದೇವೆ. ವಂಚನೆಗೆ ಬಳಕೆಯಾದ ವಾಲೆಟ್‌ ಸೃಷ್ಟಿಕರ್ತರಾದ ಕೋಟಕ್‌ ಮಹೇಂದ್ರ ಬ್ಯಾಂಕ್‌ ಅಧಿಕಾರಿಗಳಿಗೆ ಪತ್ರ ಬರೆದು ಮಾಹಿತಿ ಕೋರಿದ್ದೇವೆ’ ಎಂದರು.

*

10 ಸಾವಿರ ರೆಸ್ಯುಮೆ ಕಳವು: ‘ರಾಜ್ಯದ 10 ಸಾವಿರಕ್ಕೂ ಹೆಚ್ಚು ಯುವಕರ ರೆಸ್ಯುಮೆಗಳನ್ನು ಜಾಲತಾಣಗಳಿಂದ ವಂಚಕರು ಕದ್ದಿದ್ದಾರೆ. 5 ಸಾವಿರಕ್ಕೂ ಹೆಚ್ಚು ನಕಲಿ ವಾಲೆಟ್‌ ಖಾತೆಗಳನ್ನು ತೆರೆದಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ನಕಲಿ ಖಾತೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಈಗಾಗಲೇ 2 ಸಾವಿರ ಖಾತೆಗಳನ್ನು ನಿಷ್ಕ್ರಿಯ ಮಾಡಿಸಿದ್ದು, ಉಳಿದ ಖಾತೆಗಳ ನಿಷ್ಕ್ರಿಯಕ್ಕಾಗಿ ಬ್ಯಾಂಕ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ’ ಎಂದು ವಿವರಿಸಿದರು.

‘ಆ್ಯಪ್‌ನಲ್ಲಿ ಜಮೆಯಾಗುವ ಹಣವನ್ನು ವಂಚಕರು ಬಿಟ್‌ ಕಾಯಿನ್‌ಗೆ ‍ಪರಿವರ್ತಿಸುತ್ತಿದ್ದಾರೆ. ಅದರ ಮೂಲವನ್ನು ಪತ್ತೆ ಹಚ್ಚುವುದು ಕಷ್ಟವಾಗಿರುವುದರಿಂದ, ಆರೋಪಿಗಳ ನಿಖರ ಮಾಹಿತಿ ಸಿಗುತ್ತಿಲ್ಲ’ ಎಂದರು.

*

ಬಳಕೆದಾರರ ಹಿತದೃಷ್ಟಿಯಿಂದ ವಾಲೆಟ್‌ಗಳಲ್ಲಿ ಕೆಲ ಬದಲಾವಣೆ ಅಗತ್ಯವಿದೆ. ಈ ಬಗ್ಗೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಅಧಿಕಾರಿಗಳಿಗೆ ಪತ್ರ ಬರೆಯಲಿದ್ದೇವೆ

– ಸಿಐಡಿ ಸೈಬರ್‌ ವಿಭಾಗದ ಪೊಲೀಸರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.