ಮಂಗಳವಾರ, ಮೇ 17, 2022
29 °C
ಜನಾಗ್ರಹ ಸಂಸ್ಥೆಯು ರಾಜಧಾನಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗ

ಆಟದ ಮೈದಾನ, ಉದ್ಯಾನದಲ್ಲಿ ನೀರು, ಶೌಚ ವ್ಯವಸ್ಥೆಯೇ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಟದ ಮೈದಾನ, ಉದ್ಯಾನದಲ್ಲಿ ನೀರು, ಶೌಚ ವ್ಯವಸ್ಥೆಯೇ ಇಲ್ಲ

ಬೆಂಗಳೂರು: ನಗರದಲ್ಲಿರುವ ಬಹುತೇಕ ಉದ್ಯಾನ ಹಾಗೂ ಆಟದ ಮೈದಾನಗಳಲ್ಲಿ ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆಯೇ ಇಲ್ಲ. ಶೇ 1ರಷ್ಟು ಆಟದ ಮೈದಾನ, ಶೇ 3ರಷ್ಟು ಉದ್ಯಾನಗಳಲ್ಲಿ ಮಾತ್ರ ಕುಡಿಯುವ ನೀರಿನ ವ್ಯವಸ್ಥೆ ಇದೆ.

ಜನಾಗ್ರಹ ಸಂಸ್ಥೆಯು ಉದ್ಯಾನ, ಆಟದ ಮೈದಾನ, ಶೌಚಾಲಯಗಳ ಬಗ್ಗೆ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಕಂಡುಬಂದಿದೆ.‌

ಸಮೀಕ್ಷೆ ಕುರಿತು ಮಾಹಿತಿ ನೀಡಿದ ಸಂಸ್ಥೆಯ ನಾಗರಿಕ ಸಹಭಾಗಿತ್ವ ವಿಭಾಗದ ಮುಖ್ಯಸ್ಥೆ ಸಪ್ನಾ ಕರೀಂ, ‘1,115 ಉದ್ಯಾನಗಳು, 192 ಆಟದ ಮೈದಾನಗಳಲ್ಲಿ ಸಮೀಕ್ಷೆ ನಡೆಸಲಾಯಿತು. ನೀರು, ಶೌಚಾಲಯ, ದೀಪಗಳು, ಆಟದ ಪರಿಕರಗಳು, ಪ್ರವೇಶ, ಭದ್ರತೆ ಸೇರಿದಂತೆ ಮೂಲಸೌಕರ್ಯಗಳ ಗುಣಮಟ್ಟವನ್ನು ಮೌಲ್ಯಮಾಪನ ಮಾಡಲಾಯಿತು’ ಎಂದು ತಿಳಿಸಿದರು.

‘ನಗರ ಪ್ರದೇಶಗಳಲ್ಲಿ ಉದ್ಯಾನ, ಆಟದ ಮೈದಾನದಂತಹ ತೆರೆದ ಸ್ಥಳಗಳ ಅಗತ್ಯವಿದೆ. 800 ಚದರ ಕಿ.ಮೀ. ಹಾಗೂ 1.20 ಕೋಟಿ ಜನಸಂಖ್ಯೆ ಹೊಂದಿರುವ ರಾಜಧಾನಿಯಲ್ಲಿ ಇವುಗಳಿಗೆ ಮೀಸಲಾಗಿರುವ ಸ್ಥಳ 19.31 ಚದರ ಕಿ.ಮೀ. ಮಾತ್ರ. ನಗರಾಭಿವೃದ್ಧಿ ಸಚಿವಾಲಯದ ನಗರ ಮತ್ತು ಪ್ರಾದೇಶಿಕ ಅಭಿವೃದ್ಧಿ ಯೋಜನೆಗಳ ಮಾರ್ಗಸೂಚಿಗಳಿಗೆ ಹೋಲಿಸಿದರೆ ಇದು ತೀರಾ ಕಡಿಮೆ’ ಎಂದರು.

‘ಬಿಬಿಎಂಪಿಯ 2016–17ನೇ ಸಾಲಿನ ಬಜೆಟ್‌ನಲ್ಲಿ ಉದ್ಯಾನ, ಆಟದ ಮೈದಾನಗಳಿಗೆ ₹94.11 ಕೋಟಿ ಮೀಸಲಿಡಲಾಗಿತ್ತು. ಆದರೆ, ₹101 ಕೋಟಿಯನ್ನು ಖರ್ಚು ಮಾಡಲಾಗಿತ್ತು. 2017–18ನೇ ಸಾಲಿನಲ್ಲಿ ₹165.31 ಕೋಟಿ ಮೀಸಲಿಡಲಾಗಿದ್ದು, ಬಹುತೇಕ ಯೋಜನೆಗಳು ಪ್ರಗತಿಯ ಹಂತದಲ್ಲಿವೆ’ ಎಂದು ಹೇಳಿದರು.

‘ಬಹುತೇಕ ಉದ್ಯಾನ, ಆಟದ ಮೈದಾನಗಳಲ್ಲಿ ಭದ್ರತಾ ಸಿಬ್ಬಂದಿ ನಿಯೋಜನೆ, ಉದ್ಯಾನಗಳಲ್ಲಿ ವಿಹಾರ ಪಥ, ಕುಳಿತುಕೊಳ್ಳಲು ಬೆಂಚ್‌ಗಳ ವ್ಯವಸ್ಥೆ ಕಲ್ಪಿಸಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಕುಡಿಯುವ ನೀರು ಹಾಗೂ ಶೌಚಾಲಯ ಸೌಲಭ್ಯ ಕಲ್ಪಿಸಿಲ್ಲ. ಪಾಲಿಕೆಯು ಇವುಗಳ ಮೂಲಸೌಕರ್ಯ ಅಭಿವೃದ್ಧಿಗೆ ಮತ್ತಷ್ಟು ಒತ್ತು ನೀಡಬೇಕಿದೆ’ ಎಂದು ಒತ್ತಾಯಿಸಿದರು.

ಸಮೀಕ್ಷೆ ಹೀಗಿತ್ತು: ‘ಪಾಲಿಕೆ ವ್ಯಾಪ್ತಿಯಲ್ಲಿರುವ ಜಿಯೋ ಕೋಡ್‌ ಹೊಂದಿರುವ ಉದ್ಯಾನ, ಆಟದ ಮೈದಾನಗಳನ್ನು ಆಯ್ಕೆ ಮಾಡಿದೆವು. ಸಮೀಕ್ಷೆಗಾಗಿ ತಲಾ 10 ಪ್ರಶ್ನೆಗಳನ್ನು ಸಿದ್ಧಪಡಿಸಿ, ಈ ಬಗ್ಗೆ ಸಮೀಕ್ಷೆ ನಡೆಸುವ ತಂಡಕ್ಕೆ ತರಬೇತಿ ನೀಡಿದೆವು. ಅವರು ಪ್ರಶ್ನೆಗಳಿಗೆ ಅನುಸಾರವಾಗಿ ಉದ್ಯಾನ, ಆಟದ ಮೈದಾನ ಇದೆಯೇ ಎಂಬುದನ್ನು ಮೌಲ್ಯಮಾಪನ ಮಾಡಿದ್ದಾರೆ. ಜತೆಗೆ ಆ ಸ್ಥಳದ ಚಿತ್ರಗಳನ್ನು ವಿಶೇಷ ಮೊಬೈಲ್‌ ಆ್ಯಪ್‌ ಮೂಲಕ ಸೆರೆಹಿಡಿದಿದ್ದಾರೆ. ಸಮೀಕ್ಷೆಯನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಲಾಯಿತು’ ಎಂದು ತಿಳಿಸಿದರು.*

‘1,100 ಸಾರ್ವಜನಿಕ ಶೌಚಾಲಯಗಳ ಕೊರತೆ’

‘ಪಾಲಿಕೆ ವ್ಯಾಪ್ತಿಯಲ್ಲಿರುವ ಸಾರ್ವಜನಿಕ ಶೌಚಾಲಯಗಳ ಸ್ಥಾಪನೆ ಹಾಗೂ ನಿರ್ವಹಣೆ ಬಗ್ಗೆ ಸಮೀಕ್ಷೆ ನಡೆಸಿದ್ದೇವೆ. ಶೌಚಾಲಯಗಳ ವಿತರಣೆ, ಬೆಳಕು, ಶುಚಿತ್ವ ಸೇರಿದಂತೆ ಮೂಲಸೌಕರ್ಯದ ಗುಣಮಟ್ಟವನ್ನು ಮೌಲ್ಯಮಾಪನ ಮಾಡಿದ್ದೇವೆ. ಸ್ವಚ್ಛ ಭಾರತ ಮಿಷನ್‌ ನಿಗದಿಪಡಿಸಿರುವ ಮಾರ್ಗಸೂಚಿ ಪ್ರಕಾರ 5 ಲಕ್ಷ ಜನರು ಬಂದು ಹೋಗುವ ನಗರಗಳಲ್ಲಿ 100 ಪುರುಷರಿಗೆ ಒಂದು, 100 ಮಹಿಳೆಯರಿಗೆ ಎರಡು ಸಾರ್ವಜನಿಕ ಶೌಚಾಲಯಗಳು ಇರಬೇಕು. ಆದರೆ, ರಾಜಧಾನಿಯಲ್ಲಿ 1,100 ಸಾರ್ವಜನಿಕ ಶೌಚಾಲಯಗಳ ಕೊರತೆ ಇದೆ’ ಎಂದು ಸಪ್ನಾ ಕರೀಂ ತಿಳಿಸಿದರು.

*

10 ಅಂಕ ಪಡೆದ ಐದು ಉದ್ಯಾನಗಳು

* ನಂದಿನಿ ಬಡಾವಣೆಯ ರಾಮಕೃಷ್ಣ ನಗರ ಉದ್ಯಾನ

* ಪುಲಕೇಶಿನಗರದ ಕೋಲ್ಸ್‌ ಉದ್ಯಾನ

* ಶಿವನಗರದ ಪುಷ್ಪಾಂಜಲಿ ಚಿತ್ರಮಂದಿರ ಪಕ್ಕದ ಉದ್ಯಾನ

* ಸಂಪಂಗಿರಾಮನಗರದ ಕೆಂಪೇಗೌಡ ಈಜುಕೊಳ ಬಳಿ ಇರುವ ಉದ್ಯಾನ

* ರಾಜರಾಜೇಶ್ವರಿ ನಗರದ ಐಡಿಯಲ್‌ ಹೋಮ್‌ ಬಡಾವಣೆಯ ಫ್ರೂಟ್‌ ಉದ್ಯಾನ

*

1 ಅಂಕ ಪಡೆದ ಉದ್ಯಾನಗಳು

* ಅಟ್ಟೂರಿನ ರಾಮಕೃಷ್ಣನಗರ ಉದ್ಯಾನ

* ಬಾಗಲಕುಂಟೆಯ ನೆಲಮಹೇಶ್ವರಮ್ಮ ದೇವಾಲಯ ಉದ್ಯಾನ

* ಕಾವಲ್‌ ಬೈರಸಂದ್ರದ ಬಿಎಸ್‌ಎನ್‌ಎಲ್‌ ಕಚೇರಿ ರಸ್ತೆ ಭಾಗದ 9ನೇ ಉದ್ಯಾನ

* ಎಚ್‌ಎಂಟಿ ವಾರ್ಡ್‌ನ ಪೀಣ್ಯ ಕೈಗಾರಿಕಾ ಪ್ರದೇಶದ ಉದ್ಯಾನ

* ಪೀಣ್ಯ ಕೈಗಾರಿಕಾ ಪ್ರದೇಶದ ಗೃಹಲಕ್ಷ್ಮಿ ಬಡಾವಣೆಯ 5ನೇ ಉದ್ಯಾನ

*

ಅಗ್ರಶ್ರೇಣಿಯ ಆಟದ ಮೈದಾನಗಳು

* ಸಂಜಯನಗರದ ಮಕ್ಕಳ ಆಟದ ಮೈದಾನ (8 ಅಂಕ)

* ಬೈರಸಂದ್ರದ ಕಿತ್ತೂರು ರಾಣಿ ಚೆನ್ನಮ್ಮ ಆಟದ ಮೈದಾನ (8 ಅಂಕ)

* ಹೆಬ್ಬಾಳದ ಕ್ಯಾಪ್ಟನ್‌ ಕೆವಿನ್‌ ಕುಮಾರ್‌ ಮಕ್ಕಳ ಆಟದ ಮೈದಾನ (7 ಅಂಕ)

* ಶಂಕರ ಮಠದ ಉದಯರವಿ ಮಕ್ಕಳ ಆಟದ ಮೈದಾನ (7 ಅಂಕ)

* ಹೊಯ್ಸಳ ನಗರದ ರಕ್ಷಣಾ ಕಾಲೊನಿಯ ಆಟದ ಮೈದಾನ (7 ಅಂಕ)

*

0 ಅಂಕ ಪಡೆದ ಆಟದ ಮೈದಾನಗಳು

* ಜಕ್ಕೂರಿನ ಚೊಕ್ಕನಹಳ್ಳಿಯ ಮಕ್ಕಳ ಆಟದ ಮೈದಾನ

* ವಿದ್ಯಾರಣ್ಯಪುರದ ಆನಂದ ಬಡಾವಣೆಯ ಬಿಬಿಎಂಪಿ ಮಕ್ಕಳ ಆಟದ ಮೈದಾನ

* ಶೆಟ್ಟಿಹಳ್ಳಿ ವಾರ್ಡ್‌ನ ಕಮ್ಮಗೊಂಡನಹಳ್ಳಿಯ ಮಕ್ಕಳ ಆಟದ ಮೈದಾನ

* ಜಾಲಹಳ್ಳಿಯ ಶಾರದಾಂಬಾನಗರದ ಆಟದ ಮೈದಾನ

* ರಾಧಾಕೃಷ್ಣ ದೇವಾಲಯ ವಾರ್ಡ್‌ನ ಎಂಎಲ್‌ಎ ಬಡಾವಣೆಯ ಮಕ್ಕಳ ಆಟದ ಮೈದಾನ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.