ಶುಕ್ರವಾರ, ಮಾರ್ಚ್ 5, 2021
29 °C

ಅಲ್ಲಿ ರೋಷ, ಇಲ್ಲಿ ಅಸಹಾಯಕತೆ

ಕೆ.ಎಸ್‌. ರಾಜಾರಾಮ್‌ Updated:

ಅಕ್ಷರ ಗಾತ್ರ : | |

ಅಲ್ಲಿ ರೋಷ, ಇಲ್ಲಿ ಅಸಹಾಯಕತೆ

ಇಂಡಿಯನ್ ರೋಲರ್ ಎಂಬ ಹೆಸರು ಹೊತ್ತ ಈ ಹಕ್ಕಿಯನ್ನು ನಾವು ಕನ್ನಡಿಗರು ಅಚ್ಚಕನ್ನಡದಲ್ಲಿ ‘ನೀಲಕಂಠ’ ಎಂದು ಕರೆಯುತ್ತೇವೆ. ಭಾರತ, ಚೀನಾ, ವಿಯೆಟ್ನಾಂ, ಮಲೇಷಿಯಾ, ಇರಾಕ್, ಸೌದಿ ಅರೇಬಿಯಾ ಸೇರಿದಂತೆ ಹಲವು ದೇಶಗಳಲ್ಲಿ ಈ ಪಕ್ಷಿ ಕಂಡುಬರುತ್ತದೆ.

ಎತ್ತರವಲ್ಲದ ಜೌಗಿನ ಬದಿ, ಹುಲ್ಲು-ಬಯಲು, ಅರಣ್ಯ ಪಕ್ಕದ ಹೊಲಗಳು ಮತ್ತು ಹಳ್ಳಿಗಳಲ್ಲಿ ಕಾಣಿಸುತ್ತವೆ. ಕೆಲವೊಮ್ಮೆ ನಗರ ಪ್ರದೇಶಗಳಲ್ಲಿಯೂ ಗೋಚರಿಸುವುದು ಉಂಟು.

ಮಳೆಗಾಲಕ್ಕೆ ಮುನ್ನ ಗೂಡುಕಟ್ಟಿ ಮೊಟ್ಟೆ ಇಡುತ್ತವೆ. ಜೀರುಂಡೆ (ಬೀಟಲ್ಸ್) ಮತ್ತು ಮಿಡತೆ (ಗ್ರಾಸ್ ಹಾಪರ್) ಇದಕ್ಕೆ ಪ್ರಿಯವಾದ ಆಹಾರ. ಚಿಟ್ಟೆ, ಪತಂಗ, ಪುಟ್ಟಕಪ್ಪೆ, ಸರಿಸೃಪ, ಹುಳುಹುಪ್ಪಟೆ, ಕಾಳುಕಡಿಗಳು ಇದರ ಆಹಾರ. ಭೂಮಿಯಿಂದ ತುಸು ಎತ್ತರದಲ್ಲಿಯೇ ಇದರ ಬೇಟೆಹೊಂಚು ನಡೆಯುತ್ತದೆ. ಭರ್ರನೆ ಹಾರಿ ಗಾಳಿಯಲ್ಲೇ ತನ್ನ ಬೇಟೆಯನ್ನು ಹಿಡಿಯುತ್ತದೆ. ಅಲ್ಲಿಯೇ ಅಮುಕಿ, ತಿರುವಿ, ಹಾರಿಸಿ ಶಕ್ತಿಹ್ರಾಸ ಮಾಡಿಸುವ ಚಾಕಚಕ್ಯತೆ ಈ ಪಕ್ಷಿಗೆ ಸಿದ್ಧಿಸಿದೆ.

ಈ ಪಕ್ಷಿಯ ಬೇಟೆ ವೈಖರಿಯು ಜೂಂ ಲೆನ್ಸ್‌ಗಳಿರುವ ಕ್ಯಾಮೆರಾ ಕಣ್ಣಿಗೂ ಒಳ್ಳೇ ಅಹಾರ. ಹೆಸರುಘಟ್ಟ ಸಮೀಪದ ಹುಲ್ಲಿನ ಬಯಲಿನಲ್ಲಿ ಮಿಡತೆಯೊಂದನ್ನು ಹಿಡಿದು ಹದ ಮಾಡುತ್ತಿರುವ ಈ ಪಕ್ಷಿಯ ಆ್ಯಕ್ಷನ್ ಭಂಗಿಯನ್ನು ಸೆರೆಹಿಡಿದಿರುವವರು ಸಂಜಿವ್ ಗಿರಿಧರ್. ಡಾ. ಶಿವರಾಮಕಾರಂತ ನಗರದಲ್ಲಿರುವ ಅವರ ವೃತ್ತಿಯಲ್ಲಿ ನೆಟ್‌ವರ್ಕ್ ಎಂಜಿನಿಯರ್. ವನ್ಯಜೀವಿ ಛಾಯಾಗ್ರಹಣದಲ್ಲಿ ಮೂರು ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ.

ವನಜೀವಿ ಛಾಯಾಗ್ರಹಣದಲ್ಲಿ ವಿಷಯ ನಿರೂಪಣೆಯೇ ಮುಖ್ಯ. ಕಲಾತ್ಮಕತೆ ಅಲ್ಲಿ ಯಾವುದೇ ಕೆಲಸವಿಲ್ಲ ಎಂಬ ಅಭಿಪ್ರಾಯ ಕೆಲವರಿಗಿದೆ. ಆದರೆ ಹೃದಯದಲ್ಲಿ ಭಾವತರಂಗಗಳನ್ನು ಎಬ್ಬಿಸುವಂತೆ ಫೋಟೊ ತೆಗೆಯಲು ಭಾವನಾತ್ಮಕ ಅಂಶವೂ ಬೇಕಲ್ಲವೇ? ವನ್ಯಜೀವಿ ಛಾಯಾಚಿತ್ರಣವೂ ಕಲಾತ್ಮಕತೆಯ ಚೌಕಟ್ಟಿನಲ್ಲೇ ಬಂಧಿಯಾಗುವುದು ಅಗತ್ಯ. ಅದಕ್ಕೆ ಸಾಕ್ಷಿ ಈ ‘ನೀಲಕಂಠ’ ಚಿತ್ರ.

ಈ ಚಿತ್ರ ತೆಗೆಯಲು ಅವರು ಬಳಸಿದ ಕ್ಯಾಮೆರಾ ನಿಕಾನ್ ಡಿ 7000. ಎಕ್ಸ್‌ಪೋಷರ್ ವಿವರ ಇಂತಿದೆ. 500 ಎಂ.ಎಂ. ಫೋಕಲ್ ಲೆಂಗ್ತ್‌ನ F/4 ಪ್ರೈಂ ಟೆಲಿಲೆನ್ಸ್, ಅಪರ್ಚರ್ f 7.1, ಷಟರ್ ವೇಗ 1/4000 ಸೆಕೆಂಡ್, ಐ.ಎಸ್.ಒ 1000.

ಈ ಚಿತ್ರದ ತಾಂತ್ರಿಕ ಮತ್ತು ಕಲಾತ್ಮಕ ಅನುಸಂಧಾನವನ್ನು ಹೀಗೆ ಮಾಡಬಹುದು.

* ದೂರದಿಂದಲೇ ಪಕ್ಷಿಯ ಇರುವಿಕೆಯನ್ನು ಗುರುತಿಸುವುದು, ಅದರ ಚಲನವಲನ, ಅದಕ್ಕೆ ಬೇಕಾದ ಬೇಟೆ ಅಲ್ಲೆಲ್ಲೋ ದೊರಕುವ ಮಾಹಿತಿ, ಅಂತೆಯೇ ಪಕ್ಷಿ ಹಾರಿಬಂದು ಅಹಾರವನ್ನು ಕಬಳಿಸಿ, ಮೆಲಕುಹಾಕುವವರೆಗೂ ಅವಿತು ಹೊಂಚುಹಾಕುವ ತಾಳ್ಮೆ ಇಂಥ ಚಿತ್ರಗಳನ್ನು ತೆಗೆಯಲು ಇಚ್ಛಿಸುವ ಛಾಯಾಗ್ರಾಹಕರಿಗೆ ಇರಬೇಕು.

* ಕ್ಲಿಕ್ಕಿಸಲು ಸಿಕ್ಕ ಆ ಕ್ಷಣ ಅನನ್ಯವಾಗಬೇಕಾದದ್ದೂ ಅತಿ ಅವಶ್ಯಕ. ಕೊಂಚ ತಪ್ಪಿದರೆ ಅದೇ ದೃಶ್ಯ ಮತ್ತೆ ಸಿಗುವ ಸಂಭವ ವಿರಳ.

* ಇಂಥ ಚಿತ್ರಗಳನ್ನು ತೆಗೆಯಲು ಉತ್ತಮ ಗುಣಮಟ್ಟದ ಜೂಂ ಅಥವಾ ಟೆಲಿ ಲೆನ್ಸ್ ಬೇಕು. ಸೆನ್ಸಾರ್‌ ಸಹ ಚೆನ್ನಾಗಿರಬೇಕು. ಈ ಚಿತ್ರಕ್ಕೆ ಬಳಕೆಯಾಗಿರುವ ‘F/4 ಪ್ರೈಂ ಟೆಲಿ ಲೆನ್ಸ್’ ಮತ್ತು ಕ್ಯಾಮೆರಾದ ಸೆನ್ಸಾರ್ ಆ ಕೆಲಸಗಳನ್ನು ಸರಿಯಾಗಿ ನಿಭಾಯಿಸಿವೆ.

* ಹುಲ್ಲುಗಾವಲು ಮತ್ತು ಅಡವಿಯಂಥ ಹೊರಾಂಗಣದಲ್ಲಿ ಆ್ಯಕ್ಷನ್ ಚಿತ್ರವನ್ನು ದೂರದಿಂದ ಸೆರೆಹಿಡಿಯಲು ಯತ್ನಿಸುವಾಗ ಮುಖ್ಯವಸ್ತುವನ್ನು ಫೋಕಸ್ ಮಾಡುವುದು, ಹಿನ್ನೆಲೆಯನ್ನು ಮಂದವಾಗಿಸುವುದು ದೊಡ್ಡ ಸವಾಲು. ಇದನ್ನು ನಿರ್ವಹಿಸಲು ಸೂಕ್ತ ಅಪರ್ಚರ್‌ ಬೇಕು. ಸಹಜ ಬೆಳಕನ್ನಷ್ಟೇ ಬಳಸಬೇಕಾದ ಕಾರಣ ಕ್ಯಾಮೆರಾದ ಇತರ ತಾಂತ್ರಿಕ ಕಂಟ್ರೋಲ್‌ಗಳನ್ನು ಅಲ್ಲಿನ ಸಂದರ್ಭಕ್ಕೆ ಹೊಂದುವಂತೆ ಅಳವಡಿಸಬಲ್ಲ ಚಾಕಚಕ್ಯತೆಯೂ ಅಗತ್ಯ.

* ಚೌಕಟ್ಟಿನ ಮುಖ್ಯ ಭಾಗ ಪಕ್ಷಿಯ ತೆರೆದ ಕೊಕ್ಕು ಮತ್ತು ಅದು ಹಿಡಿದು ಹಾರಿಸಿದ ಜೀವಂತ ಮಿಡತೆ. ಎರಡರ ತೆರೆದ ಕಣ್ಣುಗಳಲ್ಲಿನ ಬಿಳಿ ದೃಷ್ಟಿ ಬೊಟ್ಟುಗಳೂ ಸ್ಪಷ್ಟವಾಗಿ ಸೆರೆಹಿಡಿಯಲ್ಪಟ್ಟಿವೆ. ಪಕ್ಷಿಯ ರೋಷ ಮತ್ತು ಮಿಡತೆಯ ಅಸಹಾಯಕ ದೈನ್ಯತೆ ಇಲ್ಲಿನ ಮುಖ್ಯ ಅಂಶಗಳು. ಇವು ಚೌಕಟ್ಟಿನ ಮೇಲ್ಭಾಗದಲ್ಲಿರುವ ಮೂರನೇ ಒಂದು ಅಂಶದ ಬಿಂದುವಿನ ಬಳಿ ಇವೆ.

* ವೀಕ್ಷಕನ ಕಣ್ಣು ಆ ಬಿಂದುವಿನೆಡೆಗೆ ಆಕರ್ಷಿತವಾಗಿ, ಅಲ್ಲಿಂದ ತೆರೆದ ಕೊಕ್ಕಿನ ಬುಡದೆಡೆಗೆ ಸರಿದು, ಹಾಗೆಯೇ ಶಿರದ ಮೇಲಿನ ನೀಲವರ್ಣವನ್ನು ಸವರಿ, ರೆಕ್ಕೆಗಳ ಮಾಟದ ಮೇಲೆ ಜಾರಿ ಹಿಂಬದಿಯ ಪುಕ್ಕದ ನೀಲವರ್ಣವನ್ನೂ ತಲುಪಿ ವಾಪಸ್ ಹಕ್ಕಿಯ ಹೊಟ್ಟೆಯ ಭಾಗದ ನೀಲವರ್ಣವನ್ನೂ ನೀವಾಳಿಸಿ ಮುಖಭಾಗಕ್ಕೇ ಮರಳುತ್ತದೆ. ಈ ಬಗೆಯ ನೋಟ ನೋಡುಗನ ಮನಸ್ಸಿಗೆ ಅನನ್ಯ ಅನುಭವಕ್ಕೆ ಬೇಕಾದ ಅನಂದವನ್ನೂ ನೀಡುತ್ತದೆ. ಇದು ಭಾವನತ್ಮಕ ಮೆರಗು. ಅದೇ ಈ ಚಿತ್ರಣದ ಕಲಾತ್ಮಕತೆಗೆ ಉತ್ತಮ ನಿದರ್ಶನವೂ ಆಗಿದೆ.

*

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.