ಶುಕ್ರವಾರ, ಮಾರ್ಚ್ 5, 2021
24 °C

ರೌಡಿ ಕಾಲಿಗೆ ಪೊಲೀಸರ ಗುಂಡೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೌಡಿ ಕಾಲಿಗೆ ಪೊಲೀಸರ ಗುಂಡೇಟು

ಬೆಂಗಳೂರು: ಕಾನ್‌ಸ್ಟೆಬಲ್‌ ಕಣ್ಣಿಗೆ ಖಾರದ ಪುಡಿ ಎರಚಿ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗುತ್ತಿದ್ದ ರೌಡಿ ಸಂತು ಅಲಿಯಾಸ್‌ ಪಳನಿ (30) ಎಂಬಾತನ ಮೇಲೆ ಕೋಣನಕುಂಟೆ ಠಾಣೆಯ ಇನ್‌ಸ್ಪೆಕ್ಟರ್‌ ಧರ್ಮೇಂದ್ರ ಗುಂಡು ಹಾರಿಸಿದ್ದಾರೆ.

ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಕಾನ್‌ಸ್ಟೆಬಲ್‌ ಕಿರಣ್‍ಕುಮಾರ್ ಎಂಬುವರ ಕೈಗೆ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ರೌಡಿಯ ಎಡಗಾಲಿಗೆ ಗುಂಡು ತಗುಲಿದ್ದು, ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಯನಗರದ 7ನೇ ಹಂತದ ನಿವಾಸಿ ಸಂತು, ಕೆಲದಿನಗಳ ಹಿಂದಷ್ಟೇ ಬನ್ನೇರುಘಟ್ಟದ ಕಲ್ಕೆರೆಗೆ ವಾಸ ಬದಲಿಸಿದ್ದ. ಗುಂಪು ಕಟ್ಟಿಕೊಂಡು ರಾತ್ರಿ ಹೊತ್ತು ಸಾರ್ವಜನಿಕರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ. ಶನಿವಾರ ರಾತ್ರಿ ದರೋಡೆ ಮಾಡಿ ಪರಾರಿಯಾತ್ತಿದ್ದ ವೇಳೆಯಲ್ಲೇ ಗುಂಡು ಹೊಡೆದು ಬಂಧಿಸಲಾಗಿದೆ.

ಘಟನೆ ವಿವರ: ‘ಖಾಸಗಿ ಕಂಪೆನಿ ಉದ್ಯೋಗಿಗಳಾದ ವೆಂಕಟೇಶ ಪ್ರಸಾದ್ ಹಾಗೂ ಅವರ ಸಹೋದರಿಯನ್ನು ಕೊತ್ತನೂರು ದಿಣ್ಣೆ ಬಳಿ  ಶನಿವಾರ ರಾತ್ರಿ ಅಡ್ಡಗಟ್ಟಿದ್ದ ಸಂತು ಹಾಗೂ ಸಹಚರರು, ಜಗಳ ತೆಗೆದಿದ್ದರು. ರಕ್ಷಣೆಗೆ ಬಂದ ವ್ಯಕ್ತಿಯೊಬ್ಬರನ್ನು ಬೆದರಿಸಿ ಕಳುಹಿಸಿದ್ದರು. ವೆಂಕಟೇಶ್‌ ಪ್ರಸಾದ್‌ ಅವರ ಚಿನ್ನದ ಸರವನ್ನು ಕಿತ್ತಕೊಂಡು ಪರಾರಿಯಾಗಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಕೃತ್ಯದ ಬಗ್ಗೆ ವೆಂಕಟೇಶ್‌ ಪ್ರಸಾದ್‌, ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ರಾತ್ರಿ ಗಸ್ತಿನಲ್ಲಿದ್ದ ಇನ್‌ಸ್ಪೆಕ್ಟರ್‌ ಧರ್ಮೇಂದ್ರ ಹಾಗೂ ಸಿಬ್ಬಂದಿ, ಆರೋಪಿಗಳಿಗೆ ಹುಡುಕಾಟ ನಡೆಸಿದ್ದರು. ಜಂಬೂ ಸವಾರಿ ದಿಣ್ಣೆ ಬಳಿ ಆರೋಪಿಗಳು ಇರುವ ಬಗ್ಗೆ ಮಾಹಿತಿ ಸಿಕ್ಕಿತ್ತು’.

‘ಅಲ್ಲಿಗೆ ಪೊಲೀಸರು ಹೋಗುತ್ತಿದ್ದಂತೆ ಸಂತು ಮತ್ತು ಆತನ ಸಹಚರರು, ಮಚ್ಚಿನಿಂದ ಜೀಪಿಗೆ ಹೊಡೆದಿದ್ದರು. ಜೀಪಿನಿಂದ ಇಳಿದ ಕಾನ್‌ಸ್ಟೆಬಲ್‌ ಕಿರಣ್‌ಕುಮಾರ್‌, ಸಂತುನನ್ನು ಹಿಡಿಯಲು ಹೋಗಿದ್ದರು. ಆತ, ಕಣ್ಣಿಗೆ ಖಾರದ ಪುಡಿ ಎರಚಿ ಮಚ್ಚಿನಿಂದ ಹೊಡೆದು ಓಡಲಾರಂಭಿಸಿದ್ದ. ಆಗ ಇನ್‌ಸ್ಪೆಕ್ಟರ್‌ ಎರಡು ಸುತ್ತು ಗುಂಡು ಹಾರಿಸಿದ್ದರು. ಒಂದು ಗುಂಡು ಸಂತುಗೆ ತಗುಲಿ ಕುಸಿದುಬಿದ್ದ’ ಎಂದರು.

ವಿದ್ಯಾರ್ಥಿ ಅಪಹರಣ ಆರೋಪಿ: ‘ಜೆ.ಪಿ. ನಗರ, ಕೋರಮಂಗಲ, ಬನ್ನೇರುಘಟ್ಟ, ಹುಳಿಮಾವು ಠಾಣೆಗಳಲ್ಲಿ ಸಂತು ವಿರುದ್ಧ ಕೊಲೆ, ಕೊಲೆಗೆ ಯತ್ನ, ದರೋಡೆ ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ ನಗರದಲ್ಲಿ ನಡೆದಿದ್ದ ವಿದ್ಯಾರ್ಥಿಯ ಅಪಹರಣ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದ’ ಎಂದು ಪೊಲೀಸರು ತಿಳಿಸಿದರು.

‘ರೌಡಿ ಚಟುವಟಿಕೆ ಜತೆಗೆ ರಿಯಲ್ ಎಸ್ಟೇಟ್‌ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ. ಕಾರ್ಯಾಚರಣೆ ವೇಳೆ ಆತನ ಸಹಚರರು ಪರಾರಿಯಾಗಿದ್ದಾರೆ’ ಎಂದರು.

**

ವೈಯಕ್ತಿಕ ದ್ವೇಷದ ಅನುಮಾನ

‘ರೌಡಿ ಸಂತು, ವೆಂಕಟೇಶ್‌ ಪ್ರಸಾದ್‌ ಅವರ ಜತೆ ಈ ಹಿಂದೆಯೂ ಜಗಳ ಮಾಡಿದ್ದ. ಅದೇ ದ್ವೇಷದಿಂದಾಗಿ ಆತನ ಅವರನ್ನು ಅಡ್ಡಗಟ್ಟಿ ಈ ಕೃತ್ಯ ಎಸಗಿರಬಹುದು ಎಂಬ ಅನುಮಾನವಿದೆ’ ಎಂದು ಪೊಲೀಸರು ತಿಳಿಸಿದರು.

’ಘಟನೆ ಬಗ್ಗೆ ವೆಂಕಟೇಶ್‌ಪ್ರಸಾದ್‌ ದೂರು ನೀಡಿದ್ದಾರೆ. ಅವರ ತಂದೆ, ಜಗಳದ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.