ಸೋಮವಾರ, ಮಾರ್ಚ್ 8, 2021
25 °C

ಕೊಡಗಿನಲ್ಲಿ ಪುತ್ತರಿ ನಮ್ಮೆ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಡಗಿನಲ್ಲಿ ಪುತ್ತರಿ ನಮ್ಮೆ ಸಂಭ್ರಮ

ಮಡಿಕೇರಿ: ಕೊಡಗಿನ ಸಾಂಪ್ರದಾಯಿಕ ಹಬ್ಬಗಳಲ್ಲಿ ಒಂದಾಗಿರುವ, ಧಾನ್ಯಲಕ್ಷ್ಮಿ ಯನ್ನು ಮನೆಗೆ ಬರಮಾಡಿಕೊಳ್ಳುವ ಹುತ್ತರಿ ಹಬ್ಬವನ್ನು ಜಿಲ್ಲೆಯಾದ್ಯಂತ ಸಂಭ್ರಮ ಹಾಗೂ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಜಿಲ್ಲೆಯ ಸಂಘ ಸಂಸ್ಥೆಗಳು, ದೇವಾಲಯಗಳಲ್ಲಿ ಹಾಗೂ ಮನೆ ಮನೆಗಳಲ್ಲಿ ಹಬ್ಬದ ವಾತಾವರಣ ಕಂಡು ಬಂದಿತು. ಶುಭ ಘಳಿಗೆಯ ನಿಗದಿತ ಸಮಯದಲ್ಲಿ ನೆರೆಕಟ್ಟಿ, ಕದಿರು ತೆಗೆದು, ಪ್ರಸಾದ ವಿನಿಯೋಗ ನಡೆಯಿತು. ಮನೆ ಮನೆಗಳಲ್ಲಿ ಬಂಧು ಬಳಗದವರೊಂದಿಗೆ ಜನತೆ ಹಬ್ಬದ ಸವಿಯುಂಡು ಸಂಭ್ರಮಪಟ್ಟರು.

ನಗರದ ಓಂಕಾರೇಶ್ವರ ದೇವಾಲಯ ಹಾಗೂ ಕೊಡವ ಸಮಾಜದ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ದೇವಾಲಯದ ಗದ್ದೆಯಲ್ಲಿ ಸಂಜೆ ಭತ್ತದ ಕದಿರಿಗೆ ಪೂಜೆ ಸಲ್ಲಿಸಿ ಕದಿರು ಕೊಯ್ದು ಕೋಟೆ ಮಹಾಗಣಪತಿ ದೇವಾಲಯದವರೆಗೆ ಮೆರವಣಿಗೆ ತೆರಳಿ ಪೂಜೆ ಸಲ್ಲಿಸಲಾಯಿತು. ನಂತರ ನೆರೆದಿದ್ದ ಸಮಾಜ ಬಾಂಧವರಿಗೆ ತಂಬಿಟ್ಟು ವಿತರಿಸಲಾಯಿತು. ಈ ಸಂದರ್ಭ ಕೊಡವ ಸಮಾಜದ ಪದಾಧಿಕಾರಿಗಳು ಓಂಕಾರೇಶ್ವರ ದೇವಸ್ಥಾನದ ಪ್ರಮುಖರು ಪಾಲ್ಗೊಂಡರು.

ಸಿಎನ್‌ಸಿಯಿಂದ ಆಚರಣೆ

ಕುಶಾಲನಗರ: ಕೊಡಗಿನ ಸಾಂಪ್ರದಾಯಿಕ ಹಬ್ಬಗಳಲ್ಲಿ ಒಂದಾದ ಪುತ್ತರಿ ನಮ್ಮೆ (ಹುತ್ತರಿ ಹಬ್ಬ) ವನ್ನು ಭಾನುವಾರ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯಿಂದ ಚಿಕ್ಕಬೆಟ್ಟಗೇರಿ ಗ್ರಾಮದ ನಂದಿನೆರವಂಡ ಉತ್ತಪ್ಪ ಅವರ ಮನೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಬೆಟ್ಟಗೇರಿ ಗ್ರಾಮದಲ್ಲಿ ಸಿಎನ್‌ಸಿ ಮುಖ್ಯಸ್ಥ ಎನ್.ಯು.ನಾಚಪ್ಪ ನೇತೃತ್ವದಲ್ಲಿ ಸಂಘಟನೆಯ ಕಾರ್ಯಕರ್ತರು ಕೊಡವರ ಸಾಂಪ್ರದಾಯಿಕ ಉಡುಗೆ ಧರಿಸಿ ಹಬ್ಬದಲ್ಲಿ ಪಾಲ್ಗೊಂಡಿದ್ದರು.

ಗ್ರಾಮದ ನಂದಿನೆರವಂಡ ಉತ್ತಪ್ಪನವರ ಭತ್ತದ ಗದ್ದೆಯಲ್ಲಿ ಸಾಮೂಹಿಕವಾಗಿ ಕದಿರು ತೆಗೆಯುವ ಮೂಲಕ ಪುತ್ತರಿ ನಮ್ಮೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ನಾಡಿಗೆ ಮತ್ತು ಜನತೆಗೆ ಶಾಂತಿ, ನೆಮ್ಮದಿ, ಐಶ್ವರ್ಯ ಹಾಗೂ ಸಂಮೃದ್ಧಿ ಕರುಣಿಸಲಿ ಎಂದು ಪ್ರಾರ್ಥಿಸಿದರು.

ಮೊದಲಿಗೆ ಮನೆಯಲ್ಲಿ ನೆಲ್ಲಕ್ಕಿಯಡಿಯಲ್ಲಿ ಗುರುಕಾರೋಣರು ಮತ್ತು ದೇವರಿಗೆ ಭಕ್ತಿಪೂರ್ವಕ ಪೂಜೆ ಸಲ್ಲಿಸಿ, ಅರಳಿ, ಮಾವು, ಹಲಸು, ಕುಂಬಳಿ ಹಾಗೂ ಗೇರು ಮರಗಳ ಎಲೆಗಳಿಂದ ನೆರೆಕಟ್ಟುವ ವಿಧಿವಿಧಾನ ನೆರವೇರಿಸಿದರು. ನಂತರ ಸಿದ್ಧಪಡಿಸಲಾದ ಕುತ್ತಿಯನ್ನು ತೋಕ್-ಕತ್ತಿ, ದುಡಿಕೊಟ್ಟ್ ಪಾಟ್ ತಳಿಯತಕ್ಕಿ ಹಾಗೂ ಒಡ್ಡೋಲಗದೊಂದಿಗೆ ಗದ್ದೆಗೆಗೆ ತೆರಳಲಾಯಿತು.

ಮೂರು ಸುತ್ತು ಕುಶಾಲತೋಪು ಸಿಡಿಸುವ ಮೂಲಕ ಉತ್ತಪ್ಪ ಅವರ ಗದ್ದೆಯಲ್ಲಿ ನಾಚಪ್ಪ ಅವರು ಪೂಜೆ ಸಲ್ಲಿಸಿ ಕದಿರು ತೆಗೆಯುವ ಮೂಲಕ ಸಾಮೂಹಿಕವಾಗಿ ಪುತ್ತರಿ ನಮ್ಮೆ ಆಚರಿಸಲಾಯಿತು. ನಂತರ ಧಾನ್ಯಲಕ್ಷ್ಮಿಯನ್ನು ಮೆರವಣಿಗೆ ಮೂಲಕ ತಂದು ಒಕ್ಕಲು ಕಣದ ಬೋಟಿಯ ಸುತ್ತ ಕದಿರನ್ನು ಇಟ್ಟು ಪೂಜೆ ಸಲ್ಲಿಸಿದರು.

ಸಿಎನ್‌ಸಿ ಕಾರ್ಯಕರ್ತರು ಕೋಲಾಟ, ಪರೆಯ ಕಳಿ, ಚೌಕಾಟದಂತಹ ವಿವಿಧ ನೃತ್ಯಗಳಮ್ಮು ಪ್ರದರ್ಶಿಸಿದರು. ನಂತರ ಎಲ್ಲರೂ ಕೊಡವ ಸಂಪ್ರಾದಾಯಿಕ ತಾಳಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಮನೆಯಲ್ಲಿ ಹೊಸ ಅಕ್ಕಿ ಪಾಯಸ ಮಾಡಿ ಊಟೋಪಚಾರ ನೆರವೇರಿಸಲಾಯಿತು. ಹಬ್ಬದ ವಿಶೇಷ ತಂಬುಟ್, ಅಡಿಕೆಹಿಟ್ಟು, ಕಡುಬು, ಪಾಯಸ, ಪಂದಿಕರಿಗಳನ್ನು ತಯಾರಿಸಿ ಒಟ್ಟಾಗಿ ಸವಿದರು. ಕಲಿಯಂಡ ಪ್ರಕಾಶ್, ಅಪ್ಪಚ್ಚೀರ ರಮ್ಮಿನಾಣಯ್ಯ, ಪುಲ್ಲೇರ ಕಾಳಪ್ಪ, ನಂದಿನೆರವಂಡ ಉತ್ತಪ್ಪ, ನಂದಿನೆರವಂಡ ವಿಜು, ರೇಖಾ, ನಿಶಾ, ಬೀನಾ, ಶಶಾಂಕ್ ಕೊಡವ, ಸಂಯುಕ್ತ ಕೊಡವ, ಕೃಪಾ ಕೊಡವ, ಬೋಪಣ್ಣ, ಅಪ್ಪಯ್ಯ, ಅನಿರುದ್ದ, ದಿನೇಶ್, ಸುಮಿ, ಪುಲ್ಲೇರ ಸ್ವಾತಿ, ಧನುಷ್, ಪೊನ್ನಣ್ಣ, ಶಿವಾನಿ, ಬೋಪಯ್ಯ, ಕನ್ನಿಕೆ, ಕಲಿಯಂಡ ಸುಬ್ಬಯ್ಯ , ಮೂಕೊಂಡ ದಿಲೀಪ್, ಬೇಪಡಿಯಂಡ ದಿನು, ಅಜ್ಜೇಟ್ಟಿರ ಶಂಭು, ರಾಣಿ, ವಿಲ್ಮ, ಚಂಬಂಡ ಜನತ್, ಗಿರೀಶ್, ಅಪ್ಪಾರಂಡ ಪ್ರಕಾಶ್, ಐಲಪಂಡ ಮಿಟ್ಟು,

ರಂಜು, ಚಂಡಿರ ರಾಜ, ಕಾಂಡೇರ ಸುರೇಶ್, ಚಂಬಂಡ ಜನತ್, ಕಿರಿಯಮಾಡ ಶರೀನ್, ಚೆಪ್ಪುಡಿರ ಸತೀಶ್, ಸರ, ಚಮಡಿರ ಮನೋಜ್, ಚನ್ನಪಂಡ ತಮ್ಮಿ, ಮಣವಟ್ಟೀರ ಮೋಟಯ್ಯ, ದಂಬೇಟಿರ ಶಾಂತಿ ಪಾಲ್ಗೊಂಡಿದ್ದರು.

ಕೊಡವ ಭಾಷೆ; 8ನೇ ಪರಿಚ್ಛೇದಕ್ಕೆ ಸೇರಿಸಲು ಯು.ಎನ್‌. ನಾಚಪ್ಪ ಆಗ್ರಹ

ಕುಶಾಲನಗರ: ಕೊಡವ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂದು ಸಿ.ಎನ್.ಸಿ. ಮುಖ್ಯಸ್ಥ ಎನ್.ಯು.ನಾಚಪ್ಪ ಆಗ್ರಹಿಸಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರಾಗಿರುವ ಕೊಡವರಿಗೆ ಬುಡಕಟ್ಟು ಜನಾಂಗದ ಸ್ಥಾನಮಾನ ನೀಡುವ ಮೂಲಕ ಸಂವಿಧಾನದ ಭದ್ರತೆ ನೀಡಬೇಕು. ಪುತ್ತರಿ ಹಬ್ಬಕ್ಕೆ ಕೇಂದ್ರ ಸರ್ಕಾರ ಸಾರ್ವತ್ರಿಕ ರಜೆ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಸಂವಿಧಾನದ 51/ಎ ವಿಧಿಯಲ್ಲಿ ಅಲ್ಪಸಂಖ್ಯಾತರ ಸಂರಕ್ಷಣೆಗೆ ವಿಶೇಷ ಕಾಯ್ದೆ ಇದೆ. ಈ ಪ್ರಕಾರ ಕೊಡವರ ಇರುವಿಕೆಯನ್ನು ಸರ್ಕಾರ ಗುರುತಿಸಿ ಪ್ರತ್ಯೇಕ ‘ಕೊಡವ ಲ್ಯಾಂಡ್’ ಸ್ಥಾಪನೆಗೆ ಒತ್ತು ನೀಡಬೇಕು ಆಗ್ರಹಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.