3

ಉದ್ಯೋಗ ಮೇಳದಲ್ಲಿ 3000ಕ್ಕೂ ಹೆಚ್ಚು ಮಂದಿಗೆ ಉದ್ಯೋಗದ ಪತ್ರ

Published:
Updated:

ಆನೇಕಲ್‌ : ಉದ್ಯೋಗ ಮೇಳಗಳು ಗ್ರಾಮೀಣ ಯುವಕರಿಗೆ ಉದ್ಯೋಗ ಕಲ್ಪಿಸಿಕೊಡುವ ವೇದಿಕೆಗಳಾಗಿವೆ, ನಿರುದ್ಯೋಗಿಗಳಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ತಾಲ್ಲೂಕಿನ ಸರ್ಜಾಪುರದಲ್ಲಿ ಕರ್ನಾಟಕ ಕೌಶಲ್ಯಾಭಿವೃದ್ಧಿ ಮತ್ತು ವೃತ್ತಿ ನಿಗಮದ ವತಿಯಿಂದ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳದಲ್ಲಿ ಆಯ್ಕೆಯಾದವರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿ ಮಾತನಾಡಿದ ಸಚಿವರು ಪ್ರತಿಯೊಬ್ಬರಿಗೂ ಉದ್ಯೋಗ ಕಲ್ಪಿಸಿಕೊಡುವ ಮೂಲಕ ನಿರುದ್ಯೋಗ ನಿವಾರಣೆ ಮಾಡಬೇಕೆಂಬುದು ಸರ್ಕಾರದ ಆಶಯವಾಗಿದೆ ಎಂದರು.

ನಿಗಮವು ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನದ ಬಗ್ಗೆ ತರಬೇತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಶಾಸಕ ಬಿ.ಶಿವಣ್ಣ ಆಸಕ್ತಿವಹಿಸಿ ಉದ್ಯೋಗ ಮೇಳವನ್ನು ಆಯೋಜಿಸಿದ್ದಾರೆ ಎಂದರು.

ಅತ್ತಿಬೆಲೆ, ಬೊಮ್ಮಸಂದ್ರ, ವೀರಸಂದ್ರ, ಜಿಗಣಿ, ಎಲೆಕ್ಟ್ರಾನಿಕ್‌ಸಿಟಿ ಸೇರಿದಂತೆ ಐದು ಕೈಗಾರಿಕ ಪ್ರದೇಶಗಳಿವೆ. ಪ್ರತಿಷ್ಠಿತ ಬಹುರಾಷ್ಟ್ರೀಯ ಸಾಫ್ಟ್‌ವೇರ್‌ ಕಂಪನಿಗಳು ಈ ಭಾಗದಲ್ಲಿವೆ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಗ್ರಾಮೀಣ ಭಾಗದ ನಿರುದ್ಯೋಗ ಸಮಸ್ಯೆ ನಿವಾರಿಸಲು ಕೌಶಲ ತರಬೇತಿ ಸಂಸ್ಥೆಯನ್ನು ಪ್ರಾರಂಭಿಸಿ ರಾಜ್ಯದೆಲ್ಲಾಡೆ ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ ಎಂದರು.

ಕರ್ನಾಟಕ ಕೌಶಲ್ಯಾಭಿವೃದ್ಧಿ ಮತ್ತು ವೃತ್ತಿ ನಿಗಮದ ಅಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿ ಮುಖ್ಯಮಂತ್ರಿ ಅವರ ಆಶಯದಂತೆ ಯುವ ಸಬಲೀಕರಣಕ್ಕೆ ಒತ್ತು ನೀಡುಲಾಗಿದ್ದು, ಕೌಶಲ್ಯ ಅಭಿಯಾನ ಯೋಜನೆಯಡಿಯಲ್ಲಿ ಯುವಕರಿಗೆ ಉದ್ಯೋಗ ಕಲ್ಪಿಸಿಕೊಡುವ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಕೌಶಲ್ಯ ಕರ್ನಾಟಕ ವೆಬ್‌ಸೈಟ್ ಮತ್ತು ಆಪ್‌ ಮೂಲಕ 3.32ಲಕ್ಷ ಮಂದಿ ನಿರುದ್ಯೋಗಿಗಳು ನೋಂದಾಯಿಸಿಕೊಂಡಿದ್ದಾರೆ. ಇವರಿಗೆ ತರಬೇತಿ, ಸ್ವಯಂ ಉದ್ಯೋಗ ಹಾಗೂ ಉದ್ಯೋಗ ಅವಕಾಶಗಳನ್ನು ಕಲ್ಪಿಸಿಕೊಡಲು ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದರು.

ಶಾಸಕ ಬಿ.ಶಿವಣ್ಣ ಮಾತನಾಡಿ ಪ್ರತಿಯೊಬ್ಬರಿಗೂ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡಬೇಕು ಎಂಬ ಆಶಯದಿಂದ ಮೊದಲ ಬಾರಿಗೆ ಬೃಹತ್‌ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. 250ಕ್ಕೂ ಹೆಚ್ಚು ಕೈಗಾರಿಕೆಗಳ ಮಾನವ ಸಂಪನ್ಮೂಲ ಅಧಿಕಾರಿಗಳ ಸಭೆ ನಡೆಸಿ ಮೇಳದಲ್ಲಿ ಭಾಗಿಗಳಾಗುವಂತೆ ಮನವಿ ಮಾಡಲಾಗಿತ್ತು.  ಹಲವಾರು ಕೈಗಾರಿಕೆಗಳು ಉದ್ಯೋಗ ಮೇಳಕ್ಕೆ ಆಗಮಿಸಿದ್ದು 4700ಮಂದಿ ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದು. 3000ಕ್ಕೂ ಹೆಚ್ಚು ಮಂದಿಗೆ ಉದ್ಯೋಗದ ಪತ್ರಗಳು ನೀಡಲಾಗಿದೆ  ಎಂದರು.

ವಿಧಾನ ಪರಿಷತ್‌ ಸದಸ್ಯ ಸಿ.ಆರ್.ಮನೋಹರ್‌, ಆನೇಕಲ್ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಿ.ನಾಗರಾಜು, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಪುಷ್ಪರಾಜ್, ಶಂಕರ್‌ರೆಡ್ಡಿ, ರೇಖಾ ನಾಗೇಶ್, ರೇಖಾಕೇಶವರೆಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವರಲಕ್ಷ್ಮೀ, ಮುರುಗೇಶ್, ಪುರುಷೋತ್ತಮ್‌ರೆಡ್ಡಿ, ಉಮೇಶ್‌ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಜಣ್ಣ, ಚಂದ್ರಪ್ಪ, ಪದವೀಧರ ವೇದಿಕೆಯ ಅಧ್ಯಕ್ಷ ರಾಮೋಜಿಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಶೀಲಮ್ಮ, ಬಮೂಲ್‌ ನಿರ್ದೇಶಕ ಆರ್.ಕೆ.ರಮೇಶ್, ಅತ್ತಿಬೆಲೆ ಪೊಲೀಸ್‌ ಸರ್ಕಲ್ ಇನ್‌ಸ್ಪೆಕ್ಟರ್ ಎಲ್‌.ವೈ.ರಾಜೇಶ್, ಮುಖಂಡರಾದ ಗಟ್ಟಹಳ್ಳಿ ಸೀನಪ್ಪ, ಮುನಿವೀರಪ್ಪ, ಶಂಭಯ್ಯ, ರಾಮಚಂದ್ರರೆಡ್ಡಿ, ಕೂಗೂರು ಬಸವರಾಜು, ಜಿ.ಗೋಪಾಲ್, ರವಿಚೇತನ್, ಚಿನ್ನಪ್ಪ.ವೈ.ಚಿಕ್ಕಹಾಗಡೆ, ದೊಡ್ಡಹಾಗಡೆ ಹರೀಶ್, ಬಿ.ಪಿ.ರಮೇಶ್, ನಾಗವೇಣಿ, ಸುನಂದಾರೆಡ್ಡಿ, ರಾಧಾಪ್ರಸಾದ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಟಿ.ಕೆ.ರಮೇಶ್, ತಹಶೀಲ್ದಾರ್ ದಿನೇಶ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry