ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದಲ್ಲಿ ರಾವಣ ರಾಜ್ಯ: ಅನಂತಕುಮಾರ್‌

Last Updated 4 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕದಲ್ಲಿ ರಾವಣ ರಾಜ್ಯದ ರೀತಿ ಆಡಳಿತ ನಡೆಸುತ್ತಿದ್ದಾರೆ ಎಂದು ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಇಲ್ಲಿ ಸೋಮವಾರ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಟಿಪ್ಪು ಜಯಂತಿ, ಈದ್‌ ಮಿಲಾದ್‌ ಮೆರವಣಿಗೆಗೆ ಅನುಮತಿ ನೀಡಿ, ಹನುಮ ಜಯಂತಿ ಮೆರವಣಿಗೆಗೆ ಅವಕಾಶ ಕಲ್ಪಿಸುತ್ತಿಲ್ಲ. ಇದು ಎಷ್ಟು ಸರಿ? ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತಹ ಪರಿಸ್ಥಿತಿ ನೆಲೆಯೂರಿದೆ. ಚುನಾವಣೆ ದೃಷ್ಟಿಯಿಂದ ಸಿದ್ದರಾಮಯ್ಯ ಓಟ್‌ ಬ್ಯಾಂಕ್‌ ರಾಜಕಾರಣ ಮಾಡುತ್ತಿದ್ದಾರೆ. ಇದು ಅವರಿಗೆ ತಿರುಗುಬಾಣವಾಗಲಿದೆ’ ಎಂದು ಹರಿಹಾಯ್ದರು.

‘ಹಿಂದೂಗಳು ನಡೆಸುವ ಕಾರ್ಯಕ್ರಮಗಳನ್ನು ಉದ್ದೇಶಪೂರ್ವಕವಾಗಿ ತಡೆಯುವ ಪ್ರಯತ್ನ ನಡೆಯುತ್ತಿದೆ. ಇದು ಹನುಮನ ನಾಡು. ಇಲ್ಲಿ ಹನುಮ ಜಯಂತಿಗೆ, ಶಾಂತಿಯುತ ಮೆರವಣಿಗೆಗೆ ಅವಕಾಶ ನೀಡದಿರುವ ಮುಖ್ಯಮಂತ್ರಿ ನಿಲುವು ಖಂಡನೀಯ’‌ ಎಂದರು.

‘ಮೆರವಣಿಗೆಯಲ್ಲಿ ಪಾಲ್ಗೊಂಡವರನ್ನು ಬಂಧಿಸಲಾಗಿದೆ. ಸದ್ಭಕ್ತರ ಮೇಲೆ ಲಾಠಿ ಪ್ರಹಾರ ನಡೆಸಲಾಗಿದೆ. ಕೋಮು ಸೌಹಾರ್ದ ಕದಡಲು ಪ್ರಯತ್ನ ನಡೆಯುತ್ತಿದೆ. ರಾಜ್ಯದ ವಿವಿಧೆಡೆ 19 ಹಿಂದೂ ಯುವಕರ ಕಗ್ಗೊಲೆ ನಡೆದಿದ್ದರೂ ಮುಖ್ಯಮಂತ್ರಿ ಸುಮ್ಮನಿದ್ದಾರೆ. ಸಾಂತ್ವನ ಹೇಳುವ ಸೌಜನ್ಯವನ್ನೂ ತೋರಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು, ಗೃಹ ಇಲಾಖೆಯಲ್ಲಿ ಶಾಶ್ವತ ರಜೆಯ ವಾತಾವರಣ ನಿರ್ಮಾಣವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಎಸ್ಪಿ ರವಿ ಡಿ.ಚನ್ನಣ್ಣನವರಿಗೆ ಕಾನೂನಿನ ಗಂಧಗಾಳಿ ಗೊತ್ತಿಲ್ಲ. ಸಂಸದ ಪ್ರತಾಪಸಿಂಹ ಅವರನ್ನು ಬಂಧಿಸಿ ಉದ್ದೇಶಪೂರ್ವಕವಾಗಿ ಸುತ್ತಾಡಿಸಿದ್ದಾರೆ. ಈ ಮೂಲಕ ಸಂಸದರ ಸುರಕ್ಷತೆ, ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಕರ್ತವ್ಯಕ್ಕೆ ಧಕ್ಕೆ ಉಂಟು ಮಾಡಿದ್ದಾರೆ. ಬ್ರಿಟಿಷರ ಕಾಲದಲ್ಲಿ ಹಾಗೂ ತುರ್ತುಪರಿಸ್ಥಿತಿ ಇದ್ದಾಗಲೂ ಈ ರೀತಿ ಘಟನೆ ನಡೆದಿರಲಿಲ್ಲ’ ಎಂದರು.

‘ನಾವು ಸುಮ್ಮನೇ ಕೂರಲ್ಲ. ರಾಜ್ಯದಾದ್ಯಂತ ಹೋರಾಟ ನಡೆಸುತ್ತೇವೆ. ಡಿ. 15ರಂದು ಆರಂಭವಾಗಲಿರುವ ಸಂಸತ್ ಚಳಿಗಾಲದ ಅಧಿವೇಶನದಲ್ಲಿಯೂ ವಿಷಯ ಪ್ರಸ್ತಾಪ ಮಾಡುತ್ತೇವೆ’ ಎಂದರು.

ಉಗ್ರಗಾಮಿಯಂತೆ ನಡೆಸಿಕೊಂಡಿದ್ದಾರೆ: ‍ಪ್ರತಾಪ ಸಿಂಹ

ಮೈಸೂರು: ‘ಉಗ್ರಗಾಮಿಯಂತೆ ನಮ್ಮನ್ನು ನಡೆಸಿಕೊಂಡಿದ್ದಾರೆ. ಎಚ್‌.ಡಿ.ಕೋಟೆ ಠಾಣೆಯಲ್ಲಿ ಕೈದಿಗಳನ್ನು ಕೂಡಿ ಹಾಕುವ ಕೊಠಡಿಯಲ್ಲಿ ಇರಿಸಿದ್ದರು. ಇದು ಉದ್ದೇಶಪೂರ್ವಕವಾಗಿ ನಡೆಸುತ್ತಿರುವ ನಾಟಕ’ ಎಂದು ಸಂಸದ ಪ್ರತಾಪ ಸಿಂಹ ಆರೋಪಿಸಿದರು.

ಯಾವುದೇ ಗದ್ದಲ ಉಂಟುಮಾಡದೆ ಹನುಮ ಜಯಂತಿ ಮೆರವಣಿಗೆ ಮಾಡುವುದಾಗಿ ಮನವರಿಕೆ ಮಾಡಿಕೊಟ್ಟು, ವಿನಮ್ರವಾಗಿ ನಡೆದುಕೊಂಡರೂ ಮೆರವಣಿಗೆಗೆ ಅವಕಾಶ ನೀಡಲಿಲ್ಲ ಎಂದು ತಿಳಿಸಿದರು.

‘23 ವರ್ಷಗಳಿಂದ ಹುಣಸೂರಿನ ರಂಗನಾಥ ಬಡಾವಣೆಯಿಂದಲೇ ಮೆರವಣಿಗೆ ಆರಂಭವಾಗುತ್ತಿದೆ. ಹೀಗಾಗಿ, ಅಲ್ಲಿಂದಲೇ ಅವಕಾಶ ಮಾಡಿಕೊಡಬೇಕೆಂದು ಐಜಿ, ಎಸ್ಪಿ, ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಟ್ಟಿದ್ದೆ’ ಎಂದರು.

‘ನಿರ್ಬಂಧ ಹೇರಿದ ರಸ್ತೆಗಳ ಮಾಹಿತಿಯನ್ನು ಸರಿಯಾಗಿ ನೀಡಿಲ್ಲ. ಗೃಹ ಇಲಾಖೆ ಕಾರ್ಯದರ್ಶಿಯೂ ಸರಿಯಾಗಿ ಸ್ಪಂದಿಸಲಿಲ್ಲ‌’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಮುಖಭಂಗವಾಗುತ್ತದೆ ಎಂದು ಹುಣಸೂರಿನಲ್ಲಿ ಜಿಲ್ಲಾಡಳಿತ ನಿಷೇಧ ಹೇರಿದೆಯಂತೆ. ಮೆರವಣಿಗೆ ವೇಳೆ ನಿಷೇಧ ಉಲ್ಲಂಘನೆ ಮಾಡುತ್ತೇವೆ, ಆಗ ಕ್ರಮಕೈಗೊಳ್ಳಿ ಎಂದು ನಾನೇ ಎಸ್ಪಿಗೆ ಹೇಳಿದ್ದೆ. ಆದರೆ, ಬಿಳಿಕೆರೆ ಬಳಿಯೇ ನನ್ನನ್ನು ತಡೆದರು. ಅದನ್ನು ಪ್ರಶ್ನಿಸಿ ಕಾರು ಚಾಲನೆ ಮಾಡಿಕೊಂಡು ಮುಂದೆಹೋದೆ. ಆಗ ಕಾರಿನ ಒಂದು ಬದಿಗೆ ಬ್ಯಾರಿಕೇಡ್‌ ತಾಗಿತು. ಅದನ್ನು ವಿಡಿಯೊ ಮಾಡಿ ಎಸ್ಪಿ ರವಿ ಡಿ.ಚನ್ನಣ್ಣನವರ ವೈರಲ್‌ ಮಾಡಿದ್ದಾರೆ’ ಎಂದು ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT