ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಮಾಳದಲ್ಲಿ ಸಾಗುವಳಿ ಮಾಡುವವರಿಗೆ ಹಕ್ಕುಪತ್ರ: ಸಚಿವ ಕಾಗೋಡು ತಿಮ್ಮಪ್ಪ

Last Updated 4 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಗೋಮಾಳ, ಬಿ ಖರಾಬು ಹಾಗೂ ಗುಂಡುತೋಪುಗಳಲ್ಲಿ ಅನೇಕ ವರ್ಷಗಳಿಂದ ಅನಧಿಕೃತ ಸಾಗುವಳಿ ಮಾಡುತ್ತಿರುವ ರೈತರಿಗೆ  ಶೀಘ್ರದಲ್ಲೆ ಹಕ್ಕುಪತ್ರ ನೀಡಲಾಗುವುದು’ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

‘ಗೋಮಾಳ ಜಮೀನುಗಳ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸುವ ಉದ್ದೇಶದಿಂದ ಕರ್ನಾಟಕ ಭೂಕಂದಾಯ ಕಾಯ್ದೆ 1966ರ ನಿಯಮ 97(4ಎ)ಗೆ ತಿದ್ದುಪಡಿ ತರಲಾಗಿದೆ. ಇದನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್‌ನಲ್ಲಿ  ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ತಡೆಯಾಜ್ಞೆ ನೀಡಿದ್ದ ಹೈಕೋರ್ಟ್‌ ಇತ್ತೀಚೆಗೆ ಅದನ್ನು ತೆರವುಗೊಳಿಸಿದೆ. ಗೋಮಾಳ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವವರಿಗೆ ಹಕ್ಕುಪತ್ರ ನೀಡಲು ನಿಯಮಗಳನ್ನು ರೂಪಿಸಿ, ಕೂಡಲೇ ಪ್ರಕ್ರಿಯೆ ಆರಂಭಿಸಲಾಗುವುದು’ ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

‘ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುಮಾರು ಎರಡೂವರೆ ಲಕ್ಷ ರೈತ ಕುಟುಂಬಗಳು ಗೋಮಾಳ ಜಮೀನಿನಲ್ಲಿ ಸಾಗುವಳಿ ಮಾಡುತ್ತಿವೆ. ಅವರೆಲ್ಲರಿಗೂ ಜಮೀನು ಮಾಲೀಕರಾಗುವ ಅವಕಾಶ ಸಿಗಲಿದೆ’ ಎಂದು ತಿಳಿಸಿದರು.

‘ಬಿ–ಖರಾಬು ಹಾಗೂ ಗುಂಡುತೋಪು ಎಂದು ಗುರುತಿಸಿರುವ ಜಮೀನಿನಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವವರು ಇದ್ದಾರೆ. ಈ ರೀತಿಯ ಜಮೀನು 15,000 ದಿಂದ 20,000 ಎಕರೆಯಷ್ಟು ಇರಬಹುದು ಎಂಬ ಅಂದಾಜಿದೆ. ಸೋಮವಾರ ನಡೆದ ಸಭೆಯಲ್ಲಿ ಈ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವವರಿಗೂ ಹಕ್ಕುಪತ್ರ ನೀಡಲು ನಿರ್ಧರಿಸಲಾಗಿದೆ’ ಎಂದರು.

‘ಸರ್ಕಾರಿ ಹಾಗೂ ಖಾಸಗಿ ಭೂಮಿಯಲ್ಲಿ ಅನಧಿಕೃತವಾಗಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವವರೆಗೆ ಹಕ್ಕುಪತ್ರ ನೀಡಲು ಕಂದಾಯ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇದರಿಂದಾಗಿ ಗೊಲ್ಲರ ಹಟ್ಟಿ, ಲಂಬಾಣಿ ತಾಂಡಾ, ನಾಯಕರ ಹಟ್ಟಿ, ಮಜಸರೆ, ಕಾಲನಿ ಮುಂತಾದ ಜನವಸತಿ ಪ್ರದೇಶಗಳಿಗೆ ವಾಸಿಸುತ್ತಿರುವವರಿಗೆ ಮನೆಯ ಒಡೆತನ ಸಿಗಲಿದೆ. ಫೆಬ್ರುವರಿಯೊಳಗೆ ಎಲ್ಲರಿಗೂ ಹಕ್ಕು ಪತ್ರ ನೀಡಲಾಗುವುದು’ ಎಂದು ಹೇಳಿದರು.

ಜನವರಿ 1ರಿಂದ ಹೊಸ ತಾಲ್ಲೂಕುಗಳು ಅಸ್ತಿತ್ವಕ್ಕೆ

2018ರ ಜನವರಿ 1ರಿಂದ ರಾಜ್ಯದಲ್ಲಿ 50 ಹೊಸ ತಾಲ್ಲೂಕುಗಳು ಅಸ್ತಿತ್ವಕ್ಕೆ ಬರಲಿವೆ ಎಂದು ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ಇನ್ನೂ ನಾಲ್ಕೈದು ಹೊಸ ತಾಲ್ಲೂಕುಗಳು ರಚಿಸಬೇಕು ಎಂಬ ಬೇಡಿಕೆಯಿದೆ. ಅದರ ಬಗ್ಗೆ ಸರ್ಕಾರ ಇನ್ನೂ ತೀರ್ಮಾನ ಕೈಗೊಂಡಿಲ್ಲ ಎಂದು ತಿಳಿಸಿದರು.

1000 ಕಂದಾಯ ಗ್ರಾಮಗಳೂ ಜನವರಿಯಲ್ಲಿ ಅಸ್ತಿತ್ವಕ್ಕೆ ಬರಲಿವೆ. ಈಗಾಗಲೇ 600 ಗ್ರಾಮಗಳನ್ನು ಅಸ್ತಿತ್ವಕ್ಕೆ ತರಲು ಅಧಿಸೂಚನೆ ಸಿದ್ಧವಾಗಿದೆ. ಉಳಿದ ಗ್ರಾಮಗಳ ಪಟ್ಟಿ ಸಿದ್ಧವಾಗುತ್ತಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT