ಬುಧವಾರ, ಫೆಬ್ರವರಿ 24, 2021
24 °C
ಪರಿಹಾರಕ್ಕೆ ಪಟ್ಟು ಹಿಡಿದ ಜಮೀನು ಮಾಲೀಕ

ವಿದ್ಯಾರ್ಥಿಗಳ ಜತೆಗೆ ಪ್ರತಿಭಟನೆ ನಡೆಸಿದ ಬಿಇಒ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದ್ಯಾರ್ಥಿಗಳ ಜತೆಗೆ ಪ್ರತಿಭಟನೆ ನಡೆಸಿದ ಬಿಇಒ

ಮುಂಡರಗಿ (ಗದಗ ಜಿಲ್ಲೆ): ತಾಲ್ಲೂಕಿನ ಹೆಸರೂರು ಗ್ರಾಮವು ಸೋಮವಾರ ವಿಶೇಷ ಪ್ರತಿಭಟನೆಗೆ ಸಾಕ್ಷಿಯಾಯಿತು.

ಗ್ರಾಮದಲ್ಲಿ ನಿರ್ಮಿಸಲಾದ ಸರ್ಕಾರಿ ಪ್ರೌಢಶಾಲೆ ಕಟ್ಟಡವನ್ನು ಉದ್ಘಾಟಿಸುವಂತೆ ಆಗ್ರಹಿಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರ ಹಳ್ಳಿಗುಡಿ ಅವರು ವಿದ್ಯಾರ್ಥಿಗಳ ಜತೆ ಸೇರಿ ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ ಶಾಲಾ ಕಟ್ಟಡ ನಿರ್ಮಾಣಗೊಂಡು ಒಂದೂವರೆ ವರ್ಷ ಕಳೆದರೂ, ಜಮೀನು ವ್ಯಾಜ್ಯದಿಂದಾಗಿ ಇದುವರೆಗೂ ಉದ್ಘಾಟನೆಯಾ

ಗಿಲ್ಲ. ಸಾರ್ವಜನಿಕ ಶಿಕ್ಷಣ ಇಲಾಖೆ ಈ ಕಟ್ಟಡ ಉದ್ಘಾಟನೆಗೆ ಸಿದ್ಧತೆ ಮಾಡಿಕೊಂಡಾಗಲೆಲ್ಲ ಜಮೀನು ಮಾಲೀಕ ಸುರೇಶಪ್ಪ ಡೋಣಿ ಅಡ್ಡಿಪಡಿಸುತ್ತಿದ್ದರು. ಸೋಮವಾರ ಕೂಡ ಮತ್ತೆ ಜಮೀನಿನ ಮಾಲೀಕರಿಂದ ತಕರಾರು ವ್ಯಕ್ತವಾಗಿದೆ. ಗ್ರಾಮಕ್ಕೆ ಬಂದ ಬಿಇಒ ಹಳ್ಳಿಗುಡಿ, ಜಮೀನು ಮಾಲೀಕರ ಮನವೊಲಿಸುವ ಸತತ ಪ್ರಯತ್ನ ನಡೆಸಿದರು. ಆದರೆ, ಜಮೀನಿಗೆ ಪರಿಹಾರ ಲಭಿಸದ ಹೊರತು ಕಟ್ಟಡ ಉದ್ಘಾಟನೆಗೆ ಅವಕಾಶ ಕೊಡುವುದಿಲ್ಲ ಎಂದು ಮಾಲೀಕ ಮತ್ತೆ ಪಟ್ಟು ಹಿಡಿದರು.

ಇದರಿಂದ ಬೇಸತ್ತ ಬಿಇಒ ತಾವೇ ವಿದ್ಯಾರ್ಥಿಗಳ ಜತೆಗೆ ಶಾಲಾ ಕಟ್ಟಡದ ಆವರಣದಲ್ಲಿ ಕುಳಿತು, ಜಮೀನು ಮಾಲೀಕನ ವಿರುದ್ಧ ಪ್ರತಿಭಟನೆಗೆ ಮುಂದಾದರು.

‘ಗ್ರಾಮ ಪಂಚಾಯ್ತಿಯಿಂದ ನೀಡಲಾದ ಎರಡೂವರೆ ಎಕರೆ ಗೋಮಾಳ ಜಾಗದಲ್ಲಿ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ (ಆರ್.ಎಂ.ಎಸ್.ಎ) ಹೊಸ ಕಟ್ಟಡ ನಿರ್ಮಿಸಲಾಗಿದೆ. ಆದರೆ, ಈ ಜಮೀನು ತಮಗೆ ಸೇರಿದ್ದು, ಪರಿಹಾರ ಕೊಡಿಸುವಂತೆ ಗ್ರಾಮದ ಸುರೇಶಪ್ಪ ಪದೇ ಪದೇ ಅಡ್ಡಿಪಡಿಸುತ್ತಿದ್ದಾರೆ. ಕಟ್ಟಡ ಉದ್ಘಾಟನೆಯಾಗದಿರುವುರಿಂದ ವಿದ್ಯಾರ್ಥಿಗಳು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಅನಿವಾರ್ಯವಾಗಿ ಪ್ರತಿಭಟನೆ ನಡೆಸಬೇಕಾಯಿತು’ ಎಂದು ಹಳ್ಳಿಗುಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಲ್ಲಿ ಶಾಲಾ ಕಟ್ಟಡ ನಿರ್ಮಿಸುವ ಮುನ್ನ ಸೂಕ್ತ ಪರಿಹಾರ ನೀಡುವುದಾಗಿ ತಹಶೀಲ್ದಾರ ಮೌಖಿಕ ಭರವಸೆ ನೀಡಿದ್ದರು. ಆ, ಭರವಸೆಯ ಮೇರೆಗೆ ನಾನು ಜಮೀನನ್ನು ಗ್ರಾಮ ಪಂಚಾಯ್ತಿಗೆ ಬಿಟ್ಟುಕೊಟ್ಟಿದ್ದೇನೆ. ಈಗ ಪರಿಹಾರ ನೀಡದೇ ಸತಾಯಿಸುತ್ತಿದ್ದಾರೆ. ಪರಿಹಾರ ಲಭಿಸದ ಹೊರತು ಶಾಲಾ ಕಟ್ಟಡ ಉದ್ಘಾಟನೆಗೆ ಅವಕಾಶ ಕೊಡುವುದಿಲ್ಲ’ ಎಂದು ಸುರೇಶಪ್ಪ ಹೇಳಿದರು.

‘ದಾಖಲೆ ಪರಿಶೀಲಿಸಿದಾಗ ಗೋಮಾಳ ಜಾಗದಲ್ಲಿ ಶಾಲಾ ಕಟ್ಟಡ ನಿರ್ಮಿಸಿರುವುದು ದೃಢಪಟ್ಟಿದೆ. ಉದ್ಘಾಟನೆಗೆ ಅಡ್ಡಿ ಮಾಡಬೇಡಿ. ಪರಿಹಾರ ಬೇಕಿದ್ದರೆ ಜಿಲ್ಲಾ ಪಂಚಾಯ್ತಿಗೆ ಅರ್ಜಿ ಸಲ್ಲಿಸಿ’ ಎಂದು ಸಿಪಿಐ ಮಂಜುನಾಥ ನಡುವಿನಮನಿ ಸೂಚಿಸಿದರು.

ಈ ವೇಳೆ ಶಾಲಾ ಕಟ್ಟಡ ಉದ್ಘಾಟನೆಗೆ ಒಪ್ಪಿಕೊಂಡರೂ, ಅವರು ಸ್ಥಳದಿಂದ ತೆರಳಿದ ನಂತರ ಮತ್ತೆ ಸುರೇಶಪ್ಪ ಮಾತು ಬದಲಿಸಿದರು. ಪರಿಹಾರ ಲಭಿಸದ ಹೊರತು ಶಾಲೆಯಲ್ಲಿ ಪಾಠ ಮಾಡಲು ಅವಕಾಶ ನೀಡುವುದಿಲ್ಲ ಎಂದರು.

* ಗ್ರಾಮ ಪಂಚಾಯ್ತಿಯಿಂದ ನೀಡಲಾದ ಗೋಮಾಳ ಜಮೀನಿನಲ್ಲಿ ಇಲಾಖೆಯು ಶಾಲಾ ಕಟ್ಟಡ ನಿರ್ಮಿಸಿದೆ.

  – ಶಂಕರ ಹಳ್ಳಿಗುಡಿ, ಬಿಇಒ

*  ಜಮೀನಿಗೆ ಪರಿಹಾರ ಲಭಿಸುವ ತನಕ ಈ ಶಾಲೆಯಲ್ಲಿ ಯಾವ ಚಟುವಟಿಕೆಗೂ ಅವಕಾಶ ನೀಡುವುದಿಲ್ಲ

–ಸುರೇಶಪ್ಪ ಡೊಣ್ಣಿ, ಜಮೀನಿನ ಮಾಲೀಕ         

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.