3

ಮೀನುಗಾರರ ರಕ್ಷಿಸಿದ ಕೋಸ್ಟ್‌ ಗಾರ್ಡ್‌ ಸಿಬ್ಬಂದಿ

Published:
Updated:
ಮೀನುಗಾರರ ರಕ್ಷಿಸಿದ ಕೋಸ್ಟ್‌ ಗಾರ್ಡ್‌ ಸಿಬ್ಬಂದಿ

ಮಂಗಳೂರು: ಒಖಿ ಚಂಡಮಾರುತದ ಹಿನ್ನೆಲೆಯಲ್ಲಿ ಸಮುದ್ರ ಅಬ್ಬರಿಸುತ್ತಿದ್ದ ಸಂದರ್ಭದಲ್ಲಿ ಸಮುದ್ರ ದಲ್ಲಿ ಸಿಕ್ಕಿಹಾಕಿಕೊಂಡ ಮೀನುಗಾರರನ್ನು ಕೋಸ್ಟ್‌ ಗಾರ್ಡ್‌ ಸಿಬ್ಬಂದಿ ರಕ್ಷಿಸಿದ್ದಾರೆ.

ಇಂಡಿಯನ್‌ ಕೋಸ್ಟ್‌ ಗಾರ್ಡ್‌ನ ಅಮರ್ತ್ಯ ಹಡಗು ಮೀನುಗಾರರ ‘ತತ್ವಮಸಿ’ ಎಂಬ ದೋಣಿಯನ್ನು ರಕ್ಷಿಸಿದ್ದು, ತಮಿಳುನಾಡಿನ ಬೈಪುರ್‌ ಕರಾವಳಿಗೆ ಸೇರಿದ 22 ಮಂದಿ ಸಿಬ್ಬಂದಿಯನ್ನು ಅಪಾಯದಿಂದ ಪಾರು ಮಾಡಿದ್ದಾರೆ.

ಕಡಲಿನಲ್ಲಿ ಅಬ್ಬರದ ತೆರೆಗಳು ಎದ್ದಾಗ, ಮೀನುಗಾರರ ದೋಣಿಯ ಗೇರ್‌ಬಾಕ್ಸ್‌ ಹಾಳಾದ್ದರಿಂದ ದೋಣಿ ಬಂಡೆಗೆ ಅಪ್ಪಳಿಸುವುದರಲ್ಲಿತ್ತು. ಕೋಸ್ಟ್ ಗಾರ್ಡ್‌ನ ತಾಂತ್ರಿಕ ವರ್ಗದ ತಂಡ ದೋಣಿಯನ್ನೇರಿ ಸಮಸ್ಯೆಯನ್ನು ಎರಡು ಗಂಟೆ ಅವಧಿಯಲ್ಲಿ ಸರಿಪಡಿಸಿದೆ. ಬಳಿಕ ದೋಣಿಯು ಬೈಪುರ್‌ಗೆ ಸುರಕ್ಷಿತವಾಗಿ ಪ್ರಯಾಣಿಸಲು ಕೋಸ್ಟ್‌ಗಾರ್ಡ್‌ ಹಡಗು ನೆರವಾಗಿದೆ.

ಲಕ್ಷದ್ವೀಪದ ಸುಹೇಲಿ ಪಾರ್‌ ದ್ವೀಪದಲ್ಲಿ ಸಿಲುಕಿಕೊಂಡಿದ್ದ ಮೀನುಗಾರರನ್ನು ಕೋಸ್ಟ್‌ಗಾರ್ಡ್‌ನ ಶೂರ್‌ ಎಂಬ ಹಡಗು ಅಪಾಯದಿಂದ ಪಾರುಮಾಡಿದೆ. ಸೇಂಟ್‌ ಆಂಟನಿ ಎಂಬ ಮೀನುಗಾರಿಕಾ ದೋಣಿಯಲ್ಲಿದ್ದ ಮೀನುಗಾರರು ಶನಿವಾರ ದ್ವೀಪವನ್ನು ತಲುಪಿದ್ದು,  ಅನ್ನ ಮತ್ತು ನೀರು ಸೇವಿಸಿ ಬದುಕಿದ್ದರು. ಕೋಸ್ಟ್‌ಗಾರ್ಡ್‌ ವತಿಯಿಂದ ಬಟ್ಟೆ ಮತ್ತು ವೈದ್ಯಕೀಯ ಸವಲತ್ತು ನೀಡಿ ಅವರು ಸುರಕ್ಷಿತವಾಗಿ ಪ್ರಯಾಣಿಸಲು ನೆರವು ನೀಡಲಾಗಿದೆ.

ಒಖಿ  ಚಂಡಮಾರುತದಿಂದಾಗಿ ಹಲವಾರು ಮೀನುಗಾರಿಕಾ ದೋಣಿಗಳು ಕಾರವಾರ ಕಡಲ ದಂಡೆಯಲ್ಲಿ ಲಂಗರು ಹಾಕಿವೆ. ತಮಿಳುನಾಡಿಗೆ ಸೇರಿದ 32 ಮೀನುಗಾರಿಕಾ ದೋಣಿ ಮತ್ತು 346 ಮಂದಿ ಮೀನುಗಾರರು, ಕೇರಳಕ್ಕೆ ಸೇರಿದ 14 ದೋಣಿ ಮತ್ತು 103 ಮೀನುಗಾರರು, ಗೋವಾದ 27 ದೋಣಿ ಮತ್ತು 565 ಮೀನುಗಾರರು, ಮಂಗಳೂರಿಗೆ ಸೇರಿದ 21 ದೋಣಿಗಳು ಮತ್ತು 119 ಮೀನುಗಾರರು ಕಾರವಾರದಲ್ಲಿ ಇದ್ದಾರೆ.

9 ಮಂದಿ ಮೀನುಗಾರರು ಇದ್ದ ನಫೀಸಾ ಎಂಬ ಮೀನುಗಾರಿಕಾ ದೋಣಿ ಮತ್ತು 10 ಮಂದಿ ಮೀನುಗಾರರು ಇದ್ದ ಮಿಸಾ 1 ಎಂಬ ದೋಣಿ ಮಂಗಳೂರು ಬಂದರು ಪ್ರವೇಶಿಸಿ ಆಶ್ರಯ ಪಡೆದಿದೆ. ಎರಡೂ ದೋಣಿಗಳು ಹಳೆ ಮಂಗಳೂರು ಬಂದರಿಗೆ ಸೇರಿದ್ದಾಗಿದೆ ಎಂದು ಕೋಸ್ಟ್‌ ಗಾರ್ಡ್‌ನ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry