7

ಬಸವಣ್ಣ ಹೆಸರಿನಲ್ಲಿ ಧರ್ಮದ ಮಧ್ಯೆ ಬೆಂಕಿ

Published:
Updated:
ಬಸವಣ್ಣ ಹೆಸರಿನಲ್ಲಿ ಧರ್ಮದ ಮಧ್ಯೆ ಬೆಂಕಿ

ಹುನಗುಂದ (ಕೂಡಲಸಂಗಮ ): ‘ಸಮಾಜದಲ್ಲಿ ಸಮಾನತೆ ಸಾರಿದ ವಿಶ್ವಗುರು ಬಸವಣ್ಣ ಎಲ್ಲ ಜಾತಿ, ಜನಾಂಗದವರನ್ನು ಒಗ್ಗೂಡಿಸುವ ಕೆಲಸ ಮಾಡಿದ್ದರು. ಆದರೆ, ಇಂದು ಕೆಲವರು ಬಸವಣ್ಣವರ ಹೆಸರಿನಲ್ಲಿ ಜಾತಿ ಒಡೆಯುವ ಕುತಂತ್ರದಲ್ಲಿ ಧರ್ಮದ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳುವ ಮೂಲಕ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದರು.

ತಾಲೂಕು ಕುರುಬರ ಸಂಘದ ಆಶ್ರಯದಲ್ಲಿ ಸೋಮವಾರ ಪಟ್ಟಣದಲ್ಲಿ ಜರುಗಿದ ಕನಕದಾಸರ 530ನೇ ಜಯಂತಿ ಹಾಗೂ ಹಿಂದುಳಿದ ವರ್ಗಗಗಳ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಸಮಾಜದಲ್ಲಿ ಮನೆ ಮಾಡಿದ್ದ ಮೇಲು-ಕೀಳು ವ್ಯವಸ್ಥೆಯನ್ನು ಹೋಗಲಾಡಿಸಲು ಬಸವಣ್ಣ 12ನೇ ಶತಮಾನದಲ್ಲಿ ಹೋರಾಡಿದರು. ದಾಸ ಸಾಹಿತ್ಯದ ಮೂಲಕ 16ನೇ ಶತಮಾನದಲ್ಲಿ ಕನಕದಾಸರು ಈ ಕುರಿತು ಜಾಗೃತಿ ಮೂಡಿಸಿದರು’ ಎಂದರು.

‘ಶತ ಶತಮಾನಗಳಿಂದಲೂ ಇದ್ದ ಹಿಂದುಳಿದ ವರ್ಗಗಳನ್ನು ಒಡೆದಾಳುವ ನೀತಿ ಇಂದಿಗೂ ಮುಂದುವರಿದಿದೆ. ಈ ವರ್ಗದ ಜನರು ಶಿಕ್ಷಣವಂತರಾಗದಿರುವುದೇ ಇದಕ್ಕೆ ಮೂಲ ಕಾರಣವಾಗಿದೆ. ಈ ವರ್ಗದ ಜನರು ಯಾರ ಗುಲಾಮರು ಅಲ್ಲ. ಸಮಾಜದ ಮುಂದಿನ ಪೀಳಿಗೆಗೆ ಶಿಕ್ಷಣ ನೀಡುವ ಮೂಲಕ ಗುಲಾಮಗಿರಿ ಬದುಕಿನಿಂದ ಹೊರಬಂದು ಸ್ವಾಭಿಮಾನದ ಬದುಕು ಸಾಗಿಸಬೇಕು’ ಎಂದು ಕರೆ ನೀಡಿದರು.

‘ಕುರುಬ ಸಮಾಜದ ಹೆಸರಿನಲ್ಲಿ ಹುನಗುಂದ ಪಟ್ಟಣದಲ್ಲಿರುವ 3 ಎಕರೆ ಭೂಮಿಯಲ್ಲಿ ಮಂಗಲ ಭವನ ಹಾಗೂ ಸಮಾಜದ ಬಡ ಮಕ್ಕಳಿಗೆ ವಸತಿ ನಿಲಯ ನಿರ್ಮಿಸಲು ತಾಲೂಕಿನ ಸಮಾಜದ ಜನರು ಸಂಕಲ್ಪ ಮಾಡಬೇಕು. ಇದಕ್ಕಾಗಿ ಎಲ್ಲರು ಕೈಲಾದ ಸಹಾಯ ಮಾಡಬೆಕು. ಇದಕ್ಕಾಗಿ ತಾನು ವೈಯಕ್ತಿಕ ₹10 ಲಕ್ಷ ನೀಡುತ್ತೇನೆ’ ಎಂದು ಭರವಸೆ ನೀಡಿದರು.

ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಮಾತನಾಡಿ, ‘ಹಲವು ನಿರೀಕ್ಷೆಗಳನ್ನಿಟ್ಟುಕೊಂಡು ಕುರುಬ ಸಮಾಜದ ಜನರು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಬೆಂಬಲಿಸಿದರು. ಕಳೆದ ಚುನಾವಣೆಯಲ್ಲಿ ಇಡೀ ಸಮಾಜದ ಜನರು ಕಾಂಗ್ರೆಸ್ ಪಕ್ಷ ಬೆಂಬಲಿಸಿದರು. ಆದರೆ, ಸಮಾಜದ ಜನರು ಸಿದ್ದರಾಮಯ್ಯನವರ ಮೇಲೆ ಇಟ್ಟ ನಿರೀಕ್ಷೆ ಹುಸಿಯಾಗಿದೆ’ ಎಂದು ಆರೋಪಿಸಿದರು.

‘ಸಮಾಜದ ಒಬ್ಬಿಬ್ಬರನ್ನು ಮಂತ್ರಿ ಮಾಡಿದ್ದು ಸಾಧನೆಯಲ್ಲ. ಸಮಾಜದ ಕಡೆಯ ಮನುಷ್ಯನ ಸಮಸ್ಯೆಗಳಿಗೆ ಸ್ಪಂದಿಸಿ, ಪರಿಹಾರ ಕಲ್ಪಿಸಿದಾಗ ಮಾತ್ರ ನಮ್ಮವರು ಮುಖ್ಯಮಂತ್ರಿಯಾಗಿದ್ದಕ್ಕೆ ಹೆಮ್ಮೆ ಪಡಬಹುದು. ಮುಖ್ಯಮಂತ್ರಿಗಳಿಂದ ಆ ಕಾರ್ಯ ಆಗುತ್ತಿಲ್ಲ. ಇದಕ್ಕಾಗಿ ಹಿಂದುಳಿದ ವರ್ಗದ ಜನರು ಜಾಗೃತರಾಗಬೇಕು’ ಎಂದು ಕರೆ ನೀಡಿದರು.

ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ‘ಶಾಸಕ ವಿಜಯಾನಂದ ಕಾಶಪ್ಪನವರ ಕುರುಬ ಜನಾಂಗದ ಜನರಿಗೆ ಅಧಿಕಾರದ ಸ್ಥಾನಮಾನ ನೀಡಿದ ಕುರಿತು ಜಂಬ ಕೊಚ್ಚಿಕೊಳ್ಳುತ್ತಿದ್ದಾರೆ. ಹಿಂದೆ ನಿಂಗಪ್ಪ ಮುಕ್ಕಣ್ಣವರ ಹುನಗುಂದ ಪುರಸಭೆ ಅಧ್ಯಕ್ಷರಾಗುವ ಸಂದರ್ಭದಲ್ಲಿ ನಡೆದ ಘಟನೆಯನ್ನು ಅವರು ಸ್ಮರಿಸಿಕೊಳ್ಳಲಿ. ನನ್ನ 9 ವರ್ಷಗಳ ಅಧಿಕಾರವದಿಯಲ್ಲೂ ಈ ಸಮಾಜಕ್ಕೆ ಸಾಕಷ್ಟು ರಾಜಕೀಯ ಸ್ಥಾನ ಮಾನ ನೀಡಿದ್ದೇನೆ. ಅಂದ ಮಾತ್ರಕ್ಕೆ ಅಧಿಕಾರದಲ್ಲಿರುವವರು ಇದು ಸಮಾಜದ ಜನರಿಗೆ ಕೊಟ್ಟ ಬೀಕ್ಷೆಯಲ್ಲ. ಅವರಿಗೆ ನ್ಯಾಯುವತವಾಗಿ ಸಿಗಬೇಕಾದ ಹಕ್ಕು’ ಎಂದರು.

ಜಿಲ್ಲಾ ಪಂಚಾಯ್ತಿ ಸದಸ್ಯರಾದ ಶಶಿಕಾಂತ ಪಾಟೀಲ , ವೀರೇಶ ಉಂಡೊಡಿ, ಕುರುಬರ ಸಂಘದ ಜಿಲ್ಲಾಧ್ಯಕ್ಷ ಬಸವಂತಪ್ಪ ಹಂಟರದಾನಿ, ಮಹಾಂತಗೌಡ ತೊಂಡಿಹಾಳ, ದೇವು ಡಂಬಳ, ಅಪ್ಪು ಆಲೂರ, ಮಲ್ಲಿಕಾಜುನ ಚೂರಿ, ಮಲ್ಲನಗೌಡ ಪಾಟೀಲ, ಮಹಾಂತೇಶ ಉಂಡೊಡಿ, ಮಲ್ಲಯ್ಯ ಮೂಗನೂರಮಠ ಇದ್ದರು. ಇತರ 48 ಸಮಾಜಗಳ ಮುಕಂಡರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಭವ್ಯ ಮೆರವಣಿಗೆ: ಕಾರ್ಯಕ್ರಮದ ಪೂರ್ವದಲ್ಲಿ ಮೇಗಲಪೇಟೆಯಲ್ಲಿರುವ ಲಕ್ಷ್ಮೀದೇವಸ್ಥಾನದಿಂದ ಆರಂಭಗೊಂಡ ಕನಕದಾಸರ ಭಾವಚಿತ್ರದ ಭವ್ಯ ಮೆರವಣಿಗೆಗೆ ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಚಾಲನೆ ನೀಡಿದರು. ಲಿಂಗದಕಟ್ಟಿ, ಸಂಗಮೇಶ್ವರ ದೇವಾಲಯ, ಗಾಂಧಿ ಚೌಕ್ ಮಾರ್ಗವಾಗಿ ಕಾರ್ಯಕ್ರಮ ನಡೆಯುವ ಮಹಾಂತೇಶ ವೃತ್ತ ತಲುಪಿತು. ನೂರಾರು ಕುಂಭ ಹೊತ್ತ ಮಹಿಳೆಯರು ಮತ್ತು ವಿವಿಧ ಕಲಾ ತಂಡಗಳ ಪ್ರದರ್ಶನ ಮೆರವಣಿಗೆಯಲ್ಲಿ ಗಮನ ಸೆಳೆಯಿತು.

‘ನಾನೇ ಪ್ರತಿಭಟನೆ ಮಾಡುತ್ತೇನೆ’

‘ಶಾಸಕ ವಿಜಯಾನಂದ ಕಾಶಪ್ಪನವರ ಕ್ಷೇತ್ರದಲ್ಲಿ ಕುರುಬ ಸಮಾಜದ ಜನರ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರಲ್ಲದೇ ಒಡೇದಾಳುವ ನೀತಿ ಅನುಸರಿಸುತ್ತಿದ್ದಾರೆ.

ಹುಲ್ಲಳ್ಳಿ ಗ್ರಾಮದ ಕುರುಬ ಸಮಾಜದ ಜನರ ಮನೆಯ ಮುಂದೆ ಸ್ಮಶಾನ ನಿರ್ಮಿಸಲು ಮುಂದಾಗಿರುವುದೇ ಇದಕ್ಕೆ ಸ್ಪಷ್ಟ ನಿದರ್ಶನ. ನ್ಯಾಯಾಲಯದ ಆದೇಶ ಧಿಕ್ಕರಿಸಿ ಈ ಸ್ಥಳದಲ್ಲಿ ಶವ ಸಂಸ್ಕಾರ ಮಾಡಿರುವುದನ್ನು ಗಮನಿಸಿದರೆ, ಇಲ್ಲಿಯ ಶಾಸಕರಿಗೆ ಮತ್ತು ಅಧಿಕಾರಿಗಳಿಗೆ ಮದ ನೆತ್ತಿಗೆರಿದೆ. ಇನ್ನೊಂದು ಬಾರಿ ಈ ಸ್ಥಳದಲ್ಲಿ ಶವ ಸಂಸ್ಕಾರ ಮಾಡಿದರೆ ನಾನೇ ಬಂದು ಪ್ರತಿಭಟನೆ ಮಾಡುತ್ತೇನೆ’ ಎಂದು ಕೆ.ಎಸ್‌. ಈಶ್ವರಪ್ಪ ಎಚ್ಚರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry