ಭಾನುವಾರ, ಮಾರ್ಚ್ 7, 2021
30 °C

ಜಯಾ ಮೊದಲ ಪುಣ್ಯತಿಥಿ: ಎಐಎಡಿಎಂಕೆ ಮೌನ ಮೆರವಣಿಗೆ

ಪಿಟಿಐ Updated:

ಅಕ್ಷರ ಗಾತ್ರ : | |

ಜಯಾ ಮೊದಲ ಪುಣ್ಯತಿಥಿ: ಎಐಎಡಿಎಂಕೆ ಮೌನ ಮೆರವಣಿಗೆ

ಚೆನ್ನೈ: ಎಐಎಡಿಎಂಕೆಯ ಮುಖ್ಯಸ್ಥೆಯಾಗಿದ್ದ ಜೆ.ಜಯಲಲಿತಾ ಅವರ ಮೊದಲ ಪುಣ್ಯ ತಿಥಿ ಅಂಗವಾಗಿ ಪಕ್ಷದ ಸಾವಿರಾರು ಕಾರ್ಯಕರ್ತರು ಮಂಗಳವಾರ ಚೆನ್ನೈನಲ್ಲಿ ಬೃಹತ್‌ ಮೌನ ಮೆರವಣಿಗೆ ನಡೆಸಿದರು.

ಪಕ್ಷದ ಸಂಚಾಲಕ ಒ. ಪನ್ನೀರ್‌ ಸೆಲ್ವಂ ಮತ್ತು ಸಹ ಸಂಚಾಲಕ ಕೆ. ಪಳನಿಸ್ವಾಮಿ ಅವರು ಇದರ ನೇತೃತ್ವ ವಹಿಸಿದ್ದರು.

ಅಣ್ಣಾಸಾಲೈನಿಂದ ಹೊರಟ ಮೆರವಣಿಗೆ ಮರೀನಾ ಕಡಲ ಕಿನಾರೆಯಲ್ಲಿರುವ ಜಯಾಲಲಿತಾ ಅವರ ಸಮಾಧಿ ಬಳಿ ಕೊನೆಗೊಂಡಿತು.

ಪುಷ್ಪನಮನ: ಕಪ್ಪು ಬಣ್ಣದ ದಿರಿಸು ಧರಿಸಿದ್ದ ಪಳನಿಸ್ವಾಮಿ, ಪನ್ನೀರ್‌ ಸೆಲ್ವಂ ಸೇರಿದಂತೆ ರಾಜ್ಯದ ಸಚಿವರು, ಪಕ್ಷದ ಸಂಸದರು ಶಾಸಕರು ಹಾಗೂ ಸಾವಿರಾರು ಕಾರ್ಯಕರ್ತರು ಜಯಾಲಲಿತಾ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.

ಕೆಲವು ಕಾರ್ಯಕರ್ತರು ಜಯಾ ಪರ ಘೋಷಣೆಗಳನ್ನು ಕೂಗುತ್ತಿದ್ದರೆ, ಕೆಲವರು ಅಗಲಿದ ನಾಯಕಿಯನ್ನು ನೆನೆದು ಕಣ್ಣೀರುಗರೆದರು.

ಪಳನಿಸ್ವಾಮಿ ಮತ್ತು ಪನ್ನೀರ್‌ ಸೆಲ್ವಂ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಪಕ್ಷದ ಸಂಸ್ಥಾಪಕ ಎಂ.ಜಿ. ರಾಮಚಂದ್ರನ್‌ ಅವರ ಸ್ಮಾರಕಕ್ಕೂ ನಮನ ಸಲ್ಲಿಸಿದರು.

ಪ್ರತಿಜ್ಞೆ ಸ್ವೀಕಾರ: ‘ಅಮ್ಮ’ ಅವರ  ಆಡಳಿತದ ‘ಸುವರ್ಣ ಯುಗ’ವನ್ನು ಮುಂದುವರೆಸುವ ಪ್ರತಿಜ್ಞೆಯನ್ನು ಈ ಸಂದರ್ಭದಲ್ಲಿ ಕಾರ್ಯಕರ್ತರು ಸ್ವೀಕರಿಸಿದರು. ಪನ್ನೀರ್‌ ಸೆಲ್ವಂ ಅವರು ಈ ಪ್ರತಿಜ್ಞೆಯನ್ನು ಓದಿದರೆ, ಉಳಿದವರು ಅದನ್ನು ಪುನರುಚ್ಚರಿಸಿದರು.

ದಿನಕರನ್‌ ನಮನ: ಎಐಎಡಿಎಂಕೆಯ ಮತ್ತೊಂದು ಬಣದ ನಾಯಕ ಟಿ.ಟಿ.ವಿ ದಿನಕರನ್‌ ಕೂಡ ತಮ್ಮ ಬೆಂಬಲಿಗರೊಂದಿಗೆ ಜಯಾ ಸಮಾಧಿಗೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು.

**

ವಿಶಾಲ್‌ ನಾಮಪತ್ರ ಅಂಗೀಕೃತ

ನಟ ವಿಶಾಲ್‌ ಅವರ ನಾಮಪತ್ರವನ್ನು ಒಮ್ಮೆ ತಿರಸ್ಕರಿಸಿದ್ದ ಚುನಾವಣಾ ಆಯೋಗ ಕೊನೆಗೆ ಅಂಗೀಕರಿಸಿದೆ.

ಆರಂಭದಲ್ಲಿ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ವಿಶಾಲ್‌ ಅವರು ತಮ್ಮ ಬೆಂಬಲಿಗರೊಂದಿಗೆ ಚುನಾವಣಾಧಿಕಾರಿಯವರ ಕಚೇರಿಯ ಮುಂಭಾಗದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರು. ಪೊಲೀಸರು ಬಂದು ಅವರನ್ನು ಬಲವಂತವಾಗಿ ಅಲ್ಲಿಂದ ಕಳುಹಿಸಬೇಕಾಯಿತು.

ಸ್ವಲ್ಪ ಹೊತ್ತಿನ ನಂತರ ತಮ್ಮ ಅಭ್ಯರ್ಥಿತನ ಸೂಚಿಸಿದವರಿಗೆ ದೂರವಾಣಿಯಲ್ಲಿ ಬೆದರಿಸಲಾಗುತ್ತಿದೆ ಎಂದು ಹೇಳಲಾದ ಧ್ವನಿಮುದ್ರಿತ ತುಣುಕನ್ನು ಅವರು ಬಹಿರಂಗ ಪಡಿಸಿದರು.

‘ತುಂಬಾ ಹೋರಾಟದ ನಂತರ ಆರ್‌.ಕೆ. ನಗರ ಕ್ಷೇತ್ರದ ಉಪಚುನಾವಣೆಗೆ ನನ್ನ ನಾಮಪತ್ರವನ್ನು ಕೊನೆಗೂ ಅಂಗೀಕರಿಸಲಾಗಿದೆ. ಸತ್ಯಕ್ಕೆ ಯಾವಾಗಲೂ ಜಯ ಸಿಕ್ಕೇ ಸಿಗುತ್ತದೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ದೀಪಾ ನಾಮಪತ್ರ ತಿರಸ್ಕೃತ: ಆದರೆ, ಜಯಾ ಸಂಬಂಧಿ ದೀಪಾ ಜಯಕುಮಾರ್‌ ಅವರ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.

‘ಇದು ರಾಜಕೀಯ ದ್ವೇಷದ ನಿರ್ಧಾರ’ ಎಂದು ದೀಪಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೀಪಾ ಅವರು ನಾಮಪತ್ರದೊಂದಿಗೆ ಸಲ್ಲಿಸಿರುವ ಪ್ರಮಾಣದಲ್ಲಿ ಹಲವು ವಿವರಗಳನ್ನು ನೀಡಿಲ್ಲ ಎಂದು ಆಯೋಗದ ಅಧಿಕಾರಿಗಳು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.