7

ಮುಸುಕು ಧರಿಸಿದ ಮೂರ್ತಿಗೆ ಬೇಕು ಮುಕ್ತಿ

Published:
Updated:
ಮುಸುಕು ಧರಿಸಿದ ಮೂರ್ತಿಗೆ ಬೇಕು ಮುಕ್ತಿ

ಚನ್ನಮ್ಮನ ಕಿತ್ತೂರು: ಕಿತ್ತೂರು ರಾಣಿ ಚನ್ನಮ್ಮನ ಬಲಗೈ ಬಂಟ ವೀರ ಸಂಗೊಳ್ಳಿ ರಾಯಣ್ಣ ಮತ್ತು ಬ್ರಿಟಿಷ್ ಅಧಿಕಾರಿ ಥ್ಯಾಕರೆಯನ್ನು ಯುದ್ಧದಲ್ಲಿ ಗುಂಡಿಕ್ಕಿ ಕೊಂದಿದ್ದ ವೀರಕೇಸರಿ ಅಮಟೂರು ಬಾಳಪ್ಪ ಪ್ರತಿಮೆಗಳನ್ನು ಪಟ್ಟಣದಲ್ಲಿ ಪ್ರತಿಷ್ಠಾಪಿಸಬೇಕೆಂಬ ಕನಸು ಇನ್ನೂ ಈಡೇರದೇ ಇರುವುದು ಇಲ್ಲಿಯ ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ.

‘ಇತ್ತೀಚಿನ ಕಿತ್ತೂರು ಉತ್ಸವ ಉದ್ಘಾಟನೆ ದಿನ ಇವೆರಡೂ ಪ್ರತಿಮೆಗಳ ಅನಾವರಣ ಮಾಡುವ ಎಲ್ಲ ಪೂರ್ವ ಸಿದ್ಧತೆಗಳು ಪೂರ್ಣಗೊಂಡಿದ್ದವು. ಮೂರ್ತಿ ಹೊತ್ತು ನಿಂತಿರುವ ಕಟ್ಟೆ ಹಾಗೂ ಪ್ರತಿಮೆಗಳಿಗೆ ಹೂವಿನ ಅಲಂಕಾರ ಕೂಡ ಮಾಡಲಾಗಿತ್ತು. ಆದರೆ, ಕೊನೆ ಗಳಿಗೆಯಲ್ಲಿ ಇವುಗಳಿಗೆ ಉದ್ಘಾಟನೆ ಭಾಗ್ಯ ದೊರೆಯಲಿಲ್ಲ.

ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಬಳಿಯ ಅಶ್ವಾರೂಢ ರಾಣಿ ಚನ್ನಮ್ಮ ವೃತ್ತದ ಅಕ್ಕಪಕ್ಕ ಇವೆರಡೂ ಪುತ್ಥಳಿಗಳು ಮುಸುಕು ಧರಿಸಿಕೊಂಡು ನಿಂತಿರುವುದು ಜನತೆಯಲ್ಲಿ ಬೇಸರ ಮೂಡಿಸಿದೆ’ ಎಂದು ಸಂಜೀವ ಪಾಟೀಲ ಪ್ರತಿಕ್ರಿಯಿಸಿದರು.

‘ಕಿತ್ತೂರು ಪಟ್ಟಣದಲ್ಲೇ ರಾಯಣ್ಣ ಮತ್ತು ಅಮಟೂರು ಬಾಳಪ್ಪ ಪುತ್ಥಳಿಗಳು ಇಲ್ಲ ಎಂಬ ಇತಿಹಾಸ ಪ್ರಿಯರ ಕೊರಗು ದೂರವಾದಂತಾಗಿದೆ ಎಂದು ತಿಳಿದುಕೊಂಡಿರುವಾಗಲೇ ಅವುಗಳ ಅನಾವರಣ ಮುಂದೂಡಿದ್ದು ಸರಿಯಾದ ಕ್ರಮವಲ್ಲ. ಈಗಾಗಲೇ ಸೂಕ್ತ ಸ್ಥಳದಲ್ಲಿ ನಿಲ್ಲಿಸಿರುವ ಮೂರ್ತಿ ಮೇಲಿನ ಮುಸುಕು ತೆಗೆದು ಅಧಿಕೃತವಾಗಿ ಅನಾವರಣ ಕುರಿತು ಘೋಷಣೆ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

ಎರಡೂವರೆ ಕ್ವಿಂಟಲ್ ಭಾರದ ಮತ್ತು ಆರು ಅಡಿ ಎತ್ತರವಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ವೀರಕೇಸರಿ ಅಮಟೂರು ಬಾಳಪ್ಪ ಕಂಚಿನ ಪ್ರತಿಮೆಗಳನ್ನು ₹14 ಲಕ್ಷ ಅಂದಾಜು ವೆಚ್ಚದಲ್ಲಿ ಕೊಲ್ಲಾಪುರದ ಕಲಾವಿದ ಎಂ. ಜಿ. ಸುತಾರ್ ನಿರ್ಮಿಸಿದ್ದಾರೆ.

ಕಿತ್ತೂರಿನ ಪ್ರಥಮ ಯುದ್ಧದಲ್ಲಿ ರಾಣಿ ಚನ್ನಮ್ಮನ ಅಂಗರಕ್ಷಕ ವೀರಕೇಸರಿ ಅಮಟೂರು ಬಾಳಪ್ಪ ಥ್ಯಾಕರೆ ಎದೆಗೆ ಗುಂಡಿಕ್ಕಿ ಹತ್ಯೆ ಮಾಡಿದ್ದ. ಸಂಸ್ಥಾನ ಪತನಗೊಂಡ ನಂತರ ಸ್ವಾತಂತ್ರ್ಯದ ಕನಸು ಹೊತ್ತು ಸೆರೆಮನೆ ಒಳಗೆ ಕೊರಗುತ್ತಿದ್ದ ರಾಣಿ ಚನ್ನಮ್ಮನ ಕನಸು ಈಡೇರಿಸಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಗೆರಿಲ್ಲಾ ಯುದ್ಧ ತಂತ್ರಗಾರಿಕೆ ಬಳಸಿ ಬ್ರಿಟಿಷರಿಗೆ ಸಿಂಹಸ್ವಪ್ನನಾಗಿದ್ದ ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

* * 

ರಾಯಣ್ಣ ಮತ್ತು ಬಾಳಪ್ಪ ಪುತ್ಥಳಿಗಳ ಮೇಲೆ ಹಾಕಿರುವ ಮುಸುಕು ತೆಗೆದು ಅವುಗಳನ್ನು ಅಧಿಕೃತವಾಗಿ ಅನಾವರಣ ಮಾಡಲಾಗಿದೆ ಎಂಬ ಘೋಷಣೆಯನ್ನು ಸರ್ಕಾರ ಶೀಘ್ರ ಮಾಡಬೇಕು

ಬಸವರಾಜ್‌ ಅವರಾದಿ

ಗ್ರಾಮಸ್ಥ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry